ನವದೆಹಲಿ, ಮೇ 22: ರಾಜ್ಯ ರಾಜಕೀಯದಲ್ಲಿ ಸದ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆಯೇ ಜೋರಾಗಿದೆ. ಸಂಪುಟ ವಿಸ್ತರಣೆಯಾಗುತ್ತೆ, ನಮಗೂ ಮಂತ್ರಿ ಸ್ಥಾನ ಸಿಗುತ್ತೆ ಅಂತ ಆಕಾಂಕ್ಷಿಗಳು ಕಾಯುತ್ತಲೇ ಇದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Former Chief Minister B.S. Yadiyurappa) ಅವರಿಗೆ ಮತ್ತೊಮ್ಮೆ ಭಾರೀ ಹಿನ್ನಡೆ ಆಗುವ ಸಾಧ್ಯತೆ ಕಂಡುಬರುತ್ತಿದೆ. ಅವರ ಪುತ್ರ ಬಿ.ವೈ. ವಿಜಯೇಂದ್ರ (BY VIjayendra) ಸಚಿವ ಸಂಪುಟ (Cabinet) ಸೇರ್ಪಡೆ ಬಹುತೇಕ ಅನುಮಾನವಾಗಿದೆ. ಪುತ್ರ ವಿಜಯೇಂದ್ರನನ್ನು ಸಚಿವ ಸಂಪುಟ ಸೇರಿಸಬೇಕೆಂದು ಯಡಿಯೂರಪ್ಪ ಶತಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿಯ (BJP) ಮತ್ತೊಂದು ಬಣದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ದೆಹಲಿ ಮಟ್ಟದಲ್ಲೂ (Delhi Level) ಪ್ರಭಾವ ಹೊಂದಿರುವ ನಾಯಕರೊಬ್ಬರು ವಿಜಯೇಂದ್ರ ಸಂಪುಟ ಸೇರ್ಪಡೆಯನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಹಾಗಾಗಿ ವಿಜಯೇಂದ್ರ ಈಗ ವಿಧಾನ ಪರಿಷತ್ ಅಭ್ಯರ್ಥಿ ಆಗುವುದೇ ಅನುಮಾನವಾಗಿದೆ.
ಬಿಜೆಪಿಯಲ್ಲೂ ಫ್ಯಾಮಿಲಿ ಪಾಲಿಟಿಕ್ಸ್
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪದೇ ಪದೇ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅದು ವಿಜಯೇಂದ್ರ ಅವರನ್ನೇ ಗುರಿಯಾಗಿಸಿಕೊಂಡೇ ಆಡುತ್ತಿರುವ ಮಾತು ಎಂದು ಹೇಳಲಾಗುತ್ತಿದೆ. ಇದೂ ಅಲ್ಲದೆ ಇತ್ತೀಚೆಗೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಕೂಡ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸಿ ಮಾತನಾಡಿದ್ದಾರೆ. ಹಾಗಾಗಿ ಈಗ ಮೋದಿ ಮಾತು ಇಟ್ಟುಕೊಂಡು ವಿಜಯೇಂದ್ರ ವಿಧಾನ ಪರಿಷತ್ ಸದಸ್ಯರಾಗುವುದನ್ನು ತಪ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ.
ನಾಮಕಾವಸ್ತೆಗೆ ವಿಜಯೇಂದ್ರ ಹೆಸರು ಶಿಫಾರಸು
ಇತ್ತೀಚೆಗೆ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ ವಿಧಾನ ಪರಿಷತ್ ಅಭ್ಯರ್ಥಿ ಸ್ಥಾನಕ್ಕೆ ವಿಜಯೇಂದ್ರ ಹೆಸರು ಶಿಫಾರಸು ಆಗಿದೆ. ಸಭೆಯಲ್ಲಿ ಯಡಿಯೂರಪ್ಪ ಇದ್ದ ಕಾರಣಕ್ಕೆ ಚರ್ಚೆ ಮಾಡದೆ ಹೆಸರು ಶಿಫಾರಸು ಮಾಡಲಾಗಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ವಿಜಯೇಂದ್ರ ಹೆಸರು ಸೂಚಿಸಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಅನುಮೋದಿಸಿದ್ದಾರೆ. ಬೇರೆ ಯಾರಿಂದಲೂ ವಿಜಯೇಂದ್ರ ಬಗ್ಗೆ ಚರ್ಚೆ ಇಲ್ಲ.
ಇದನ್ನೂ ಓದಿ: Twitter Campaign: ಪರಿಷ್ಕೃತ ಶಾಲಾ ಪಠ್ಯ-ಪುಸ್ತಕ ವಿರೋಧಿಸಿ ಟ್ವಿಟರ್‌ನಲ್ಲಿ ಇಂದು ಸಂಜೆ ಅಭಿಯಾನ
ಬಿಜೆಪಿಗೆ ವಿಧಾನ ಪರಿಷತ್ತಿನಲ್ಲಿ ಈಗ ನಾಲ್ಕು ಸೀಟುಗಳು ಸಿಗಲಿವೆ. ನಾಲ್ಕು ಸ್ಥಾನಗಳಿಗೆ ಒಟ್ಟು 20 ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ನಿಜಕ್ಕೂ ವಿಜಯೇಂದ್ರಗೆ ಪರಿಷತ್ ಸ್ಥಾನ ನೀಡಲೇಬೇಕೆಂದಿದ್ದರೆ ಒಂದೇ ಹೆಸರು ಕಳುಹಿಸಬಹುದಿತ್ತು. ನಾಮಕಾವಸ್ತೆಗೆ ವಿಜಯೇಂದ್ರ ಹೆಸರನ್ನು ಹೈಕಮಾಂಡಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪರಿಷತ್ ಸ್ಥಾನ ನೀಡಲು ಮತ್ತೂ ಒಂದು ಸಂಕಟ
ವಿಜಯೇಂದ್ರಗೆ ಪರಿಷತ್ ಸ್ಥಾನ ನೀಡಲು ಮತ್ತೂ ಒಂದು ಸಂಕಟ ಶುರುವಾಗಿದೆ. ವಿಜಯೇಂದ್ರಗೆ ಪರಿಷತ್ ಸ್ಥಾನ ನೀಡಿದರೆ ನಂತರ ಮಂತ್ರಿ ಸ್ಥಾನವನ್ನೂ ನೀಡಬೇಕಾಗುತ್ತದೆ. ಮಂತ್ರಿ ಸ್ಥಾನ ನೀಡಿದರೆ ಮತ್ತೆ ಯಡಿಯೂರಪ್ಪ ಪ್ರಭಾವಿ ಎಂಬ ಸಂದೇಶ ಹೋಗುತ್ತದೆ. ಸರ್ಕಾರದಲ್ಲೂ ಪ್ರತ್ಯೇಕವಾದ ಪವರ್ ಸೆಂಟರ್ ಹುಟ್ಟಿಕೊಳ್ಳುತ್ತದೆ. ವಿಜಯೇಂದ್ರ ತಮ್ಮ ವರ್ಚಸ್ಸು ವೃದ್ಧಿಗೆ ಪ್ರಯತ್ನ ಮಾಡುತ್ತಾರೆ. ಲಿಂಗಾಯತ ನಾಯಕ ಆಗಲು ಪ್ರಯತ್ನ ಮಾಡುತ್ತಾರೆ. ಯಡಿಯೂರಪ್ಪ ಕೂಡ ವಿಜಯೇಂದ್ರ ಅಸ್ತಿತ್ವ ಸ್ಥಾಪನೆಗೆ ಮಾತ್ರ ಕೆಲಸ ಮಾಡುತ್ತಾರೆ. ಪರಿಷತ್ ಸ್ಥಾನ ನೀಡಿದರೆ ವಿಜಯೇಂದ್ರಗೆ ಲಾಭ ಆಗುತ್ತದೆಯೇ ವಿನಃ ಬಿಜೆಪಿಗಲ್ಲ ಎಂಬುದು ವಿರೋಧಿ ಬಣದ ಲೆಕ್ಕಾಚಾರ.
ಇದನ್ನೂ ಓದಿ: Karnataka Fuel Tax: ಕರ್ನಾಟಕವೂ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿಮೆ ಮಾಡಲಿದೆಯೇ? ಸಿಎಂ ಮಾತಿನ ಅರ್ಥವೇನು?
ಆದುದರಿಂದ ವಿಜಯೇಂದ್ರ ಹೆಸರು ರಾಜ್ಯ ಕೋರ್ ಕಮಿಟಿಯಿಂದ ಶಿಫಾರಸು ಆಗಿದ್ದರೂ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ರಾಜ್ಯದ ನಾಯಕರು ದೆಹಲಿ ಮಟ್ಟದಲ್ಲಿ ವಿಜಯೇಂದ್ರ ಹೆಸರಿಗೆ ಕತ್ತರಿ ಹಾಕುವ ಸಾಧ್ಯತೆಯೇ ಹೆಚ್ಚು ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ