ಹಾಸನ: ಮುಂಬರುವ ವಿಧಾನಸಭಾ ಚುನಾವಣೆಗೆ ಹಾಸನ (Hassan) ಕ್ಷೇತ್ರದಲ್ಲೇ ನಾನೇ ಅಭ್ಯರ್ಥಿ ಎಂದು ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ (Bhavani Revanna) ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಎಚ್‌ಡಿ ರೇವಣ್ಣ (HD Revanna) ಕುಟುಂಬ ಸದಸ್ಯರು ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕು ಎಂದು ಬಯಸಿದರೆ, ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಒಂದು ಹಂತಕ್ಕೆ ಈ ವಿವಾದ ಗೌಡರ ಕುಟುಂಬದಲ್ಲಿ ಒಡಕು ಮೂಡಿಸುತ್ತೇನೋ ಎಂದು ಹೇಳಲಾಗಿತ್ತು. ಆದರೀಗ ಆ ಕಾವು ತಣ್ಣಗಾಗುವ ಲಕ್ಷಣ ಕಾಣುತ್ತಿದೆ.
ಈ ಮಧ್ಯೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌ಡಿ ರೇವಣ್ಣ ದಂಪತಿ ಮತ್ತೆ ಆಕ್ಟೀವ್ ಆಗಿದ್ದಾರೆ. ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಸ್ವೀಕರಿಸಿ ಹಾಸನದಿಂದಲೇ ರೇವಣ್ಣ ಸ್ಪರ್ಧೆ ಮಾಡಲು ಸಿದ್ಧರಾಗಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಹೇಳಿಗೆ ಎಚ್‌ಡಿ ರೇವಣ್ಣ ಸ್ಪಷ್ಟನೆ ನೀಡಿದ್ದು, ಸವಾಲು ಸ್ವೀಕಾರ ಮಾಡಬೇಕಲ್ಲ, ಪಕ್ಷ ಹೇಳಿದರೆ ಹಾಸನದಿಂದ ಸ್ಪರ್ಧೆ ಮಾಡಲು ರೆಡಿ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಹಾಸನ ಕ್ಷೇತ್ರದಲ್ಲಿ ಎಚ್‌ಡಿ ರೇವಣ್ಣ ದಂಪತಿ ಫುಲ್ ಆಕ್ಟೀವ್ ಆಗಿದ್ದಾರೆ.
ಸಂಸದರ ಮನೆಯಲ್ಲಿ ಸಭೆ
ನಿನ್ನೆ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಹಾಸನ ಕ್ಷೇತ್ರದ ಪ್ರಮುಖ ಕಾರ್ಯಕರ್ತರು ಸಭೆ ನಡೆಸಿದ್ದು, ಈ ಸಭೆಯಲ್ಲಿ ನಗರ ಸಭೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಮತ್ತು ಜೆಡಿಎಸ್‌ನ ಪ್ರಭಾವಿ ನಾಯಕರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ವೇಳೆ ಎಚ್‌ಡಿ ರೇವಣ್ಣ ಅವರ ಜೊತೆ ಭವಾನಿ ರೇವಣ್ಣ ಅವರು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.
ಎಚ್‌ಡಿ ರೇವಣ್ಣ ಎರಡು ಕಡೆ ಸ್ಪರ್ಧೆ?
ಈ ಮಧ್ಯೆ ಎಚ್‌ಡಿ ರೇವಣ್ಣ ಅವರ ನಡೆ ಭಾರೀ ಕುತೂಹಲ ಮೂಡಿಸಿದ್ದು, ರೇವಣ್ಣ ಅವರು ತಮ್ಮ ತವರು ಕ್ಷೇತ್ರ ಹೊಳೆನರಸೀಪುರದ ಜೊತೆಗೆ ಹಾಸನದಿಂದಲೂ ಸ್ಪರ್ಧೆ ಮಾಡುತ್ತಾರೆ ಎನ್ನುವ ಗುಸುಗುಸು ಎದ್ದಿದೆ. ಎಚ್‌ಡಿ ರೇವಣ್ಣ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಎರಡೂ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿದಂತೆ ಎಚ್‌ಡಿಆರ್ ಅವರು ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿ ಎಚ್‌ಡಿ ರೇವಣ್ಣ ಅಭ್ಯರ್ಥಿ?
ಅತ್ತ ಭವಾನಿ ರೇವಣ್ಣ ಅವರಿಗೆ ಹಾಸನದಲ್ಲಿ ಟಿಕೆಟ್ ನೀಡಿದರೆ ಸ್ವರೂಪ್ ಬೆಂಬಲಿಗರ ಜೊತೆಗೆ ಪಕ್ಷದ ವರಿಷ್ಠ ಎಚ್‌ಡಿ ಕುಮಾರಸ್ವಾಮಿ ಅವರ ಮಾತಿಗೂ ಬೆಲೆ ಕೊಡದೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ ಅವರಿಬ್ಬರನ್ನೂ ಬಿಟ್ಟು ತಾವೇ ಕಣಕ್ಕಿಳಿಯುವ ಬಗ್ಗೆ ಎಚ್‌ಡಿ ರೇವಣ್ಣ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗಾದಾಗ ತಾವೇ ಖುದ್ದು ಕಣಕ್ಕಿಳಿದರೆ ಬಿಜೆಪಿ ಶಾಸಕ ಪ್ರೀತಂ ಗೌಡ ಸವಾಲಿಗೂ ಸೈ ಎಂದಂತಾಗುತ್ತದೆ. ತಾನೇ ಅಭ್ಯರ್ಥಿ ಆಗುತ್ತೀನಿ ಎಂದರೆ ಸ್ವರೂಪ್ ಸೇರಿದಂತೆ ಯಾವ ಕಾರ್ಯಕರ್ತರು ಕೂಡ ವಿರೋಧ ಮಾಡೋದಿಲ್ಲ. ಹೀಗಾಗಿ ಈ ನಿರ್ಧಾರದಿಂದ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಎಚ್‌ಡಿ ರೇವಣ್ಣ ಚಿಂತನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಈ ಬಾರಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಬಿಂಬಿತವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಹಾಸನಕ್ಕೆ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ನಿರ್ಧಾರದ ಮೇಲೆ ಆ ಕ್ಷೇತ್ರದ ಚುನಾವಣಾ ಪ್ರಾಮುಖ್ಯತೆ ನಿರ್ಧಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ