ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸದಾ ಒಂದಲ್ಲಾ ಒಂದು ವಿಷಯಕ್ಕೆ ಚರ್ಚೆಗೆ ಗ್ರಾಸವಾಗುತ್ತಾರೆ. ಈ ಬಾರಿಯೂ ಸೋಷಿಯಲ್ ಮೀಡಿಯಾದಲ್ಲಿ ರೋಹಿಣಿ ಸಿಂಧೂರಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಮಾಡಿರುವ ಒಂದು ಫೇಸ್ಬುಕ್ ಪೋಸ್ಟ್. ಹೌದು, ರೂಪಾ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಬಾಡಿಗೆ ಟ್ರೋಲರ್ಗಳನ್ನು ಬಳಸುತ್ತಾರೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಗಂಭೀರವಾಗಿ ಆರೋಪಿಸಿದ್ದಾರೆ. ಈ ವಿಷಯ ಈಗ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬರು ಜೂನ್ 25ರಂದು ರೂಪಾ ಅವರೊಂದಿಗೆ ವಾಟ್ಸ್ಆ್ಯಪ್ ಚಾಟ್ ಮೂಲಕ ನಡೆಸಿದ ಸಂಭಾಷಣೆಯನ್ನು ಜುಲೈ 3ರಂದು ಐಪಿಎಸ್ ಅಧಿಕಾರಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯು ತಮ್ಮ ಸಂಬಂಧಿಯೊಬ್ಬರಿಗೆ ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ರೂಪಾ ಅವರು ಬೆಡ್ ಕೊಡಿಸಿದ ವಿಷಯವನ್ನು ಪ್ರಸ್ತಾಪಿಸಿ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಜೊತೆಗೆ ತಾನು ಸಾರ್ವಜನಿಕ ಸಂಪರ್ಕ ಏಜೆನ್ಸಿಯೊಂದರ ಮಾಜಿ ಉದ್ಯೋಗಿ ಎಂದೂ ಸಹ ಹೇಳಿದ್ದಾರೆ.
ಬಳಿಕ ಮಾತನಾಡುತ್ತಾ, ನೀವು ರೋಹಿಣಿ ಸಿಂಧೂರಿ ವಿರುದ್ಧ ಪೋಸ್ಟ್ಗಳನ್ನು ಹಾಕಬೇಡಿ ಎಂದು ರೂಪಾ ಅವರಿಗೆ ಹೇಳಿದ್ದಾರೆ. ಯಾಕೆ ಎಂದು ರೂಪಾ ಅವರು ಕೇಳಿದಾಗ, ‘ರೋಹಿಣಿ ಅವರನ್ನು ಟೀಕಿಸುವವರ ವಿರುದ್ಧ ದಾಖಲಾಗುವ ಪ್ರತಿಕ್ರಿಯೆಗಳು ಬಾಡಿಗೆ ಟ್ರೋಲರ್ಗಳಿಂದ ಬರುತ್ತಿವೆ. ನಾನು ಕೂಡ ಆ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದೇನೆ. ಈಗಲೂ ಈ ರೀತಿ ಬಳಕೆಯಾಗುತ್ತಿರುವುದನ್ನು ಅಲ್ಲಿರುವ ನನ್ನ ಗೆಳೆಯರು ತಿಳಿಸಿದ್ದಾರೆ‘ ಎಂದು ವ್ಯಕ್ತಿ ಹೇಳಿದ್ದಾರೆ.
ಇದನ್ನೂ ಓದಿ:Gold Price Today: ಏರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ರೇಟು?
ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಬಾಡಿಗೆ ಟ್ರೋಲರ್ಗಳ ನೆರವು ಪಡೆದು ವಿರೋಧಿಗಳನ್ನು ಮಣಿಸುತ್ತಾರೆ ಎಂದು ಆ ವ್ಯಕ್ತಿ ಹೇಳಿರುವ ಮಾತನ್ನು ರೂಪಾ ಬಹಿರಂಗಪಡಿಸಿದ್ದಾರೆ. ನಾನು ಒಂದು ಪಿ.ಆರ್ ಏಜೆನ್ಸಿಯಲ್ಲಿ ಹಿಂದೆ ಉದ್ಯೋಗಿಯಾಗಿದ್ದೆ. ಸಿಂಧೂರಿ ಅವರ ಪತಿ ಒಂದು ವರ್ಷದಿಂದ ಆ ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ. ತಮ್ಮ ವಿರೋಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ರೋಹಿಣಿ ಅವರ ವಿರುದ್ಧ ಮಾತನಾಡುವವರ ವಿರುದ್ಧ ಕೆಟ್ಟದಾಗ ದಾಳಿ ಮಾಡಿಸುತ್ತಿದ್ದಾರೆ. ನೀವು ಅವರ ತಂಟೆಗೆ ಹೋಗಬೇಡಿ, ಸುಮ್ಮನಿದ್ದುಬಿಡಿ ಮೇಡಂ ಎಂದು ಆ ವ್ಯಕ್ತಿ ಸಲಹೆ ನೀಡಿರುವುದನ್ನು ರೂಪಾ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಜೂನ್ 25ರ ತಡರಾತ್ರಿ 2.42ರಿಂದ 3.27ರವರೆಗೆ ವಾಟ್ಸ್ ಆ್ಯಪ್ನಲ್ಲಿ ಈ ಸಂಭಾಷಣೆ ನಡೆದಿದೆ. ಮಾತಿನ ಮಧ್ಯೆ ರೂಪಾ ಅವರು ‘ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು‘ ಎಂದು ಹೇಳಿದ್ದಾರೆ. ಅದಕ್ಕೆ ವ್ಯಕ್ತಿಯು ತನಗೆ ಕನ್ನಡ ಭಾಷೆ ಬರಲ್ಲ ಎಂದು ಹೇಳಿದ್ದು, ‘ನಾನು ಕೂಡ ಆಂಧ್ರಪ್ರದೇಶದವ‘ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ:US COVID-19: ಅಮೆರಿಕಾದಲ್ಲಿ ಮತ್ತೆ ಕೊರೋನಾ ಸ್ಫೋಟ; 3 ವಾರಗಳಲ್ಲಿ ಕೇಸ್ ಡಬಲ್
ಬಳಿಕ, ಬಾಡಿಗೆ ಟ್ರೋಲರ್ಗಳಿಗೆ ನೀಡುತ್ತಿರುವ ಹಣದ ಬಗ್ಗೆ ಮಾಹಿತಿ ನೀಡುವಂತೆ ರೂಪಾ ಕೇಳಿದ್ದಾರೆ. ಆಗ ವ್ಯಕ್ತಿಯು ‘ಆ ವಿಷಯ ಗೊತ್ತಿಲ್ಲ, ರೋಹಿಣಿ ಸಿಂಧೂರಿ ಅವರ ಗಂಡ ಒಂದು ವರ್ಷದಿಂದಲೂ ಪಿ.ಆರ್.ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ‘ ಎಂದು ವ್ಯಕ್ತಿ ಹೇಳಿದ್ದಾರೆ.
"ಈ ಸಂಭಾಷಣೆ ಜೂನ್ 25ರಂದು ನಡೆದದ್ದು. ಸಂಭಾಷಣೆ ಸ್ವಯಂ ವೇದ್ಯ. ನನಗೆ ಹೆಚ್ಚಾಗಿ ತಿಳಿಯದ ಈ ವ್ಯಕ್ತಿ ಹೇಳಿದ್ದು ನಿಜ ಇದ್ದರೆ, ಅಂದರೆ, ನಾನು ಹಾಕುವ ನನ್ನ ಅಭಿಪ್ರಾಯಕ್ಕೆ paid trolls ಗಳು ನಕಾರಾತ್ಮಕವಾಗಿ, ಅನಾಗರಿಕ ರೀತಿಯಲ್ಲಿ ಪ್ರತಿಕ್ರಿಯಿಸಿದರ ಹಿಂದೆ ಅಂಥವರ ವಿಕೃತ ಮನೋಭಾವ ಎದ್ದು ತೋರುತ್ತದೆ. ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ. ಹಾಗೆ, paid trolls ಗಳು ಒಬ್ಬ ಅಧಿಕಾರಿಯ ಪರ ಕೆಲಸ ಮಾಡುತ್ತಾ, ಇನ್ನೊಬ್ಬ ಅಧಿಕಾರಿಯ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು " ಹೊಸ ಸಾಮಾನ್ಯ?". New normal'? Sad. ಆದರೆ, ಆ ಪೇಯ್ಡ್/ ಬಾಡಿಗೆ ಟ್ರೊಲ್ ಗಳಿಗೆ ಗೊತ್ತಿಲ್ಲವೆ... ನಾಯಿ ಬೊಗಳಿದರೆ ಅಂಬಾರಿ ಹೋಗೋದು ನಿಲ್ಲಲ್ಲ. ಹಾಗೇ ಈ ವ್ಯಕ್ತಿ ಹೇಳಿದ ವಿಷಯ ಸತ್ಯವೇ, ತನಿಖೆ ಆಗಲಿ" ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ