32 ವರ್ಷ ಸೇನೆಯಲ್ಲಿ ದೇಶಕ್ಕಾಗಿ ಹೋರಾಡಿದ ರಿಯಲ್ ಹೀರೋ ಚಿಕ್ಕಮಗಳೂರಿನ ಕ್ಯಾ. ಮಂಜುನಾಥ್

ಕ್ಯಾಪ್ಟನ್ ಮಂಜುನಾಥ್​ ಭಾರತೀಯ ಸೇನೆಯಲ್ಲಿ 32 ವರ್ಷಗಳ ದಣಿವರಿಯದೆ ಸೇವೆ ಸಲ್ಲಿಸಿದ ಕಾಫಿನಾಡಿನ ಯೋಧ. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದವರು.

news18-kannada
Updated:October 28, 2020, 9:24 AM IST
32 ವರ್ಷ ಸೇನೆಯಲ್ಲಿ ದೇಶಕ್ಕಾಗಿ ಹೋರಾಡಿದ ರಿಯಲ್ ಹೀರೋ ಚಿಕ್ಕಮಗಳೂರಿನ ಕ್ಯಾ. ಮಂಜುನಾಥ್
ಚಿಕ್ಕಮಗಳೂರಿನ ಯೋಧ ಮಂಜುನಾಥ್ ಸಿಎಸ್​
  • Share this:
ಚಿಕ್ಕಮಗಳೂರು  (ಅ. 28): ಕಾಫಿನಾಡಿನ ಕ್ಯಾಪ್ಟನ್ ಮಂಜುನಾಥ್​ ಭಾರತೀಯ ಸೇನೆಯ ವೀರ ಯೋಧ. 32 ವರ್ಷಗಳ ಕಾಲ ಶತ್ರು ರಾಷ್ಟ್ರಕ್ಕೆ ಮುಖ ಮಾಡಿ, ಸ್ವದೇಶಕ್ಕೆ ಬೆನ್ನು ಮಾಡಿ ನಿಂತ ಹೆಮ್ಮೆಯ ಸೈನಿಕ. ಚಳಿ, ಮಳೆ, ಗಾಳಿ, ಬಿಸಿಲು ಯಾವುದನ್ನೂ ಲೆಕ್ಕಿಸಿದೆ ಗಡಿಯಲ್ಲಿ ಗನ್ ಹೊತ್ತು ನಿಂತ ಸೈನಿಕ. ಸಿಯಾಚಿನ್​ನಂತಹ ದುರ್ಗಮ ಪ್ರದೇಶದಲ್ಲೂ ದೇಶ ಕಾದ ಶಿಸ್ತಿನ ಸಿಪಾಯಿ. ಗಡಿಯಲ್ಲಿ ಅದೆಷ್ಟೋ ಉಗ್ರರನ್ನು ಚೆಂಡಾಡಿದ ಹೆಮ್ಮೆಯ ಸೈನಿಕ. ಮೂಲತಃ ಕೃಷಿ ಕುಟುಂಬದ ಕಾಫಿನಾಡಿನ  ಕ್ಯಾಪ್ಟನ್ ಮಂಜುನಾಥ್ ಯಶೋಗಾಥೆ ಏನು ಗೊತ್ತಾ? ಈತ ಬರೀ ಯೋಧನಲ್ಲ; ದೇಶದ ಶಕ್ತಿ, ಯುವಜನತೆಗೆ ಸ್ಫೂರ್ತಿ.

ಮಂಜುನಾಥ್ ಅಲಿಯಾಸ್ ಕ್ಯಾಪ್ಟನ್  ಮಂಜುನಾಥ್. ಭಾರತೀಯ ಸೇನೆಯಲ್ಲಿ 32 ವರ್ಷಗಳ ದಣಿವರಿಯದೆ ಸೇವೆ ಸಲ್ಲಿಸಿದ ಕಾಫಿನಾಡಿನ ಗಂಡುಗಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದವರು. ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯಲ್ಲೇ ಬೆಳೆದ ಇವರಿಗೆ ಸೇನೆ ಸೇರಬೇಕೆಂಬ ಆಸೆ-ಹಟ ಎರಡೂ ಇತ್ತು. ಅಂತೂ ಇಂತು 1984ರಲ್ಲಿ ಸೇನೆಗೆ ಸೇರಿದ ಮಂಜುನಾಥ್ ಬರೋಬ್ಬರಿ 32 ವರ್ಷಗಳ ಕಾಲ ವಿದೇಶಕ್ಕೆ ಮುಖ ಮಾಡಿ ಸ್ವದೇಶಕ್ಕೆ ಬೆನ್ನು ಮಾಡಿ ಶತ್ರುಗಳ ವಿರುದ್ಧ ಹೋರಾಡಿದ್ದಾರೆ.

ಸೇನೆಯಲ್ಲಿದ್ದಾಗಿನ ಇವರ ರೋಚಕ ಕಥೆ ಕೇಳುತ್ತಿದ್ದರೆ  ಎದೆ ಝಲ್ ಅನ್ಸುತ್ತೆ. ಇವರು ಪ್ರತಿ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಶತ್ರುಗಳ ವಿರುದ್ಧ ಹೋರಾಡಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಎದುರಾಳಿಗಳ ಗುಂಡಿಗೂ ಜಗ್ಗದೆ ಮುನ್ನುಗಿ ಯಶಸ್ಸು ಗಳಿಸಿ ದೇಶದ ಬಹುದೊಡ್ಡ ಪದಕ ಸೇನಾ ಪದಕ ಪಡೆದಿದ್ದಾರೆ. ಭಾರತ-ಪಾಕಿಸ್ತಾನ ಗಡಿ ಸಿಯಾಚಿನ್ ಪ್ರದೇಶದಲ್ಲೂ 3 ತಿಂಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಿಯಾಚಿನ್ ಪ್ರದೇಶದಲ್ಲಿ ಶತ್ರುಗಳ ಜೊತೆ ಹೋರಾಟಕ್ಕಿಂತ ಪ್ರಕೃತಿ ಜೊತೆ ಹೋರಾಡೋದೆ ಬಹಳ ಕಷ್ಟ. ಬೇಕಾದರೆ ಶತ್ರುಗಳಿಂದ ತಪ್ಪಿಸಿಕೊಳ್ಳಬಹುದು. ಆದರೆ, ಹಿಮದಿಂದ ತಪ್ಪಿಸಿಕೊಳ್ಳೋದು ನಿಜಕ್ಕೂ ಸಾಹಸ. ಅಲ್ಲಿ ಕೆಲಸ ಮಾಡೋಕೆ ಧೈರ್ಯ ಬೇಕು ಅಂತಾರೆ ಕ್ಯಾಪ್ಟನ್ ಮಂಜುನಾಥ್.

ಇದನ್ನೂ ಓದಿ: ಮಲೆನಾಡು, ಕೊಡಗು, ಹಾಸನದಲ್ಲಿ ಇಂದು ವರುಣನ ಆರ್ಭಟ; ಕರಾವಳಿಯಲ್ಲೂ ತುಂತುರು ಮಳೆ ಸಾಧ್ಯತೆ

ಕ್ಯಾ. ಮಂಜುನಾಥ್ ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ಉಗ್ರರ ವಿರುದ್ಧವೂ ಹೋರಾಡಿದ್ದಾರೆ. ಅಲ್ಲಿ ದಿನವೂ ದೀಪಾವಳಿ ಹಬ್ಬ ಇರುತ್ತೆ. ಆದ್ರೆ, ಅಲ್ಲಿ ಪಟಾಕಿ ಗಳ ದೀಪಾವಳಿಯಲ್ಲ. ಬಂದೂಕಿನ ಹೊರಹೊಮ್ಮೋ ಮದ್ದು-ಗುಂಡುಗಳ ದೀಪಾವಳಿ.  ಆ ದೀಪಾವಳಿ ಆಚರಿಸೋದು ಅಷ್ಟು ಸುಲಭದ ಮಾತಲ್ಲ. ಅಲ್ಲೂ ಎಲ್​ಟಿಟಿಇಗಳ ವಿರುದ್ಧ ಹೋರಾಡಿದ್ದಾರೆ ಕ್ಯಾಪ್ಟನ್ ಮಂಜುನಾಥ್. ಇನ್ನು ಅಸ್ಸಾಂನಲ್ಲಿ ಭಯೋತ್ಪಾದಕರ ವಿರುದ್ಧವೂ ಹೋರಾಡಿ 21 ಭಯೋತ್ಪಾಕರನ್ನ ಕೊಂದಿದ್ದಾರೆ. ಹುಲ್ಲಿನ ಬಣವೆಯಲ್ಲಿ ಅವಿತು ಕೂತವರನ್ನ ಅಲ್ಲೇ ಕೊಂದು ಸೇನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕೇವಲ ಆರು ಸೇನಾ ಮಂದಿ ನಾಲ್ವರು ಭಯೋತ್ಪಾದಕರ ಹತ್ಯೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಸಾಧನೆಗೆ ಇವರಿಗೆ ಸೇನಾ ಪದಕ ಲಭಿಸಿದೆ. ಮಂಜುನಾಥ್ ಈಗ ಕೂಡ ಸುಮ್ಮನೆ ಕೂರದೇ  ಖಾಸಗಿ ಇನ್ಷೂರೆನ್ಸ್​ ಕಂಪನಿಯಲ್ಲಿ ಕೆಲಸ ಮುಂದುವರೆಸಿದ್ದಾರೆ. ಇದರ ಜೊತೆ ಇವರ ಮಗನನ್ನು ಕೂಡ ಸೇನೆಗೆ ಕಳಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಕ್ಯಾಪ್ಟನ್ ಮಂಜುನಾಥ್ ಸಾಧನೆ ನಿಜಕ್ಕೂ ಯುವ ಸಮುದಾಯಕ್ಕೆ ಮಾದರಿಯಾಗಿದೆ. ಇವರ ಸಾಧನೆಗೆ ನಮ್ಮದೊಂದು ಸಲಾಂ.
Published by: Sushma Chakre
First published: October 28, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading