ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಆಗಿದ್ದು ಕೋಮು ಗಲಭೆಯಲ್ಲ; ಪೊಲೀಸ್ ಠಾಣೆ ಮೇಲೆ ದಾಳಿಯಾಗಿದ್ದು ಸರಿಯಲ್ಲ: ಸಿ.ಎಂ. ಇಬ್ರಾಹಿಂ

ಇದು ಕೋಮು ಗಲಭೆ ಅಲ್ಲ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ, ಕಾವಲ ಭೈರಸಂದ್ರ ಬಿಟ್ಟು ಬೆಂಗಳೂರಿನ ಇತರೆ ಭಾಗದಲ್ಲಿ ಗಲಭೆ ಆಗಿಲ್ಲ. ಯಾವ ತನಿಖೆ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿಗಳು ನಿರ್ಧಾರ ಮಾಡಲಿ

ವಿಧಾನ ಪರಿಷತ್ ಸದಸ್ಯ  ಸಿ ಎಂ ಇಬ್ರಾಹಿಂ

ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ

  • Share this:
ಬೆಂಗಳೂರು(ಆಗಸ್ಟ್. 18): ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ದುರದೃಷ್ಟಕರ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಒಳ್ಳೆಯವರು. ಅವರ ಮನೆಯ ಮೇಲೆ ಏಕೆ ದಾಳಿ ಆಗಿದೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ವಿಧಾನಪರಿಷತ್​ ಸದಸ್ಯ ಸಿ.ಎಂ. ಇಬ್ರಾಹಿಂ ಆಗ್ರಹಿಸಿದ್ದಾರೆ.

ಡಿ ಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ವಿಚಾರಕ್ಕೆ ನಗರ ಪೊಲೀಸ್ ಆಯುಕ್ತರ ಭೇಟಿ ಬಳಿಕ ಮಾತನಾಡಿದ ಅವರು, ಇದು ಜಾತಿ ಗಲಭೆ ಅಲ್ಲ. ಫೇಸ್​ಬುಕ್​ನಲ್ಲಿ ಪೊಸ್ಟ್ ಮಾಡಿದವರ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ ಗಲಭೆ ಜೋರಾಗುತ್ತಿರಲಿಲ್ಲ. ಪೋಲೀಸರು ವಿಳಂಬ ನೀತಿ ತೋರುತ್ತಿದ್ದಾರೆ ಎಂದು ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿ ಗಲಭೆ ನಡೆಸುವುದು ಸರಿಯಲ್ಲ ಎಂದರು.

ಈಗ ಗಲಭೆ ನಡೆದ ಕಡೆ ಕರ್ಫ್ಯೂ ತೆಗೆಯಲಾಗಿದೆ. 144 ಸೆಕ್ಷನ್​​ ಮಾತ್ರ ಜಾರಿ ಜಾರಿಯಲ್ಲಿದೆ. ಅಂಗಡಿಗಳನ್ನ ತೆರೆಯಲು ಅವಕಾಶವಿದೆ ಎಂದು ಪೊಲೀಸ್​​ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಇದೇ ಆಗಸ್ಟ್ 20 ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರನ್ನು ಅಲ್ಪಸಂಖ್ಯಾತ ನಾಯಕರು ಭೇಟಿ ಮಾಡಿ ಚರ್ಚೆ ಮಾಡುತ್ತೇವೆ. ತಪ್ಪಿತಸ್ಥರು ಯಾವುದೇ ಪಕ್ಷದವೇ ಆಗಿರಲಿ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ. ಇದು ಕೋಮು ಗಲಭೆ ಅಲ್ಲ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ, ಕಾವಲ ಭೈರಸಂದ್ರ ಬಿಟ್ಟು ಬೆಂಗಳೂರಿನ ಇತರೆ ಭಾಗದಲ್ಲಿ ಗಲಭೆ ಆಗಿಲ್ಲ. ಯಾವ ತನಿಖೆ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿಗಳು ನಿರ್ಧಾರ ಮಾಡಲಿ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

ಇದನ್ನೂ ಓದಿ : IPhone Manufacturing Jobs - ಕೋಲಾರದಲ್ಲಿ ಐಫೋನ್ ತಯಾರಿಕೆ: 10,000 ಮಂದಿಗೆ ಉದ್ಯೋಗಾವಕಾಶ

ಗಲಭೆಯಲ್ಲಿ ಸಾವನ್ನಪ್ಪಿದವರಿಗೆ ಶಾಸಕ ಜಮೀರ್ ಪರಿಹಾರ ನೀಡಲು ಮುಂದಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಉಳ್ಳವರು ಶಿವಾಲಯವ ಮಾಡುವರು. ನಾನು ಬಡವ ನಾನೇನು ಮಾಡಲಯ್ಯ. ನನ್ನ ಕಾಲೆ ಕಂಬ, ದೇಹವೆ ದೇಗುಲ, ಶಿರಹೊನ್ನ ಕಳಶವಯ್ಯ ಎಂದು ವಚನದ ಮೂಲಕ ಜಮೀರ್ ಅಹ್ಮದ್​ ಅವರಿಗೆ ತಿರುಗೇಟು ನೀಡಿದರು.

ಗಲಭೆಯಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂಬ ರೋಷನ್ ಬೇಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಚಿವ ರೋಷನ್ ಬೇಗ್ ಅವರು ಯಾವ ದುರ್ಬೀನ್​ನಿಂದ ನೋಡಿದ್ದಾರೋ ಗೊತ್ತಿಲ್ಲ. ಅವರು ದೊಡ್ಡ ನಾಯಕರು. ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ ಎಂದರು.
Published by:G Hareeshkumar
First published: