• Home
  • »
  • News
  • »
  • state
  • »
  • Jagadish Shettar: ಯಾರ್ ರೀ ಇಂವಾ? ಹೀಗೆಂದು ಶೆಟ್ಟರ್ ಪ್ರಶ್ನಿಸಿದ್ದು ಯಾರಿಗೆ ಗೊತ್ತೆ?

Jagadish Shettar: ಯಾರ್ ರೀ ಇಂವಾ? ಹೀಗೆಂದು ಶೆಟ್ಟರ್ ಪ್ರಶ್ನಿಸಿದ್ದು ಯಾರಿಗೆ ಗೊತ್ತೆ?

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಒಂದು ಕಡೆ ಸಿದ್ಧರಾಮಯ್ಯ ಸಿಎಂ ಬೊಮ್ಮಾಯಿ ಅವರನ್ನು ನಾಯಿ ಮರಿಗೆ ಹೋಲಿಸಿದ್ದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಾರ್ ರೀ ಇಂವಾ ಅಂತ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಕಡೆ ಗಮನ ಹರಿಸಿ ಎಂದ ಕಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

  • Share this:

ಹುಬ್ಬಳ್ಳಿ: ಯಾರ್ ರೀ ಇಂವಾ.. ಎಂದು ಹೇಳುವ ಮೂಲಕ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರನ್ನು ನಾಯಿ ಮರಿಗೆ ಹೋಲಿಸಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ (PM Modi) ಬಳಿ ಸಿಎಂ ಬೊಮ್ಮಾಯಿ ಬಾಲ ಮುದುರಿಕೊಂಡು ಇರುತ್ತಾರೆ ಎಂದು ನಾಯಿ ಮರಿಗೆ ಹೋಲಿಸಿದ ಸಿದ್ದರಾಮಯ್ಯ ಹೇಳಿಕೆಗೆ ಜಗದೀಶ್ ಶೆಟ್ಟರ್ ಕಿಡಿಕಾರಿದರು. ಕಾಂಗ್ರೆಸ್​​​ನವರಿಗೆ ಮಹಾದಾಯಿ (Mahadai) ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ (UPA Government) ಮಹಾದಾಯಿ ಯೋಜನೆ ಒಂದಿಂಚೂ ಪ್ರಗತಿ ಕಾಣಲಿಲ್ಲ. ಬಿಜೆಪಿ ಸರ್ಕಾರ ಬಂದಾಗಲೇ ಯೋಜನೆ ಪ್ರಗತಿ ಕಂಡಿದೆ ಎಂದು ಹೇಳಿದರು.


ಈಗ ಚುನಾವಣೆ ಬಂದಿದೆ ಅಂತ ಮಹಾದಾಯಿ ಆಂದೋಲನ ಮಾಡಿದರು. ಎರಡು ವರ್ಷಗಳ ಕಾಲ ಇವರು ಏನು ಮಾಡ್ತಿದ್ದರು. ಡಿಪಿಆರ್ ಅಪ್ರೂವಲ್ ತಗೊಂಡ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇವರು ಅಧಿವೇಶನದಲ್ಲಿ ಒಂದು ದಿನವಾದ್ರೂ ಒತ್ತಾಯ ಮಾಡಲಿಲ್ಲ ಎಂದರು.


ಕಾಂಗ್ರೆಸ್ ನಿಲುವು ಏನು?


ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಾಂಡವಿ ನದಿಯ ಒಂದು ಹನಿ ನೀರನ್ನ ಕರ್ನಾಟಕಕ್ಕೆ ಬಿಡಲ್ಲ ಅಂದ್ರು. ಮೊದಲು ಕಾಂಗ್ರೆಸ್ ನಿಲುವು ಏನೆಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.


ಸೋನಾಯಿ ಗಾಂಧಿ ಮಾತು ಮೀರಿ ಇವರು ಕರ್ನಾಟಕದ ಹಿತಾಸಕ್ತಿ ಬಗ್ಗೆ ಹೋರಾಟ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಎರಡು ವರ್ಷದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸ್ತೇವೆ ಅಂತ ಸಿದ್ದರಾಮಯ್ಯ ಹೇಳ್ತಾನೆ. ಯಾವನ್ ರೀ ಇಂವಾ..? ಎಂದು ಸಿದ್ದರಾಮಯ್ಯ ವಿರುದ್ಧ ಶೆಟ್ಟರ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.


ಮಹದಾಯಿ ಟ್ರಿಬ್ಯುನಲ್ ನಮ್ಮ ಪರ


ಈ ರೀತಿ ಹುಸಿ ಭರವಸೆ ಕೊಡೋದನ್ನ ಜನ ನೋಡಿಬಿಟ್ಟಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಡಿಗೆ, ಕೃಷ್ಣೆಯ ಕಡೆಗೆ ಅಂದ್ರು. ಕೃಷ್ಣಾ ನದಿ ಯೋಜನೆಗೆ ಏನೂ ಕೊಡಲಿಲ್ಲ. ಹೀಗಾಗಿ ಕಾಂಗ್ರೆಸ್ ಜನರ ನಂಬಿಕೆ ಕಳೆದುಕೊಂಡಿದೆ. ಮೋದಿ ಸರ್ಕಾರ ಮಹಾದಾಯಿ ಡಿಪಿಆರ್ ಗೆ ಅನು‌ಮೋದನೆ ನೀಡಿದೆ. ಡಿಪಿಆರ್ ಪತ್ರದ ಬಗ್ಗೆ ಇವರು ಅನುಮಾನ ವ್ಯಕ್ತಪಡಿಸ್ತಾರೆ. ಮಹದಾಯಿ ಟ್ರಿಬ್ಯುನಲ್ ನಮ್ಮ ಪರವಾಗಿದೆ ಎಂದು ಹೇಳಿದರು.


ಗೋವಾದವರು ಏನೇ ಕ್ಯಾತೆ ಮಾಡಿದ್ರೂ ಪ್ರಯೋಜನವಿಲ್ಲ. ಕಾನೂನು ಹೋರಾಟ ನಡೆದಿರೋ ವೇಳೆ ಪ್ರತಿಪಕ್ಷ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು. ಅದನ್ನು ಬಿಟ್ಟು ಇವರು ನಾಟಕ ಮಾಡ್ತಿದಾರೆ. ಕೀಳು ಮಟ್ಟದ ಭಾಷೆ ಬಳಸೋದ್ರಿಂದ ನೀವು ಉದ್ಧಾರವಾಗಲ್ಲ ಎಂದು ಕಿಡಿಕಾರಿದರು.


ಕಾಂಗ್ರೆಸ್ ದುರ್ಬಲ ವಿರೋಧ ಪಕ್ಷ


ಜನ‌ ನಿಮಗೆ ವೋಟು ಹಾಕಲ್ಲ. ಕಾಂಗ್ರೆಸ್ ಪಕ್ಷ ಅತ್ಯಂತ ದುರ್ಬಲ ವಿರೋಧ ಪಕ್ಷ. ಅವರಿಗೆ ಶಕ್ತಿಯೂ ಇಲ್ಲ, ಏನೂ ಇಲ್ಲ. ಬಹಿರಂಗ ಚರ್ಚೆ ಯಾಕೆ ಬೇಕ್ರೀ. ಏನಿದ್ರೂ ಅಧಿವೇಶನದಲ್ಲಿ ಮಾತನಾಡಿ ಎಂದು ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದರು.


ಲವ್ ಜಿಹಾದ್ ಕುರಿತು ಕಟೀಲ್ ಹೇಳಿಕೆಗೆ ಸಮರ್ಥನೆ


ರಸ್ತೆ, ಚರಂಡಿ ಅಭಿವೃದ್ಧಿ ಬಿಡಿ, ಲವ್ ಜಿಹಾದ್ ಬಗ್ಗೆ ಗಮನಕೊಡಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕಟೀಲ್ ಹೇಳಿಕೆಯನ್ನು ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ರಸ್ತೆ ಅಭಿವೃದ್ಧಿ ಬಿಡಿ ಲವ್ ಜಿಹಾದ್ ಬಗ್ಗೆ ಗಮನ ಕೊಡಿ ಎಂದು ನಳಿನ್‌ಕುಮಾರ್ ಕಟೀಲ್ ಹೇಳಿರುವುದನ್ನು ಬೇರೆಯ ರೀತಿಯಲ್ಲಿ ಅರ್ಥೈಸಲಾಗ್ತಿದೆ ಎಂದರು.


ನಳಿನ್ ಕುಮಾರ್ ಕಟೀಲ್ ಹೇಳಿರುವ ಉದ್ದೇಶವೇ ಬೇರೆ. ಅವರು ಆ ಅರ್ಥದಲ್ಲಿ ಹೇಳಲಿಕ್ಕೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುತ್ತವೆ, ಲವ್ ಜಿಹಾದ್ ಕೂಡ ಗಂಭೀರ ಸಮಸ್ಯೆ ಎಂದಿದ್ದಾರೆ.


ಇದನ್ನೂ ಓದಿ:  Siddaramaiah: ನಾವು ನಿಯತ್ತಿನ ನಾಯಿಗಳು, ದೇಶ, ಜನರ ಪರ ನಮ್ಮ ನಿಯತ್ತು; ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು


ಬಿಜೆಪಿ ಬಂದ್ಮೇಲೆ ಅಭಿವೃದ್ಧಿ ಕೆಲಸಗಳು


ಹಿಂದೂ ಹೆಣ್ಣು ಮಕ್ಕಳನ್ನ‌ ಬ್ರೈನ್‌ ವಾಶ್ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆ. ಲವ್ ಜಿಹಾದ್ ಹೆಸರಲ್ಲಿ ಎಷ್ಟೋ ಯುವತಿಯರ ಜೀವನ ಹಾಳಾಗಿದೆ. ಇದೊಂದು ಗಂಭೀರ ಸಮಸ್ಯೆಯಾದ್ದರಿಂದ ಚರ್ಚೆಯಾಗಲಿ ಎಂದಿದ್ದಾರೆ. ಅಭಿವೃದ್ಧಿ ಬೇಡ ಎಂದು ಯಾರೂ ಕೂಡ ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.


ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆಯೇ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅಭಿವೃದ್ಧಿ ಬೇಡ ಎಂದು ಹೇಳಿಕೆಯನ್ನ ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರ ಹೇಳಿಕೆಯನ್ನು ಬೇರೆಯ ರೀತಿಯಲ್ಲಿ ಅರ್ಥೈಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

Published by:Mahmadrafik K
First published: