Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 8, 2020, 6:47 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಇರಾಕ್​ನಲ್ಲಿ 25 ಸಾವಿರ ಭಾರತೀಯರು ಸದ್ಯಕ್ಕೆ ಸುರಕ್ಷಿತ

ತನ್ನ ದೇಶದ ಮೇಜರ್ ಜನರಲ್ ಖಾಸಿಮ್ ಸುಲೈಮಾನಿ ಹತ್ಯೆಗೈದ ಅಮೆರಿಕದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್​​ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿದೆ. ರಾಜಧಾನಿ ಬಾಗ್ದಾದ್​ ​ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್​​ ದಾಳಿ ನಡೆಸಿರುವುದೀಗ ಮೂರನೇ ಮಹಾಯುದ್ಧ ನಡೆಯಲಿದೆ ಎನ್ನುವ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಎರಡು ದೇಶಗಳ ನಡುವಿನ ಸಂಘರ್ಷವೂ ಇರಾಕ್​​ನಲ್ಲಿ ನೆಲೆಸಿರುವ ಭಾರತೀಯರಿಗೆ ಆತಂಕ ಮೂಡಿಸಿದೆ. ಭಾರತ ಮೂಲದ ಯುಎನ್ ರಾಯಭಾರಿ(ಹೆಸರು ಹೇಳಲು ಇಚ್ಛಿಸದ) ಹೇಳುವ ಪ್ರಕಾರ, ಇರಾಕ್​​​ನಲ್ಲಿ ನೆಲೆಸಿರುವ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ ಎಂಬುದು ಖಾತ್ರಿಯಾಗಿದೆ

2.ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; 10 ಗ್ರಾಮ್ ಚಿನ್ನದ ದರ 42,460 ರೂ.; ತೈಲ ಬೆಲೆ ಹೆಚ್ಚಳ

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಮತ್ತಷ್ಟು ತಾರಕಕ್ಕೇರಿದೆ. ಉಭಯ ದೇಶಗಳ ಸಂಘರ್ಷವೂ ಜಾಗತಿಕ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತೈಲ ಮತ್ತು ಚಿನ್ನದ ಬೆಲೆಗಳು ಗಗನಕ್ಕೇರುತ್ತಲೇ ಇದೆ. ಇದರಿಂದ ಷೇರುಪೇಟೆಯೂ ತಲ್ಲಣಗೊಂಡಿದೆ. ಸದ್ಯದಲ್ಲೇ ಪೆಟ್ರೋಲ್ ಮತ್ತು ಡೀಸೆಲ್​​ನ ಒಂದು ಲೀಟರ್ ಬೆಲೆ 80 ರೂ. ಗಡಿ ದಾಟಲಿದೆ. ನಿರೀಕ್ಷೆಯಂತೆಯೇ ಭಾರತದ ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಬೀರಿದ್ದು, ಜನ ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣಕ್ಕೆ ವಿಶ್ವದೆಲ್ಲೆಡೆ ಚಿನ್ನದ ಬೆಲೆ ಜಾಸ್ತಿಯಾಗಿದೆ.

3.ಉಕ್ರೇನ್ ವಿಮಾನ ಇರಾನ್​ನಲ್ಲಿ ಪತನ; ಭೀಕರ ದುರಂತದಲ್ಲಿ 167 ಪ್ರಯಾಣಿಕರು, 9 ಸಿಬ್ಬಂದಿ ಸಾವು

ಉಕ್ರೇನ್ ಇಂಟರ್​ನ್ಯಾಷನಲ್ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್ 737 ಎಂಬ ವಿಮಾನ ಇರಾನ್​ನ ಇಮಾಮ್ ಖೊಮೈನಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪತನವಾಗಿದೆ. ವಿಮಾನದಲ್ಲಿದ್ದ 176 ಪ್ರಯಾಣಿಕರೂ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ 167 ಪ್ರಯಾಣಿಕರು ಮತ್ತು 9 ಜನ ವಿಮಾನದ ಸಿಬ್ಬಂದಿಯಿದ್ದರು. ಇರಾನ್​ ದೇಶದ ತೆಹ್ರಾನ್ ಏರ್​ಪೋರ್ಟ್​ನಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನವಾಗಿದೆ. ಆಕಾಶದಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ವಿಮಾನ ಪತನವಾಗಿದೆ. ಈ ಘಟನೆಗೆ ವಿಮಾನದಲ್ಲಿ  ಉಂಟಾದ ತಾಂತ್ರಿಕ ತೊಂದರೆಯೇ ಕಾರಣ ಎನ್ನಲಾಗಿದೆ

4.ಕಾಡ್ಗಿಚ್ಚಿನ ನಡುವೆ ಹೆಚ್ಚು ನೀರು ಕುಡಿಯುವ ಕಾರಣಕ್ಕೆ 10 ಸಾವಿರ ಒಂಟೆಗಳನ್ನು ಕೊಲ್ಲಲು ಆಸ್ಟ್ರೇಲಿಯಾ ನಿರ್ಧಾರಕುಡಿಯಲು ನೀರು ಸಿಗದೇ ಬಾಯಾರಿದ ಪ್ರಾಣಿಗಳು ನೀರನ್ನು ಹುಡುಕಿಕೊಂಡು ಬಂದು ಸ್ಥಳೀಯರಿಗೆ ಅಪಾಯ ಉಂಟುಮಾಡುತ್ತಿವೆ ಎಂಬ ದೂರುಗಳು ಕೇಳಿ ಬಂದ ಬಳಿಕ ಹಾಗೂ ನೀರಿನ ಅಭಾವದ ನಡುವೆಯೂ ಅತಿ ಹೆಚ್ಚು ನೀರು ಕುಡಿಯುವ ಕಾರಣದಿಂದ 10 ಸಾವಿರ ಒಂಟೆಗಳನ್ನು ಕೊಲ್ಲಲು ಇಲ್ಲಿನ ಸರ್ಕಾರ ನಿರ್ಧರಿಸಿದೆ.

5.ಮುಜಾಫರ್​ ನಗರ ಆಶ್ರಯತಾಣದಲ್ಲಿ ಯಾವುದೇ ಯುವತಿಯ ಸಾವಾಗಿಲ್ಲ; ಸಿಬಿಐನಿಂದ ಸುಪ್ರೀಂಗೆ ಮಾಹಿತಿ ಸಲ್ಲಿಕೆ

ಮುಜಾಫರ್​ ನಗರ ಆಶ್ರಯ ತಾಣದಲ್ಲಿ ನಾಪತ್ತೆಯಾಗಿದ್ದ 35 ಯುವತಿಯರು ಪತ್ತೆಯಾಗಿದ್ದು, ಯಾವುದೇ ಯುವತಿ ಸಾವನ್ನಪ್ಪಿಲ್ಲ ಎಂದು ಸಿಬಿಐ ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿದೆ. ಸಿಬಿಐ ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಾಲ್​ ಕೆಕೆ ವೇಣುಗೋಪಾಲ್​, ಕೊಲೆ ಸಂಬಂಧ ಸಂಸ್ಥೆ ತನಿಖೆ ನಡೆಸುತ್ತಿದ್ದು, ನಾಪತ್ತೆಯಾಗಿರುವ ಎಲ್ಲಾ ಯುವತಿಯರು ಬದುಕಿರುವುದಾಗಿ ತಿಳಿಸಿದ್ದಾರೆ.

6.ಒಳ್ಳೆ ವಿಚಾರಗಳಿಗೆ ಬೆಂಬಲ ನೀಡಿದರೆ, ಜನರೇ ಉತ್ತಮ ಸಿನಿಮಾಗಳನ್ನು ಮೆಚ್ಚಿ ನೋಡುತ್ತಾರೆ; ದೀಪಿಕಾಗೆ ಪ್ರತಾಪ್​ ಸಿಂಹ ಲೇವಡಿ

ದೀಪಿಕಾ ಪಡುಕೋಣೆ  ಒಳ್ಳೆಯ ವಿಚಾರಗಳಿಗೆ ಬೆಂಬಲ ಸೂಚಿಸದರೆ, ಒಳ್ಳೆಯ ಸಿನಿಮಾಗಳನ್ನು ಜನರೇ ಮೆಚ್ಚಿ ನೋಡುತ್ತಾರೆ. ನಟ ನಟಿಯರ ವರ್ತನೆಯನ್ನು ಎಲ್ಲವನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ.ಒಳ್ಳೆಯ ವಿಚಾರಗಳಿಗೆ ಬೆಂಬಲ ಕೊಡಲಿ  ಎಂದು ಬಾಲಿವುಡ್​ ನಟಿ ದೀಪಿಕಾಗೆ ಸಂಸದ ಪ್ರತಾಪ್​ ಸಿಂಹ ಕಿವಿಮಾತು ಹೇಳಿದ್ದಾರೆ.

7.ಬಿಜೆಪಿ ಶಾಸಕರು ಹುಲಿಗಳಿದ್ದ ಹಾಗೆ; ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ: ಸಚಿವ ಈಶ್ವರಪ್ಪ

ಜೆಡಿಎಸ್ ಶಾಸಕರನ್ನೇ ಮೊದಲು ಉಳಿಸಿಕೊಳ್ಳಲಿ. ಬಿಜೆಪಿ ಅತೃಪ್ತ ಶಾಸಕರ ಬಗ್ಗೆ ಆ ಮೇಲೆ ಮಾತನಾಡಲಿ. ಬಿಜೆಪಿ ಶಾಸಕರು ಹುಲಿಗಳಿದ್ದ ಹಾಗೆ, ಹುಲಿಗಳನ್ನು‌ ಮುಟ್ಟುವ ಧೈರ್ಯ ಯಾರಿಗೂ ಇಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

8.ಕಪ್ಪು ಬಾವುಟ ಪ್ರದರ್ಶಿಸಿ, ಬಸ್ ಸಂಚಾರ​ ತಡೆಗೆ ಮುಂದಾದ ವಾಟಾಳ್​ ನಾಗರಾಜ್​ ಪೊಲೀಸರ ವಶಕ್ಕೆ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ, ಬಸ್​ ತಡೆಗೆ ಮುಂದಾದ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗಾರಾಜ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ದೇಶವ್ಯಾಪಿ ಕರೆ ನೀಡಿರುವ ಬಂದ್​ಗೆ ರಾಜ್ಯದಲ್ಲಿ ಸರ್ಕಾರ ಬೆಂಬಲ ವ್ಯಕ್ತಪಡಿಸಿಲ್ಲ. ಅಲ್ಲದೇ ಬಂದ್​ ಸಂಬಂಧ ಯಾವುದೇ ಜಾಥಾ, ಮೆರವಣಿಗೆಯನ್ನು ನಡೆಸಬಾರದು. ಮುಷ್ಕರ ನಡೆಸಲು ಅನುಮತಿ ಇದೆ. ಆದರೆ,  ಜನ ಜೀವನಕ್ಕೆ ತೊಂದರೆಯುಂಟು ಮಾಡಿದರೆ ಕ್ರಮಕ್ಕೆ ಮುಂದಾಗುವುದಾಗಿ ಪೊಲೀಸ್​ ಕಮಿಷನರ್​ ತಿಳಿಸಿದ್ದರು.

9.ನಾಳೆಯಿಂದ ಸಿನಿರಸಿಕರಿಗೆ ಹಬ್ಬದೂಟ; ರಿಲೀಸ್ ಆಗ್ತಿದೆ ನಾಲ್ಕು ಸ್ಟಾರ್ ನಟರ ಸಿನಿಮಾ

ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಸ್ಟಾರ್​ ನಟರ ಸಿನಿಮಾಗಳು ತೆರೆಗೆ ಬರುವುದು ವಾಡಿಕೆ. ಈ ವೇಳೆ ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ವಾರ್​ ನಡೆಯೋದು ಸಾಮಾನ್ಯ. ಅಂತೆಯೇ ಈ ಬಾರಿಯ ಸಂಕ್ರಾಂತಿ ಸಿನಿ ರಸಿಕರ ಪಾಲಿಗೆ ವಿಶೇಷವಾಗಲಿದೆ. ಕಾರಣ ಈ ಹಬ್ಬದ ಪ್ರಯುಕ್ತ ಸ್ಟಾರ್​ ನಟರ ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿವೆ.  ನಾಳೆಯಿಂದ ಭಾನುವಾರದವರೆಗೆ ದಿನಕ್ಕೆ ಒಂದರಂತೆ ನಾಲ್ಕು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಇವುಗಳಲ್ಲಿ ಯಾವ ಸಿನಿಮಾ ಗೆಲ್ಲಲಿದೆ ಎನ್ನುವ ಕುತೂಹಲ ಕೂಡ ಮೂಡಿದೆ. ಇನ್ನು, ಈ ಬಾರಿಯ ಸಂಕ್ರಾಂತಿ ಕನ್ನಡ ಪ್ರೇಕ್ಷಕರ ಪಾಲಿಗೆ ತುಸು ಕಹಿಯನ್ನೇ ನೀಡಿದ್ದು, ಯಾವುದೇ ದೊಡ್ಡ ಬಜೆಟ್​ ಚಿತ್ರಗಳು ಬಿಡುಗಡೆ ಕಾಣುತ್ತಿಲ್ಲ.

10.ನ್ಯೂಜಿಲೆಂಡ್ ಪ್ರವಾಸದಿಂದ ಟೀಂ ಇಂಡಿಯಾ ಸ್ಟಾರ್ ಆಟಗಾರ ಔಟ್

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಗಾಯಗೊಂಡ ಪರಿಣಾಮ ಭಾರತ ಎ ತಂಡದ ಮುಂದಿನ ನ್ಯೂಜಿಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಭಾರತ ಎ ತಂಡ ನ್ಯೂಜಿಲ್ಯಾಂಡ್ ಪ್ರವಾಸ ತೆರಳಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ 'ಎ' ವಿರುದ್ಧ ಆಡಲಿದೆ.
First published:January 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ