ದೇವೇಗೌಡರ ಮೊಮ್ಮಕ್ಕಳ ರಾಜಕೀಯ ಎಂಟ್ರಿ ಹೂವಿನ ಹಾದಿಯೇ, ಆದರೆ ಮುಂದೆ ಕಾದಿದೆ ಕಲ್ಲು-ಮುಳ್ಳುಗಳು!

ಕುಟುಂಬದ ರಾಜಕೀಯ ಹಿನ್ನೆಲೆ ವರದಾನವಾಗಿ ಪರಿಣಮಿಸಿರುವ ಪ್ರಜ್ವಲ್​ ಹಾಗೂ ನಿಖಿಲ್​ಗೆ​ ರಾಜಕೀಯ ಪ್ರವೇಶ ಹೂವಿನ ಹಾದಿಯಾಗಿದೆ. ಆದರೆ, ಈ ಹಾದಿಯಲ್ಲಿ ಮುಂದೆ ಸಿಗುವ ಕಲ್ಲುಮುಳ್ಳುಗಳ ಬಗ್ಗೆ ಈ ಸಂದರ್ಭದಲ್ಲಿ ಯೋಚನೆ ಮಾಡಲೇಬೇಕಿದೆ. 

Seema.R | news18
Updated:March 14, 2019, 9:48 PM IST
ದೇವೇಗೌಡರ ಮೊಮ್ಮಕ್ಕಳ ರಾಜಕೀಯ ಎಂಟ್ರಿ ಹೂವಿನ ಹಾದಿಯೇ, ಆದರೆ ಮುಂದೆ ಕಾದಿದೆ ಕಲ್ಲು-ಮುಳ್ಳುಗಳು!
ದೇವೇಗೌಡ
  • News18
  • Last Updated: March 14, 2019, 9:48 PM IST
  • Share this:
ಬೆಂಗಳೂರು (ಮಾ.14): ನಾವು ಎಂದೂ ಕುಟುಂಬ ರಾಜಕಾರಣ ಮಾಡಿಲ್ಲ ಎನ್ನುತ್ತಲೇ ಇಬ್ಬರು ಮೊಮ್ಮಕ್ಕಳಿಗೆ ಎರಡು ಲೋಕಸಭಾ ಕ್ಷೇತ್ರವನ್ನು ದೇವೇಗೌಡರು ಬಿಟ್ಟುಕೊಟ್ಟಿದ್ದಾರೆ. ಕುಟುಂಬದ ರಾಜಕೀಯ ಹಿನ್ನೆಲೆ ವರದಾನವಾಗಿ ಪರಿಣಮಿಸಿರುವ ಪ್ರಜ್ವಲ್​ ಹಾಗೂ ನಿಖಿಲ್​ಗೆ​ ರಾಜಕೀಯ ಪ್ರವೇಶ ಹೂವಿನ ಹಾದಿಯಾಗಿದೆ. ಆದರೆ, ಈ ಹಾದಿಯಲ್ಲಿ ಮುಂದೆ ಸಿಗುವ ಕಲ್ಲುಮುಳ್ಳುಗಳ ಬಗ್ಗೆ ಈ ಸಂದರ್ಭದಲ್ಲಿ ಯೋಚನೆ ಮಾಡಲೇಬೇಕಿದೆ. ರಾಜಕಾರಣದ ವಾತಾವರಣದಲ್ಲೇ ಬೆಳೆದಿರುವ ನಿಖಿಲ್​ ಕುಮಾರಸ್ವಾಮಿ ಹಾಗೂ ಪ್ರಜ್ವಲ್​ ರೇವಣ್ಣ ಜೆಡಿಎಸ್​ ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಆದರೆ, ಪಕ್ಷದ ಬೆಂಬಲ ಹಾಗೂ ತಂದೆ- ತಾತನ  ವರ್ಚಸ್ಸಿನ ಹೊರತಾಗಿ ಅವರ ರಾಜಕೀಯ ಭವಿಷ್ಯದ ಹಾದಿ ಎಡರು ತೊಡರುಗಳೆ ಹೆಚ್ಚಾಗಿ ಕಾಣುತ್ತವೆ.

ಕಲ್ಲುಮುಳ್ಳಿನ ರಾಜಕೀಯ ಹಾದಿ

ನಿಖಿಲ್​ಗೆ ಹೋಲಿಸಿದರೆ ಪ್ರಜ್ವಲ್​ ರೇವಣ್ಣ ಕಳೆದ ಐದಾರು ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದ ಕಾರ್ಯಕರ್ತರೊಂದಿಗೆ ಒಡನಾಡವಿರುವ ಪ್ರಜ್ವಲ್​​ ಈಗಾಗಲೇ ಅಲ್ಲಿನ ಜನರಿಗೆ ಚಿರಪರಿಚಿತರು. ಕಾರ್ಯಕರ್ತರ ಸಭೆಗಳನ್ನು ಏರ್ಪಡಿಸಿ, ಆವೇಶದ ಭಾಷಣ ಮಾಡುವ ಮೂಲಕ ಈಗಾಗಲೇ ಜೆಡಿಎಸ್​ ಯುವ ಸಮುದಾಯ ಪ್ರಜ್ವಲ್​ ರನ್ನು ತಮ್ಮ ನಾಯಕ ಎಂದು ಘೋಷಿಸಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಟಿಕೆಟ್​ ಆಕಾಂಕ್ಷಿಯಾಗಿದ್ದ ಪ್ರಜ್ವಲ್​ ಟಿಕೆಟ್​ ಕೈ ತಪ್ಪಿದ ಹಿನ್ನೆಲೆಯಲ್ಲಿ ಅತೃಪ್ತಿ ಹೊರಗೆ ಹಾಕಿದ್ದರು. ಈ ವೇಳೆ ಮೊಮ್ಮಗನ ಸಿಟ್ಟು ಶಮನಕ್ಕೆ ಮುಂದಾದ ಗೌಡರು ತಮ್ಮ ಉತ್ತರಾಧಿಕಾರಿ ಎಂದು ಪ್ರಜ್ವಲ್​ ಅವರನ್ನು ಘೋಷಿಸಿದ್ದರು. ಕೊಟ್ಟ ಮಾತಿನಂತೆ ಈಗ ಗೌಡರು ಪ್ರಜ್ವಲ್​ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಪ್ರಜ್ವಲ್​ ಕಣಕ್ಕೆ ಇಳಿದರೂ ಕಾಂಗ್ರೆಸ್​ ನಾಯಕರು ಅವರಿಗೆ ಬೆಂಬಲಿಸುವುದು ಅನುಮಾನ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್​ ಸಚಿವ ಎ ಮಂಜು ಪ್ರಜ್ವಲ್​ ನಿಂತರೆ ನಮ್ಮ ಬೆಂಬಲ ಇಲ್ಲ ಎಂಬ ಮಾತನ್ನು ಬಹಿರಂಗವಾಗಿ ಹೇಳಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ

ಅಪ್ಪನ ಬೆಂಬಲ

ಪ್ರಜ್ವಲ್​ಗೆ ಹೋಲಿಸಿದರೆ ನಿಖಿಲ್​ಗೆ ರಾಜಕೀಯ ಅನುಭವ ಶೂನ್ಯ. ಸಿನಿಮಾ ಕ್ಷೇತ್ರದಲ್ಲಿದ್ದ ಅವರಿಗೆ ಏಕಾಏಕಿ ರಾಜಕೀಯದಲ್ಲಿ ಜೀವನ ಕಂಡುಕೊಳ್ಳಲು ಮುಂದಾಗಿದ್ದಾರೆ.  ಯಾವುದೇ ನಾಯಕತ್ವದ ಗುಣ, ರಾಜಕೀಯ ಅನುಭವ, ಕಾರ್ಯಕರ್ತರೊಂದಿಗೆ ಒಡನಾಟವಿಲ್ಲದ ರಾಜಕೀಯ ಭವಿಷ್ಯಕ್ಕೆ ಜೆಡಿಎಸ್​ ನಾಯಕರುಗಳೇ ಮೆಟ್ಟಿಲು ರೂಪಿಸಬೇಕಿದೆ.

ಪ್ರಜ್ವಲ್​ ವರ್ತನೆಯೇ ಮುಳುವಾಗುತ್ತಾ?ಪ್ರಜ್ವಲ್​ ರೇವಣ್ಣಗೆ ರಾಜಕೀಯವಾಗಿ ಬೆಳೆಯುವ ನಾಯಕತ್ವ ಇದ್ದರೂ ಅವರಿಗೆ ಅವರ ವರ್ತನೆಯೇ ಮುಳುವಾಗಲಿದೆ ಎಂಬ ಮಾತು ಕೇಳಿಬಂದಿದೆ. ಎಂಟು ಲೋಕಸಭಾ ಕ್ಷೇತ್ರದಲ್ಲಿ ಆರು ಕ್ಷೇತ್ರಗಳಲ್ಲಿ ಜೆಡಿಎಸ್​ ನಾಯಕರಿದ್ದರೆ, ಎರಡರಲ್ಲಿ ಬಿಜೆಪಿ ನಾಯಕರಿದ್ದಾರೆ. ಇನ್ನು ಇಲ್ಲಿನ ಶಾಸಕರಲ್ಲಿರುವ ಅಸಮಾಧಾನ ಎಂದರೆ ಪ್ರಜ್ವಲ್​ ವರ್ತನೆ. ಹಿರಿಯರಿಗೆ ಗೌರವ ಕೊಡದ ಪ್ರಜ್ವಲ್​ ಏಕವಚನದಲ್ಲಿ ಎಲ್ಲರನ್ನು ಸಂಬೋಧಿಸುತ್ತಾರೆ. ರಾಜಕೀಯ ಕುಟುಂಬ ಎಂಬ ಮಾತ್ರಕ್ಕೆ ಈ ರೀತಿಯ ನಡುವಳಿಕೆ ಸರಿಯಲ್ಲ ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ 1999 ರಲ್ಲಿ  ಹೇಗೆ ಕಾಂಗ್ರೆಸ್​ ಹಾಗೂ ಬಿಜೆಪಿ ಜೊತೆಯಾಗಿ ದೇವೇಗೌಡ ಅವರ ಸೋಲಿಗೆ ಕಾರಣವಾಗಿದ್ದವೋ  ಆ ಪರಿಸ್ಥಿತಿ ಮರುಕಳಿಸಿದರೆ ಎಂಬ ಆತಂಕ ಕೂಡ ವ್ಯಕ್ತವಾಗಿದೆ.

ಈ ನಡುವೆ ರೇವಣ್ಣ ಅವರು ಕ್ಷೇತ್ರಕ್ಕೆ ಮಾಡಿರುವ ಕಾರ್ಯಗಳು ಅವರಿಗೆ ವರದಾನವಾಗಿ ಪರಿಣಮಿಸುವ ಲಕ್ಷಣ ಕಂಡುಬಂದಿದೆ. ಹಾಸನ ಅಭಿವೃದ್ಧಿಯಾಗಿರುವುದೇ ಜೆಡಿಎಸ್​ ನಿಂದ ರೇವಣ್ಣ ಎಲ್ಲ ಅನುದಾನವನ್ನು ಜಿಲ್ಲೆಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಈ ರಕ್ಷಣೆ ಪ್ರಜ್ವಲ್​ ಮೇಲಿದೆ

ರಾಜಕೀಯದಲ್ಲಿ ಭವಿಷ್ಯ ಕಾಣಲು ಮುಂದಾದ ನಿಖಿಲ್​

ಸಿನಿಮಾ ಕ್ಷೇತ್ರದಲ್ಲಿರುವ ನಿಖಿಲ್​ ಅವರಿಗೆ ರಾಜಕೀಯ ಹೊಸದಾಗಿದ್ದು, ಸುಮಲತಾ ಅವರ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಸುಮಲತಾ ಪರ ವ್ಯಕ್ತವಾಗುತ್ತಿರುವ ಅಲೆ ನಿಖಿಲ್​ ಎದುರು ಕಾಣುತ್ತಿಲ್ಲ. ಅಲ್ಲದೇ ನಿಖಿಲ್​ ವಿರುದ್ಧ ಸಾಮಾಜಿಕ ಜಾಲತಾಣಿಗರು ಟ್ರೋಲಿಂಗ್​ ಕೂಡ ಆರಂಭಿಸಿರುವುದು ಅವರಿಗೆ ಮತ್ತಷ್ಟು ಮುಳುವಾಗಿ ಪರಿಣಮಿಸಿದೆ. ಮಗನನ್ನು ರಾಜಕೀಯ ಕರೆ ತರುವ ಉದ್ದೇಶದಿಂದಲೇ ಕುಮಾರಸ್ವಾಮಿ ಮಂಡ್ಯದಲ್ಲಿ 'ಸೀತಾ ರಾಮ ಕಲ್ಯಾಣ' ಚಿತ್ರ ಪ್ರಚಾರ ಹಾಗೂ ಸಿನಿಮಾ ಟಿಕೆಟ್​ ಅನ್ನು ಉಚಿತವಾಗಿ ಹಂಚುವ ಮೂಲಕ ಅವರನ್ನು ಕ್ಷೇತ್ರದ ಜನರಿಗೆ ಪರಿಚಯ ಮಾಡಿಕೊಟ್ಟಿದ್ದರು. ಆದರೆ, ಸುಮಲತಾ ಅಂಬರೀಷ್​ ವಿರುದ್ಧ ಇದ್ಯಾವುದೇ ಕೆಲಸ ನಡೆಯುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.

ಕ್ಷೇತ್ರದ ಏಳು ಜೆಡಿಎಸ್​ ಶಾಸಕರಿದ್ದು, ಒಕ್ಕಲಿಗರ​ ಭದ್ರಕೋಟೆಯಾಗಿದ್ದರೂ ಸುಮಲತಾ ಅಂಬರೀಷ್​ ನಿಖಿಲ್​ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗಲಿದ್ದಾರೆ. ಈಗಾಗಲೇ ಸುಮಲತಾ ಪರ ಕೆಲ ಕಾಂಗ್ರೆಸ್​ ನಾಯಕರು ಕೆಲಸ ಮಾಡುತ್ತಿದ್ದು, ಮೇಲ್ನೋಟಕ್ಕೆ ಮಾತ್ರ ಜೆಡಿಎಸ್​ ಪರ ಇರುವಂತೆ ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ.

ಜೆಡಿಎಸ್​ನಲ್ಲೇ ಮೂಡಿದೆ ಆತಂಕ

ಮೊಮ್ಮಕ್ಕಳ ವ್ಯಮೋಹಕ್ಕೆ ಕಟ್ಟುಬಿದ್ದು ದೇವೇಗೌಡರು ತಮ್ಮ ಕ್ಷೇತ್ರ ಸೇರಿದಂತೆ ಜೆಡಿಎಸ್ ಭದ್ರಕೋಟೆ ಮಂಡ್ಯವನ್ನು ಬಿಟ್ಟುಕೊಟ್ಟಿದ್ದಾರೆ. ಮೈತ್ರಿ ಸರ್ಕಾರದ ಸಹಕಾರದಿಂದಾಗಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಯೋಜನೆಯಲ್ಲಿದ್ದ ಜೆಡಿಎಸ್​ಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಲ್ಲಿನ ಪರಿಸ್ಥಿತಿ ಅರಿವಿಗೆ ಬರುತ್ತಿದೆ. ಹಾಸನದಲ್ಲಿ ಪ್ರಜ್ವಲ್​ ಪರ ಹಾಗೂ ವಿರೋಧ ಎರಡು ಕಂಡು ಬರುತ್ತಿದ್ದು ಅವರ ಗೆಲವಿಗೆ ಅನೇಕ ಅಡೆತಡೆಗಳು ಎದುರಾದರೂ ಕಾಂಗ್ರೆಸ್​ ನಾಯಕರ ಬೆಂಬಲದಿಂದ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ನಡೆಸಲಾಗಿದೆ.

ನಿಖಿಲ್​ ಗೆಲುವಿನ ಜವಾಬ್ದಾರಿ ಈಗಾಗಲೇ ಸಿಎಸ್​ ಪುಟ್ಟರಾಜು ಹಾಗೂ ಡಿಸಿ ತಮ್ಮಣ್ಣ ಮೇಲಿದೆ. ಈಗಾಗಲೇ ಕಾಂಗ್ರೆಸ್​ ನಾಯಕರಿಂದ ಕ್ಷೇತ್ರ ಪಡೆಯುವಲ್ಲಿ ಸಫಲರಾಗಿದ್ದು, ಮೈತ್ರಿಗೆ ಕಟ್ಟು ಬಿದ್ದು ಕಾಂಗ್ರೆಸ್​ ನಾಯಕರು ನಿಖಿಲ್​ ಪರ ಕೆಲಸ ಮಾಡುವ ಅಗತ್ಯತೆ ಕಂಡು ಬಂದಿದೆ.

 
First published:March 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ