ಖ್ವಾಜಾ ಬಂದೇನವಾಜ್ ಉರುಸ್​ನಲ್ಲಿ ಬುದ್ಧಿವಂತ ಕತ್ತೆ: ಕಳ್ಳ- ಸುಳ್ಳರನ್ನು, ಅಮ್ರಾವ್ರ ಗಂಡನ್ನು ಪತ್ತೆ ಹಚ್ಚುತ್ತೆ ಪನ್ನಾಲಾಲ್


Updated:August 6, 2018, 9:34 PM IST
ಖ್ವಾಜಾ ಬಂದೇನವಾಜ್ ಉರುಸ್​ನಲ್ಲಿ ಬುದ್ಧಿವಂತ ಕತ್ತೆ: ಕಳ್ಳ- ಸುಳ್ಳರನ್ನು, ಅಮ್ರಾವ್ರ ಗಂಡನ್ನು ಪತ್ತೆ ಹಚ್ಚುತ್ತೆ ಪನ್ನಾಲಾಲ್

Updated: August 6, 2018, 9:34 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ(ಆ.06): ಯಾರು ಗಯ್ಯಾಳಿ, ಯಾರು ಜಗಳಗಂಟರು, ಯಾರು ಅಮ್ಮಾವ್ರ ಗಂಡ, ಯಾರು ಹಾಸಿಗೆಯಲ್ಲಿ ಸುಸ್ಸೂ ಮಾಡಿಕೊಳ್ಳುತ್ತಾರೆ, ಯಾರು ಲೈನ್ ಹೊಡೆಯಲು ಬಂದಿದ್ದಾರೆ, ಯಾರು ಕಾಲೇಜಿಗೆ ಚಕ್ಕರ್ ಹೊಡೆದಿದ್ದಾರೆ ಹೀಗೆ ಪ್ರಶ್ನೆಗಳು ಒಂದೊಂದಾಗಿ ಬರುತ್ತಿದ್ದಂತೆಯೇ ಈತ ಅವರನ್ನು ಪತ್ತೆಹಚ್ಚಿಯೇ ಬಿಡುತ್ತಾನೆ. ಮೊಬೈಲ್ ಕದ್ದವರನ್ನು, ವಾಚ್ ಬಚ್ಚಿಟ್ಟುಕೊಂಡವರನ್ನೂ ಹಿಡಿದು ಬಿಡುತ್ತಾನೆ. ಈತನ ಕೈಗೆ ಸಿಕ್ಕಿಹಾಕಿಕೊಂಡವರು ಓಡಿ ಹೋಗುವುದಿಲ್ಲ. ಮುಖ ಕಿವುಚಿಕೊಂಡು ದುರುಗುಟ್ಟಿಯೂ ನೋಡುವುದಿಲ್ಲ. ಬದಲಿಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕು ಸುಮ್ಮನಾಗುತ್ತಾರೆ. ಇಂತಹ ಪತ್ತೆದಾರಿಕೆ ಕೆಲಸ ಮಾಡುತ್ತಿರುವಾತ ಅಲ್ಲಲ್ಲ ಮಾಡುತ್ತಿರುವ ಪ್ರಾಣಿ ಪನ್ನಾಲಾಲ್ ಎಂಬ ಕತ್ತೆ. ಖ್ವಾಜಾ ಬಂದೇನವಾಜ್ ಉರುಸ್ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿರುವ ಪನ್ನಾಲಾಲ್ ತನ್ನ ಪತ್ತೆದಾರಿಕೆ, ಬುದ್ಧಿವಂತಿಕೆಯ ಮೂಲಕ ಫನ್ನೀಲಾಲ್ ಎನಿಸಿಕೊಂಡಿದ್ದಾನೆ. ಉರುಸ್ ಗೆ ಬಂದ ಭಕ್ತರನ್ನು ಪನ್ನಾಲಾಲ್ ಪತ್ತೆದಾರಿಕೆ ವಿಶೇಷವಾಗಿ ಆಕರ್ಷಿಸುತ್ತಿದೆ.

ಸಾಮಾನ್ಯವಾಗಿ ಕತ್ತೆ ಎಂದ ಕೂಡಲೇ ದಡ್ಡ ಪ್ರಾಣಿ ಎಂದು ನಾವು ನಂಬಿದ್ದೇವೆ. ಯಾರಾದರೂ ದಡ್ಡತನ ಪ್ರದರ್ಶನ ಮಾಡಿದಾಗ ಏ ಕತ್ತೆ ಅಷ್ಟೂ ಗೊತ್ತಾಗುವುದಿಲ್ಲವೆ ಎಂದು ಬೈಯುತ್ತೇವೆ. ಕತ್ತೆ ಒಂದು ದಡ್ಡ ಪ್ರಾಣಿ, ಆದರೆ ಶ್ರಮಜೀವಿ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ನೀವು ಖ್ವಾಜಾ ಬಂದೇನವಾಜ್ ಉರುಸ್‌ಗೆ ಬಂದರೆ ಕತ್ತೆ ದಡ್ಡ ಪ್ರಾಣಿಯಲ್ಲ. ಅದಕ್ಕೂ ಭಯಂಕರ ಬುದ್ಧಿಯಿದೆ ಎಂದು ಒಪ್ಪಿಕೊಳ್ಳುತ್ತೀರಿ. ಅದಕ್ಕೆ ಮುಖ್ಯ ಕಾರಣ ದರ್ಗಾದ ಆವರಣಕ್ಕೆ ಆಗಮಿಸಿರುವ ಪನ್ನಾಲಾಲ್ ಕತ್ತೆ. ಕತ್ತೆಯ ಮಾಲಕ ಏನೇನು ಪ್ರಶ್ನೆ ಕೇಳುತ್ತಾನೋ ಅದಕ್ಕೆ ಪಟ ಪಟನೆ ಉತ್ತರಿಸುವ ರೀತಿಯಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ಬಳಿ ಅದು ಹೋಗಿ ನಿಲ್ಲುತ್ತದೆ.ಇಲ್ಲಿಗೆ ಬಂದವರ ಪೈಕಿ ಅಮ್ಮಾವ್ರ ಗಂಡ ಯಾರು, ಗಯ್ಯಾಳಿ ಹೆಂಡತಿ ಯಾರು, ಹಾಸಿಗೆಯಲ್ಲಿಯೇ ಸುಸ್ಸೂ ಮಾಡಿಕೊಳ್ಳುವ ಹುಡುಗ ಯಾರು, ಕಾಡಿಗೆ ಹಚ್ಚಿಕೊಂಡು ಬಂದವರಾರು, ಹೆಂಡತಿಗೆ ಮಸ್ಕಾ ಹೊಡೆಯುವ ಗಂಡನಾರು, ಯಾರಿಗೆ ಸುಂದರ ಹೆಂಡತಿ ಸಿಗುತ್ತಾಳೆ, ಯಾರು ಲೈನ್ ಹೊಡೆಯಲು ಬಂದಿದ್ದಾರೆ, ಟೋಪಿ ಹಾಕಿಸಿಕೊಂಡವರು, ಟೋಪಿ ಹಾಕುವವರು ಯಾರು, ಈ ವರ್ಷ ಯಾರ ಭವಿಷ್ಯ ಉಜ್ವಲವಾಗಿರಲಿದೆ ಹೀಗೆ ಪ್ರಶ್ನೆ ಕೇಳಿದಂತೆಲ್ಲಾ ಅದು ಬಂದ ಪ್ರೇಕ್ಷಕರ ಬಳಿ ನಿಂತು ತಲೆಯಲ್ಲಾಡಿಸುತ್ತದೆ. ಹಾಗೆ ನಿಂತ ನಂತರ ಅದರ ಮಾಲೀಕ ಬಂದ ಪ್ರೇಕ್ಷಕರಿಗೆ ಕ್ರಾಸ್ ಚೆಕ್ ಮಾಡಿಕೊಂಡು ಸತ್ಯ ಎಂದುದಾಗಿ ಖಾತ್ರಿ ಮಾಡಿಕೊಳ್ಳುತ್ತಾರೆ. ಕತ್ತೆ ಬಂದು ತಮ್ಮ ಬಳಿ ನಿಲ್ಲುತ್ತಿದ್ದಂತೆಯೇ ಮರ್ಯಾದೆ ಹೋಯಿತೆಂದು ಯಾರೂ ಅಂದುಕೊಳ್ಳುವುದಿಲ್ಲ. ಬದಲಿಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿಯುತ್ತಾರೆ.

ಪ್ರತಿ ವರ್ಷವೂ ಖ್ವಾಜಾ ಬಂದೇನವಾಜ್ ಉರುಸ್‌ಗೆ ಪನ್ನಾಲಾಲ್ ಕತ್ತೆ ತಪ್ಪದೇ ಬರುವ ಅತಿಥಿ. ತನ್ನ ಹಾವಭಾವ, ಬುದ್ಧಿವಂತಿಕೆ ಪ್ರದರ್ಶನ ಮಾಡಿ ತಮ್ಮ ಮಾಲೀಕನಿಗೆ ನಿತ್ಯ ಸಾವಿರಾರು ರೂಪಾಯಿ ಲಾಭ ತಂದುಕೊಡುತ್ತದೆ. ಕೇವಲ ವ್ಯಕ್ತಿಗಳ ಬಗ್ಗೆಯೊಂದೇ ಅಲ್ಲದೆ ವಸ್ತುಗಳ ಬಗ್ಗೆಯೂ ಹೇಳಿದಾಗ ಆ ವಸ್ತು ಯಾರ ಜೇಬಿನಲ್ಲಿರುತ್ತದೋ ಅಲ್ಲಿಯೇ ಹೋಗಿ ನಿಲ್ಲುವುದು ಪನ್ನಾಲಾಲ್ ವಿಶೇಷ. ಕತ್ತೆಯ ಕಣ್ಣು ಮುಚ್ಚಿ, ಮೊಬೈಲ್, ವಾಚ್ ಮತ್ತಿತರ ವಸ್ತುಗಳನ್ನುಬೇರೆಯವರ ಜೇಬಿನಲ್ಲಿ ಬಚ್ಚಿಟ್ಟರೂ ಅವರ ಬಳಿ ಹೋಗುವ ಮೂಲಕ ಅದನ್ನು ಪತ್ತೆ ಹಚ್ಚುತ್ತದೆ. ಒಂದರ್ಥದಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಕಮಾಲ್ ಮಾಡುತ್ತದೆ. ಉರುಸ್‌ಗೆ ಬಂದವರಿಗೆ ಭರಪೂರ ಮನರಂಜನೆ ನೀಡತ್ತಿರುವ ಪನ್ನಾಲಾಲ್ ಒಂದರ್ಥದಲ್ಲಿ ಫನ್ನೀಲಾಲ್ ಆಗಿ ಮಾರ್ಪಟ್ಟಿದ್ದಾನೆ.


Loading...

ಇನ್ನೂ ಕೆಲವೊಬ್ಬರಂತೂ ಕತ್ತೆಯ ಬುದ್ಧಿವಂತಿಕೆ ಪರೀಕ್ಷೆ ಮಾಡಲೆಂದು ಹಲವಾರು ಬಾರಿ ಬಂದದ್ದುಂಟು. ಆದರೆ ಪನ್ನಾಲಾಲ್ ಕತ್ತೆ ಮಾತ್ರ ಯಾವತ್ತೂ ಯಾಮಾರಿಲ್ಲ. ಯಾರು ಯಾರ ಅವಗುಣಗಳೇನೆಂಬದನ್ನು ತೋರಿಸಿಕೊಡುವುದರಲ್ಲಿ ವ್ಯತ್ಯಾಸವಾಗಿಲ್ಲ. ಮನೆಯಲ್ಲಿ ಅಪ್ಪನ ಜೇಬಿಗೆ ಕೈ ಹಾಕುವವರು, ಗಂಡನ ಕಿಸೆಗೆ ಕೈಹಾಕುವ ಹೆಂಡತಿ ಬಗ್ಗೆ, ಅತಿಯಾಗಿ ಸುಳ್ಳುವ ಹೇಳುವರನ್ನೂ ಈ ಪನ್ನಾಲಾಲ್ ಕತ್ತೆ ಪತ್ತೆ ಹಚ್ಚುತ್ತದೆ. ಹೀಗೆ ಪನ್ನಾಲಾಲ್ ಬುದ್ಧಿವಂತನಾಗಲು ಅದಕ್ಕಿ ಚಿಕ್ಕಂದಿನಿಂದಲೂ ಕೊಟ್ಟ ತರಬೇತಿ ಕಾರಣವಾಗಿದೆ. ಕತ್ತೆ ದಡ್ಡ ಪ್ರಾಣಿ ಇರಬಹುದು. ಆದರೆ ಅದಕ್ಕೆ ಕಾಳಜಿಯಿಂದ ತರಬೇತಿ ನೀಡಿದರೆ, ಎಲ್ಲವನ್ನೂ ಕೇಳಿ ಮಾಡಿ ತೋರಿಸುತ್ತದೆ ಎನ್ನುತ್ತಾರೆ ಪನ್ನಾಲಾಲ್ ಮಾಲೀಕ ಖಳೀಲ್ ಅಹ್ಮದ್ ಖಾನ್.

ಒಟ್ಟಾರೆ ಪನ್ನಾಲಾಲ್ ಬಂದೇನವಾಜ್ ದರ್ಗಾಕ್ಕೆ ಬಂದ ಭಕ್ತರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಒಂದು ತಿಂಗಳ ಕಾಲ ದರ್ಗಾದ ಆವರಣದಲ್ಲಿಯೇ ಬೀಡು ಬಿಡಲಿರುವ ಪನ್ನಾಲಾಲ್ ಬಂದ ಪ್ರೇಕ್ಷಕರಲ್ಲಿನ ದೌರ್ಬಲ್ಯಗಳನ್ನು ಪತ್ತೆ ಹಚ್ಚಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ಇಂತಹ ಫನ್ನೀ ಪನ್ನಾಲಾಲ್ ನನ್ನು ನೋಡಬೇಕೆಂದರೆ ಕೂಡಲೇ ಕಲಬುರ್ಗಿಗೆ ಬನ್ನಿ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...