ಹುಬ್ಬಳ್ಳಿ: ನಾನು ಬಿಜೆಪಿಯಲ್ಲಿ (BJP) ಚುನಾವಣೆಗೆ ನಿಂತಾಗ ಆರು ಬಾರಿ ಇದ್ದಂತಹ ಜನಬೆಂಬಲಕ್ಕಿಂತಲೂ ಈ ಬಾರಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಸಿಎಂ, ಇತ್ತೀಚೆಗಷ್ಟೇ ಕಾಂಗ್ರೆಸ್ (Congress) ಸೇರಿರುವ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ (Jagadish Shettar) ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿ ಧಾರಾವಾಡ - ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದರು. ಬಳಿಕ ನ್ಯೂಸ್ 18 ಕನ್ನಡ ವಾಹಿನಿ ಜೊತೆ ಮಾತನಾಡಿದ ಅವರು, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಮುಂದಾಗಿದ್ದೇನೆ. ನನ್ನ ಕ್ಷೇತ್ರದ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಆರು ಬಾರಿ ಇದ್ದಂತಹ ಜನಬೆಂಬಲಕ್ಕಿಂತಲೂ ಈ ಬಾರಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Assembly Election: ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ವೇ ಇಲ್ಲ, ಕೆಲವರು ಮಗ-ಸೊಸೆ ಆಗಿರಬಹುದು ಅಷ್ಟೇ: ಕೆ ಅಣ್ಣಾಮಲೈ
ಸ್ವಾಭಿಮಾನದ ಧಕ್ಕೆಗೆ ಜನರೇ ಉತ್ತರ ನೀಡಲಿದ್ದಾರೆ.
ಲಿಂಗಾಯತ ಹಿರಿಯ ನಾಯಕರನ್ನ ಬಿಜೆಪಿ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದ ಜಗದೀಶ್ ಶೆಟ್ಟರ್, ನಾನು ಆತ್ಮಾಭಿಮಾನದಿಂದ ಹೊರ ಬಂದಿದ್ದೇನೆ. ಇದರ ಪರಿಣಾಮ ಉತ್ತರ ಕರ್ನಾಟಕ ಸೇರಿ ಇಡೀ ರಾಜ್ಯದ ಮೇಲೆ ಆಗುತ್ತೆ. ಸ್ವಾಭಿಮಾನದ ಧಕ್ಕೆಗೆ ಜನರೇ ಈ ಬಾರಿ ಉತ್ತರ ನೀಡಲಿದ್ದಾರೆ. ರಾಜಕಾರಣದಲ್ಲಿ ತಂತ್ರ ಪ್ರತಿ ತಂತ್ರ ಇದ್ದೇ ಇರುತ್ತದೆ. ನನ್ನ ಬೆಂಬಲಿಗರನ್ನು ಒತ್ತಾಯದಿಂದ ಬಿಜೆಪಿಯವರು ಹಿಡಿದಿಟ್ಟುಕೊಳ್ತಿದಾರೆ. ಮಾನಸಿಕವಾಗಿ ಯಾರನ್ನೂ ಹಿಡಿದಿಟ್ಟುಕೊಳ್ಳಲು ಕಟ್ಟಿ ಹಾಕಲು ಆಗಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಕಳೆದ ಆರು ಬಾರಿ ಈ ಕ್ಷೇತ್ರದಿಂದ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿ ಗೆಲುವು ಸಾಧಿಸಿದ್ದೆ ಎಂದ ಶೆಟ್ಟರ್, ಈ ಬಾರಿಯ ಸ್ಪರ್ಧೆ ಭಿನ್ನವಾಗಿದೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದ ಕಾಂಗ್ರೆಸ್ ನಿಂದ ಸ್ಪರ್ಧೆಗೆ ಮುಂದಾಗಿದ್ದೇನೆ ಎಂದರು.
ಇನ್ನು ನಾಳೆ ನಾಡಿದ್ದು ಫ್ಲಡ್ ಗೇಟ್ ಓಪನ್ ಆಗುತ್ತೆ ಎಂದ ಅವರು, ಫ್ಲಡ್ ಗೇಟ್ ಓಪನ್ ಆದ್ರೆ ಯಾರೂ ಉಳಿಯುವುದಿಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ