ಚಿತ್ರದುರ್ಗ: ಚುನಾವಣೆಗೆ ಕೆಲವೇ ಗಂಟೆಗಳಷ್ಟೇ ಬಾಕಿ ಇರುವ ಈ ಹೊತ್ತಲ್ಲಿ ರಾಜ್ಯದ ಹಲವೆಡೆ ಐಟಿ ಅಧಿಕಾರಿಗಳು (IT Officers) ದಾಳಿ (IT Raid) ನಡೆಸಿದ್ದಾರೆ. ಹಿರಿಯೂರು ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪಗೆ (Hiriyur JDS candidate M. Ravindrappa) ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಎಂ.ರವೀಂದ್ರಪ್ಪ ಅವರ ಪತ್ನಿ ಜಿ.ಪಿ.ಲತಾ ಹಾಗೂ ಅವರ ಸೊಸೆ ಶ್ವೇತಾ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಅತ್ತ ಚಿತ್ರದುರ್ಗದಲ್ಲಿ ರಘು ಆಚಾರ್ ಮನೆಯಲ್ಲಿ ಚುನಾವಣಾ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಹಿರಿಯೂರು ಜೆಡಿಎಸ್ ಅಭ್ಯರ್ಥಿಗೆ ಐಟಿ ಸಂಕಷ್ಟ
ಹಿರಿಯೂರು ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಹಿರಿಯೂರಿನಲ್ಲಿರುವ ಮನೆ ಮೇಲೆ 6 ಜನ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ರವೀಂದ್ರಪ್ಪ ಪತ್ನಿ ಲತಾ ಅವರನ್ನು ಐಟಿ ವಶಕ್ಕೆ ಪಡೆದಿದೆ. ಸೊಸೆ ಶ್ವೇತಾರನ್ನು ಅಧಿಕಾರಿಗಳು ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿರಿಯೂರು ಜೆಡಿಎಸ್ ಅಭ್ಯರ್ಥಿ ರವೀಂದ್ರಗೆ ಈ ಹಿಂದೆಯೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದರು. ಕಳೆದ ತಿಂಗಳು ಏಪ್ರಿಲ್ 28ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಾಕಷ್ಟು ದಾಖಲೆಗಳು ಲಭ್ಯವಾಗಿದ್ದು, ಅಧಿಕಾರಿಗಳು ಸೀಜ್ ಮಾಡಿದ್ದರು. ವಿಚಾರಣೆಗೆ ಬರುವಂತೆ ರವೀಂದ್ರಪ್ಪಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು ಎನ್ನಲಾಗಿದೆ.
ಬೆಂಗಳೂರಲ್ಲಿ 1.9 ಕೋಟಿ ರೂಪಾಯಿ ಪತ್ತೆ
ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಬರೋಬ್ಬರಿ 1.9 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಕಾಟನ್ ಪೇಟೆಯ ಮೆಡಿಕಲ್ ಫಾರ್ಮಸಿ ಕಂಪನಿಯಲ್ಲಿ ಹಣ ಪತ್ತೆಯಾಗಿದ್ದು, ಈ ಸಂಬಂಧ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.
ಇನ್ನು ಒಂದು ಕೋಟಿ ಹಣ ಪತ್ತೆ ಹಿನ್ನಲೆ ಐಟಿಗೆ ಕೇಸ್ ವರ್ಗಾವಣೆ ಮಾಡಲು ಸಿದ್ದತೆ ಮಾಡಲಾಗಿದೆ. ಚುನಾವಣೆಗೆ ಹಣ ಹಂಚಲು ತರಲಾಗಿತ್ತೆಂಬ ಮಾಹಿತಿ ಹಿನ್ನಲೆ ದಾಳಿ ನಡೆಸಲಾಗಿತ್ತು.
ರಘು ಆಚಾರ್‌ಗೆ ಶಾಕ್!
ಚಿತ್ರದುರ್ಗದ JDS ಅಭ್ಯರ್ಥಿ ಮನೆ ಮೇಲೆ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ JDS ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ದಾಳಿ ನಡೆದಿದೆ. ಕ್ಯಾದಿಗ್ಗೆರೆ ಗ್ರಾಮದಲ್ಲಿರುವ ರಘು ನಿವಾಸಕ್ಕೆ ಆಗಮಿಸಿದ ಚುನಾವಣಾಧಿರಿಗಳು ಪರಿಶೀಲನೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ