ಹುಬ್ಬಳ್ಳಿ (ಏ. 17): ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ ಎಂದು ಮಾಜಿ ಸಿಎಂ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜನ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯ ಅವಶ್ಯಕತೆಯಿಲ್ಲ. ಸಾರ್ವಜನಿಕರು ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕು. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಪಾಡಬೇಕು. ಸರಕಾರದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಶೆಟ್ಟರ್ ತಿಳಿಸಿದ್ದಾರೆ. ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ವಿಫಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಶೆಟ್ಟರ್ ಕಿಡಿಕಾರಿದ್ದಾರೆ. ಪ್ರತಿಪಕ್ಷಗಳು ಈ ರೀತಿ ಬರೀ ಟೀಕೆ ಟಿಪ್ಪಣಿ ಮಾಡಿಕೊಂಡು ಹೂಡುವುದು ಸರಿಯಲ್ಲ. ಅಗತ್ಯವಿದ್ದಲ್ಲಿ ರಚನಾತ್ಮಕ ಸಲಹೆ ನೀಡಲಿ. ಅದನ್ನು ಬಿಟ್ಟು ಟೀಕೆ ಮಾಡುತ್ತಾ ರಾಜಕೀಯ ಮಾಡುವುದು ಸರಿಯಲ್ಲ. ಇದೊಂದು ಸೂಕ್ಷ್ಮ ಕಾಲವಾಗಿದ್ದು ಅದನ್ನು ಪ್ರತಿ ಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದರು.
ಧಾರವಾಡ ಜಿಲ್ಲೆಯಲ್ಲಿ ಕೋ ಬಿಡ್ ವ್ಯಾಕ್ಸಿನ್ ಗಳ ಕೊರತೆಯಿಲ್ಲ. ಇದುವರೆಗೆ 1.95 ಲಕ್ಷ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಇನ್ನೂ ವ್ಯಾಕ್ಸಿನ್ ಸ್ಟಾಕ್ ಉಳಿದಿದೆ. ಧಾರವಾಡ ಜಿಲ್ಲೆಯಲ್ಲಿ ಬೆಡ್ ಗಳ ಕೊರತೆಯೂ ಆಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಸಾರಿಗೆ ನೌಕರರ ಮುಷ್ಕರ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಕೋವಿಡ್ ನಂತಹ ಸಂದರ್ಭದಲ್ಲಿ ಸಾರಿಗೆ ನೌಕರರು ಪಟ್ಟು ಹಿಡಿದು ಕುಳಿತುಕೊಳ್ಳೋದು ಸರಿಯಲ್ಲ. ನೌಕರರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ. ಕೂಡಲೇ ಮುಷ್ಕರ ಹಿಂಪಡೆದು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಹೇಳಿದರು.
ಕೋವಿಡ್ 2 ನೇ ಡೋಸ್ ಹಾಕಿಸಿಕೊಂಡ ಶೆಟ್ಟರ್
ಮಾಜಿ ಸಿಎಂ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೋವಿಡ್ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಶೆಟ್ಟರ್ ವ್ಯಾಕ್ಸಿನ್ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಮೊದಲು ವ್ಯಾಕ್ಸಿನ್ ಪಡೆದುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದರು. ರಾಜ್ಯದಲ್ಲಿ ಕೋವಿಡ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಹಾಕಸಿಕೊಳ್ಳಲು ಜನ ತಾವಾಗಿಯೇ ಮುಂದಾಗಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ವ್ಯಾಕ್ಸಿನ್ ಹಚ್ಚಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾ ಆಗಲ್ಲ. ನಾನು ಎರಡನೇ ಡೋಸ್ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ನನಗೆ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಜನರು ಧೈರ್ಯದಿಂದ ವ್ಯಾಕ್ಸಿ ಹಾಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗಾಜಿನ ಮನೆಯಲ್ಲಿ ಕೋವಿಡ್ ಸಭೆ
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಹಾಗೂ ಬೃಹತ್, ಮಧ್ಯಮ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.
ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಸಭೆಗೆ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಯ ವಿವರಗಳನ್ನು ನೀಡಿದರು. ಶಾಸಕರಾದ ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ರಾಜ್ಯ ಕೃಷಿ ಉತ್ಪನ್ನ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿ.ಪಂ. ಸಿಇಓ ಡಾ.ಬಿ.ಸುಶೀಲಾ, ಮಹಾನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
(ವರದಿ - ಶಿವರಾಮ ಅಸುಂಡಿ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ