ಬಿಜೆಪಿಯಲ್ಲಿ ಭಿನ್ನಮತದ ಪ್ರವಾಹ; ಬಿ.ಎಸ್​. ಯಡಿಯೂರಪ್ಪ ಆಪ್ತರಲ್ಲೇ ಭುಗಿಲೆದ್ದ ಬೆಂಕಿ; ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟ್!

ಬಿಜೆಪಿ ಸರ್ಕಾರದ ಪಾಲಿಗೆ ಆರಂಭದ ದಿನದಲ್ಲೇ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರುವ ಈ ಭಿನ್ನಮತದ ಹೊಗೆ, ನಂತರದ ದಿನದಲ್ಲಿ ಮತ್ತಷ್ಟು ಉದ್ವಿಗ್ನತೆ ಪಡೆದುಕೊಂಡರೂ ಅಚ್ಚರಿ ಇಲ್ಲ. ಇದು ಸಾಧ್ಯವಾದರೆ ಬಿ.ಎಸ್. ಯಡಿಯೂರಪ್ಪ ಪೂರ್ಣಾವಧಿ ಮುಗಿಸದೆ ಮತ್ತೆ ಅಧಿಕಾರದಿಂದ ಇಳಿಯುವುದು ಖಚಿತ ಎಂಬ ಮಾತುಗಳ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.

MAshok Kumar | news18-kannada
Updated:August 28, 2019, 10:32 AM IST
ಬಿಜೆಪಿಯಲ್ಲಿ ಭಿನ್ನಮತದ ಪ್ರವಾಹ; ಬಿ.ಎಸ್​. ಯಡಿಯೂರಪ್ಪ ಆಪ್ತರಲ್ಲೇ ಭುಗಿಲೆದ್ದ ಬೆಂಕಿ; ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟ್!
ಸಿಎಂ ಬಿ.ಎಸ್.​ ಯಡಿಯೂರಪ್ಪ
  • Share this:
ಪಕ್ಷಗಳೊಳಗಿನ ಆಂತರಿಕ ಅಸಮಾಧಾನ, ಭಿನ್ನಮತಕ್ಕೂ ರಾಜ್ಯ ರಾಜಕಾರಣಕ್ಕೂ ಎಲ್ಲಿಲ್ಲದ ನಂಟಿದೆ. 2018ರ ವಿಧಾನಸಭಾ ಚುನಾವಣೆಯ ನಂತರ ಒಲ್ಲದ ಮನಸ್ಸಿನಿಂದಲೇ ಮೈತ್ರಿ ಸಾಧಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಭಿನ್ನಮತದ ನಡುವೆಯೇ 14 ತಿಂಗಳ ಆಡಳಿತ ನಡೆಸಿತ್ತು. ಕೊನೆಗೆ ಸರ್ಕಾರದ ಪತನಕ್ಕೂ ಈ ಭಿನ್ನಮತವೇ ಕಾರಣವಾಗಿತ್ತು ಎಂಬುದು ಇತಿಹಾಸ.

ಆದರೆ, ಬಿಜೆಪಿ ಪಕ್ಷ ಹಾಗಲ್ಲ. ನಮ್ಮದು ಶಿಸ್ತಿನ ಪಕ್ಷ. ಇಲ್ಲಿ ಅಸಮಾಧಾನಕ್ಕೆ ಆಸ್ಪದವೇ ಇಲ್ಲ. ಪಕ್ಷದ್ರೋಹಕ್ಕೆ ಇಲ್ಲಿ ಜಾಗವೇ ಇಲ್ಲ ಎನ್ನುತ್ತಿದ್ದ. ಎಲ್ಲದಕ್ಕೂ ಪಕ್ಷ ಮೊದಲು.. ಪಕ್ಷ ಮೊದಲು! ಎಂದು ಕೂಗು ಹಾಕುತ್ತಿದ್ದ ಬಿಜೆಪಿಯೂ ಇದೀಗ ಭಿನ್ನಮತದ ಪ್ರವಾಹಕ್ಕೆ ಸಾಕ್ಷಿಯಾಗುತ್ತಿದೆ. ಪ್ರಸ್ತುತ ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಕುರಿತು ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತದ ಕಾವನ್ನು ಒಮ್ಮೆ ಅವಲೋಕಿಸಿದರೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೂ ತನಗೂ ಹೆಚ್ಚೇನೂ ವ್ಯತ್ಯಾಸ ಇಲ್ಲ ಎಂಬುದನ್ನು ಸಾಬೀತುಪಡಿಸಲು ಬಿಜೆಪಿ ಹೆಣಗಾಡುತ್ತಿರುವುದು ಗೋಚರಿಸುತ್ತದೆ.

ಅಸಲಿಗೆ ಭಿನ್ನಮತ, ಪಕ್ಷದೊಳಗಿನ ಬೇಗುದಿ ಎಂಬುದು ಬಿಜೆಪಿ ಪಾಲಿಗೆ ಹೊಸತೇನಲ್ಲ. 2008 ರಿಂದ 2013 ನಡುವಿನ 5 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಆಡಳಿತ ನಡೆಸಿದ ವಿಧಾನವನ್ನು ಬಲ್ಲವರಿಗೆ ಈ ಕುರಿತು ಹೆಚ್ಚೇನೂ ಪೀಠಿಕೆಯ ಅಗತ್ಯವೂ ಇಲ್ಲ. ರಾಜ್ಯ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರೀಯ ಪಕ್ಷವೊಂದು ಭಿನ್ನಮತ, ಒಳಬೇಗುದಿಯೊಂದಿಗೆ ಒಂದೇ ಅವಧಿಗೆ 3 ಮುಖ್ಯಮಂತ್ರಿ ಹಾಗೂ 2 ಉಪ ಮುಖ್ಯಮಂತ್ರಿಯನ್ನು ಕಾಣಬೇಕಾಯಿತು. ಅಲ್ಲದೆ, ಭ್ರಷ್ಟಾಚಾರದ ಆರೋಪ ಹೊತ್ತು ಸ್ವತಃ ಮುಖ್ಯಮಂತ್ರಿಯೇ ಜೈಲು ಪಾಲಾದ ಅಪಖ್ಯಾತಿಗೂ ಅಂದಿನ ಬಿಜೆಪಿ ಸರ್ಕಾರ ಒಳಗಾಗಿತ್ತು.

ಅಂದಿನ ಬಿಜೆಪಿ ಸರ್ಕಾರದ ಈ ಎಲ್ಲಾ ಆವಾಂತರಗಳಿಗೆ ಪಕ್ಷದೊಳಗಿನ ಭಿನ್ನಮತವೇ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ, ದಶಕದ ನಂತರ ಬಿಜೆಪಿಯಲ್ಲಿ ಮತ್ತೆ ಅಂತಹದ್ದೇ ವಾತಾವರಣ ಕಾಣುತ್ತಿದೆ. ಪಕ್ಷದೊಳಗೆ ಸಣ್ಣದಾಗಿ ಸ್ಫೋಟಗೊಂಡ ಭಿನ್ನಮತ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಪಕ್ಷದ ಪ್ರಾಮಾಣಿಕ ಶಾಸಕರು ಎನಿಸಿಕೊಂಡವರು ಸಹ ಖಾತೆ ಹಂಚಿಕೆಯ ನಂತರ ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಉಳಿದ ಮೂರೂವರೆ ವರ್ಷವೂ ಸಹ ಸಿಎಂ ಯಡಿಯೂರಪ್ಪ ನೆಮ್ಮದಿಯಾಗಿ ಆಡಳಿತ ನಡೆಸುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ.

2008 ರಿಂದ 2013ರ ಅವಧಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ಕಂಡು ಬಂದ ಅದೇ ಪರಿಸ್ಥಿತಿ ಇಂದು ಮತ್ತೆ ಕಂಡು ಬರುತ್ತಿದೆ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಭುಗಿಲೆದ್ದಿದ್ದ ಭಿನ್ನಮತ ಇಂದು ನಿರೀಕ್ಷೆಗೂ ಮೀರಿ ಬೆಳೆದು ನಿಂತಿದೆ . ಅಸಲಿಗೆ ಈ ಭಿನ್ನಮತ ಎಲ್ಲಿಂದ ಆರಂಭವಾಯಿತು? ಇದು ಉಲ್ಭಣವಾಗಲು ಕಾರಣವೇನು ಮತ್ತು ಯಾರು? ಈ ಭಿನ್ನಮತ ಭವಿಷ್ಯದಲ್ಲಿ ಯಾವ ಹಂತ ತಲುಪಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಯಡಿಯೂರಪ್ಪನವರಿಗೆ ಟಾಂಗ್ ನೀಡಲು 'ರಾಯಣ್ಣ ಬ್ರಿಗೇಡ್' ಸ್ಥಾಪಿಸಿ ಆ ಮೂಲಕ ಭಿನ್ನಮತಕ್ಕೆ ನಾಂದಿ ಹಾಡಿದ್ದೆ ಈಶ್ವರಪ್ಪ:

ಬಿಜೆಪಿ ಪಾಳಯದಲ್ಲಿ ಬಿ.ಎಸ್. ಯಡಿಯೂರಪ್ಪ ಸಾಲಿನಲ್ಲಿ ಕಾಣಿಸಿಕೊಳ್ಳುವ ಮೊದಲ ಹಂತದ ನಾಯಕರ ಪೈಕಿ ಕೆ.ಎಸ್. ಈಶ್ವರಪ್ಪನವರ ಹೆಸರು ಅಗ್ರಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರೂ ಒಟ್ಟಾಗಿ ಪಕ್ಷ ಸಂಘಟಿಸಿ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಹಿರಿಯ ನಾಯಕರು ಎಂಬುದಲ್ಲಿ ಎರಡು ಮಾತಿಲ್ಲ. ಆದರೆ, ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಎಂಬ ಪಕ್ಷವನ್ನು ಸ್ಥಾಪಿಸಿ 2013ರ ಚುನಾವಣಾ ಕಣಕ್ಕೆ ಧುಮುಕಿದಾಗ ಶಿವಮೊಗ್ಗದಲ್ಲಿ ಸ್ವತಃ ಈಶ್ವರಪ್ಪನವರ ಸೋಲಿಗೆ ಕಾರಣರಾಗಿದ್ದರು.ಆಗಿನಿಂದಲೂ ಈ ಇಬ್ಬರೂ ನಾಯಕರ ನಡುವೆ ಸಂಬಂಧ ಸರಿಯಿರಲಿಲ್ಲ ಎಂಬುದು ಬಹಿರಂಗ ಸತ್ಯ. ಈ ನಡುವೆ ಯಡಿಯೂರಪ್ಪ ಮತ್ತೆ ಬಿಜೆಪಿ ಪಕ್ಷಕ್ಕೆ ಬಂದದ್ದು ಈಶ್ವರಪ್ಪನವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಪಕ್ಷದಲ್ಲಿ ಯಡಿಯೂರಪ್ಪನವರ ಹಿಡಿತವನ್ನು ಸಡಿಲಗೊಳಿಸುವ ಸಲುವಾಗಿಯೇ ಈಶ್ವರಪ್ಪ ಹಿಂದುಳಿದ ವರ್ಗದ ಜನರನ್ನು ಧೃವೀಕರಿಸುವ ಸಲುವಾಗಿ ಅಹಿಂದ ಶೈಲಿಯಲ್ಲಿ “ರಾಯಣ್ಣ ಬ್ರಿಗೇಡ್” ಗೆ ಚಾಲನೆ ನೀಡಿದ್ದರು. ಅಸಲಿಗೆ ಬಿಜೆಪಿಯಲ್ಲಿ ಮೊದಲ ಬಾರಿಗೆ ಭಿನ್ನಮತವೊಂದು ಈ ಮಟ್ಟಕ್ಕೆ ಸ್ಫೋಟಗೊಂಡು ಕೊನೆಗೆ ಹೈಕಮಾಂಡ್ ನೇರಾ ನೇರಾ ತಲೆಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇದೇ ಪ್ರಕರಣದಲ್ಲಿ.

ಯಡಿಯೂರಪ್ಪನವರ ಕೋರಿಕೆಯಂತೆ ಕೊನೆಗೂ ಈಶ್ವರಪ್ಪ ರಾಯಣ್ಣ ಬ್ರಿಗೇಡ್​ ಕೈಬಿಡುವಂತೆ ಮಾಡುವಲ್ಲಿ ಬಿಜೆಪಿ ಹೈಕಮಾಂಡ್​ ಯಶಸ್ವಿಯಾಗಿದ್ದರೂ, ಬಿಜೆಪಿ ಪಾಲಿಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಎಂಬ ನಾಯಕರು ಪರಸ್ಪರ ವಿರೋಧ ಧಿಕ್ಕಿಗೆ ಸರಿದಿದ್ದರು.

ಯಡಿಯೂರಪ್ಪನಿಗೆ ಟಾಂಗ್ ಕೊಟ್ಟ ಬಿಎಲ್ ಸಂತೋಷ್ ಎಂಬ ಸೂಪರ್ ಹೀರೋ :

ಅಸಲಿಗೆ ಇಂದಿಗೂ ರಾಜ್ಯ ಬಿಜೆಪಿ ಪಾಳಯದ ಪ್ರಶ್ನಾತೀತ ನಾಯಕ ಎಂದರೆ ಬಿ.ಎಸ್. ಯಡಿಯೂರಪ್ಪ ಎಂಬುದರಲ್ಲಿ ಎರಡು ಮಾತಿಲ್ಲ. ವಯಸ್ಸು 75 ದಾಟಿದರೂ ಬಿಜೆಪಿ ಪಾಲಿಗೆ ನೆಚ್ಚಿನ ಸಿಎಂ ಅಭ್ಯರ್ಥಿ ಅವರು. ಆದರೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ಏಳಿಗೆ ಸ್ವತಃ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ನರೇಂದ್ರ ಮೋದಿಗೆ ಇಷ್ಟ ಇಲ್ಲ ಎಂಬ ಮಾತು ಬಿಜೆಪಿ ಮೂಲಗಳಿಂದಲೇ ಕೇಳಿ ಬರುತ್ತದೆ. ಇದೇ ಕಾರಣಕ್ಕೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟವರು ಆರ್​ಎಸ್ಎಸ್ ಹಿನ್ನೆಲೆಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್.

ಕಳೆದ ಒಂದು ವರ್ಷದ ಹಿಂದಿನ ವರೆಗೆ ಜನರಿಗೆ ಅಷ್ಟಾಗಿ ಪರಿಚಯವಿಲ್ಲದ ಬಿ.ಎಲ್. ಸಂತೋಷ್ ಎಂಬ ಹೆಸರು ಕೆಲಕಾಲ ಸಿಎಂ ರೇಸ್​ನಲ್ಲೂ ಕಾಣಿಸಿಕೊಂಡಿತ್ತು. ಇತ್ತ ಆಪರೇಷನ್ ಕಮಲದ ಹೆಸರಿನಲ್ಲಿ ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ಸಚಿವರನ್ನು ಸೆಳೆದು ಸರ್ಕಾರ ಬೀಳಿಸಲು ಮುಂದಾಗಿದ್ದರೆ, ಅತ್ತ ಬಿ.ಎಲ್. ಸಂತೋಷ್ ಸ್ವಂತ ಪಕ್ಷದ 40 ಜನ ಶಾಸಕರನ್ನೇ ಗೋವಾಗೆ ಕರೆದೊಯ್ಯುವ ಮೂಲಕ ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದರು. ಈ ಮೂಲಕ ಬಿಜೆಪಿ ಪಾಳಯದ ಭಿನ್ನಮತ ಮತ್ತೊಂದು ಮಗ್ಗುಲು ಬದಲಿಸಿತ್ತು.

ಅತ್ತ ಕಡೆ ಅತೃಪ್ತರ ಕಾಟ, ಸಂಪುಟ ರಚನೆಯಲ್ಲಾದ ತಿಕ್ಕಾಟ:

ತಮ್ಮ ಮಹತ್ವಾಕಾಂಕ್ಷೆಯಂತೆ ಕೊನೆಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಬಿ.ಎಸ್. ಯಡಿಯೂರಪ್ಪ ಯಶಸ್ವಿಯಾಗಿದ್ದರು. ಜುಲೈ.26 ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ, ಅವರು ಸಿಎಂ ಆಗಿ 25 ದಿನ ಕಳೆದ ನಂತರವೂ ಸಚಿವ ಸಂಪುಟ ರಚನೆ ಮಾಡಲು ಸಾಧ್ಯವಾಗಿರಲಿಲ್ಲ. ಕಾರಣ 17 ಜನ ಅನರ್ಹ ಶಾಸಕರಿಗೂ ಸಚಿನ ಸ್ಥಾನ ನೀಡಬೇಕು ಎಂಬ ಷರತ್ತು.

ಇರುವ 34 ಖಾತೆಗಳ ಪೈಕಿ 17 ಸ್ಥಾನವನ್ನು ಅತೃಪ್ತರಿಗೆ ನೀಡಿದರೆ, ಉಳಿದ 17 ಖಾತೆಯನ್ನು ಮಾತ್ರ ತಮ್ಮ ಪಕ್ಷದ ಶಾಸಕರಿಗೆ ನೀಡಲು ಸಾಧ್ಯ. ಹೀಗಾಗಿ ಯಾರ್ಯಾರಿಗೆ ಸಚಿವ ಸ್ಥಾನ ನೀಡುವುದು ಎಂಬುದೇ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಈ ನಡುವೆ ಅನರ್ಹರು ಸಹ ಮತ್ತೊಂದು ಕಡೆಯಿಂದ ಒತ್ತಡ ಹೇರುತ್ತಿದ್ದರು.

ಪರಿಣಾಮ ಕೊನೆಗೂ 25 ದಿನಗಳ ಬಳಿಕ ಕಳೆದ ಮಂಗಳವಾರ 17 ಜನ ಶಾಸಕರನ್ನು ನೂತನ ಸಚಿವರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಸಚಿವ ಸ್ಥಾನ ವಂಚಿತ ಅನೇಕ ನಾಯಕರು ಪ್ರಮಾಣ ವಚನ ಕಾರ್ಯಕ್ರಮಕ್ಕೂ ಆಗಮಿಸದೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೊಡಿಕೊಂಡಿದ್ದರು. ಬೆಳಗಾವಿಯ ಪ್ರಮುಖ ನಾಯಕ ಉಮೇಶ್ ಕತ್ತಿಯಿಂದ, ಹೊನ್ನಾಳಿಯ ರೇಣುಕಾರ್ಯ ವರೆಗೆ ಅನೇಕ ನಾಯಕರು ಆಗಿಂದಾಗ್ಗೆ ತಮ್ಮ ಅಸಮಾಧಾನವನ್ನು ನಿರಂತರವಾಗಿ ತೋರ್ಪಡಿಸುವ ಮೂಲಕ ಯಾವುದೇ ಸಂದರ್ಭದಲ್ಲಿ ಯಡಿಯೂರಪ್ಪನವರ ಪಾಲಿಗೆ ಮಗ್ಗುಲ ಮುಳ್ಳಾಗುವ ಎಲ್ಲಾ ಸೂಚನೆಯನ್ನೂ ನೀಡುತ್ತಿದ್ದಾರೆ.

ಖಾತೆ ಹಂಚಿಕೆ ಎಂಬ ಹಗ್ಗಜಗ್ಗಾಟ ಹಾಗೂ ರಾಮುಲು, ರವಿ, ಅಶೋಕ್ ಹಠ:

ರಾಜ್ಯ ಸಚಿವ ಸಂಪುಟ ರಚನೆಯಾಗಿ ಸರಿಯಾಗಿ ಒಂದು ವಾರದ ನಂತರ ಸೋಮವಾರ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ, ಖಾತೆ ಹಂಚಿಕೆ ಮಾಡುತ್ತಿದ್ದಂತೆ ಅನೇಕ ಸಚಿವರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ.

ವಾಸ್ತವದಲ್ಲಿ ಶ್ರೀರಾಮುಲು, ಆರ್. ಅಶೋಕ್ ಹಾಗೂ ಈಶ್ವರಪ್ಪ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ, ಇದೀಗ ಈ ಮೂರೂ ಜನಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿರುವ ಹೈಕಮಾಂಡ್ ಪಟ್ಟಿಯಲ್ಲಿ ಇಲ್ಲದ ಹೊಸಬರಿಗೆ ಡಿಸಿಎಂ ಪಟ್ಟ ನೀಡಿದೆ. ಇದರಿಂದ ಆರ್. ಅಶೋಕ್ ಹಾಗೂ ಶ್ರೀರಾಮುಲು ಸಾಕಷ್ಟು ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಶ್ರೀರಾಮುಲು ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಕಿಡಿಕಾರುತ್ತಿದ್ದರೆ, ಮತ್ತೆ ಕೆಲವರು ರಸ್ತೆಗಿಳಿದು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ತಮಗೆ ಪ್ರಾಮುಖ್ಯತೆ ಇಲ್ಲದ ಖಾತೆ ನೀಡಲಾಗಿದೆ ಎಂದು ಟ್ವೀಟರ್ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಈ ನಡುವೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯೂ ಸೋಮವಾರಾದಿಂದಲೇ ರೆಕ್ಕೆ ಬಿಚ್ಚಿಕೊಂಡಿತ್ತು.

ಒಟ್ಟಾರೆ, ಬಿಜೆಪಿ ಸರ್ಕಾರದ ಪಾಲಿಗೆ ಆರಂಭದ ದಿನದಲ್ಲೇ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರುವ ಈ ಭಿನ್ನಮತದ ಹೊಗೆ, ನಂತರದ ದಿನದಲ್ಲಿ ಮತ್ತಷ್ಟು ಉದ್ವಿಗ್ನತೆ ಪಡೆದುಕೊಂಡರೂ ಅಚ್ಚರಿ ಇಲ್ಲ. ಇದು ಸಾಧ್ಯವಾದರೆ ಬಿ.ಎಸ್. ಯಡಿಯೂರಪ್ಪ ಪೂರ್ಣಾವಧಿ ಮುಗಿಸದೆ ಮತ್ತೆ ಅಧಿಕಾರದಿಂದ ಇಳಿಯುವುದು ಖಚಿತ ಎಂಬ ಮಾತುಗಳ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
First published:August 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ