ಬೆಂಗಳೂರು (ಜು.26): ಬೆಸ್ಕಾಂನ ಬೆಂಗಳೂರು ಮೆಟ್ರೋ ಪಾಲಿಟನ್ (Bangalore Metro Politon) ಪ್ರದೇಶ ವಲಯದಲ್ಲಿನ (BMAZ) ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಅನುಕುಲವಾಗುವ ಡಿಎಲ್ಎಮ್ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು (Digital Measurement) ನೀಡಲಾಗುತ್ತಿದೆ. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವ್ಯಾಪ್ತಿಯಲ್ಲಿರುವ (BMAZ) 17,68,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾವಣೆ ಮಾಡುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಂಡಿದೆ.
ಡಿಜಿಟಲ್ ಮಾಪನ ಅಳವಡಿಕೆ
ರಾಜಾಜಿನಗರ, ರಾಜರಾಜೇಶ್ವರಿನಗರ, ಇಂದಿರಾನಗರ ಮತ್ತು ವೈಟ್ ಫೀಲ್ಡ್ ವಿಭಾಗಗಳಲ್ಲಿ ಈಗಾಗಲೇ 16,000 ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮಾಪನಗಳನ್ನು ಅಳವಡಿಸಲಾಗಿದೆ. ಡಿಜಿಟಲ್ ಮೀಟರ್ ಬದಲಾವಣೆ ಕಾರ್ಯ ಭರದಿಂದ ಸಾಗಿದ್ದು ಪ್ರತಿನಿತ್ಯ 700 ರಿಂದ 900 ಮೀಟರ್ ಗಳನ್ನು ಅಳವಡಿಸಲಾಗುತ್ತಿದೆ. ಬೆಸ್ಕಾಂ ಒಂದು ವಿಭಾಗದಲ್ಲಿ ಮೀಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡ ನಂತರವೇ ಇನ್ನೊಂದು ವಿಭಾಗದಲ್ಲಿ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಇದನ್ನೂ ಓದಿ: Congress Leaders: ಇದು ಬಿಜೆಪಿ ಭ್ರಷ್ಟೋತ್ಸವ, ಈ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ
2024ರ ವೇಳೆಗೆ 17,68,000 ಇಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ಪೂರ್ಣಗೊಳಲ್ಲಿದೆ ಎಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ (ಮಾಪಕ ಮತ್ತು ವಾಣಿಜ್ಯ) ಪಿ.ರಂಗಸ್ವಾಮಿ ತಿಳಿಸಿದ್ದಾರೆ. ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ಬಳಕೆ ಕುರಿತು ಮಾಹಿತಿ ಪಡೆಯಬಹುದಾಗಿದೆ.
ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ
ಈ ಡಿಜಿಟಲ್ ಮೀಟರ್ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ಬೆಸ್ಕಾಂ ಸ್ಪಷ್ಟಪಡಿಸಿದೆ. 10 ವರ್ಷಗಳ ಹಿಂದೆ ಅಳವಡಿಸಿರುವ ಇಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಡಿಜಿಟಲ್ ಮೀಟರ್ ನ ಇನ್ನೊಂದು ಉಪಯೋಗವೇನೆಂದೆರೆ ಗ್ರಾಹಕರು ತಾವು ಎರಡು ವರ್ಷಗಳ ಹಿಂದಿನ ಅವಧಿಯವರೆಗೂ ಬಳಸಿದ ವಿದ್ಯುತ್ ಪ್ರಮಾಣದ ವಿವರಗಳನ್ನು ಬೆಸ್ಕಾಂ ಕಛೇರಿಯಿಂದ ಪಡೆದು ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಿ ತಾವು ಬಳಸಿರುವ ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಎಂದು ತಿಳಿಯಬಹುದಾಗಿದೆ.
2 ಖಾಸಗಿ ಕಂಪನಿಗಳಿಗೆ ಗುತ್ತಿಗೆ
ಬೆಂಗಳೂರು ನಗರದಲ್ಲಿ ಡಿಜಿಟಲ್ ಮೀಟರ್ ನ ಅಳವಡಿಕೆ ಪೂರ್ಣಗೊಂಡ ನಂತರ ಬೆಂಗಳೂರು ಗ್ರಾಮಾಂತರ ಪ್ರದೇಶ ಮತ್ತು ಚಿತ್ರದುರ್ಗ-ದಾವಣಗೆರೆ ಪ್ರದೇಶ ವಲಯದಲ್ಲಿ ಡಿಜಿಟಲ್ ಮೀಟರ್ ಗಳ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯವನ್ನು 2 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು ಎಲ್ಲಾ ವಿಭಾಗಳಲ್ಲಿ ಹಂತ ಹಂತವಾಗಿ ಅಳವಡಿಸಲಾಗುವುದು.
ಈ ಯೋಜನೆಯ ಒಟ್ಟು ಮೊತ್ತ *285.16* ಕೋಟಿ ರೂಪಾಯಿಗಳಾಗಿದ್ದು, ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಗೆ *934* ರೂಪಾಯಿ ಮತ್ತು 3 ಫೇಸ್ ಮೀಟರ್ ಗೆ *2312* ರೂಪಾಯಿಗಳಾಗಿದ್ದು ಈ ವೆಚ್ಚವನ್ನು ಬೆಸ್ಕಾಂ ಭರಿಸಲಿದೆ.
ಇದನ್ನೂ ಓದಿ: Siddharamotsava: ಸಿದ್ಧರಾಮೋತ್ಸವ ಪೂರ್ವಭಾವಿ ಸಭೆಗೆ ಕೈ ಶಾಸಕ ಗೈರು! ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಗುಡುಗು
ಡಿಜಿಟಲ್ ಮೀಟರ್ ಮಾರಾಟ ಮಳಿಗೆ: ಹೊಸ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಅನುಕುಲವಾಗಲು ಬೆಸ್ಕಾಂನ ಎಲ್ಲಾ ವಿಭಾಗಗಳಲ್ಲಿ ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮೀಟರ್ ಗಳ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದ್ದು ಬೆಸ್ಕಾಂ ನಿಗದಿ ಪಡಿಸಿರುವ ದರದಲ್ಲಿ ವೆಂಡರ್‌ಗಳು ಗ್ರಾಹಕರಿಗೆ ಈ ಡಿಜಿಟಲ್ ಮೀಟರ್ ಗಳನ್ನು ಮಾರಾಟ ಮಾಡಲಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರಾಟ ಮಳಿಗೆಗಳ ಸ್ಥಾಪನೆಯಿಂದ ಗ್ರಾಹಕರು ಮೀಟರ್ ಖರೀದಿಗೆ ಅಲೆದಾಡುವುದು ತಪ್ಪಿದಂತ್ತಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ