ಕೊಪ್ಪಳ: ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದ ಗಾಲಿ ಜನಾರ್ದನ ರೆಡ್ಡಿ, ರಾಜ್ಯದ ಪ್ರಮುಖ ಪಕ್ಷಗಳಂತೆ ತಮ್ಮದೇ ಆದ ಯಾತ್ರೆಯನ್ನು ಆರಂಭಿಸಿದ್ದಾರೆ. ಮಂಗಳವಾರ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ಕೊಪ್ಪಳದಲ್ಲಿ ಕಲ್ಯಾಣ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಈಗ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಇದೀಗ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಹೋದರನ ವಿರುದ್ಧವೇ ಪತ್ನಿಯನ್ನು ಕಣಕ್ಕಿಳಿಸುತ್ತಿರುವುದು ಆಶ್ಚರ್ಯ ತಂದಿದೆ.
ಜನಾರ್ದನ ರೆಡ್ಡಿ, ಪತ್ನಿ ಅರುಣಾಲಕ್ಷ್ಮೀ ಹಾಗೂ ಪುತ್ರಿ ಬ್ರಹ್ಮಣಿ ರಾಜೀವ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾಸರೋವರದಲ್ಲಿ ಮಂಗಳವಾರ ಪೂಜೆ ಸಲ್ಲಿಸಿ ಬೆಳಿಗ್ಗೆ ಆನೆಗುಂದಿಯಲ್ಲಿ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿದರು. ಜನಾರ್ದನ ರೆಡ್ಡಿಯ ಚುನಾವಣೆ ಪ್ರಚಾರಕ್ಕೆ ಐಷಾರಾಮಿ ಹವಾನಿಯಂತ್ರಿತ ವಾಹನವನ್ನು ಸಿದ್ದಪಡಿಸಲಾಗಿದೆ. ವಾಹನದಲ್ಲಿ ಶೌಚಾಲಯ, ಟಿವಿ ಐಷರಾಮಿ ಸೀಟು ಹೊಂದಿದೆ. ಇದೇ ವಾಹನದಲ್ಲಿ ರೆಡ್ಡಿ ಪ್ರಚಾರಕಾರ್ಯ ನಡೆಸಲಿದ್ದಾರೆ.
ನೋವು, ದ್ವೇಷದಿಂದ ಪಕ್ಷ ಕಟ್ಟಿಲ್ಲ
ಜನಾರ್ದನ ರೆಡ್ಡಿ 12 ವರ್ಷಗಳ ವನವಾಸ ನಡೆಸಿ ಕಷ್ಟಪಟ್ಟು ಪಕ್ಷ ಸ್ಥಾಪಿಸಿದ್ದಾರೆ ಎಂಬ ಮಾತಿದೆ. ಆದರೆ ನಾನು ಯಾರ ವಿರುದ್ದವು ಪಕ್ಷವನ್ನು ಸ್ಥಾಪಿಸಿಲ್ಲ. ನಾನು ಬಡತನದಿಂದ ಹುಟ್ಟಿ ಬಂದು ಶ್ರೀಮಂತನಾಗಿದ್ದೇನೆ. ಆದರೆ ನಾನು ಬಡತನದ ದಿನಗಳನ್ನು ಮರೆತಿಲ್ಲ. ನನ್ನ ಮಕ್ಕಳು ರಸ್ತೆಯ ಮೂಲಕ ಸಂಚರಿಸಿದ್ದಾರೆ. ನಾನು ಜೈಲಿನಲ್ಲಿದ್ದಾಗ ಬಡವರೊಂದಿಗೆ ನನ್ನ ಮಕ್ಕಳನ್ನು ಬೆಳೆದಿದ್ದಾರೆ. ನಾನು ನೋವಿನಿಂದ, ದ್ವೇಷದಿಂದ ಪಕ್ಷ ಸ್ಥಾಪಿಸಿಲ್ಲ. ಸಾಧನೆ ಮಾಡುತ್ತೇನೆ ಎಂಬ ಆಶಯದಿಂದ ಪಕ್ಷ ಸ್ಥಾಪಿಸಿದ್ದೇನೆ. 2008 ರಲ್ಲಿ ಯಡಿಯೂರಪ್ಪರೊಂದಿಗೆ ರಾಜ್ಯದಾದ್ಯಂತ ಓಡಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆ ಎಂದು ನೆನಪಿಸಿಕೊಂಡರು.
ದೆಹಲಿಯವರಿಗೆ ಹೆದರಲ್ಲ
ಮುಂದುವರೆದು ಮಾತನಾಡಿದ ರೆಡ್ಡಿ, ಜನಾರ್ದನ ರೆಡ್ಡಿ ಈಗ ಒಬ್ಬಂಟ್ಟಿಯಲ್ಲ, ಜನರ ಪ್ರೀತಿ ವಿಶ್ವಾಸದಿಂದಾಗಿ ರಾಜಕೀಯದಲ್ಲಿದ್ದೇನೆ. ಜನಾರ್ದನ ರೆಡ್ಡಿ ಯಾರಿಗೂ ಹೆದರಲ್ಲ. ಬೆದರಲ್ಲ, ಜಗ್ಗುವುದಿಲ್ಲ. ದೆಹಲಿಯವರಿಗೆ ಹೆದರಿ ಪಕ್ಷ ಸ್ಥಾಪನೆ ಬಿಡುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ಗೆ ಸವಾಲ್ ಎಸೆದರು. ನಾನು ಜೀವನದಲ್ಲಿ ಅವಮಾನ ಮತ್ತು ಸನ್ಮಾನಗಳನ್ನು ಸಮವಾಗಿ ಸ್ವೀಕರಿಸಿದ್ದೇನೆ. ಪಕ್ಷ ಸ್ಥಾಪನೆ ಮಾಡಿದಾಗಲೇ ಸಂಕಲ್ಪ ಮಾಡಿದ್ದೇನೆ. ಮಾಡಿದ ಸಂಕಲ್ಪ ಬದಲಾಯಿಸುವುದಿಲ್ಲ. ಪ್ರಾಣ ಹೋದರೂ ಮಾಡಿರುವ ಸಂಕಲ್ಪ ಕೈ ಬಿಡುವುದಿಲ್ಲ. ಕೊಟ್ಟ ಬಾಣ, ಮುಂದಿಟ್ಟ ಹೆಜ್ಜೆಯನ್ನು ಹಿಂಪಡೆಯುವುದಿಲ್ಲ ಎಂದರು.
ತಮ್ಮನ ವಿರುದ್ಧ ಪತ್ನಿ ಕಣಕ್ಕೆ
ಈಗಾಗಲೆ ಗಂಗಾವತಿ ಕ್ಷೇತ್ರದಿಂದ ತಮ್ಮ ಸ್ಪರ್ಧೆ ಖಚಿತ ಪಡಿಸಿರುವ ಜನಾರ್ದನ ರೆಡ್ಡಿ, ಇದೀಗ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಪತ್ನಿ ಅರುಣಾ ಲಕ್ಷ್ಮಿ ಹೆಸರನ್ನು ಘೋಷಣೆ ಮಾಡಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಸಹೋದರ ಸೋಮಶೇಖರ್ ರೆಡ್ಡಿ ಸ್ಪರ್ಧಿಸುವ ಕ್ಷೇತ್ರದಲ್ಲೇ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ಕ್ಷೇತ್ರದಲ್ಲಿ ಚುನಾವಣಾ ಕಾವನ್ನು ಹೆಚ್ಚಿಸಿದ್ದಾರೆ. ಜನಾರ್ದನಾ ರೆಡ್ಡಿ ಬಳ್ಳಾರಿಯಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದರು. ಆದರೆ ಅಲ್ಲಿಗೆ ತೆರಳಲು ಅವರಿಗೆ ಕೋರ್ಟ್ ಅನುಮತಿ ನೀಡದಿರುವ ಕಾರಣ ಕೊಪ್ಪಳವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ.
ಗೆಲ್ಲುವ ಅಭ್ಯರ್ಥಿಗೆ ಅವಕಾಶ
ಬಳ್ಳಾರಿ ನಗರ ಕ್ಷೇತ್ರದಲ್ಲಿ ಪತ್ನಿಯನ್ನು ಕಣಕ್ಕಿಳಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಜನಾರ್ದನಾ ರೆಡ್ಡಿ , ನಾನು ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆಯ ಸಂದರ್ಭದಲ್ಲಿ ಬಂಧು ಬಳಗ ಸ್ನೇಹ ದುರುಪಯೋಗ ಪಡಿಸಿಕೊಂಡಿಲ್ಲ. ನಾನು ಅಂದುಕೊಂಡಂತೆ ಪಕ್ಷವನ್ನು ನಡೆಸುತ್ತಿದ್ದೇನೆ. ನಾನು ಯಾರ ಬಗ್ಗೆಯೂ, ಯಾವ ಪಕ್ಷದ ಬಗ್ಗೆಯೂ ಮಾತನಾಡುವುದಿಲ್ಲ. ನಾನು ನನ್ನದೇ ಸಿದ್ದಾಂತದಲ್ಲಿ ಹೋಗುತ್ತೇನೆ. ಮುಂಬರುವ ಚುನಾವಣೆಯಲ್ಲಿ ಎಲ್ಲೆಲ್ಲಿ ಗೆಲ್ಲುವ ಅವಕಾಶವಿದೆಯೋ ಅಲ್ಲಿಗೆ ಅಭ್ಯರ್ಥಿಗಳನ್ನು ಹಾಕಲಾವುದು. ಯಾರನ್ನು ಸೋಲಿಸಲು ಅಥವಾ ಯಾರನ್ನು ಗೆಲ್ಲಿಸುವ ಸಲುವಾಗಿ ಅಭ್ಯರ್ಥಿ ಹಾಕುತ್ತಿಲ್ಲ ಎಂದರು.
ಪ್ರಾಣ ಹೋದರೂ ಕ್ಷೇತ್ರ ಬಿಡಲ್ಲ
ಬಳ್ಳಾರಿ ನಗರ ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ನಿಮ್ಮ ಅತ್ತಿಗೆ ಅರುಣಾ ಲಕ್ಷ್ಮಿ ಕಣಕ್ಕಿಳಿಯುತ್ತಿದ್ದಾರೆ, ಕ್ಷೇತ್ರವನ್ನು ಬಿಟ್ಟುಕೊಟ್ಟು ಬೆಂಬಲಿಸುತ್ತೀರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್ ರೆಡ್ಡಿ, ಪ್ರಾಣ ಬಿಟ್ಟರೂ ಕ್ಷೇತ್ರ ಬಿಟ್ಟುಕೊಡಲ್ಲ. ಇದು ನನ್ನ ಕ್ಷೇತ್ರ, ನಾನು ಬಿಟ್ಟುಕೊಡುವ ಮಾತೇ ಇಲ್ಲ. ಅವರು ನನ್ನನ್ನು ಪಕ್ಷಕ್ಕೆ ಕರೆದರು, ನಾನು ಬರಲ್ಲ ಅಂದೆ, ಅದಕ್ಕಾಗಿ ಈ ರೀತಿ ನಿರ್ಧಾರ ಮಾಡಿರಬಹುದು. ನಾನು ಏನೂ ಕೇಳಲು ಹೋಗುವುದಿಲ್ಲ, ಅವರೇ ನನ್ನನ್ನು ಕೇಳಿಲ್ಲ ಅಂದಮೇಲೆ ನಾನು ಕೇಳುವುದಕ್ಕೆ ಹೋಗುವುದು ಸರಿಯಲ್ಲ ಏನೇ ಬಂದರೂ ಎದುರಿಸಲು ಸಿದ್ಧವಾಗಿದ್ದೇನೆ ಎಂದರು.
ಜನಾರ್ದನಾ ರೆಡ್ಡಿಯವರಿಂದ ಈ ನಿರ್ಧಾರ ನಿರೀಕ್ಷಿರಲಿಲ್ಲ
ನಾನು ಜನಾರ್ದನ ರೆಡ್ಡಿಯವರ ಜೊತೆಗೆ ಚೆನ್ನಾಗಿದ್ದೆ. ಪಕ್ಷ ಕಟ್ಟಿದಾಗ ನನ್ನನ್ನುಆಹ್ವಾನಿಸಿದ್ದರು. ನಾನು ಬಿಜೆಪಿ ಬಿಟ್ಟು ಹೋಗಲಿಲ್ಲ. ನನ್ನ ಮನೆ ಮೇಲೆ ಬಿಜೆಪಿ ಧ್ವಜಾ ಹಾರುತ್ತಿದೆ, ಅದರಲ್ಲೇ ಮುಂದುವರಿಯುತ್ತೇನೆ ಎಂದು ಹೇಳಿದ್ದೆ. ಅದಕ್ಕಾಗಿ ಅವರು ನನ್ನ ವಿರುದ್ಧ ಪತ್ನಿಯನ್ನು ಕಣಕ್ಕೆ ಇಳಿಸುವ ನಿರ್ಧಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರು ನನ್ನ ಕಾರ್ಯಕರ್ತರನ್ನು ಕೂಡ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದಿದ್ದಾರೆ.
ನಾನೆ ಬಳ್ಳಾರಿ ಅಭಿವೃದ್ಧಿ ಮಾಡಿದೆ ಎಂಬ ಅಹಂ ಇದೆ
ಜನಾರ್ದನಾ ರೆಡ್ಡಿಯವರಿಗೆ ಬಳ್ಳಾರಿಯನ್ನು ಅಭಿವೃದ್ಧಿ ಮಾಡಿದ್ದು ನಾನೆ ಎಂಬುದು ತಲೆಯಲ್ಲಿ ತುಂಬಿಕೊಂಡಿದೆ. ಆದರೆ ಯಡಿಯೂರಪ್ಪನವರು ಅನುದಾನಗಳನ್ನು ಬಿಡುಗಡೆ ಮಾಡದಿದ್ದರೆ ಅವರೇನು ಮಾಡಲು ಆಗುತ್ತಿರಲಿಲ್ಲ. ಅಭ್ಯರ್ಥಿ ಘೋಷಣೆಗೂ ಮುನ್ನ ಅವರು ನನ್ನನ್ನು ಒಂದು ಮಾತು ಕೇಳಬಹುದಿತ್ತು. ಅವರ ಪ್ರಕರಣದಲ್ಲಿ ನಾನು 62 ದಿನಗಳ ಕಾಲ ಜೈಲಿನಲ್ಲಿದ್ದೆ. ಈಗ ನನ್ನ ವಿರುದ್ಧವೇ ರಾಜಕೀಯ ಮಾಡಲು ಹೊರಟಿದ್ದಾರೆ. ಇದಕ್ಕೆ ಕ್ಷೇತ್ರದ ಜನ ಚುನಾವಣೆಯಲ್ಲಿ ಸರಿಯಾದ ಉತ್ತರ ಕೊಡಲಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ