ಜಮಖಂಡಿ: ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸುಡುತ್ತಿದೆ ಬಂಡಾಯದ ಬಿಸಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯ ಕಣವಾಗಿರುವ ಜಮಖಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟುತ್ತಿದೆ. ನಾಳೆ ಅತೃಪ್ತರ ಸಭೆ ನಡೆಯಲಿದ್ದು, ಅದಾದ ಬಳಿಕ ಅಂತಿಮ ಚಿತ್ರಣ ಸಿಗಲಿದೆ.

Vijayasarthy SN
Updated:October 12, 2018, 10:01 PM IST
ಜಮಖಂಡಿ: ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸುಡುತ್ತಿದೆ ಬಂಡಾಯದ ಬಿಸಿ
ಜಮಖಂಡಿ ಮಾಜಿ ಬಿಜೆಪಿ ಶಾಸಕ ಶ್ರೀಕಾಂತ್​ ಕುಲಕರ್ಣಿ
Vijayasarthy SN
Updated: October 12, 2018, 10:01 PM IST
- ರಾಚಪ್ಪ ಬನ್ನಿದಿನ್ನಿ, ನ್ಯೂಸ್18 ಕನ್ನಡ

ಜಮಖಂಡಿ(ಅ. 12): ರಾಜ್ಯದಲ್ಲಿ ಉಪ ಚುನಾವಣೆ ಕದನ ಜೋರಾಗಿರುವ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಉಪಚುನಾವಣೆ ರಂಗೇರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಹಣಾಹಣಿ ಏರ್ಪಡೋದು ನಿಶ್ಚಿತವಾಗಿದೆ. ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ಗೊಂದಲಗಳ ಮಧ್ಯೆಯೂ ಅಭ್ಯರ್ಥಿಗಳ ಆಯ್ಕೆ ಮುಗಿದಿದ್ದು. ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಅಭ್ಯರ್ಥಿಯಾಗಿದ್ರೆ. ಇತ್ತ ಕಾಂಗ್ರೆಸ್ ಪಕ್ಷದಿಂದ ದಿವಗಂತ ಸಿದ್ದು ನ್ಯಾಮಗೌಡರ ಪುತ್ರ ಆನಂದ್ ನ್ಯಾಮಗೌಡ ಅಭ್ಯರ್ಥಿಯಾಗಿದ್ದಾರೆ. ಆದರೀಗ ಉಭಯ ಪಕ್ಷಗಳಿಗೂ ಬಂಡಾಯದ ಬಿಸಿ ಮಾತ್ರ ತಟ್ಟುವ ಲಕ್ಷಣಗಳು ಕಂಡುಬರ್ತಿವೆ. ಈ ಮಧ್ಯೆ ನಾಳೆ ಬಂಡಾಯಗಾರರು ಜಮಖಂಡಿಯಲ್ಲಿ ಸಭೆ ನಡೆಸಲು ಅಂತಿಮ ನಿರ್ಧಾರ ತಗೆದುಕೊಂಡಿದ್ದು, ಇದ್ರಿಂದ ಕದನ ಕುತೂಹಲ ಕೆರಳಿಸಿದೆ.

ಬಿಜೆಪಿಯಲ್ಲಿ ಬಂಡಾಯ:

ಬಿಜೆಪಿಯಲ್ಲಿ ಶ್ರೀಕಾಂತ್ ಕುಲಕರ್ಣಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪ್ರಚಾರ ಸಭೆ ನಡೆಸೋದಕ್ಕೆ ಮುಂದಾಗಿದೆ‌. ಇವತ್ತು ಜಮಖಂಡಿಯಲ್ಲಿ ಕಾರ್ಯಕರ್ತರ ಕಚೇರಿ ಉದ್ಘಾಟನೆ ಕೂಡ ನಡೆದಿದ್ದು, ಚುನಾವಣಾ ಪ್ರಕ್ರಿಯೆ ಗರಿಗೆದರಿದೆ. ಇತ್ತ ಶ್ರೀಕಾಂತ್ ಕುಲಕರ್ಣಿಯವರಿಗೆ ಟಿಕೆಟ್ ನೀಡಿರೋದಕ್ಕೆ ಆಕಾಂಕ್ಷಿ ಬಿ.ಎಸ್. ಸಿಂಧೂರ ಅತೃಪ್ತಗೊಂಡು, ಕಚೇರಿ ಉದ್ಘಾಟನೆಗೂ ಭಾಗವಹಿಸದೇ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಬಿಜೆಪಿಯಲ್ಲಿ ರೆಬೆಲ್ ಆಗಿರೋ ಬಿಎಸ್ ಸಿಂಧೂರ ನಾಳೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈಗಾಗಲೇ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ತೆರಳಿ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದು, ಆ ಕಾರ್ಯ ಮುಗಿದ ನಂತರ ಮುಂದಿನ ನಿರ್ಧಾರವೆಂದಿದ್ದಾರೆ. ಇನ್ನು, ಬಿಎಸ್ ಸಿಂಧೂರ ಅವರನ್ನ ಮನವೊಲಿಸಲು ರಾಜ್ಯ ಮುಖಂಡರು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ರೆ ಮಾಜಿ ಸಚಿವ ಗೋವಿಂದ ಕಾರಜೋಳ ಜಮಖಂಡಿಯಲ್ಲಿ ಬಂಡಾಯವೇನೂ ಇಲ್ಲ. ಬಿಎಸ್ ಸಿಂಧೂರ ಅವರ ಮನವೊಲಿಸಿದ್ದೇವೆ. ಅದಕ್ಕೆಲ್ಲಾ ವಿರಾಮ ನೀಡಿದ್ದೇವೆ ಎಂದಿದ್ದಾರೆ.

ನಾವೆಲ್ಲಾ ಒಗ್ಗಟ್ಟಾಗಿ ಈ ಬಾರಿ ಜಮಖಂಡಿಯಲ್ಲಿ ಶ್ರೀಕಾಂತ್ ಕುಲಕರ್ಣಿಯವರನ್ನು ಗೆಲ್ಲಿಸ್ತೇವೆ ಅಂತ ಹೇಳಿದ್ದಾರೆ. ಆದ್ರೆ ಬಿಎಸ್ ಸಿಂಧೂರ ಅವರು ಕಾರಜೋಳವರ ಮಾತಿಗೂ ಮಣಿಯದೇ ನಾಳೆ ಬೆಂಬಲಿಗರ ಸಭೆ ನಡೆಸಲು ಮುಂದಾಗಿರೋದು ಬಿಜೆಪಿಗೆ ಮತ್ತಷ್ಟು ತಲೆನೋವಾಗಿದೆ..

ಕೈ ಪಾಳಯದ ಕತೆಯೂ ಅಷ್ಟೇ:

ಇನ್ನು ಇದು ಬಿಜೆಪಿಯ ಕಥೆ ಆದರೆ ಕಾಂಗ್ರೆಸ್ ಪಕ್ಷ ಕೂಡ ಉಪ ಚುನಾವಣೆಯಲ್ಲಿ ಬಂಡಾಯದ ಭೀತಿ ಎದುರಿಸುತ್ತಿದೆ.ಕಳೆದ ಚುನಾವಣೆಯಲ್ಲಿ  ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಶೈಲ್ ದಳವಾಯಿ ಅವರನ್ನು ಮಾಜಿ ಸಿಎಂ  ಸಿದ್ದರಾಮಯ್ಯ  ಈ ಬಾರಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆದ್ರೆ ಬೈ ಎಲೆಕ್ಷನ್​ನಲ್ಲಿ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಬೆಳಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಇನ್ನೂ  ಸಾಧ್ಯವಾಗಿಲ್ಲ ಹೀಗಾಗಿ ಭಿನ್ನಮತದಿಂದ ತಪ್ಪಿಸಿಕೊಳ್ಳಲು ಕೈ ಪಾಳಯದ ನಾಯಕರು ಸುಶೀಲ್ ಕುಮಾರ್ ಅವರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಕಸರತ್ತು ನಡೆಸಿದ್ದಾರೆ. ಆದರೆ ಸುಶೀಲ್ ಕುಮಾರ್ ಬೆಳಗಲಿಯವರೊಂದಿಗೆ ನಾಯಕರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದರೂ, ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದು ಅಂತಿಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷಕ್ಕೂ ನುಂಗಲಾರದ ತುತ್ತಾಗಿದ್ದು ಭಿನ್ನಮತ ಶಮನಕ್ಕೆ ಶತಾಯಗತಾಯ ಪ್ರಯತ್ನ ನಡೆಸುವ ಸಾಧ್ಯತೆ ಇದೆ.
Loading...

‌ಇನ್ನು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಆನಂದ ನ್ಯಾಮಗೌಡ, “ಸುಶೀಲ್ ಕುಮಾರ್ ಬೆಳಗಲಿ ಬಂಡಾಯ ವಿಚಾರ ನಮ್ಮ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ. ನಮ್ಮಲ್ಲಿ ಯಾವುದೇ ಬಂಡಾಯ, ಅಸಮಾಧಾನವಿಲ್ಲ…. ವೈಯಕ್ತಿಕ ವಿಚಾರವನ್ನು ಪಕ್ಷಕ್ಕೆ ತರುವುದು ಸರಿಯಲ್ಲ. ನಾನು ಪಕ್ಷದಲ್ಲೇ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ” ಎಂದಿದ್ದಾರೆ.

ಒಟ್ಟಿನಲ್ಲಿ ಜಮಖಂಡಿ ವಿಧಾನಸಭಾ ಉಪಚುನಾವಣೆ ಸಾಕಷ್ಟು ಕುತೂಹಲಗಳಿಂದ ಕೂಡಿದೆ. ಕ್ಷೇತ್ರದಲ್ಲಿ ನಾಳೆ ಅಸಮಾಧಾನಿತರು ನಡೆಸುವ ಸಭೆ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಬೆಳವಣಿಗೆಯಿಂದ ರಾಜ್ಯ ನಾಯಕರು ಬಂಡಾಯ ಶಮನ ಮಾಡುವ ನಿಟ್ಟಿನಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಅನ್ನೋದನ್ನ ಕಾದುನೋಡಬೇಕಿದೆ.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ