ಬಾಗಲಕೋಟೆ ( ಫೆ,19): ಟೀ ವ್ಯಾಪಾರ ಮಾಡಿದ್ದ ನರೇಂದ್ರ ಮೋದಿ ಇಂದು ಪ್ರಧಾನಿಯಾಗಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಚಿಕ್ಕವಯಸ್ಸಿನಲ್ಲಿ ಹೇಗೆ ತಾವು ಚಾಯ್ ವಾಲಾನಾಗಿ ಕೆಲಸ ಮಾಡಿದ್ದೆ ಎಂಬ ಬಗ್ಗೆ ಅವರೇ ದೇಶದ ಜನರಿಗೆ ತಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಈ ಕಥೆ ಹಲವರಿಗೆ ಸ್ಪೂರ್ತಿಯಾಗಿದೆ. ಇದೇ ಕಥೆಯಿಂದ ಪ್ರೇರೇಪಿತಗೊಂಡ ಪಿಎಚ್ಡಿ ಪದವೀಧರ ದಂಪತಿಗಳು ಟೀ ಅಂಗಡಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅಮೀನಗಡ ಪ್ರಶಾಂತ್ ನಾಯಕ್ ಮತ್ತು ಕಾವ್ಯ ಎಂಬ ದಂಪತಿಗಳ ಯಶಸ್ಸಿನ ಕಥೆ ಇದು. ಉನ್ನತ ಶಿಕ್ಷಣ ಪಡೆದ ಈ ದಂಪತಿಗಳಿಬ್ಬರು ದೂರ ಶಿಕ್ಷಣದ ಮೂಲಕ ಪಿಎಚ್ಡಿ ಪದವಿ ಪಡೆದಿದ್ದಾರೆ. ಜೊತೆಗೆ ನೆಟ್, ಸೆಟ್ ಪರೀಕ್ಷೆ ಪಾಸು ಮಾಡಿ ಉತ್ತಮ ನೌಕರಿಯ ಕನಸು ಕಂಡಿದ್ದರು. ಇದಕ್ಕಾಗಿ ಸರ್ಕಾರಿ ಕೆಲಸಕ್ಕಾಗಿ ಇವರು ಮಾಡದ ಪ್ರಯತ್ನವಿಲ್ಲ. ಆದರೆ, ಇವರ ಸರ್ಕಾರಿ ನೌಕರಿ ಕನಸು ಭಗ್ನಗೊಂಡಿತು.
ಸರ್ಕಾರ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಜೊತೆಗೆ ಬದುಕು ಸಾಗಿಸಲು ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಸ್ವಯಂ ಉದ್ಯೋಗವಾಗಿ ಟೀ ಶಾಪ್ ತೆರೆದುಕೊಂಡು ಜೀವನ ಸಾಗಿಸಿದರು. ಕಳೆದ ಎಂಟು ವರ್ಷಗಳ ಹಿಂದೆ ತೆರೆದ 'ಆಮ್ ಆದ್ಮಿ ಟೀ ಟೈಮ್' ಅಂಗಡಿ ಇವರ ಬದುಕು ಬದಲಾಯಿಸಿದೆ.
ಟೀ ಅಂಗಡಿಯಿಂದ ತಿಂಗಳಿಗೆ ಏನಿಲ್ಲ ಎಂದರೂ 30-40 ಸಾವಿರ ಹಣ ಗಳಿಸುತ್ತಿದ್ದಾರೆ ಈ ಜೋಡಿ. ಇದೇ ಆದಾಯದಿಂದಾಗಿ ಈಗ ಇವರು ತಮ್ಮದೇ ಆದ ಶಿಕ್ಷಣ ಸಂಸ್ಥೆಯನ್ನೇ ತೆರೆದಿದ್ದಾರೆ. ಪ್ರಶಾಂತ್ ತಾಯಿ ಹೆಸರಿನಲ್ಲಿ ಶಾಂತ ದೇವಿ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿದ್ದಾರೆ.
ಇದನ್ನು ಓದಿ: ಪ್ರಧಾನಿ ಬಗ್ಗೆ ಏಕವಚನದಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ನಾನೇಕೆ ಆತನ ಬಗ್ಗೆ ಮಾತನಾಡಬಾರದು; ಈಶ್ವರಪ್ಪ
ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಬೇಸರ ಮಾಡಿಕೊಳ್ಳದೇ ಪ್ರಧಾನಿ ಮೋದಿ ಅವರನ್ನು ಸ್ಪೂರ್ತಿಯಾಗಿ ಪಡೆದು ಟೀ ವ್ಯಾಪಾರ ಶುರು ಮಾಡಿದೆವು. ಹಗಲಿರುಳು ಟೀ ಮಾರಾಟ ಮಾಡಿದ ಫಲ ಈಗ ನಮ್ಮ ಕನಸು ಕೂಡ ಸಕಾರಗೊಂಡಿದೆ. ಟೀ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು ದಂಪತಿಗಳ ಕುಟುಂಬ ನೆಮ್ಮದಿಯ ಜೀವನ ಸಾಗಿಸಿದೆ.
ಸರ್ಕಾರಿ ಕೆಲಸಕ್ಕೆ ಬಹಳಷ್ಟು ಪ್ರಯತ್ನಿಸಿದ ಬಳಿಕ ನಮ್ಮ ಕುಟುಂಬದ ಪರಿಸ್ಥಿತಿ ನೋಡಿ ನಾವು ಈ ವ್ಯಾಪಾರ ಶುರು ಮಾಡಿದೆವು. ಹಿಂದೆ ನಮ್ಮ ಆರ್ಥಿಕ ಸ್ಥಿತಿ ಸರಿ ಇರಲಿಲ್ಲ. ಬೆಳಗ್ಗೆ ಶಾಲೆಯಲ್ಲಿ ಇರುತ್ತಿದ್ದೆವು. ಸಂಜೆ ಟೀ ಶಾಪ್ನಲ್ಲಿ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಕಾವ್ಯ. ಹಗಲಿರುಳು ಪ್ರಶಾಂತ್ ನಾಯಕ್, ಟೀ ಶಾಪ್ ಜೊತೆಗೆ ಕಾಲೇಜು, ಸಂಸ್ಥೆ ನಿಭಾಯಿಸುತ್ತಾ, ಮೂರು ಶಾಲೆಗಳನ್ನು ತೆರೆದಿದ್ದು, ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಜೊತೆಗೆ ಅಮೀನಗಡದಲ್ಲಿ ಮಹಿಳಾ ಕಾಲೇಜು ತೆರೆಯುವ ಯೋಚನೆ ಹೊಂದಿದ್ದಾರೆ. ಒಟ್ಟಿನಲ್ಲಿ ಉನ್ನತ ಶಿಕ್ಷಣ ಪಡೆದರೂ ಸರ್ಕಾರಿ ನೌಕರಿ ಸಿಗಲಿಲ್ಲವೆಂದು ನೊಂದುಕೊಳ್ಳದೇ ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ