ಮಾಜಿ ಸಚಿವ ಗಣಿ ಧಣಿ ಜನಾರ್ದನ ರೆಡ್ಡಿ (Former Minister Janardhan Reddy) ರಾಜಕೀಯ ಮರು ಪ್ರವೇಶ ಪಡೆಯುವ ಸುಳಿವು ನೀಡಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati, Koppal) ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸ ಸಂಚಲನವನ್ನು ಸೃಷ್ಟಿ ಮಾಡಿದ್ದಾರೆ. ಸದ್ಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ (BJP) ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇದುವರೆಗೂ ಜನಾರ್ದನ ರೆಡ್ಡಿ ಮಾತ್ರ ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲ್ಲ. ಈ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮುಗಳ್ನಕ್ಕಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಪತ್ನಿ ಲಕ್ಷ್ಮಿ ಅರುಣಾ (Janardhan Reddy Wife Laxmi Aruna) ಅವರನ್ನು ರಾಜಕೀಯಕ್ಕೆ ಕರೆ ತರುವ ಕುರಿತು ಜನಾರ್ದನ ರೆಡ್ಡಿ ಚಿಂತನೆ ನಡೆಸಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. ಈಗಾಗಲೇ ಒಂದು ಹಂತದಲ್ಲಿ ಸಿದ್ಧತೆ ನಡೆಸಿರುವ ಜನಾರ್ದನ ರೆಡ್ಡಿ ಕ್ಷೇತ್ರವನ್ನ ಸಹ ಆಯ್ಕೆ ಮಾಡಿದ್ದಾರಂತೆ.
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಚುನಾವಣೆ ಕಣಕ್ಕಿಳಿಸಲು ಜನಾರ್ದನ ರೆಡ್ಡಿ ಆಪ್ತರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ರೆಡ್ಡಿ ಸಮುದಾಯದ ಪ್ರಬಲವಾಗಿರುವ ದೇವರ ಹಿಪ್ಪರಗಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ದೇವರ ಹಿಪ್ಪರಗಿಯಲ್ಲಿ 50 ಸಾವಿರಕ್ಕೂ ಅಧಿಕ ರೆಡ್ಡಿ ಸಮುದಾಯದ ಮತಗಳಿವೆ.
ಉತ್ತರ ಕರ್ನಾಟಕದ 30 ಕ್ಷೇತ್ರಗಳ ಮೇಲೆ ಕಣ್ಣು
ಆದಾಯ ತೆರಿಗೆ ದಾಖಲಿಸಿದ ನಾಲ್ಕು ಕೇಸ್ಗಳಲ್ಲಿ ಬಿಗ್ ರಿಲೀಫ್ ಸಿಕ್ಕ ಬೆನ್ನಲ್ಲೇ ಆಕ್ಟಿವ್ ಆಗಿರುವ ಜನಾರ್ದನ ರೆಡ್ಡಿ ಉತ್ತರ ಕರ್ನಾಟಕದ 30 ಕ್ಷೇತ್ರಗಳಲ್ಲಿ ರಹಸ್ಯ ಸಮೀಕ್ಷೆ ನಡೆಸಿದ್ದಾರೆ ಎನ್ನಲಾಗಿದೆ.
ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ವಿಜಯಪುರ, ಮಾನ್ವಿ, ಮಸ್ಕಿ, ಸಂಡೂರು, ಮುದ್ದೇಬಿಹಾಳ, ದೇವರ ಹಿಪ್ಪರಗಿ ಸೇರಿದಂತೆ ಒಟ್ಟು ಮೂವತ್ತು ಕ್ಷೇತ್ರಗಳ ಮೇಲೆ ಜನಾರ್ದನ ರೆಡ್ಡಿ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಹೊಸ ಪಕ್ಷ ಸ್ಥಾಪನೆ ಮಾಡ್ತಾರಾ ರೆಡ್ಡಿ?
ಈ ಬಾರಿ ಬಿಜೆಪಿ ತಮಗೆ ಟಿಕೆಟ್ ನೀಡಿದ್ರೆ ತಾವೊಬ್ಬರೇ ಕಣಕ್ಕಿಳಿಯೋದು ಅಂತ ನಿರ್ಧರಿಸಿದ್ದಾರಂತೆ. ಒಂದು ವೇಳೆ ಬಿಜೆಪಿ ಟಿಕೆಟ್ ನೀಡಲು ಹಿಂದೇಟು ಹಾಕಿದ್ರೆ ತಮ್ಮದೇ ಹೊಸ ಪಕ್ಷ ಸ್ಥಾಪಿಸಿ, ಉತ್ತರ ಕರ್ನಾಟಕದ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಗಂಗಾವತಿ ಆಯ್ಕೆ ಏಕೆ?
ಬಳ್ಳಾರಿ ಪ್ರವೇಶಿಸದಂತೆ ಜನಾರ್ದನ ರೆಡ್ಡಿಯವರ ಮೇಲೆ ನಿರ್ಬಂಧವಿದೆ. ಕಳೆದ ಬಾರಿ ವಿಧಾನಸಬಾ ಚುನಾವಣೆ ವೇಳೆಯೂ ಬಳ್ಳಾರಿಯ ಗಡಿ ಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆಯ ರಾಂಪುರ ಮತ್ತು ತಮ್ಮೇನಹಳ್ಳಿಲ್ಲಿರುವ ತೋಟದಲ್ಲಿ ಮನೆ ಮಾಡಿಕೊಂಡು ಬಳ್ಳಾರಿಯ ಚುನಾವಣೆ ಏರಿಳಿತದ ಮೇಲೆ ಕಣ್ಣಿಟ್ಟಿದ್ದರು. ಜಿಲ್ಲೆಯ ಗಡಿ ಭಾಗದಲ್ಲಿದ್ದುಕೊಂಡು ರಾಜಕೀಯದತ್ತ ಮುಖ ಮಾಡಿದ್ದರು.
ಈ ಬಾರಿಯೂ ಸಹ ಬಳ್ಳಾರಿಯ ಕೂಗಳತೆ ದೂರದಲ್ಲಿರುವ ಗಂಗಾವತಿ ಆಯ್ಕೆ ಮಾಡಿಕೊಂಡಿದ್ದಾರಂತೆ. ಅತಿ ಹೆಚ್ಚು ಲಿಂಗಾಯತ ಮತ್ತು ಮುಸ್ಲಿಂ ಮತಗಳನ್ನು ಹೊಂದಿರುವ ಕ್ಷೇತ್ರ ಇದಾಗಿದ್ದು, ಇದರ ಜೊತೆಗೆ ಸ್ಥಳೀಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅಷ್ಟೊಂದು ಆಕ್ಟಿವ್ ಆಗಿರದ ಕಾರಣ ಸುಲಭವಾಗಿ ಬಿಜೆಪಿ ಟಿಕೆಟ್ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಜನರ್ದಾನ ರೆಡ್ಡಿ ಇದ್ದಾರಂತೆ.
ಇದನ್ನೂ ಓದಿ: Janardhan Reddy: ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್! 4 ಕೇಸ್ ಕ್ಲೋಸ್ ಮಾಡಿದ ಕೋರ್ಟ್
ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಸುಲಭವಾಗಿ ಜಯಗಳಿಸಬಹುದು ಎಂದು ಆಪ್ತರು ಜನಾರ್ದನ ರೆಡ್ಡಿ ಅವರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಬಿಜೆಪಿ?
ಒಂದು ವೇಳೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದ್ರೆ ಬಿಜೆಪಿ ಮತಗಳ ವಿಂಗಡನೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ