ಬಳ್ಳಾರಿ: ಹೊಸ ಪಕ್ಷದಿಂದ ಹೊಸ ಅಲೆ ಸೃಷ್ಟಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy ) ಹಾಗೂ ಪತ್ನಿ ಅರುಣಾ ಲಕ್ಷ್ಮಿ (Aruna Lakshmi) ಮೆಗಾ ಪ್ಲ್ಯಾನ್ ಮಾಡಿದ್ದಾರೆ. ಈ ಕುರಿತು ನ್ಯೂಸ್18 ಜೊತೆ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಮಾತನಾಡಿದ್ದಾರೆ. ಮಹಿಳೆಯರ ಸಮಾನತೆ, ಮೀಸಲಾತಿಗಾಗಿ (Equality and Reservation) ನಾವು ಹೋರಾಡುತ್ತೇವೆ. ಅಭಿವೃದ್ಧಿ (Development ) ವಿಚಾರ ಮುಂದಿಟ್ಟು ಚುನಾವಣೆ (Election) ಎದುರಿಸುತ್ತೇವೆ ಅಂತ ಹೇಳಿದ್ದಾರೆ. ಅಲ್ಲದೆ, ಬಳ್ಳಾರಿ ಸೇರಿ ಇಡೀ ನಾಡಿನ ಅಭಿವೃದ್ಧಿಯೇ ನಮ್ಮ ಗುರಿ. ಬಾವನ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಭೆಯ ಬಳಿಕ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಅರುಣಾ ಲಕ್ಷ್ಮಿ ಅವರು, ಬಳ್ಳಾರಿಯ ಪ್ರತಿ ವಾರ್ಡ್ಗೆ ಭೇಟಿ ನೀಡಿ ಜನರನ್ನು ಭೇಟಿ ಮಾಡುತ್ತಿದ್ದೀನಿ. ಜನರ ನೀಡುತ್ತಿರುವ ಸ್ವಾಗತ ಸಂತಸ ತಂದಿದೆ. ಇದನ್ನು ನೋಡಿದರೆ ಹಬ್ಬದ ವಾತಾವರಣದ ತರ ಕಾಣುತ್ತಿದೆ. ನಾವು ಎದುರಾಳಿ ಪಕ್ಷ ಯಾವುದು, ಎದುರಾಳಿ ಯಾರು ಎಂದು ನೋಡುತ್ತಿಲ್ಲ. ಈ ಬಗ್ಗೆ ಯೋಚನೆಯನ್ನು ಮಾಡುತ್ತಿಲ್ಲ.
ನಾನು ರಾಜಕೀಯ ಕುಟುಂಬದಿಂದಲೇ ಬಂದಿದ್ದೇನೆ
ಜನಾರ್ದನ ರೆಡ್ಡಿ ಅವರ ಕನಸುಗಳೇ ನಮ್ಮ ಗುರಿಯಾಗಿದೆ. ನಾನು ಮದುವೆಯಾಗಿ ಬಳ್ಳಾರಿಗೆ ಬಂದ ಮೇಲೆ ಸಾಕಷ್ಟು ಸಾಮಾನ್ಯ ಜನರು ತಮ್ಮ ಕಷ್ಟಗಳನ್ನು ಬಂದು ಹೇಳಿಕೊಳ್ಳುತ್ತಿದ್ದರು, ಅದನ್ನು ಹತ್ತಿರದಿಂದ ನೋಡಿದ್ದೀನಿ. ಜನರ ಸಮಸ್ಯೆಗಳಿಗೆ ರೆಡ್ಡಿ ಅವರು ಹೇಗೆ ಸ್ಪಂದಿಸುತ್ತಿದ್ದರು ಎಂಬುವುದನ್ನು ನೋಡಿದ್ದೀನಿ. ನಾನು ರಾಜಕೀಯ ಕುಟುಂಬದಿಂದ ಬಂದ ಹೆಣ್ಣು ಮಗಳು. ಆದ್ದರಿಂದ ನನಗೆ ರಾಜಕೀಯ ಹೊಸತಲ್ಲ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿಯಲ್ಲಿ ನಿಲ್ಲಬೇಕು ಎಂದು ಜನಾರ್ದನ ರೆಡ್ಡಿ ಅವರು ಬಂದು ಹೇಳಿದ ಸಂದರ್ಭದಲ್ಲಿ ಸ್ವಲ್ಪ ಆತಂಕ ಆಯ್ತು. ಆದರೆ ಈಗ ಜನರ ನಡುವೆ ಬಂದು ಅವರನ್ನು ಭೇಟಿ ಮಾಡುತ್ತಿರುವ ಸಂದರ್ಭದಲ್ಲಿ ಎಲ್ಲಾ ಆತಂಕಗಳು ದೂರ ಆಗಿದೆ. ನನಗೆ ಒಂಟಿ ಎಂಬ ಭಾವನೆ ಇಲ್ಲ. ನಾವು ನಮ್ಮ ಎದುರಾಳಿ ಎಂದು ಯಾರನ್ನು ನೋಡುತ್ತಿಲ್ಲ.
30 ವರ್ಷಗಳಿಂದ ನಾನು ಹೆಚ್ಚು ಸಾರ್ವಜನಿಕರ ಬದುಕಿನಲ್ಲಿ ಬಂದಿಲ್ಲ. ಆದರೆ ಈಗ ಬಳ್ಳಾರಿ ಹಾಗೂ ನಾಡಿನ ಅಭಿವೃದ್ಧಿಯ ಗುರಿಯನ್ನು ಮುಂದಿಟ್ಟುಕೊಂಡು ಬಂದಿದ್ದೇವೆ. ಜನರ ಸಮಸ್ಯೆಗಳು, ಕಷ್ಟಗಳನ್ನು ದೂರ ಮಾಡುವ ವಿಶ್ವಾಸ ಇರುವುದರಿಂದಲೇ ನಾನು ಅವರ ಬಳಿ ಹೋಗುತ್ತಿದ್ದೇನೆ ಎಂದರು.
ಇದನ್ನೂ ಓದಿ: Tumkur: ನವ ದಂಪತಿ ಬಾಳಲ್ಲಿ ಘೋರ ದುರಂತ, 2 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಅಪಘಾತದಲ್ಲಿ ಸಾವು!
ಅಭಿವೃದ್ಧಿಯ ಅಂಶಗಳನ್ನು ಮುಂದಿಟ್ಟುಕೊಂಡು ಜನರ ಎದುರು ಹೋಗ್ತಾಯಿದ್ದಿವಿ
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರು ಏನೆಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂಬುವುದು ಜನರಿಗೆ ಸ್ಪಷ್ಟವಾಗಿದೆ ಗೊತ್ತಿದೆ. ಅದೇ ರೀತಿ ಏನೆಲ್ಲಾ ಕೆಲಸಗಳು ಆಗಬೇಕಿತ್ತು ಎಂಬುವುದು ಅವರಿಗೆ ಗೊತ್ತಿದೆ. ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೆಲಸಗಳು ಅರ್ಧಕ್ಕೆ ನಿಂತಿದೆ. ರಿಂಗ್ ರೋಡ್ 12 ವರ್ಷಗಳಿಂದ ಪೂರ್ಣಗೊಳ್ಳುತ್ತಿಲ್ಲ.
ಆಗಬೇಕಿರುವ ಸಾಕಷ್ಟು ಕೆಲಸಗಳು ಆಗುತ್ತಿಲ್ಲ. ಹಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಇವುಗಳನ್ನು ಪೂರ್ಣಗೊಳಿಸಿ ಬಳ್ಳಾರಿಯನ್ನು ಅಭಿವೃದ್ಧಿಯ ಹಾದಿಗೆ ಮರಳಿ ಕರೆತರುವುದು ನನ್ನ ಮುಂದಿನ ಗುರಿಯಾಗಿದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿಯ ಸುಳಿವು ನೀಡಿದ್ರಾ ಜನಾರ್ದನ ರೆಡ್ಡಿ?
ಇನ್ನು, ಬೆಳಗಾವಿಯಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ ಅವರು, ಚುನಾವಣೆ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಇಲ್ಲ ಎಂದರೆ ಅಧಿಕಾರಕ್ಕೆ ಬಂದವರ ಕೈ ಹಿಡಿದಾದರು ಅಧಿಕಾರ ಮಾಡುತ್ತೇವೆ. ನನ್ನ ಕೈ ಯಾರು ಹಿಡಿಯುತ್ತಾರೆ ಅಥವಾ ನಾನು ಯಾರ ಕೈ ಹಿಡಿಯುತ್ತೀನಿ ಅನ್ನೋದು ಚುನಾವಣೆ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ