ಹುಬ್ಬಳ್ಳಿ(ಜ. 02): ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ನಡುವೆ ಮುಸುಕಿನ ಗುದ್ದಾಟ ಜೋರಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಎರಡೂ ಬಣಗಳ ನಡುವೆ ತಿಕ್ಕಾಟ ಜೋರಾಗಿದ್ದು, ಜೋಶಿ ಭಾಗಿಯಾದ ಕಾರ್ಯಕ್ರಮದಲ್ಲಿ ಶೆಟ್ಟರ್ ಭಾಗವಹಿಸುತ್ತಿಲ್ಲ. ಇತ್ತ ಶೆಟ್ಟರ್ ಕಾರ್ಯಕ್ರಮದಲ್ಲಿ ಜೋಶಿ ಗೈರು ಹಾಜರಾಗೋದು ಹೆಚ್ಚಾಗಲಾರಂಭಿಸಿದೆ. ಹುಬ್ಬಳ್ಳಿಯಲ್ಲಿ- (Hubballi) ನಡೆದ ಮಹಾದಾಯಿ ಅಭಿನಂದನಾ ರ್ಯಾಲಿಯೂ ಇದಕ್ಕೆ ಮತ್ತೊಂದು ಇಂಬು ಕೊಟ್ಟಿದೆ.
ಮಹಾದಾಯಿ ಯೋಜನೆಗೆ ಡಿಪಿಆರ್ ಅನುಮತಿ ಸಿಕ್ಕಿರೋ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಜೆಪಿಯಿಂದ ಅಭಿನಂದನಾ ರಾಲಿ ನಡೆಯಿತು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಡಿಪಿಆರ್ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರೋದಕ್ಕೆ ಹುಬ್ಬಳ್ಳಿಯ ನೆಹರೂ ಮೈದಾನ ಬಳಿಯಿಂದ ಅಭಿನಂದನಾ ರ್ಯಾಲಿ ನಡೆಯಿತು.
Mahadayi Controversy: ಮಹದಾಯಿ ವಿಚಾರದಲ್ಲಿ ಬಿಜೆಪಿ ಮಹಾ ಮೋಸ, ಡಿಪಿಆರ್ ಪತ್ರದ ಬಗ್ಗೆ ಕೈ ನಾಯಕರ ಅನುಮಾನ!
ಮಹದಾಯಿಗಾಗಿ ನಾಳೆ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ. ಕಾಂಗ್ರೆಸ್ ಪ್ರತಿಭಟನಾ ರಾಲಿ ಮಾಡುವ ಒಂದು ದಿನದ ಮುಂಚೆಯೇ ಬಿಜೆಪಿಯಿಂದ ಅಭಿನಂದನಾ ರ್ಯಾಲಿ ನಡೆಯಿತು. ನೆಹರು ಮೈದಾನದಲ್ಲಿ 50 ಸಾವಿರಕ್ಕೂ ಹೆಚ್ಚು ಜನರನ್ನ ಸೇರಿಸಿ ಪ್ರತಿಭಟನಾ ರ್ಯಾಲಿ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಇದೇ ಮೈದಾನ ಬಳಿಯಿಂದ ಬಿಜೆಪಿ ಅಭಿನಂದನಾ ರ್ಯಾಲಿ ಚೆನ್ನಮ್ಮ ವೃತ್ತದ ವರೆಗೂ ತೆರೆದ ವಾಹನದಲ್ಲಿ ನಡೆಯಿತು.
ರ್ಯಾಲಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಅಮಿತ್ ಷಾ, ಪ್ರಹ್ಲಾದ ಜೋಶಿ ಪರ ಘೋಷಣೆ ಹಾಕಿದರು. ಅಭಿನಂದನಾ ರಾಲಿಯಲ್ಲಿ ಶಾಸಕ ಅರವಿಂದ ಬೆಲ್ಲದ್ ಮತ್ತಿತರರು ಉಪಸ್ಥಿತರಿದ್ದರು. ಆದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ ಮುನೇನಕೊಪ್ಪ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಘಟಾನುಘಟಿ ಮುಖಂಡರ ಗೈರು ಹಾಜರಿ ಚರ್ಚೆಗೆ ಗ್ರಾಸವಾಯಿತು.
ಕಾಂಗ್ರೆಸ್ ಪಾರ್ಟಿ ಸುಳ್ಳು ಹೇಳ್ತಿದೆ ಎಂದ ಜೋಶಿ
ಕಾಂಗ್ರೆಸ್ ಪಾರ್ಟಿಯವರು ಸುಳ್ಳು ಹೇಳೋದು, ಮೋಸ ಮಾಡೋದರ ಪೇಟೆಂಟ್ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಪಿಆರ್ ಅನುಮತಿ ಪತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಅಮಿತ್ ಷಾ ಭಾಷಣವನ್ನು ಸಿದ್ದರಾಮಯ್ಯ ಭಯೋತ್ಪಾದನೆಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಪಾರ್ಟಿ ಭಯೋತ್ಪಾದನೆ ಬಗ್ಗೆ ಮಾತಾಡುವುದೇ ಹಾಸ್ಯಾಸ್ಪದ. ಬಾಟ್ಲಾ ಹೌಸ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರು. ಕಾಂಗ್ರೆಸ್ನವರು ಅಫ್ಜಲ್ಗುರು ಬಗ್ಗೆ ಅನುಕಂಪ ಇಟ್ಟುಕೊಂಡಿದ್ದರು, ರಾಹುಲ್ ಗಾಂಧಿ ತುಕ್ಡೆ ಗ್ಯಾಂಗ್ ಪಕ್ಕ ನಿಂತಿದ್ದರು.
ಕಸಬ್ಗೆ ಬಿರ್ಯಾನಿ ಕೊಟ್ಟವರು ಭಯೋತ್ಪಾದನೆ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ. ಈಗಿರುವುದು ನಿಜವಾದ ಕಾಂಗ್ರೆಸ್ ಪಾರ್ಟಿ ಅಲ್ಲ.
ಗಾಂಧಿ ಕುಟುಂಬದವರ ಹೆಸರಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಂಸ್ಥೆಗಳ ನಾಮಕರಣ ಮಾಡಿದ್ದಾರೆ. ಬೋಸ್, ಅಂಬೇಡ್ಕರ್, ಪಟೇಲ್ ಹೆಸರು ಎಷ್ಟು ಸಂಸ್ಥೆಗಳಿಗೆ ಇಟ್ಟಿದ್ದೀರಿ? ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ನಿಧನರಾದಾಗ ಅಂತ್ಯಕ್ರಿಯೆಗೆ ಜಾಗ ಕೊಟ್ಟಿಲ್ಲ. ಕಾಂಗ್ರೆಸ್ ಪಾರ್ಟಿ ಈಗ ಒಂದು ಪರಿವಾರದ ಪಾರ್ಟಿಯಾಗಿದೆ. ಡಿ.ಕೆ. ಶಿವಕುಮಾರ್ ರಾಜಕೀಯಕ್ಕೆ ಬರುವ ಮೊದಲಿನ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಹೇಳಲಿ. ಗಿಮಿಕ್ ಪಾರ್ಟಿ ಕಾಂಗ್ರೆಸ್ ಪಾರ್ಟಿ, ಅನುಷ್ಟಾನ ಮಾಡುವ ಪಾರ್ಟಿ ಬಿಜೆಪಿ ಪಾರ್ಟಿ ಎಂದರು.
CM Basavaraj Bommai: ಮಹದಾಯಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ಅನಗತ್ಯ ವಿವಾದ; ಬೊಮ್ಮಾಯಿ ಕಿಡಿ
ಪಂಚಮಸಾಲಿ ಮೀಸಲಾತಿ ಅಧ್ಯಯನ ಆಗಿ ವರದಿ ಬಂದಿದೆ. ವಿವರಣಾತ್ಮಕವಾಗಿ ಸಿಎಮ್ ಬೊಮ್ಮಾಯಿ ಹೇಳಲಿದ್ದಾರೆ. ಮಹದಾಯಿ ವಿಚಾರದಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ಇಲ್ಲೇ ಆಗುತ್ತೆ. ಕುಡಿಯುವ ನೀರಿನ ವಿಷಯದಲ್ಲಿ ಪರಿಸರ ಇಲಾಖೆ ಅನುಮತಿ ಬೇಕಿಲ್ಲ. ಡಿಪಿಆರ್ಗೆ ಅನುಮತಿ ಸಿಕ್ಕಿದೆ, ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ. ತರಾತುರಿಯಲ್ಲಿ ಡಿಪಿಆರ್ ಪತ್ರ ಟ್ವೀಟ್ ಮಾಡಲಾಗಿತ್ತು. ಹೀಗಾಗಿ ದಿನಾಂಕ ಹಾಕದ ಪತ್ರ ಟ್ವೀಟ್ ಆಗಿತ್ತು, ಅದನ್ನೇ ಕಾಂಗ್ರೆಸ್ ದೊಡ್ಡದು ಮಾಡುತ್ತಿದೆ ಎಂದರು.
ಅಮೂಲ್ - ಕೆ.ಎಂ.ಎಫ್. ವಿಲೀನವಿಲ್ಲ
ಅಮೂಲ್ - ಕೆಎಂಎಫ್ ವಿಲೀನ ವಿಚಾರಕ್ಕೆ ಸಂಬಂಧಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಂದಿನಿ ಮತ್ತು ಅಮೂಲ್ ಒಟ್ಟಿಗೆ ಮಾರ್ಕೆಟಿಂಗ್ ಮಾಡುವ ಬಗ್ಗೆ ಅಮಿತ್ ಷಾ ಹೇಳಿದ್ದಾರೆ. ಎರಡನ್ನೂ ಮರ್ಜ್ ಮಾಡುವ ಬಗ್ಗೆ ಹೇಳಿಲ್ಲಾ. ನಂದಿನಿ ತನ್ನ ಅಸ್ತಿತ್ವವನ್ನು ಸರ್ಕಾರದ ಮಾರ್ಗದರ್ಶನದಲ್ಲಿ ಗಟ್ಟಿಯಾಗಿ ಉಳಿಸಿಕೊಳ್ಳಲಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ