Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 1, 2020, 6:00 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ಹೊಸ ವರ್ಷದ ದಿನದಂದೇ ರೈಲ್ವೆ ಪ್ರಯಾಣಿಕರ ಜೇಬಿಗೆ ಕತ್ತರಿ; ಇಂದಿನಿಂದಲೇ ಪ್ರಯಾಣ ದರದಲ್ಲಿ ಹೆಚ್ಚಳ

ಹೊಸ ವರ್ಷದ ದಿನದಂದೇ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಜೇಬಿಗೆ ಬರೆ ಎಳೆದಿದೆ. ರೈಲು ಪ್ರಯಾಣದ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಉಪನಗರ ರೈಲು ಪ್ರಯಾಣ ದರದಲ್ಲಿ ಬದಲಾವಣೆ ಇಲ್ಲ. ಆರ್ಡಿನರಿ ನಾನ್​ ಎಸಿ, ಎಸಿ, ಶತಾಬ್ದಿ, ರಾಜಧಾನಿ, ತುರಂತ್ ರೈಲುಗಳಿಗೆ ದರ ಹೆಚ್ಚಳ ಅನ್ವಯವಾಗಲಿದೆ. ಟಿಕೆಟ್ ಕಾಯ್ದಿರಿಸುವಿಕೆ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಕಾಯ್ದಿರಿಸಿರುವ ಟಿಕೆಟ್​ಗಳಿಗೆ ದರ ಹೆಚ್ಚಳ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

2.ಹೊಸ ವರ್ಷಾಚರಣೆ ವೇಳೆ ಭಾರೀ ದುರಂತ; ಪಾರ್ಟಿ ವೇಳೆ ಲಿಫ್ಟ್​ ಕುಸಿದು 6 ಜನ ಸಾವು

ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಉತ್ಸಾಹ ಎಲ್ಲರಲ್ಲೂ ಇರುತ್ತದೆ. ಅದೇ ಉತ್ಸಾಹದಿಂದ ಗೆಳೆಯನ ಫಾರ್ಮ್​ಹೌಸ್​ಗೆ ಹೋಗಿ ಪಾರ್ಟಿ ಮಾಡುವಾಗ ಲಿಫ್ಟ್​ ಕುಸಿದ ಪರಿಣಾಮ 6 ಜನ ಸಾವನ್ನಪ್ಪಿರುವ ದುರಂತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

3.ಗ್ರಾಹಕರಿಗೆ ಕಹಿ ಸುದ್ದಿ; ಇಂದಿನಿಂದ ಸಬ್ಸಿಡಿ ರಹಿತ ಎಲ್​ಪಿಜಿ ಗ್ಯಾಸ್​ ದರದಲ್ಲಿ ಏರಿಕೆ

ಹೊಸ ವರ್ಷದ ಆರಂಭದಲ್ಲೇ ಸರ್ಕಾರ ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ. ಸಬ್ಸಿಡಿ ರಹಿತ ಎಲ್​ಪಿಜಿ ಗ್ಯಾಸ್​​ ದರದಲ್ಲಿ ಏರಿಕೆ ಮಾಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಇಂದಿನಿಂದಲೇ (ಜನವರಿ 1, 2020) ಪರಿಷ್ಕೃತ ದರ ಜಾರಿಯಾಗಲಿದೆ.

4.ಅಕ್ರಮ ಹಣ ವರ್ಗಾವಣೆ ಕೇಸ್​​: ಇಡಿ ಜಪ್ತಿ ಮಾಡಿದ ವಿಜಯ್ ಮಲ್ಯ ಆಸ್ತಿ ಹರಾಜಿಗೆ ಮುಂಬೈ ಕೋರ್ಟ್​ ಅನುಮತಿ ​​ಬ್ಯಾಂಕುಗಳಿಗೆ ಸಾಲ ಮರುಪಾವತಿಸದೆ ದೇಶದಿಂದ ಕಾಲ್ಕಿತ್ತಿದ್ದ ಮದ್ಯದ ದೊರೆ ವಿಜಯ್​ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಶಕ್ಕೆ ಪಡೆದ ವಿಜಯ್​​ ಮಲ್ಯಗೆ ಸೇರಿದ ಆಸ್ತಿ ಹರಾಜಿಗೆ ಮುಂಬೈ ಮನಿ ಲಾಂಡರಿಂಗ್ ತಡೆ ಕಾಯ್ದೆ(ಪಿಎಂಎಲ್‌ಎ) ಕೋರ್ಟ್​ ಅನುಮತಿ ನೀಡಿದೆ. ಜನವರಿ 18ನೇ ತಾರೀಕಿನ ಬಳಿಕ ಮಲ್ಯಾ ಆಸ್ತಿ ಹರಾಜಿಗೆ ಬ್ಯಾಂಕುಗಳಿಗೆ ಅನುಮತಿ ನೀಡಿದ ಕೋರ್ಟ್, ತನ್ನ ತೀರ್ಪನ್ನು ಬೇಕಾದರೆ ಮುಂಬೈ ಹೈಕೋರ್ಟ್​​ನಲ್ಲಿ ಪ್ರಶ್ನಿಸಬಹುದು ಎಂದು ಹೇಳಿದೆ.

5.ಮಹಾರಾಷ್ಟ್ರದ್ದು ಹುಚ್ಚರ ಸರ್ಕಾರ, ಅವರ ಗೊಡ್ಡು ಬೆದರಿಕೆಗೆ ಹೆದರಲ್ಲ; ಸಚಿವ ಆರ್​​.ಅಶೋಕ್​

ಮಹಾರಾಷ್ಟ್ರದ್ದು ಹುಚ್ಚರ ಸರ್ಕಾರ‌. ಗಡಿ ವಿಚಾರ 30-40 ವರ್ಷಗಳ ಹಿಂದೆಯೇ ತೀರ್ಮಾನ ಆಗಿದೆ. ಉದ್ಧವ್ ಠಾಕ್ರೆ ಹೇಳಿಕೆ ಅವರಿಗೆ ಶೋಭೆ ತರಲ್ಲ. ಅವರು ಗೌರವವಾಗಿ ಆಡಳಿತ ನಡೆಸಲಿ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದು ಕಂದಾಯ ಸಚಿವ ಆರ್​.ಅಶೋಕ್​ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊಂದಲ ಎಬ್ಬಿಸಲು‌ ಮಹಾರಾಷ್ಟ್ರ ಸರ್ಕಾರ ಹೊರಟಿದೆ. ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲ್ಲ. ಮಹಾರಾಷ್ಟ್ರಕ್ಕೆ ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದರು.

6.ಹೊಸ ವರ್ಷಕ್ಕೆ ಭರ್ಜರಿ ಎಣ್ಣೆ ಮಾರಾಟ – ಕೋಟಿ ಕೋಟಿ ಬಾಚಿದ ಅಬಕಾರಿ ಇಲಾಖೆ

ಹೊಸ ವರ್ಷ ಅಬಕಾರಿ ಇಲಾಖೆಗೆ ಕುಡುಕರು ಭರ್ಜರಿ ಗಿಫ್ಟ್ ನೀಡಿದ್ದು, ಅಬಕಾರಿ ಇಲಾಖೆಯ ಆದಾಯ ಈ ವರ್ಷ ಶೇ 15 ರಷ್ಟು ಏರಿಕೆಯಾಗಿದೆ. ಮೂಲಕ ಒಟ್ಟು ಬರೋಬ್ಬರಿ 597 ಕೋಟಿ ಆದಾಯ ಸಂಗ್ರಹಗೊಂಡಿದೆ.

7. ಬೆಳಗಾವಿ ಗಡಿ ವಿವಾದದ ಬೆನ್ನಲ್ಲೇ ಭುಗಿಲೆದ್ದ ಉ.ಕ ಪ್ರತ್ಯೇಕ ರಾಜ್ಯದ ಕೂಗು: ಬೀದಿಗಿಳಿದ ಹೋರಾಟಗಾರರು

ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ವಿಚಾರದಲ್ಲೀಗ ಮತ್ತೆ ಮಹಾರಾಷ್ಟ್ರ ಖ್ಯಾತೆ ತೆಗೆದಿದೆ. ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದರಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿವಸೇನೆ ನಡೆ ವಿರುದ್ಧ ಕರವೇ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದೇ ಹೊತ್ತಲ್ಲೇ ಬೆಳಗಾವಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿದೆ.

8.ಡಿಸಿಎಂ ಹುದ್ದೆ ರದ್ದು ವಿಚಾರ ಸಿಎಂಗೆ ಭಾರೀ ಹಿನ್ನಡೆ; ಸಹಿ ಸಂಗ್ರಹ ಕೂಡಲೇ ನಿಲ್ಲಿಸುವಂತೆ ರೇಣುಕಾಚಾರ್ಯಗೆ ಸೂಚನೆ

ಡಿಸಿಎಂ ಹುದ್ದೆ ರದ್ದು ವಿಚಾರ ಸಿಎಂಗೆ ಭಾರೀ ಹಿನ್ನಡೆ ಉಂಟಾಗಿದೆ. ಡಿಸಿಎಂ ಹುದ್ದೆ ವಿಚಾರವಾಗಿ ಸಿಎಂ ಆಪ್ತ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಆರಂಭಿಸಿರುವ ಸಹಿ ಸಂಗ್ರಹವನ್ನು ಕೂಡಲೇ ನಿಲ್ಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.

9.‘ನಟಸಾರ್ವಭೌಮ’ನಂತೆ ‘ಯುವರತ್ನ’ದಲ್ಲೂ ದೆವ್ವದ ಕಾಟ?; ಕುತೂಹಲ ಮೂಡಿಸಿದ ಹೊಸ ಲುಕ್

ಸಾಕಷ್ಟು ಕುತೂಹಲ ಮೂಡಿಸಿರುವ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾದ ನ್ಯೂ​ ಲುಕ್​ ಹೊಸ ವರ್ಷದ ನಿಮಿತ್ತ ಇಂದು 10 ಗಂಟೆಗೆ ರಿಲೀಸ್​ ಆಗಿದೆ. ಈ ಚಿತ್ರದಲ್ಲಿ ಪುನೀತ್​ ಅಸ್ಥಿಪಂಜರ ಹೊತ್ತು ನಿಂತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಪುನೀತ್​ ಹಿಂದಿನ ಸಿನಿಮಾ ‘ನಟಸಾರ್ವಭೌಮ’ ಹಾರರ್​ ಅಂಶಗಳಿಂದ ಕೂಡಿತ್ತು. ಈಗ 'ಯುವರತ್ನ' ಹೊಸ​ ಲುಕ್​ನಲ್ಲೂ ಹಾರರ್​ ಅಂಶ ಸೇರಿಸಿದ್ದಾರೆ ನಿರ್ದೇಶಕ ಸಂತೋಷ್​ ಆನಂದ್ ರಾಮ್​. ಪುನೀತ್​ ತಮ್ಮ ಹೆಗಲಿಗೆ ಅಸ್ಥಿಪಂಜರವೊಂದನ್ನು ಹೊತ್ತು ನಿಂತಿದ್ದಾರೆ.  ಬ್ಯಾಕ್​ಗ್ರೌಂಡ್​ನಲ್ಲಿ ಡೈನೋಸಾರ್ ಅಸ್ಥಿ ಪಂಜರ ಕೂಡ​ ಇದೆ. ಹೀಗಾಗಿ ಫಸ್ಟ್ ಪೋಸ್ಟರ್ ಕುತೂಹಲದ ಗೂಡಾಗಿದೆ

10.ಬಿಸಿಸಿಐ ಸೂಚನೆ; ರಣಜಿ ಕ್ರಿಕೆಟ್​ನಿಂದ ಹಿಂದೆ ಸರಿದ ಮಯಾಂಕ್!

ಜನವರಿ 3 ರಂದು ರಣಜಿ ಟ್ರೋಫಿಯಲ್ಲಿ ನಡೆಯಲಿರುವ ಮುಂಬೈ ವಿರುದ್ಧದ ಪಂದ್ಯದಿಂದ ಕರ್ನಾಟಕ ತಂಡದ ಪ್ರಮುಖ ಆರಂಭಿಕ ಬ್ಯಾಟ್ಸ್​ಮನ್​ ಮಯಾಂಕ್ ಅಗರ್ವಾಲ್​​ ಅವರಿಗೆ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ‘ಎ’ ತಂಡದ ಪ್ರವಾಸ ಇರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಮಾಯಾಂಕ್‌ ಬದಲಿಗೆ ಆರ್‌. ಸಮರ್ಥ್ ಅವರನ್ನು ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ.

 

 
First published:January 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ