ಬೆಂಗಳೂರು (ಜುಲೈ 23) : ಇದು ಪ್ರಜಾಪ್ರಭುತ್ವದ ಗೆಲುವು. ಕಳೆದ 14 ತಿಂಗಳಿಂದ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಬಗ್ಗೆ ಜನರು ಬೇಸೆತ್ತಿದ್ದರು. ಕೆಲವೇ ದಿನಗಳಲ್ಲಿ ಅಭಿವೃದ್ಧಿ ಪರ್ವ ಬರಲಿದೆ. ರೈತರಿಗೆ ಒತ್ತು, ಬರ ಪರಿಹಾರ ಕೆಲಸ ತ್ವರಿತವಾಗಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ಅಭಿವೃದ್ಧಿಯನ್ನು ಮಾಡದೇ ಕಾಲಹರಣ ಮಾಡಿತ್ತು. ಶಾಸನಸಭೆಯಲ್ಲಿ ನಮಗೆ ಬಹುಮತ ಸಿಕ್ಕಿದೆ. ನಾವು ಅಧಿಕಾರಕ್ಕೆ ಬಂದಿಲ್ಲ ಅಂತ ಜನರು ನೊಂದು ಕೊಂಡಿದ್ದರು. ಮುಂಬರುವ ದಿನಗಳಲ್ಲಿ ಉತ್ತಮ ಆಡಳಿತವನ್ನು ನೀಡುತ್ತೇವೆ ಎಂದು ಬಿಎಸ್ವೈ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಡ್ಡಾ ಗೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ. ನಮ್ಮ ರಾಷ್ಟ್ರೀಯ ನಾಯಕರ ಮಾರ್ಗದರ್ಶನದಂತೆ ರಾಜ್ಯಪಾಲರನ್ನ ಭೇಟಿ ಮಾಡುತ್ತೇನೆ. ರಾಜ್ಯದಲ್ಲಿ ಅರಾಜಕತೆಗೆ ಕಾರಣವಾಗಿದ್ದ ಮೈತ್ರಿ ಸರ್ಕಾರ ಪತನವಾಗಿದೆ. ರೈತರ ಪರವಾದ ಸರ್ಕಾರವನ್ನ ಮುಂದಿನ ದಿನಗಳಲ್ಲಿ ರಚಿಸುತ್ತೇವೆ. ರೈತರ ಅಭ್ಯುದಯವೇ ನಮ್ಮ ಧ್ಯೇಯ. ರೆಸಾರ್ಟ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಒಂದು ವರ್ಷದಿಂದ ಅತಂತ್ರ ಸರ್ಕಾರವಿತ್ತು : ಜಗದೀಶ್ ಶೆಟ್ಟರ್
ಇದು ಪ್ರಜಾಪ್ರಭುತ್ವಕ್ಕೆ ವಿಜಯ. ಕಳೆದ ಒಂದು ವರ್ಷದಿಂದ ಅತಂತ್ರ ಸರ್ಕಾರವಿತ್ತು. 2018 ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿತ್ತು. ಆದರೂ ಸಹ ಮೈತ್ರಿ ಸರ್ಕಾರ ಜನಾದೇಶಕ್ಕೆ ಪೆಟ್ಟುಕೊಟ್ಟರು. ಜನರಿಂದ ತಿರಸ್ಕಾರವಾದ ಮೈತ್ರಿ ಹಿಂಬದಿಯಿಂದ ಸರ್ಕಾರ ರಚಿಸಿದ್ದರು. ಬಹುಮತ ಕಳೆದುಕೊಂಡರೂ ಕುಮಾರಸ್ವಾಮಿ ಕುರ್ಚಿಗೆ ಅಂಟುಕೊಂಡರು. ಇಂದು ವಿಶ್ವಾಸಮತ ಕಳೆದುಕೊಂಡಿದ್ದಾರೆ. ಕೇಂದ್ರದ ಸಹಕಾರದಿಂದ ನಾವು ಉತ್ತಮ ಆಡಳಿತ ನೀಡುತ್ತೇವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಮಾಧ್ಯಮಗಳು ವಾಸ್ತವತೆಯಿಂದ ಕೆಲಸ ಮಾಡಿದೆ : ಮಾಧುಸ್ವಾಮಿ
ಹೊರಗೆ ಹೋದ ಶಾಸಕರಿಗೆ ತೊಂದರೆಯಾಗದು. ಹಿಂದೆ ಕಾಪಾಡಿಕೊಂಡು ಬಂದು ಶಿಸ್ತು, ಗಾಂಭೀರ್ಯ ವನ್ನು ಕಾಯ್ದುಕೊಂಡು ಹೋಗುತ್ತವೆ. ಮಾಧ್ಯಮಗಳು ವಾಸ್ತವತೆಯಿಂದ ಕೆಲಸ ಮಾಡಿವೆ. ರಾಜಕೀಯದಲ್ಲಿ ಕೈಕೊಟ್ಟು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದರು. ನಾವೆಲ್ಲ ಒಂದೇ ಅಂತ ಕೆಲಸ ಮಾಡಿಕೊಂಡು ಹೋಗುತ್ತೇವೆ. ಬಹುಮತ ಕಳೆದುಕೊಂಡ ಸಿಎಂ ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ರಾಜೀನಾಮೆ ಕೊಡುತ್ತಾರೆ. ನಮಗೆ ಬೆಂಬಲವನ್ನು ನೀಡಿದ ಅತೃಪ್ತ ಶಾಸಕರಿಗೆ ಅನ್ಯಾಯ ಆಗಲ್ಲ. ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಶಾಸಕ ಮಾಧುಸ್ವಾಮಿ ಹೇಳಿದರು.
ರಾಕ್ಷಸ ರಾಜ್ಯ ಅಂತ್ಯವಾಗಿದೆ : ಆರ್ ಅಶೋಕ್
ಕಳೆದ ಒಂದು ವರ್ಷ ರಾಜ್ಯಕ್ಕೆ ಗ್ರಹಣ ಅಂಟಿಕೊಂಡಿತ್ತು. ಕೇಂದ್ರದ ಸಹಕಾರದಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಿದೆ. ಈ ಮೈತ್ರಿ ಸರ್ಕಾರ ಬಂದಾಗಿಂದ ಅಧಿಕಾರ ಕುಂಠಿತವಾಗಿತ್ತು. ಪ್ರತಿದಿನ ಕಿತ್ತಾಟ. ಶಾಸಕರನ್ನು ನಿರ್ಲಕ್ಷಿದ್ದೂ ಕೂಡ ಈ ಸರ್ಕಾರ ಬೀಳಲು ಕಾರಣವಾಗಿದೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟವರಿಗೂ ನಮಗೂ ಸಂಬಂಧವಿಲ್ಲ. ಎಲ್ಲವೂ ಸುಖಾಂತ್ಯವಾಗಿದೆ. ರಾಕ್ಷಸ ರಾಜ್ಯ ಅಂತ್ಯವಾಗಿದೆ. ರಾಜ್ಯಪಾಲರ ಬಳಿ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡುತ್ತೇವೆ ಎಂದು ಶಾಸಕ ಆರ್ ಅಶೋಕ್ ತಿಳಿಸಿದರು.
ಹೆಚ್ಡಿಕೆ ಸಹೋದರರು ಅಧಿಕಾರಕ್ಕೆ ಅಂಟಿಕೊಂಡಿದ್ದರು : ರೇಣುಕಾಚಾರ್ಯ
ಜುಲೈ 6 ರಿಂದ ಜನರು ಟಿವಿ ಮುಂದೆ ಕೂತು ಯಾವಾಗ ರಾಜಿನಾಮೆ ಕೊಡುತ್ತಾರೆ ಅಂತ ಕಾಯ್ತಿದ್ದಾರು. ಹೆಚ್ಡಿಕೆ ಸಹೋದರರು ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದರು. ಬಿಎಸ್ ವೈ ಕೆಲವೇ ದಿನಗಳಲ್ಲಿ ಅಧಿಕಾರಕ್ಕೆ ಬರ್ತಾರೆ ಬರ ಮತ್ತಿತರ ಸಮಸ್ಯೆಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ಸದ್ಯದಲ್ಲೇ ಹೊಸ ಸರ್ಕಾರ ಬರುತ್ತೆ; ಸಿಟಿ ರವಿ
ವಿಶ್ವಾಸ ಮತಯಾಚನೆ ವೇಳೆಯ ಪ್ರಶ್ನೆಗಳಿಗ ಉತ್ತರ ಕೊಡಲ್ಲ ಸಂದರ್ಭ ಬಂದಾಗ ಉತ್ತರ ಕೊಡುತ್ತೇವೆ. ಯಾವುದು ನೈತಿಕತೆ, ಯಾವುದು ಅನೈತಿಕತೆ ಎಂದು ಮುಂದೆ ಹೇಳುತ್ತೇವೆ ಸದ್ಯದಲ್ಲೇ ಹೊಸ ಸರ್ಕಾರ ಬರುತ್ತೆ. ಪಾರ್ಲಿಮೆಂಟ್ ಬೋರ್ಡ್, ಶಾಸಕಾಂಗ ಸಭೆಯಲ್ಲಿ ಮುಂದಿನ ತೀರ್ಮಾನ ಆದಷ್ಟು ಬೇಗ ಸರ್ಕಾರ ರಚನೆ ಮಾಡುತ್ತೇವೆ ಎಂದು ಶಾಸಕ ಸಿ.ಟಿ ರವಿ ಹೇಳಿದರು.
ಇದನ್ನೂ ಓದಿ :
14 ತಿಂಗಳ ಮೈತ್ರಿ ಸರ್ಕಾರ ಪತನ; ವಿಶ್ವಾಸಮತದಲ್ಲಿ ಸೋತ ಸಿಎಂ ಕುಮಾರಸ್ವಾಮಿ; ಸಮ್ಮಿಶ್ರ ಸರ್ಕಾರದ ಪರ 99, ಬಿಜೆಪಿ ಪರ 105 ಮತ