ಚಿತ್ರದುರ್ಗ: ಎಲ್ಲಿ ರೆಡ್ಡಿ ಸಿಎಂ ಸ್ಥಾನದಲ್ಲಿ ಕೂತು ಬಿಡ್ತಾನೆ ಅಂತ ಹೇಳಿ ಕೆಲವರು ನನಗೆ ಬಲೆ ಹಾಕಿದ್ರು ಎಂದು ಮಾಜಿ ಸಚಿವ, ಕೆಆರ್‌ಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ. ಹಿರಿಯೂರಿನ (Hiriyur) ನೆಹರೂ ಮೈದಾನದಲ್ಲಿ ನಡೆದ ಕೆಆರ್‌ಪಿ ಪಕ್ಷದ (KRP Party) ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜನಾರ್ದನ ರೆಡ್ಡಿ, ಹಿರಿಯೂರುಗೆ ನನ್ನ ಹೃದಯದಿಂದ ಪ್ರೀತಿಯ ಋಣ ತೀರಿಸುವ ಉದ್ದೇಶ ಇದೆ. 2008ರಲ್ಲಿ ಅಂದಿನ ಬಿಜೆಪಿ ಪಕ್ಷದ ಜವಾಬ್ದಾರಿ ಹೊತ್ತಾಗ ಹಿರಿಯೂರು ಜನರು ಆಶೀರ್ವಾದ ಮಾಡಿದ್ರು. ಹಿರಿಯೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ ಸಹಕಾರದಿಂದ ಅಂದು ಬಿಜೆಪಿ ಸರ್ಕಾರ ಬಂದಿತ್ತು. ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಬರಲಿಕ್ಕೆ ಈ ಕ್ಷೇತ್ರವೇ ಕಾರಣ. ಹಾಗಾಗಿ ಈ ಕ್ಷೇತ್ರದ ಜನರಿಗೆ ತಲೆ ಬಾಗಿಸಿ ನಮಸ್ಕರಿಸುತ್ತೇನೆ. ನಮ್ಮ ಕುಟುಂಬದ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.
ಒಂದು ಮಾತು ಹೇಳಿ ಬೇರೆ ಕೆಲಸ ಮಾಡುವ ವ್ಯಕ್ತಿ ನಾನಲ್ಲ ಎಂದ ಜನಾರ್ದನ ರೆಡ್ಡಿ, 12 ವರ್ಷಗಳ ಕಾಲ ಮನೆಯಿಂದ ಹೊರಗೆ ಬರದೇ ಜೈಲಲ್ಲಿ ಇಟ್ಟು ಬಂಧನ ಮಾಡಿದ್ರು. ನದಿಯಲ್ಲಿ ಮೀನು ಆನಂದವಾಗಿ ಈಜು ಮಾಡ್ತಿರುತ್ತೆ, ಬಲೆ ಹಾಕಿದ್ರೂ ಗೊತ್ತಾಗಲ್ಲ. ಎಲ್ಲಿ ರೆಡ್ಡಿ ಸಿಎಂ ಸ್ಥಾನಕ್ಕೆ ಆಗ್ತಾನೆ ಎಂದು ಕೆಲವರು ನನಗೆ ಬಲೆ ಹಾಕಿದ್ರು. ಯಾವುದೇ ಸರ್ಕಾರಿ ದುಡ್ಡು ಕಬಳಿಸಿ ನಾನು ಜೈಲಿಗೆ ಹೋಗಲಿಲ್ಲ. ಒಂದು ಪಕ್ಷ ಬೆಳೆಯುತ್ತೆ ಎಂದು ಇನ್ನೊಂದು ಪಕ್ಷ ನನ್ನನ್ನು ಬಂಧನ ಮಾಡಿದ್ರು. ಹೊರಗಡೆ ಬಂದಾಗ ಎಲ್ಲರೂ ನನ್ನನ್ನು ನೋಡಿ ಬಹುತೇಕ ಸುಮ್ನೆ ಇದ್ದಾರೆ. ಸಿಎಂ ಆಗುವ ಆಸೆ ಇರೋರು ಎಲ್ಲರೂ ನನ್ನ ದೂರ ಇಡುವ ಕೆಲಸ ಮಾಡಿದ್ರು. ರಾಜಕೀಯವಾಗಿ ಶತ್ರುಗಳು ಕಷ್ಟ ಪಡ್ತಾರೆ ಅಂದ್ರೆ ಒಪ್ಕೊಳ್ಳಬಹುದು. ಆದ್ರೆ ನಮ್ಮವರೇ ನಂಬಿದವರು ನನಗೆ ದ್ರೋಹ ಮಾಡಿದ್ರು ಅಂದ್ರೆ ನಂಬಲು ಆಗಲ್ಲ ಎಂದು ಹಳೆಯ ನೋವಿನ ದಿನಗಳನ್ನು ನೆನಪು ಮಾಡಿದರು.
'ಸುಷ್ಮಾ ಸ್ವರಾಜ್‌ಗೋಸ್ಕರ ರಾಜಕೀಯಕ್ಕೆ ಬಂದೆ'
ಇನ್ನು ನಾನು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದ ಜನಾರ್ದನ ರೆಡ್ಡಿ, ಒಂದಾನೊಂದು ಕಾಲದಲ್ಲಿ ಸುಷ್ಮಾ ಸ್ವರಾಜ್‌ಗೋಸ್ಕರ ನಾನು ರಾಜಕೀಯಕ್ಕೆ ಬಂದೆ. ರಾಜಕೀಯ ಬಿಟ್ಟು ಬ್ಯುಸಿನೆಸ್ ಮಾಡಿದ್ರೆ ಮುಖೇಶ್ ಅಂಬಾನಿ ಹಿಂದೆ ಈ ರೆಡ್ಡಿ ಹೆಸರು ಇರ್ತಿತ್ತು. ಸುಷ್ಮಾ ಸ್ವರಾಜ್ ನನ್ನ ಆಫೀಸ್‌ಗೆ ಬಂದು ನೀನು ಬರಬೇಕು ತಮ್ಮ ಎಂದಿದ್ದಕ್ಕೆ ರಾಜಕೀಯಕ್ಕೆ ಬಂದೆ. ರಾಜಕೀಯ ಅಂದ್ರೆ ಮೋಸ, ಸುಳ್ಳು, ಬೇರೊಬ್ಬರ ತಲೆ ಮೇಲೆ ತುಳಿದು ಹೋಗುವುದು ರಾಜಕೀಯ. ಆದ್ರೆ ನಾನು ಆ ರೀತಿಯ ರಾಜಕೀಯ ಮಾಡಲಿಲ್ಲ. ನಾನು ಹೇಳಿದ್ದನ್ನೇ ಮಾಡ್ತೀನಿ, ಅದೇ ಜನಾರ್ದನ ರೆಡ್ಡಿ ಎಂದು ಹೇಳಿದರು.
ಇದನ್ನೂ ಓದಿ: Janardhana Reddy: ಶೀಘ್ರವೇ 40 ಅಭ್ಯರ್ಥಿಗಳ ಲಿಸ್ಟ್ ರಿಲೀಸ್, ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲ ಎಂದ ಜನಾರ್ದನ ರೆಡ್ಡಿ
'ಹುಲಿ ಹಸಿವಾದಾಗ ಬೇಟೆ ಆಡುತ್ತೆ'
ಹುಲಿ ಒಂದು ದಿನ ಬಂದು ಬೇಟೆ ಆಡಲ್ಲ ಅದಕ್ಕೆ ಹಸಿವಾದಾಗ ಬೇಟೆ ಆಡುತ್ತೆ ಎಂದ ಜನಾರ್ದನ ರೆಡ್ಡಿ, ಸಣ್ಣ ಪುಟ್ಟ ಜಿಂಕೆ ಬೇಟೆ ಆಡಲ್ಲ, ಐದಾರು ದಿನಕ್ಕೆ ಆಗುವಷ್ಟು ಬೇಟೆ ಆಡುತ್ತೆ. ಐದು ವರ್ಷ ನಾನು ಮನೆಯಲ್ಲಿ ಸುಮ್ಮನೆ ಕೂತಿರಲಿಲ್ಲ ಎಲ್ಲವನ್ನೂ ಗಮನಿಸ್ತಿದ್ದೆ. ಸಾರ್ವಜನಿಕ ಬದುಕಲ್ಲಿ ನಾನು ಬರಬೇಕು ಎಂದಾಗ ಬಳ್ಳಾರಿಯಲ್ಲಿ ಇರಲು ಅವಕಾಶ ಮಾಡ್ಲಿಲ್ಲ. ಚುನಾವಣೆ ಹತ್ತಿರ ಬರ್ತಿರೋದ್ರಿಂದ ಬಳ್ಳಾರಿಯಿಂದ ಹೊರಗೆ ಹೋಗ್ತಾನೆ ಎಂದು ಪ್ಲಾನ್ ಮಾಡಿದ್ರು. ನನಗಿನ್ನು 55 ವರ್ಷ 20 ವರ್ಷ ರಾಜಕೀಯ ಮಾಡುವ ವಯಸ್ಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೂರದೆ ಜನರ ಬಳಿ ಹೋಗ್ತೀನಿ ಎಂದು ಹೊಸ ಪಕ್ಷ ಕಟ್ಟಿದೆ ಎಂದು ಹೇಳಿದರು.
'ಅಧಿಕಾರಿಗಳಿಗೆ ನಾಚಿಕೆ ಆಗೋದಿಲ್ವಾ?'
ಇನ್ನು ನನ್ನ ಮಗಳಿಗೆ ಹೆರಿಗೆ ಅಗಿ 24 ಗಂಟೆ ಕೂಡ ಆಗಿಲ್ಲ, ಒಂದ್ಕಡೆ ಕೋರ್ಟ್ ವಿಚಾರಣೆ ನಡೆಯುತ್ತಿದೆ. ಸಿಬಿಐ ಅಧಿಕಾರಿಗಳು ಹೆರಿಗೆ ಆಗಿದೆಯೋ ಇಲ್ಲವೋ ಎಂದು ನೋಡಬೇಕು ಎನ್ನುತ್ತಾರೆ. ಮನೆ ಬಾಗಿಲಿಗೆ ಬಂದು ನಿಮ್ಮ ಮಗಳು ಹಾಗು ನಿಮ್ಮ ಪೋಟೋ ಬೇಕು ಎನ್ನುತ್ತಾರೆ. ಇಂತಹ ಅಧಿಕಾರಿಗಳಿಗೆ ನಾಚಿಕೆ ಆಗೋದಿಲ್ವಾ? ಎಂದ ರೆಡ್ಡಿ, ರಾಜಕೀಯದಲ್ಲಿ ಎಷ್ಟೊಂದು ಮಂದಿಗೆ ನೀನು ಸಹಾಯ ಮಾಡಿದೆ. ಈಗ ಈ ರೀತಿ ಆಗ್ತಿದೆ ಎಂದು ಬೇಸರದಿಂದ ನನ್ನ ಶ್ರೀಮತಿ ಜನರ ಬಳಿ ಹೋಗುವ ನಡಿ ಎಂದು ನನ್ನ ಜೊತೆ ಬಂದಿದ್ದಾಳೆ. ಹೀಗಾಗಿ 2023 ರ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬರುವ ಸರ್ಕಾರ ಆಗಲಿದೆ. 224 ಕ್ಷೇತ್ರದಲ್ಲಿ 40 ಸ್ಥಾನ ಗೆಲ್ತೀವಿ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ