Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 6, 2020, 6:15 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ದೆಹಲಿ ವಿಧಾನಸಭಾ ಚುನಾವಣೆ: ಫೆ. 8ರಂದು ಒಂದೇ ಹಂತದಲ್ಲಿ ಮತದಾನ; ಫೆ. 11 ರಂದು ಫಲಿತಾಂಶ

ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಫೆಬ್ರವರಿ 8ರಂದು ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ. 11ರಂದು ಮತ ಎಣಿಕೆ ಆಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ಧಾರೆ. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಇವತ್ತಿನಿಂದಲೇ ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಿದ್ಧಾರೆ

2. ಎನ್ಆರ್​ಸಿ ಸಂಯೋಜಕರ ಕೋಮು ಹೇಳಿಕೆ: ಅಸ್ಸಾಮ್ ಸರ್ಕಾರದಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟ್

ಅಸ್ಸಾಮ್ ರಾಜ್ಯದ ಎನ್​ಆರ್​ಸಿ ಸಂಯೋಜಕರು ಕೋಮುವಾದದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಅಸ್ಸಾಮ್ ಸರ್ಕಾರದಿಂದ ವಿವರಣೆ ಕೇಳಿದೆ. “ಅವರು ಆ ರೀತಿಯೆಲ್ಲಾ ಮಾತನಾಡಬಾರದು. ನೀವು(ಅಸ್ಸಾಮ್ ಸರ್ಕಾರ) ಇದಕ್ಕೆ ವಿವರಣೆ ನೀಡಬೇಕು. ನಿಮಗೆ ಏನಾದರೂ ಬೇಕಿರಬಹುದು. ಆದರೆ, ಅವರು ಇಂಥ ಮಾತುಗಳನ್ನೆಲ್ಲಾ ಆಡಬಾರದು” ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಾಕೀತು ಮಾಡಿದೆ. ನಾಲ್ಕು ವಾರದೊಳಗೆ ವಿವರಣೆ ನೀಡಬೇಕೆಂದೂ ಆದೇಶಿಸಿದೆ.

3.ತೈಲ ಬೆಲೆ ಏರಿಕೆ; ಚಿನ್ನ ತೊಲಕ್ಕೆ 40 ಸಾವಿರ; ಷೇರುಪೇಟೆ ಅಲ್ಲೋಲಕಲ್ಲೋಲ

ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತೈಲ ಮತ್ತು ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ. ಷೇರುಪೇಟೆ ತಲ್ಲಣಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಕೂಡ ದುಬಾರಿಯಾಗಲಿದೆ. ಭಾರತದ ಮಾರುಕಟ್ಟೆಯ ಮೇಲೂ ನಿರೀಕ್ಷೆಯಂತೆ ಹೊಡೆತ ಬಿದ್ದಿದೆ

4.ಮಾನಗೆಟ್ಟ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಮೇಲೆ ಗೂಂಡಾಗಳಿಂದ ಹಲ್ಲೆ ಮಾಡಿಸಿದೆ‘; ಕನ್ನಯ್ಯ ಆಕ್ರೋಶದೇಶದ ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಜೆಎನ್​​​​ಯು​​​​ ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲೆ ಮುಸುಕುಧಾರಿ ವೇಷದಲ್ಲಿ ದುಷ್ಕರ್ಮಿಗಳು ನಿನ್ನೆ ರಾತ್ರಿ ನಡೆಸಿದ ದಾಳಿಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ದಾಳಿ ವಿರುದ್ಧ ರಾತ್ರೋರಾತ್ರಿ ದೇಶಾದ್ಯಂತ ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿವೆ. ಜೆಎನ್​​ಯು ಜೊತೆಗೆ ನಾವಿದ್ದೇವೆ, ಕೂಡಲೇ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಗೂಂಡಾಗಳ ಬಂಧನವಾಗಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಮೊದಲ ದಿನದಿಂದಲೂ ವಿದ್ಯಾರ್ಥಿಗಳ ವಿರುದ್ಧ ಸಮರ ಸಾರುತ್ತಲೇ ಇದೆ ಎಂದು ಜೆಎನ್​​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್​​ ಟೀಕಿಸಿದ್ದಾರೆ.

5.ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ಯೂರ್; ಸರಣಿ ಅಪಘಾತ – ಇಬ್ಬರು ಸಾವು; 10ಕ್ಕೂ ಹೆಚ್ಚು ಮಂದಿಗೆ ಗಾಯ

ನಗರ ಮಾಗಡಿ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ಸಮೀಪ ಇಂದು ಭೀಕರ್ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ  ಸಾವನ್ನಪ್ಪಿದ್ದಾರೆ. ಸುಂಕದಕಟ್ಟೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್​ನ ಬ್ರೇಕ್ ವಿಫಲಗೊಂಡ ಹಿನ್ನೆಲೆಯಲ್ಲಿ ಸರಣಿ ಅಪಘಾತವಾಗಿ ಈ ದುರಂತ ಸಂಭವಿಸಿರುವುದು ತಿಳಿದುಬಂದಿದೆ.

6.ಸಿಎಂ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಸಭೆ; ಶೇ.7.5 ಮೀಸಲಾತಿ, ಡಿಸಿಎಂ ಹುದ್ದೆಗೆ ಬೇಡಿಕೆ

ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ ಹಾಗೂ ಮೀಸಲಾತಿ ವಿಚಾರವಾಗಿ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗಿಯಾಗಿದ್ದ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ, ಆರಂಭದಲ್ಲೇ ಡಿಸಿಎಂ ಹುದ್ದೆ ವಿಚಾರವಾಗಿ ಚರ್ಚೆ ಆರಂಭಿಸಿದರು. ನಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ನಮ್ಮ ಸಮುದಾಯ ಮೀಸಲಾತಿಗೆ ಅರ್ಹ ಇದೆ. ಸಮುದಾಯದ ಜನಸಂಖ್ಯೆ ಕೂಡ ಜಾಸ್ತಿ ಇದೆ.  ಹೀಗಾಗಿ ಶೇಕಡಾ 7.5ರಷ್ಟು ಮೀಸಲಾತಿ ಕೊಡಿ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಬೇಡಿಕೆ ಮುಂದಿಟ್ಟರು.

7.ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ; ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

ಹಲವು ದಿನಗಳಿಂದ ಮುಂದೂಡುತ್ತಿದ್ದ ಸಚಿವ ಸಂಪುಟ ವಿಸ್ತರಣೆಗೆ ಕಡೆಗೂ ಕಾಲ ಸನ್ನಿಹಿತವಾಗಿದ್ದು, ಸಂಕ್ರಾತಿ ಬಳಿಕ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಖುದ್ದು ಬಿಎಸ್​ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. 

8.ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್​​ ಚತುರ್ವೇದಿ ನಿಧನ

ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕ ನಾಥ ಚತುರ್ವೇದಿ(90) ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಟಿ. ಎನ್ ಚತುರ್ವೇದಿ ಭಾನುವಾರ(ನಿನ್ನೆ) ರಾತ್ರಿ ಉತ್ತರಪ್ರದೇಶದ ನೋಯ್ಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನುತ್ತಿವೆ ವೈದ್ಯಕೀಯ ಮೂಲಗಳು.

9.ನಾನು ಮತ್ತು ಗುಂಡನಿಗೆ ಸೆನ್ಸಾರ್ ಶಹಭಾಸ್; ಸದ್ಯದಲ್ಲೇ ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್

ಸ್ಯಾಂಡಲ್​ವುಡ್​ ಅಂಗಳದಲ್ಲಿ ತುಂಬಾ ವರ್ಷಗಳ ನಂತರ ಸಾಕುಪ್ರಾಣಿ ಸಂಬಂಧವನ್ನ ಸಾರುವ  ಸಿನಿಮಾವೊಂದು ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ಅದುವೇ 'ನಾನು ಮತ್ತು ಗುಂಡ'. ಕಥಾವಸ್ತುವನ್ನೇ ಹೀರೋವನ್ನಾಸಿಕೊಂಡು ಶ್ವಾನವನ್ನೇ ಕಥಾ ಮುಖ್ಯ ಪಾತ್ರಧಾರಿಯನ್ನಾಗಿಕೊಂಡು ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್​ ಕೆ.ಆರ್​ ಪೇಟೆ ಮತ್ತು ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ. ಇವರ ಜೊತೆಗೆ ಸಿಂಭಾ ಹೆಸರಿನ ಶ್ವಾನವೊಂದು ನಟಿಸಿದೆ.

10.ಕಿವೀಸ್ ವಿರುದ್ಧ ಟೆಸ್ಟ್​ ಸರಣಿ ಕ್ಲೀನ್ ಸ್ವೀಪ್; ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಸಮೀಪ ತಲುಪಿದ ಆಸೀಸ್!

ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದ ನ್ಯೂಜಿಲೆಂಡ್ ತಂಡ ಹೀನಾಯ ಸೋಲಿನೊಂದಿಗೆ ತವರಿಗೆ ಹಿಂತಿರುಗಿದೆ. ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲೂ ಕಾಂಗರೂ ಪಡೆ 279 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್‌ಗೈದಿದೆ. ಮಾರ್ನಸ್ ಲ್ಯಾಬುಶಾನೆ ದ್ವಿಶತಕ, ಡೇವಿಡ್ ವಾರ್ನರ್ ಶತಕ ಹಾಗೂ ನಥನ್ ಲಿಯಾನ್ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ಗೆಲುವು ಕಾಣುವಲ್ಲಿ ಯಶಸ್ವಿಯಾಯಿತು.

 

 
Published by: G Hareeshkumar
First published: January 6, 2020, 6:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading