news18-kannada Updated:October 26, 2020, 6:34 PM IST
ಮೈಸೂರು ದಸರಾ
ಮೈಸೂರು(ಅಕ್ಟೋಬರ್. 26): ನಾಡಿನ ಸಾಂಸ್ಕ್ರತಿಕ ಪರಂಪರೆಯನ್ನು ಅನಾವರಣಗೊಳಿಸುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಇಂದು ಅರ್ಥಪೂರ್ಣವಾಗಿ ನಡೆಯಿತು. ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಚಿನ್ನದ ಅಂಬಾರಿಯಲ್ಲಿ ಅಭಿಮನ್ಯು ಹೊತ್ತು ತಂದ ನಾಡ ದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಇನ್ನು ಈ ಬಾರಿ ಮೈಸೂರು ಜಿಲ್ಲಾ ಪಂಚಾಯತ್ ವತಿಯಿಂದ ಕೊರೋನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಜಂಬೂ ಸವಾರಿಯಲ್ಲಿ ಪ್ರದರ್ಶನಗೊಂಡಿದೆ. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕೊರೊನಾ ಯೋಧರ ಸೇವೆ ಸ್ಮರಣೆಗಾಗಿ ಈ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. ಆನೆ ಬಂಡಿ ಸ್ತಬ್ಧಚಿತ್ರ ಮತ್ತೊಂದು ವಿಶೇಷವಾಗಿದೆ. ಅರಮನೆ ವಾದ್ಯಗೋಷ್ಠಿ ಕುರಿತಾದ ಚಿತ್ರವೇ ಆನೆ ಬಂಡಿ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕಣ್ತುಂಬಿಕೊಂಡರು.
ಚಾಮುಂಡೇಶ್ವರಿ ದೇವಿ ವೇಷಧಾರಿ ಕೊರೋನಾ ಕೊಲ್ಲುವ ಮರಗಾಲು ಕುಣಿತ, ಚಂಡೆಮೇಳ, ವೀರಗಾಸೆ ಸೇರಿದಂತೆ ಐದು ಜಾನಪದ ಕಲಾ ತಂಡಗಳು ಕಣ್ಮನ ಸೆಳೆಯಿತು.
ತರುವಾಯ ಮೈಸೂರು ಅರಮನೆ ಆವರಣದಲ್ಲಿ ಇಂದು ಮಧ್ಯಾಹ್ನ 3 ಗಂಟೆ 40 ನಿಮಿಷದಿಂದ 4 ಗಂಟೆ 17 ನಿಮಿಷಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಅಭಿಮನ್ಯು ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಚಿನ್ನದ ಅಂಬಾರಿಯಲ್ಲಿ ಹೊತ್ತು ತಂದ ನಾಡ ದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಮರೆವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು.
ನಾಡದೇವತೆಗೆ ಪುಷ್ಪಾರ್ಚನೆ ಸಲ್ಲಿಸುವ ವೇಳೆ ರಾಷ್ಟ್ರಗೀತೆ ಮೊಳಗಿತು. ಈ ಸಂದರ್ಭದಲ್ಲಿ 21 ಬಾರಿ ಕುಶಾಲತೋಪು ಸಿಡಿಸಿ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಇದನ್ನೂ ಓದಿ :
ಕಾಂಗ್ರೆಸ್ಗೆ ಗುಡ್ ಬೈ ಹೇಳುತ್ತಾ ಹುಕ್ಕೇರಿ ಕುಟುಂಬ ; ಬಿಜೆಪಿ ಪರ ಬಹಿರಂಗ ಪ್ರಚಾರಕ್ಕೆ ಇಳಿದ ಪ್ರಕಾಶ್ ಹುಕ್ಕೇರಿ
ಕುಮ್ಕಿ ಆನೆಗಳಾದ ವಿಜಯ ಮತ್ತು ಕಾವೇರಿ ಆನೆಗಳು ಅಭಿಮನ್ಯುವಿಗೆ ಸಾಥ್ ನೀಡಿದವು. ವಿಕ್ರಮ ಮತ್ತು ಗೋಪಿ ಆನೆಗಳು ಮೆರವಣಿಗೆಯಲ್ಲಿ ಸಾಗಿದವು. ಈ ಬಾರಿ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸುವ ಸ್ಥಬ್ದಚಿತ್ರ ಸೇರಿದಂತೆ ಎರಡು ಸ್ಥಬ್ಧ ಚಿತ್ರ ಮಾತ್ರ ಪಾಲ್ಗೊಂಡಿದ್ದವು.
ಜಂಬೂ ಸವಾರಿ ಮೆರವಣಿಗೆ ಅರಮನೆಗೆ ಮಾತ್ರ ಸೀಮಿತವಾಗಿರುವ ಕಾರಣ ಐದು ಜಾನಪದ ಕಲಾತಂಡಗಳು ಮಾತ್ರ ಪಾಲ್ಗೊಂಡಿದ್ದವು. ಅರಮನೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿ ವರ್ಷ ಐದೂವರೆ ಕಿಲೋ ಮೀಟರ್ ಸಾಗುತ್ತಿದ್ದ ಜಂಬೂ ಸವಾರಿ ಮೆರವಣಿಗೆ ಈ ಬಾರಿ ಕೇವಲ 300 ಮೀಟರ್ ಗೆ ಸೀಮಿತಗೊಂಡಿತು. ಈ ಬಾರಿಯ ಜಂಬೂ ಸವಾರಿ ಮೆರವಣಗೆಯ ಯಾವುದೇ ಅದ್ದೂರಿತನ ಇಲ್ಲದೆ ಸರಳ ಮತ್ತು ಸಾಂಪ್ರದಾಯಿಕವಾಗಿ ನೆರವೇರಿತು.
Published by:
G Hareeshkumar
First published:
October 26, 2020, 5:42 PM IST