HOME » NEWS » State » IT RAID ON CONGRESSMAN RL JALAPPA AT KOLAR VS

ಹಿರಿಯ ಕಾಂಗ್ರೆಸ್ಸಿಗ ಆರ್.ಎಲ್. ಜಾಲಪ್ಪ ಹಾಗೂ ಸಂಬಂಧಿಕರ ಮೇಲೆ ಐಟಿ ದಾಳಿ ಅಂತ್ಯ

ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಮೇಲೆ ಐಟಿ ದಾಳಿ ನಡೆಯಲು ಅಕ್ರಮ ಮೆಡಿಕಲ್ ಸೀಟು ಹಂಚಿಕೆಯೇ ಕಾರಣವಿರಬಹುದೆಂದು ಶಂಕಿಸಲಾಗಿದೆ.

news18-kannada
Updated:October 10, 2019, 9:32 PM IST
  • Share this:
ಕೋಲಾರ/ಚಿಕ್ಕಬಳ್ಳಾಪುರ(ಅ. 10): ಇವತ್ತು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿರುವುದು ಮಾಧ್ಯಮಗಳಲ್ಲಿ ಜೋರು ಸುದ್ದಿಯಾಗಿದೆ. ಅದೇ ಅವಧಿಯಲ್ಲಿ ಮತ್ತೊಬ್ಬ ಹಿರಿಯ ಕಾಂಗ್ರೆಸ್ಸಿಗ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ಅವರ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದರು. ಜಾಲಪ್ಪ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಬೆಳಗ್ಗೆ 5:30ಕ್ಕೆ ದಾಳಿ ಪ್ರಾರಂಭಿಸಿದ ಐಟಿ ಅಧಿಕಾರಿಗಳು 12 ಗಂಟೆಗಳಿಗೂ ಹೆಚ್ಚು ಕಾಲ ಸತತವಾಗಿ ದಾಖಲೆ ಪರಿಶೀಲನೆ ಮತ್ತು ವಿಚಾರಣೆ ನಡೆಸಿದರು. ಜಾಲಪ್ಪ ಆಸ್ಪತ್ರೆಯ ಗೆಸ್ಟ್​ನಿಂದ 10 ಐಟಿ ಅಧಿಕಾರಿಗಳು ಸಂಜೆ 8ಗಂಟೆ ನಂತರ 2 ಇನ್ನೋವಾ ಕಾರುಗಳಲ್ಲಿ ವಾಪಸ್ ಹೊರಟರು.

ಟಮಕ ಸಮೀಪವಿರುವ ಜಾಲಪ್ಪ ಆಸ್ಪತ್ರೆ ಗೆಸ್ಟ್ ಹೌಸ್​ನಿಂದ ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು, ಒಂದು ಬ್ಯಾಗ್​ನಲ್ಲಿ ದಾಖಲೆಗಳನ್ನ ತುಂಬಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಡಿಕೆಶಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್​ಗೆ ಐಟಿ ಶಾಕ್​; ಮನೆ, ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳ ದಾಳಿ

ಆರ್.ಎಲ್. ಜಾಲಪ್ಪ ಅವರಿಗೆ ಸೇರಿದ ದೇವರಾಜ್ ಅರಸ್ ಆಸ್ಪತ್ರೆ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದರು. ಆರ್.ಎಲ್. ಜಾಲಪ್ಪ ಅವರನ್ನೂ ಸತತವಾಗಿ ವಿಚಾರಣೆ ನಡೆಸಿದರು. ಅವರ ಮಗ ರಾಜೇಂದ್ರ ಅವರನ್ನು ದೊಡ್ಡಬಳ್ಳಾಪುರದಿಂದ ಗೆಸ್ಟ್​ಗೌಸ್​ಗೆ ಕರೆಸಿಕೊಂಡು ವಿಚಾರಣೆ ನಡೆಸಿದರು. ರಾಜೇಂದ್ರ ಜೊತೆ ಅವರ ಪತಿ ಸುಜಾತಾ ಹಾಗೂ ಮಗ ರಾಕೇಶ್ ಕೂಡ ಹಾಜರಾದರು. ಇದಕ್ಕೂ ಮುನ್ನ ದೊಡ್ಡಬಳ್ಳಾಪುರದಲ್ಲಿರುವ ರಾಜೇಂದ್ರ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಒಂದಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಟಮಕದಲ್ಲಿರುವ ಗೆಸ್ಟ್​ ಹೌಸ್​ಗೆ ಅವರನ್ನು ಕರೆಸಿ ದಾಖಲೆಗಳ ಬಗ್ಗೆ ವಿಚಾರಣೆ ನಡೆಸಲಾಯಿತು ಎಂಬುದು ತಿಳಿದುಬಂದಿದೆ. ರಾಜೇಂದ್ರ ಮತ್ತವರ ಪತ್ನಿ ಇಬ್ಬರೂ ವಿವಿಧ ಬ್ಯಾಂಕುಗಳಲ್ಲಿ 8 ಲಾಕರ್​ಗಳನ್ನ ಹೊಂದಿದ್ದಾರೆನ್ನಲಾಗುತ್ತಿದೆ.

ಇನ್ನು, ಜಾಲಪ್ಪ ಅವರ ಸೋದರಳಿಯ ಜಿ.ಹೆಚ್. ನಾಗರಾಜ್ ಅವರ ಮನೆಯ ಮೇಲೂ ಐಟಿ ದಾಳಿ ನಡೆದಿದೆ. ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದಲ್ಲಿರುವ ನಾಗರಾಜ್ ಅವರ ಮನೆಯಲ್ಲಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ನಾಗರಾಜ್ ಅವರು ಮನೆಯಲ್ಲಿ ಇರಲಿಲ್ಲವಾದ್ದರಿಂದ ಅವರ ಕುಟುಂಬದವರು ಐಟಿ ಅಧಿಕಾರಿಗಳ ಪ್ರವೇಶಕ್ಕೆ ತಡೆ ಹಾಕಿದರೆನ್ನಲಾಗಿದೆ. ಹೀಗಾಗಿ, ಐಟಿ ಅಧಿಕಾರಿಗಳು ಬಲವಂತವಾಗಿ ಮನೆಯನ್ನು ಪ್ರವೇಶಿಸಿ ವಿಚಾರಣೆ ನಡೆಸಿದರು. ಜಿ.ಹೆಚ್. ನಾಗರಾಜ್ ಅವರು ಜಾಲಪ್ಪ ಆಸ್ಪತ್ರೆಯ ಕಾರ್ಯದರ್ಶಿಯೂ ಆಗಿದ್ದಾರೆ. ಈ ಹಿನ್ನೆಲೆಯಲ್ಲೂ ಅವರನ್ನು ವಿಚಾರಣೆ ನಡೆಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಾಜಿ ಡಿಸಿಎಂ ಪರಮೇಶ್ವರ್​​​ ಮನೆ ಮೇಲೆ ಐಟಿ ದಾಳಿ: ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​​ ಖಂಡನೆ

ಅಕ್ರಮ ಮೆಡಿಕಲ್ ಸೀಟು ಹಂಚಿಕೆ?ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಮೇಲೆ ಐಟಿ ದಾಳಿ ನಡೆಯಲು ಅಕ್ರಮ ಮೆಡಿಕಲ್ ಸೀಟು ಹಂಚಿಕೆಯೇ ಕಾರಣವಿರಬಹುದೆಂದು ಶಂಕಿಸಲಾಗಿದೆ. 2019ರ ನೀಟ್ ಕೌನ್ಸೆಲಿಂಗ್ ವೇಳೆ ಅಕ್ರಮ ಸೀಟು ಹಂಚಿಕೆ ವಿಚಾರವಾಗಿ ಗಲಾಟೆ ನಡೆದಿತ್ತು. ಕೆಲ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕೋಲಾರದ ಗಲ್​ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಹೊರ ರಾಜ್ಯದ ಸಿರಿವಂತರ ಮಕ್ಕಳಿಂದ ಕೋಟಿ ಕೋಟಿ ಹಣ ಪಡೆದು ಅಕ್ರಮವಾಗಿ ಮೆಡಿಕಲ್ ಸೀಟು ಕೊಡಲಾಗುತ್ತಿದೆ. ಇದರಿಂದ ತಮಗೆ ಸೀಟು ಸಿಕ್ಕಿಲ್ಲ ಎಂದು ಈ ವಿದ್ಯಾರ್ಥಿಗಳು ಆರೋಪಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 10, 2019, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories