ಶಿವಮೊಗ್ಗ ನಗರದಲ್ಲಿ 22 ಸಾವಿರ ಎಲ್ಇಡಿ ದೀಪಗಳ ಅಳವಡಿಕೆ : ಸಚಿವ ಬಿ ಎ ಬಸವರಾಜ್​​

ಮಳೆಗಾಲದಲ್ಲಿ ಎಲ್ಲಿಯೂ ನೀರು ಕಟ್ಟಿ ನಿಂತು ಕೃತಕ ನೆರೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾಜಕಾಲುವೆ ಒತ್ತುವರಿಯಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಅವರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಶಿವಮೊಗ್ಗ ನಗರದಲ್ಲಿ 22 ಸಾವಿರ ಎಲ್ಇಡಿ ದೀಪಗಳ ಅಳವಡಿಕೆ

ಶಿವಮೊಗ್ಗ ನಗರದಲ್ಲಿ 22 ಸಾವಿರ ಎಲ್ಇಡಿ ದೀಪಗಳ ಅಳವಡಿಕೆ

  • Share this:
ಶಿವಮೊಗ್ಗ(ಜೂ.02): ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ನಿಗದಿತ ಅವಧಿಯ ಒಳಗಾಗಿ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ತಿಳಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಶಿವಮೊಗ್ಗ ಮಾದರಿ ನಗರವಾಗಿ ಅಭಿವೃದ್ಧಿಗೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿರುವ ಎಲ್ಲಾ ಬೀದಿ ದೀಪಗಳನ್ನು ಬದಲಾಯಿಸಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಪ್ರಥಮ ಹಂತದಲ್ಲಿ 22 ಸಾವಿರ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪಿಪಿಪಿ ಮಾದರಿಯ ಈ ಯೋಜನೆಯಿಂದಾಗಿ ವಿದ್ಯುತ್ ಗಣನೀಯ ಪ್ರಮಾಣದಲ್ಲಿ ಉಳಿತಾಯವಾಗಲಿದ್ದು, 7 ವರ್ಷಗಳ ಉಚಿತ ನಿರ್ವಹಣೆ ಇರಲಿದೆ ಎಂದರು.

ಅಕ್ರಮ ಸಕ್ರಮ:

ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ಸಕ್ರಮಗೊಳಿಸುವ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಸಕ್ರಮಗೊಳಿಸುವ ಕುರಿತು ಸ್ಪಷ್ಟವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಸಂಪುಟದ ಅನುಮೋದನೆಯೊಂದಿಗೆ ಇದನ್ನು ಅನುಷ್ಟಾನಗೊಳಿಸಲಾಗುವುದು. ಅಕ್ರಮ ನಿರ್ಮಾಣಗಳ ಪಟ್ಟಿಯನ್ನು ಸಿದ್ಧಪಡಿಸಲು ಸಮೀಕ್ಷೆ ನಡೆಸಲು ಸೂಚಿಸಲಾಗಿದ್ದು, ನಿಗದಿತ ಸಮಯದ ಒಳಗಾಗಿ ಸಕ್ರಮೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ವಾಜಪೇಯಿ ಬಡಾವಣೆ ಸಮಸ್ಯೆ :

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾಜಪೇಯಿ ಬಡಾವಣೆ ಸಮಸ್ಯೆಗೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಈಗಾಗಲೇ ಅಡ್ವಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಪ್ರಕರಣ ಹಿಂತೆಗೆದುಕೊಳ್ಳಲು ಮನವಿ ಮಾಡಲಾಗಿದೆ ಎಂದರು.

ಸ್ಥಳ ಪರಿಶೀಲನೆ :

ಸಚಿವರು ಶಿವಮೊಗ್ಗ ನಗರದ ಬಸ್‍ನಿಲ್ದಾಣದಿಂದ ಆಲ್ಕೋಳ ವೃತ್ತದವರೆಗೆ ನಡೆಯುತ್ತಿರುವ ಮಾದರಿ ರಸ್ತೆ ಕಾಮಗಾರಿ, ವಿನೋಭಾ ನಗರದ ರಸ್ತೆ ಬದಿ ಪಾದಚಾರಿ ರಸ್ತೆ ಕಾಮಗಾರಿ, ಪುರಲೆ ಒಳಚರಂಡಿ ಕಾಮಗಾರಿ, ಲಕ್ಷ್ಮೀ ಥಿಯೇಟರ್ ವೃತ್ತ ಅಭಿವೃದ್ಧಿ ಕಾಮಗಾರಿ, ರಾಜೇಂದ್ರ ನಗರದಲ್ಲಿ ನಡೆಯುತ್ತಿರುವ ಉದ್ಯಾನವನ, ಒಳಾಂಗಣ ಕ್ರೀಡಾಂಗಣ ಸಮುಚ್ಛಯ, ಜಿಲ್ಲಾ ಪಂಚಾಯತ್ ಮುಂಭಾಗ ನೀರಿನ ಟ್ಯಾಂಕ್ ನಿರ್ಮಾಣ, ಬೊಮ್ಮನಕಟ್ಟೆ ಕೆರೆ ಅಭಿವೃದ್ಧಿ, ಆದಿಚುಂಚನಗಿರಿ ಬಳಿ ಸಮುಚ್ಛಯ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.

ಜನರ ಸಹಭಾಗಿತ್ವ ಅತಿ ಅಗತ್ಯ:

ಜನರ ಸಹಭಾಗಿತ್ವ ಇದ್ದರೆ ಮಾತ್ರ ಯಾವುದೇ ಕಾಮಗಾರಿ ಯಶಸ್ವಿಯಾಗಲು ಸಾಧ್ಯವಿದೆ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಸಂಘ ರಚಿಸಿ ಅವುಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕು. ರಾಜೇಂದ್ರ ನಗರದಲ್ಲಿ ನೀರಿನ ಕಾಲುವೆಗೆ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ಸ್ಥಳೀಯರೇ ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಮನೆಗಳ ತ್ಯಾಜ್ಯ ನೀರು ನೇರವಾಗಿ ಕಾಲುವೆ ಸೇರುವಂತೆ ಸಂಪರ್ಕ ಕಲ್ಪಿಸಿದ್ದರೆ ಅದನ್ನು ತೆರವುಗೊಳಿಸಿ ನಿವಾಸಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ : ರಾಜ್ಯಸಭಾ ಸ್ಥಾನಕ್ಕೆ ಪೈಪೋಟಿ - ಡಿಸಿಎಂ ಸವದಿ ಬೆನ್ನಹಿಂದೆಯೇ ಕೋರೆ ಪರ ಮಹಾಂತೇಶ್ ಕವಟಗಿಮಠರಿಂದ ಬ್ಯಾಟಿಂಗ್

ಮಳೆಗಾಲದಲ್ಲಿ ಎಲ್ಲಿಯೂ ನೀರು ಕಟ್ಟಿ ನಿಂತು ಕೃತಕ ನೆರೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾಜಕಾಲುವೆ ಒತ್ತುವರಿಯಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಅವರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.


First published: