ಮಂಗಳೂರು (ಏ. 30): ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಂತರ್ಜಲ ಹೆಚ್ಚಳ ಬಗ್ಗೆ ಆಡಿದ ಮಾತಿನಿಂದ ಸ್ಪೂರ್ತಿಗೊಂಡ ವ್ಯಕ್ತಿಯೊಬ್ಬರು ತಮ್ಮ ದುಡಿಮೆಯನ್ನೆಲ್ಲಾ ಸುರಿದು ಬೃಹತ್ ಕೆರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕುಲ್ಲಂಗಾಲುನ ಮಾಧವ ಭಟ್ಟರ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ವ್ಯಕ್ತಿ. ಸುರತ್ಕಲ್ ಸಮೀಪದ ಕಾಟಿಪಳ್ಳ ಸರ್ಕಲ್ನಿಂದ ಸೂರಿಂಜೆಗೆ ಹೋಗುವ ದಾರಿಯಲ್ಲಿ ಒಂದು ಕಿ.ಮೀ. ದೂರ ಕ್ರಮಿಸಿದರೆ ಕುಲ್ಲಂಗಾಲು ಗ್ರಾಮದಲ್ಲಿ ಈ ಬೃಹತ್ ಕೆರೆ ನಿರ್ಮಾಣವಾಗುತ್ತಿದೆ. ಸುಮಾರು ಎರಡೂವರೆ ಎಕರೆ ವಿಸ್ತಾರವಾದ ಜಾಗದಲ್ಲಿ 50 ಲಕ್ಷ ರೂಗೂ ಅಧಿಕ ವೆಚ್ಚದಲ್ಲಿ ಈ ಕೆರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ರಮ್ಯ ಪರಿಸರದ ನಡುವೆ ಕೆರೆ ಇರುವ ಈ ಪ್ರದೇಶಕ್ಕೆ ನಾಗಳಿಕೆ ಎಂದು ಹೆಸರು. ಕೆರೆಯ ಪೂರ್ತಿ ಕಾಮಗಾರಿ ಮುಗಿದಿದ್ದು, ಉದ್ಘಾಟನೆ ಕೂಡಾ ನಡೆದಿದೆ. ಈ ವರ್ಷ ಮಾಧವ ಭಟ್ಟರಿಗೆ 60 ವರ್ಷ ತುಂಬಲಿದ್ದು, ಅದಕ್ಕಾಗಿ ಷಷ್ಠಿ ಪೂರ್ತಿ, ಶಾಂತಿ ಎಂದು ಅನಗತ್ಯ ಖರ್ಚು ಮಾಡದೆ ಕೆರೆಯೊಂದನ್ನು ನಿರ್ಮಾಣ ಮಾಡಿ ಸಂತಸ ಪಡುತ್ತಿದ್ದಾರೆ.
ಕೆರೆಯ ಸುತ್ತಲೂ ಸಸ್ಯ ಸಂಪತ್ತು ಬೆಳೆಸಲು ಕೂಡ ಚಿಂತನೆ ನಡೆದಿದೆ. ಕೆ .ಮಾಧವ ಭಟ್ಟರು ಈ ಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರಂತೆ. ಅದಷ್ಟೇ ಅಲ್ಲದೆ ತಾವು ಪ್ರತಿನಿತ್ಯ ಮಾಡುವ ಯೋಗ ಹಾಗೂ ಆಧ್ಯಾತ್ಮಿಕ ಚಿಂತನೆಗಳೂ ಇದಕ್ಕೆ ಮೂಲ ಕಾರಣವೆನ್ನುತ್ತಾರೆ. ಜೊತೆಗೆ ಮಾಧವ ಭಟ್ಟರ ತಂದೆ ವೆಂಕಟರಾಜ ಭಟ್ ಕುಲ್ಲಂಗಾಲು ಅವರು ಆಷಾಢ ಮಾಸದಲ್ಲಿ ಈಗ ಕೆರೆಯಿರುವ ಸ್ಥಳದಲ್ಲಿದ್ದ ನಾಗಬನದ ಬಳಿಯಲ್ಲಿ ಧ್ಯಾನ ಮಾಡುತ್ತಿದ್ದು, ಅದರ ಪ್ರೇರಣೆಯಿಂದ ಮಾಧವ ಭಟ್ಟರೂ ಆದಿತ್ಯವಾರ ಈ ಸ್ಥಳಕ್ಕೆ ಬಂದು ನಮಸ್ಕರಿಸಿ ಹೋಗುತ್ತಿದ್ದಾರೆ.
ಒಂದು ಬಾರಿ ಇಲ್ಲಿಗೆ ಬಂದಾಗ ಇಲ್ಲಿದ್ದ ಸಣ್ಣ ಮದಕ (ಹಳ್ಳ)ದಲ್ಲಿ ಎರಡು ಹಾವುಗಳು ಈಜಾಡುತ್ತಿತ್ತಂತೆ. ಅಂದೇ ಇಲ್ಲೊಂದು ಇಂಗು ಗುಂಡಿ ಮಾಡಬಹುದು ಎಂದು ಸಂಕಲ್ಪ ಮಾಡಿದ್ದರು. ಅದು ಈಗ ಕೆರೆ ನಿರ್ಮಾಣದ ಮೂಲಕ ಸಾಕಾರಗೊಂಡಿದೆ. 1 ಕೋಟಿ 75 ಲಕ್ಷ ಲೀಟರ್ ನೀರು ತುಂಬುವ ಸಾಧ್ಯತೆ. ಇದೇ ವರ್ಷ ಜನವರಿ 20ರಂದು ಕೆರೆಯ ಕಾಮಗಾರಿ ಆರಂಭ ಮಾಡಿದ್ದು, 2 ತಿಂಗಳು 20 ದಿನಗಳಲ್ಲಿ ಪೂರ್ಣಗೊಂಡಿದೆ. ಕೆರೆಯು 30 ಅಡಿ ಆಳ, 125 ಅಡಿ ಅಗಲ, 140 ಅಡಿ ಉದ್ದವಿದ್ದು, 1 ಕೋಟಿ 75 ಲಕ್ಷ ಲೀಟರ್ ನೀರು ತುಂಬುವ ಸಾಧ್ಯತೆ ಇದೆ. ಇದರಿಂದ ಸುತ್ತಮುತ್ತಲಿನ ಮೂರು ಕಿ.ಮೀ.ವ್ಯಾಪ್ತಿಯ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಲಿದೆ.
ಕೆರೆ ಪಕ್ಕದಲ್ಲಿಯೇ ಗಿಡ ಮರ ಬೆಳೆಸುವುದರಿಂಧ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿ, ಉರಗ, ಸರೀಸೃಪಗಳಿಗೂ ನೀರಿನ ಮೂಲವೊಂದು ದೊರಕುತ್ತದೆ. ಈ ಕೆರೆಗೆ ಅದರ ಕಾಂಕ್ರಿಟ್ ಬದುವಿಗೆ ತೊಂದರೆಯಾಗದಂತೆ ಬೆಟ್ಟಗುಡ್ಡಗಳಿಂದ ಮೂರುಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಬರಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾವುದೇ ತ್ಯಾಜ್ಯ, ತರಗಲೆಗಳು ಕೆರೆಯನ್ನು ಸೇರದಂತೆ ಫಿಲ್ಟರ್ ಆಗಿಯೇ ನೀರು ಕೆರೆಗೆ ಹರಿಯಲು ವ್ಯವಸ್ಥೆ ಮಾಡಲಾಗಿದೆ. ಕೆರೆಯನ್ನು ನಾಲ್ಕು ಕಡೆಯೂ ಎರಡು ಸಾಲು ಡಬ್ಬಲ್ ಲಾಕ್ ಮಾಡಿ ಕೆಂಪು ಕಲ್ಲಿನಿಂದ ಬಲಿಷ್ಠವಾಗಿ ಕಟ್ಟಲಾಗಿದೆ ಎನ್ನುತ್ತಾರೆ.
ಅಲ್ಲದೆ ಮಣ್ಣು ಕುಸಿಯುವ ಸಾಧ್ಯತೆ ಇರುವಲ್ಲಿ ಕಾಂಕ್ರೀಟ್ ಅಳವಡಿಸಿ ಭದ್ರಪಡಿಸಲಾಗಿದೆ. ಜೋರು ಮಳೆ ಬಂದ ಸಂದರ್ಭದಲ್ಲಿ ಕೆರೆಯಲ್ಲಿ ನೀರು ಹೆಚ್ಚಾದಲ್ಲಿ ಹೊರಗೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಕೆರೆಯೊಳಗೆ ಸಣ್ಣ ಬಾವಿಕೆರೆಯ ಕಾಮಗಾರಿ ನಡೆಯುವ ಸಮಯ ಕೆರೆಯ ಮಧ್ಯದಲ್ಲೊಂದು ಕಡೆಗೆ ಹಿಟಾಚಿಯಲ್ಲಿ ಅಗೆದಾಗ ನೀರಿನ ಒಸರು ಕಂಡಿತು. ಆದ್ದರಿಂದ ಅಲ್ಲೊಂದು ಸಣ್ಣದಾದ, ಸುಂದರ ಬಾವಿಯೊಂದನ್ನು ನಿರ್ಮಾಣ ಮಾಡಲಾಗಿದೆ ಈ ಬಾವಿಯಲ್ಲಿ ಗಾಢ ಹಸಿರು ಬಣ್ಣದ ತಿಳಿಯಾದ ಸ್ವಚ್ಛ ನೀರು ಶೇಖರಣೆಯಾಗಿದೆ.
ಸ್ವಲ್ಪ ಸ್ಥಳವಿದ್ದರೂ ಸೈಟ್ಗಳನ್ನಾಗಿ ಮಾಡಿ ಮಾರಾಟ ಮಾಡಿ ಸಾಕಷ್ಟು ಹಣಗಳಿಸುವ ಆಲೋಚನೆ ಮಾಡುವ ಈ ಕಾಲದಲ್ಲಿ, ಮಾಧವ ಭಟ್ಟರು ಮಾತ್ರ ಇದಕ್ಕೆ ಅಪವಾದವೆಂಬಂತೆ ಮಹತ್ತರವಾದ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕೆ ಅವರ ಮನೆಯವರ ಸಹಕಾರವೂ ಇದೆ ಎಂಬುವುದು ಮೆಚ್ಚುವಂತದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ