ಉಪಲೋಕಾಯುಕ್ತರ ಬಲ ಹೆಚ್ಚಿಸುವ ತಿದ್ದುಪಡಿ ವಿಧೇಯಕ ಮಂಡನೆ; ಕೆಲಸಕ್ಕೆ ಬಾರದ ಶಾಸನ ಎಂದು ರಮೇಶ್ ಕುಮಾರ್ ಆಕ್ಷೇಪ

ಈಗ ಭ್ರಷ್ಟರು ಧೈರ್ಯವಾಗಿ ಓಡಾಡುವಂತೆ ನಾವು ಓಡಾಡಲು ಆಗುತ್ತಿಲ್ಲ. ಒಂದು ಕಾಲಕ್ಕೆ ಭ್ರಷ್ಟ ಅಧಿಕಾರಿಗಳು ಬಚ್ಚಿಟ್ಟುಕೊಳ್ಳುತ್ತಿದ್ದರು. ಈಗ ಪ್ರಾಮಾಣಿಕರೇ ಬಚ್ಚಿಟ್ಟುಕೊಳ್ಳುವಂತಾಗಿದೆ ಎಂದು ರಮೇಶ್ ಕುಮಾರ್ ಮರುಗಿದರು.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು(ಮಾ. 17): ರಾಜ್ಯ ಸರ್ಕಾರ ಇವತ್ತು ಸದನದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿತು. ಈ ತಿದ್ದುಪಡಿ ವಿಧೇಯಕವು ಉಪಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಇಂದು ಈ ವಿಧೇಯಕ ಮಂಡಿಸಲು ಯತ್ನಿಸಿದರು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸದಸ್ಯರಿಂದ ಈ ವಿಧೇಯಕದ ಮೇಲೆ ಚರ್ಚೆಗಳಾದವು. ಹಲವು ಸ್ವಾರಸ್ಯಕರ ವಿಚಾರಗಳೂ ಈ ಚರ್ಚೆಯಲ್ಲಿ ಹೊರಬಂದವು.

ಉಪಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡುವುದರಿಂದ ಏನು ಉಪಯೋಗ? ಈ ಮುಂಚೆ ರಚಿಸಿದ್ದ ಎಸಿಬಿಯಿಂದ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಇಂಥ ನಿರುಪಯುಕ್ತ ಶಾಸನಗಳನ್ನು ಮಾಡುವುದರಿಂದ ಯಾರಿಗೋ ರಿಹ್ಯಾಬಿಲಿಟೇಶನ್ ಮಾಡಬಹುದು ಅಷ್ಟೇ. ನಿಜವಾಗಿಯೂ ಭ್ರಷ್ಟಾಚಾರ ವಿರುದ್ಧ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದೇ ಆದರೆ ಇಡೀ ದೇಶವೇ ಮೆಚ್ಚುವಂತೆ ಕಾಯ್ದೆ ಜಾರಿಗೆ ತನ್ನಿ ಎಂದು ಉಪದೇಶಿಸಿದರು.

ಇದನ್ನೂ ಓದಿ: ಇನ್ನೂ ಶಮನವಾಗದ ಬಿಜೆಪಿ ಒಳ ಬೇಗುದಿ; ಶಾಸಕರ ಸಂಧಾನಕ್ಕೆ ಮುಂದಾದ ಸಿಎಂ ಬಿ.ಎಸ್. ಯಡಿಯೂರಪ್ಪ

ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದಕ್ಕೆ ರಮೇಶ್ ಕುಮಾರ್ ವ್ಯಕ್ತಪಡಿಸಿದ ಆಕ್ಷೇಪಕ್ಕೆ ಇತರ ವಿಪಕ್ಷ ಸದಸ್ಯರು ಧ್ವನಿಗೂಡಿಸಿದರು. ಲೋಕಾಯುಕ್ತರಿಗೆ ಅಧಿಕಾರ ಕೊಟ್ಟೇ ಏನೂ ಆಗುತ್ತಿಲ್ಲ. ಹಲವು ಕೇಸ್​ಗಳು ಹಾಗೇ ಪೆಂಡಿಗ್ ಇವೆ. ಇನ್ನು, ಲೋಕಾಯುಕ್ತರಿಗೆ ಅಧಿಕಾರ ಕೊಟ್ಟೇನು ಉಪಯೋಗ ಎಂದು ಹೆಚ್.ಡಿ. ರೇವಣ್ಣ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಕೂಡ ಇದೇ ಅಭಿಪ್ರಾಯಪಟ್ಟರು. ಲೋಕಾಯುಕ್ತದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇವೆ. ಕಾಲಮಿತಿಯಲ್ಲಿ ಈ ಪ್ರಕರಣಗಳು ಇತ್ಯರ್ಥ ಆಗುವ ನಿಟ್ಟಿನಲ್ಲಿ ಆಲೋಚನೆ ಮಾಡಿ ಎಂದು ಖಂಡ್ರೆ ಸಲಹೆ ನೀಡಿದರು.

ಲೋಕಾಯುಕ್ತ ಸಿಬ್ಬಂದಿಗೂ ರಾಜಕಾರಣಿಗಳಿಗೂ ಜಟಾಪಟಿ ಯಾಕೆ?

ಈ ಚರ್ಚೆಯ ವೇಳೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಸ್ವಾರಸ್ಯಕರ ಸಂಗತಿ ಬೆಳಕಿಗೆ ತಂದರು. ಗ್ರಾಮೀಣ ಭಾಗದಲ್ಲಿ ಲೋಕಾಯುಕ್ತ ಬಗ್ಗೆ ಜನರಿಗೆ ಇರುವ ತಿರಸ್ಕಾರ ಹಾಗೂ ರಾಜಕಾರಣಿಗಳ ಜೊತೆ ಲೋಕಾಯುಕ್ತ ಸಿಬ್ಬಂದಿ ನಡೆಸುವ ಜಟಾಪಟಿ ಬಗ್ಗೆ ಅವರು ಗಮನ ಸೆಳೆದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ಭೀತಿ; ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಲ್ಲಿ ಇಳಿಕೆ

ಲೋಕಾಯುಕ್ತರಿಗೆ ಪತ್ರ ಬರೆಯುತ್ತೇನೆ ಎಂದು ಯಾರಾದರೂ ಹೆದರಿಸಿದರೆ, ಬರ್ಕೋ ಹೋಗು ಎಂದು ಹಳ್ಳಿ ಜನರು ಹೇಳುವ ಮಟ್ಟಿಗೆ ಲೋಕಾಯುಕ್ತದ ಪರಿಸ್ಥಿತಿ ಬಂದಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ಬಿಟ್ಟರೆ ಉಳಿದೆಲ್ಲಾ ಸಿಬ್ಬಂದಿವರ್ಗದವರು ಸರ್ಕಾರದ ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ಧಾರೆ. ಅವರು ಇಲ್ಲಿದ್ಧಾಗ ನಮ್ಮ ಜೊತೆ ಜಟಾಪಟಿ ಮಾಡಿಕೊಂಡಿರುತ್ತಾರೆ. ಅವರೇ ಲೋಕಾಯುಕ್ತ ಇಲಾಖೆಗೆ ಹೋದಾಕ್ಷಣ ನಮ್ಮ ಮೇಲೆ ಸೇಡಿಗೆ ಬೀಳುತ್ತಾರೆ ಎಂದು ಶಿವಲಿಂಗೇ ಗೌಡ ವಿವರ ನೀಡಿದರು.

ಇನ್ನು, ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಮತ್ತೊಮ್ಮೆ ಎದ್ದುನಿಂತು ಮಾತನಾಡುತ್ತಾ, ಪ್ರಾಮಾಣಿಕರು ಧೈರ್ಯದಿಂದ ಬದುಕಲಾಗುತ್ತಿಲ್ಲ ಎಂದು ವ್ಯಥೆ ಪಟ್ಟರು.

ಈಗ ಭ್ರಷ್ಟರು ಧೈರ್ಯವಾಗಿ ಓಡಾಡುವಂತೆ ನಾವು ಓಡಾಡಲು ಆಗುತ್ತಿಲ್ಲ. ಒಂದು ಕಾಲಕ್ಕೆ ಭ್ರಷ್ಟ ಅಧಿಕಾರಿಗಳು ಬಚ್ಚಿಟ್ಟುಕೊಳ್ಳುತ್ತಿದ್ದರು. ಈಗ ಪ್ರಾಮಾಣಿಕರೇ ಬಚ್ಚಿಟ್ಟುಕೊಳ್ಳುವಂತಾಗಿದೆ ಎಂದು ರಮೇಶ್ ಕುಮಾರ್ ಮರುಗಿದರು.

First published: