ಚಿಕ್ಕೋಡಿ (ಏ. 5): ಸಹೋದರ ರಮೇಶ್ ಜಾರಕಿಹೊಳಿ ಪರವಾಗಿ ತಮ್ಮ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧವೇ ಧ್ವನಿ ಎತ್ತಿದ್ದ ಲಖನ್ ಜಾರಕಿಹೊಳಿ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಮತ್ತೊಬ್ಬ ಸಹೋದರ ಸತೀಶ್ ಜಾರಕಿಹೊಳಿಗೆ ಕೈ ಕೊಡಲು ನಿರ್ಧರಿಸಿದ್ದಾರೆ. ಇತ್ತ ಸತೀಶ್ ಜಾರಕಿಹೊಳಿ ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿರುವ ಹೊತ್ತಿನಲ್ಲಿ ಲಖನ್ ಪಕ್ಷ ತೊರೆಯುವ ಮೂಲಕ ಅಣ್ಣನಿಗೆ ಶಾಕ್ ನೀಡಿದ್ದಾರೆ. ಇಂದು ಲಖನ್ ಜಾರಕಿಹೊಳಿ ಮನೆಗೆ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ ಮತ್ತು ಸಚಿವ ಭೈರತಿ ಬಸವರಾಜ್ ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ಸೇರುವಂತೆ ಆಡಳಿತ ಪಕ್ಷದ ನಾಯಕರು ಅಧಿಕೃತ ಆಹ್ವಾನ ನೀಡಿದ್ದಾರೆ. ಬಿಜೆಪಿ ನಾಯಕರ ಆಹ್ವಾನವನ್ನು ಲಖನ್ ಕೂಡ ಒಪ್ಪಿದ್ದು, ಕೈ ತೊರೆಯುವ ಸಿದ್ಧತೆ ನಡೆಸಿದ್ದಾರೆ.
ಬಿಜೆಪಿ ನಾಯಕರ ಭೇಟಿ ಬಳಿಕ ಮಾತನಾಡಿದ ಲಖನ್ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಕೇವಲ ದೆಹಲಿಯಲ್ಲಿ ಮಾತ್ರವಿಲ್ಲ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂದು ನಾಲ್ಕು ಹೈ ಕಮಾಂಡ್ ಇದ್ದಾರೆ. ರಾಜ್ಯದಲ್ಲಿರುವ ಹೈ ಕಮಾಂಡ್ನಿಂದಾಗಿಯೇ ಸತೀಶ್ ಜಾರಕಿಹೊಳಿ ಚುನಾವಣೆಗೆ ನಿಂತಿದ್ದಾರೆ. ಜಿಲ್ಲೆಯಲ್ಲಿ ಲಿಂಗಾಯತ ಘಟಾನುಘಟಿ ನಾಯಕರಿದ್ದರೂ ಸಹ ಸತೀಶ್ ಜಾರಕಿಹೊಳಿಯನ್ನು ಲೋಕಸಭಾ ಉಪಚುನಾವಣೆಗೆ ನಡೆಸಲಾಗಿದೆ. ಈ ಮೂಲಕ ಕಾಂಗ್ರೆಸ್ ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ಭೇಟಿ ಮಾಡಿ ಹೋಗಿದ್ದು ನಾನು ಸಹ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ಬೆಂಬಲ ಸೂಚಿಸಿ, ಬಿಜೆಪಿ ಪರ ನಿಲ್ಲುತ್ತೇನೆ. ನಮ್ಮ ಅಣ್ಣ ರಮೇಶ್ ಸಂಕಷ್ಟದಲ್ಲಿ ಇದ್ದು ಮುಂದಿನ ದಿನಗಳ ಅಣ್ಣನ ಬೆನ್ನಿಗೆ ನಿಂತು ಬೆಜೆಪಿ ಪರವಾಗಿ ಕೆಲಸ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
ಅಭ್ಯರ್ಥಿ ಮಂಗಳಾ ಅಂಗಡಿ ಭೇಟಿ
ಇನ್ನು ಬಿಜೆಪಿ ನಾಯಕರು ಬಂದು ಹೋದ ಬಳಿಕ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಕೂಡ ಲಖನ್ ಜಾರಕಿಹೋಳಿ ಮನೆಗೆ ಭೇಟಿ ನೀಡಿ ತಮ್ಮ ಪರ ನಿಲ್ಲುವಂತೆ ಮನವಿ ಮಾಡಿದ್ದರು. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಜೊತೆಗೆ ಆಗಮಿಸಿದ ಮಂಗಳಾ ಅವರು ಲಖನ್ ಜಾರಕಿಹೊಳಿ ಜೊತೆ ಸುಮಾರು ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಲಖನ್, ಮಂಗಳಾ ಅವರು ನಮ್ಮ ಸಹೋದರಿ ಇದ್ದ ಹಾಗೆ. ಸುರೇಶ್ಅಂಗಡಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮೊದಲಿನಿಂದಲೂ ಸುರೇಶ್ ಅಂಗಡಿ ನಮ್ಮ ನಡುವಿನ ಆತ್ಮೀಯ ಬಾಂಧವ್ಯ ಇತ್ತು. ಅವರು ಅಕಾಲಿಕ ನಿಧನ ಹೊಂದಿದ್ದಾರೆ. ಅಂಗಡಿ ಅವರು ಕೆಲಸ ಮಾಡಿದ ರೀತಿಯಲ್ಲಿ ಸಹೋದರಿ ಕೂಡ ಕೆಲಸ ಮಾಡುತ್ತಾರೆ. ನನ್ನ ಸಹೋದರಿಗೆ ಸಂಪೂರ್ಣ ಬೆಂಬಲವನ್ನು ನಾನು ನೀಡಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಸತೀಶ್ ಜೊತೆಗೆ ಸೇರಿ ರಮೇಶ್ ವಿರುದ್ಧವೇ ತೊಡೆ ತಟ್ಟಿದ್ದ ಲಖನ್ ಒಂದೇ ವರ್ಷ ದಲ್ಲಿ ಸಹೋದರ ರಮೇಶ್ ಬೆನ್ನಿಗೆ ನಿಂತು ಸತೀಶ್ ವಿರುದ್ದವೇ ಕೆಲಸ ಮಾಡಲು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ಸಹೋದರ ಬಾಲಚಂದ್ರ ಜೊತೆಗೆ ಚರ್ಚೆ ನಡೆಸಿ ಅಧಿಕೃತವಾಗಿ ಬಿಜೆಪಿ ಸೇರುವ ಕುರಿತು ಘೋಷಣೆ ಮಾಡುತ್ತೇನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ