International Tiger Day: ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ  ಹಳೇ ಮೈಸೂರು ಪ್ರಾಂತ್ಯ

ಇದೀಗ ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ವನ್ಯಜೀವಿ ವಿಭಾಗವನ್ನು ಸಹ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸಿದ್ದತೆ ನಡೆದಿದೆ.

ಹುಲಿ

ಹುಲಿ

  • Share this:
 ಚಾಮರಾಜನಗರ( ಜು.29) ಆಹಾರ ಸರಪಳಿಯ ಮೇಲುಸ್ತರದಲ್ಲಿರುವ ಹುಲಿ ಸಮತೋಲಿತ ಪರಿಸರ ವ್ಯವಸ್ಥೆಯ ಪ್ರತೀಕವಾಗಿದೆ.  ಹಾಗಾಗಿಯೇ  ಅಳಿವಿನಂಚಿಗೆ ತಲುಪಿದ್ದ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ನ್ನು  ವಿಶ್ವ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಕೈಗೊಂಡ ಹಲವು ಸುಧಾರಣಾ ಕ್ರಮಗಳ ಫಲವಾಗಿ ಹುಲಿ ಸಂರಕ್ಷಣೆಯಲ್ಲಿ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದೆ. ಅದರಲ್ಲೂ  ಕರ್ನಾಟಕ ದೇಶದಲ್ಲೇ 2ನೇ ಸ್ಥಾನ ಪಡೆದಿದ್ದು ಹಳೇ ಮೈಸೂರು ಭಾಗದಲ್ಲಿ 363ಕ್ಕೂ ಹೆಚ್ಚು ಹುಲಿಗಳು ನೆಲೆ ಕಂಡುಕೊಂಡಿವೆ.   ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.

ಯಾವುದೇ ಒಂದು ಅರಣ್ಯದಲ್ಲಿ ಹುಲಿಗಳಿದ್ದರೆ ಅಲ್ಲಿನ ಪರಿಸರ ಸಮೃದ್ಧಿಯಿಂದ,  ಸಮತೋಲನದಿಂದ ಹಾಗೂ ಜೀವವೈವಿಧ್ಯ ತೆಯಿಂದ  ಕೂಡಿದೆ ಎಂದೇ ಅರ್ಥ.  ಹಾಗಾಗಿ ಹುಲಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎನ್ನುತ್ತಾರೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಏಡುಕೊಂಡಲು

ಹುಲಿಗಳ ಸಂತಾನವೃದ್ದಿಗೆ ಸೂಕ್ತ ವಾತಾವರಣ ಹಾಗೂ ಅನುಕೂಲಕರ ಹವಾಗುಣವಿರುವ  ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ 360 ಕ್ಕೂ ಹೆಚ್ಚು ಹುಲಿಗಳಿವೆ.   ಹಳೇ ಮೈಸೂರು ಪ್ರಾಂತ್ಯದಲ್ಲಿ ಬಂಡೀಪುರ, ನಾಗರಹೊಳೆ ಹಾಗೂ ಬಿ.ಆರ್.ಟಿ. ಹೀಗೆ ಒಟ್ಟು 3 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಇದೀಗ ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ವನ್ಯಜೀವಿ ವಿಭಾಗವನ್ನು ಸಹ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸಿದ್ದತೆ ನಡೆದಿದೆ. ಇದಾದಲ್ಲಿ ದೇಶದಲ್ಲೇ ಮೂರು ಹುಲಿಸಂರಕ್ಷಿತ ಪ್ರದೇಶಗಳನ್ನು ಹೊಂದಿದ   ಏಕೈಕ ಜಿಲ್ಲೆ ಚಾಮರಾಜನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ .

2018 ರ ಹುಲಿ ಗಣತಿ ವಿಶ್ವದಲ್ಲಿ 3900 ಹುಲಿಗಳಿರುವುದನ್ನು ಖಾತರಿಪಡಿಸಿದೆ. ಅದರಲ್ಲಿ ಶೇಕಡ 70 ರಷ್ಟು ಹುಲಿಗಳು ಅಂದರೆ   2967 ಹುಲಿಗಳು ಭಾರತದಲ್ಲಿವೆ . ಈ ಪೈಕಿ  ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 524 ಹುಲಿಗಳೊಂದಿಗೆ 2ನೇ ಹಾಗೂ 442 ಹುಲಿಗಳಿರುವ ಉತ್ತರಾಖಂಡ್ 3ನೇ ಸ್ಥಾನದಲ್ಲಿದೆ ಎಂದು ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಏಡುಕೊಂಡಲು ನ್ಯೂಸ್ 18 ಗೆ ತಿಳಿಸಿದರು

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2018ರ ಹುಲಿ ಗಣತಿ ಪ್ರಕಾರ 127 ಹುಲಿಗಳಿವೆ. 1020 ಚ.ಕಿ.ಮೀ ವಿಸ್ತಾರದ ಮೂಲ ಅರಣ್ಯ ಪ್ರದೇಶದಲ್ಲಿ 380 ಕ್ಯಾಮರಾಗಳಲ್ಲಿ 3 ಹಂತಗಳಲ್ಲಿ ಬಳಸಿ ಗಣತಿ ಮಾಡಲಾಗಿತ್ತು. ಅದರ ಪ್ರಕಾರ ಬಂಡೀಪುರದಲ್ಲಿ 126 ಕ್ಕೂ ಹೆಚ್ಚು ಹುಲಿಗಳಿವೆ. ಮರಿಗಳು ಇದ್ದು ಇದರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ  ಅರಣ್ಯಾಧಿಕಾರಿಗಳು

ಇದನ್ನು ಓದಿ: ಸಿಎಂಗೆ ಮುನ್ನ ಹೈ ಕಮಾಂಡ್​ ಭೇಟಿಗೆ ಮುಂದಾದ ಸಚಿವಾಕಾಂಕ್ಷಿಗಳು; ನಾಳೆ ದೆಹಲಿಯಲ್ಲಿ ರಾಜ್ಯ ಸಂಸದರೊಂದಿಗೆ ಮುಖ್ಯಮಂತ್ರಿ ಸಭೆ

ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ 572 ಚದರ ಕಿ.ಮೀ ವಿಸ್ತಾರವಿದೆ. 6 ವಲಯ, 2 ಉಪವಿಭಾಗಗಳಿವೆ. ಗಣತಿಯಲ್ಲಿ 55 ಕ್ಕು ಹೆಚ್ಚು ಹುಲಿಗಳು ಪತ್ತೆಯಾಗಿದೆ. 1200 ಪಾಯಿಂಟ್ ಗುರುತಿಸಿ ಕ್ಯಾಮರಾ ಟ್ಯಾಪ್ ಮೂಲಕ ಗಣತಿ ಮಾಡಲಾಗಿತ್ತು.  ಇನ್ನು ಮಲೆ ಮಹದೇಶ್ವರ ಬೆಟ್ಟ ರಾಜ್ಯದ ನೂತನ ಹುಲಿ ಸಂರಕ್ಷಿತ ಪ್ರದೇಶ ಎನಿಸುವತ್ತ ದಾಪುಗಾಲು ಇಟ್ಟಿದೆ.  920 ಚದರ  ಅರಣ್ಯ ಪ್ರದೇಶವಿದೆ. 7 ರೇಂಜ್, 3 ಉಪವಿಭಾಗಗಳಲ್ಲಿ  30 ಕ್ಕೂ ಹೆಚ್ಚು ಹುಲಿಗಳಿರಬಹುದೆಂದು ಅಂದಾಜಿಸಲಾಗಿದೆ. ನಾಗರಾಹೊಳೆಗಿಂತ ಶೇ. 20 ರಷ್ಟು ಹೆಚ್ಚಿನ ಕಾಡು ಇಲ್ಲಿದೆ

ಮೈಸೂರು, ಕೊಡಗು ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 127  ಹುಲಿಗಳಿವೆ 200 ಚ.ಕಿ.ಮೀ ಬಫರ್ ಝೋನ್ ನೊಂದಿಗೆ  834 ಚ.ಕಿ.ಮೀ ವಿಸ್ತಾರದ ಅಭಯಾರಣ್ಯವನ್ನ ನಾಗರ ಹೊಳೆ ಹೊಂದಿದೆ.

ಒಟ್ಟಾರೆ ಹಳೇ ಮೈಸೂರು ಪ್ರಾಂತ್ಯ ಹುಲಿಗಳನ್ನು ಸಂರಕ್ಷಣೆ ಮಾಡುವುದರಲ್ಲಿ ಎಲ್ಲ ರಾಜ್ಯಗಳಿಗೆ ಮಾದರಿಯಾಗಿದೆ. ಇಲ್ಲಿನ ವಾತಾವರಣ ಹುಲಿಗಳಿಗಷ್ಟೇ ಅಲ್ಲ ಎಲ್ಲಾ ಪ್ರಾಣಿಗಳಿಗೆ ಹೇಳಿ ಮಾಡಿಸಿದ ಅರಣ್ಯ ಪ್ರದೇಶವಾಗಿದೆ.

(ಎಸ್.ಎಂ.ನಂದೀಶ್, ಚಾಮರಾಜನಗರ)
Published by:Seema R
First published: