ಬಿಎಸ್​ವೈ ಪರ ನಿಲ್ಲಲು ಎಸ್​ಟಿಎಸ್ ಕರೆದಿದ್ದ ಮಿತ್ರಮಂಡಳಿ ಸಭೆ ಫ್ಲಾಪ್; ಬುಸುಗುಟ್ಟಿದ ಸದಸ್ಯರು

ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಹೊರಬಂದು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರದ ರಚನೆಗೆ ಕಾರಣವಾದ ನಾಯಕರು ಇವತ್ತು ಮತ್ತೊಂದು ರಾಜಕೀಯ ತಿರುವಿನ ಸಮೀಪದಲ್ಲಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಸಿಡಿದೇಳುವ ಧಾವಂತದಲ್ಲಿರುವಂತಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

  • Share this:
ಬೆಂಗಳೂರು(ನ. 28): ನಿನ್ನೆ ರಾಜ್ಯ ಬಿಜೆಪಿಯೊಳಗೆ ಹಲವು ನಾಟಕೀಯ ಬೆಳವಣಿಗೆಗಳಾಗಿವೆ. ದೆಹಲಿಯಲ್ಲಿ ಸಿ.ಟಿ. ರವಿ ಕಚೇರಿ ಉದ್ಘಾಟನೆಯಿಂದ ಹಿಡಿದು ಬಿಎಸ್​ವೈ ಸಂಪುಟ ಸಭೆಯವರೆಗೆ ಹೈಡ್ರಾಮಾಗಳೇ ನಡೆದಿವೆ. ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಪ್ರಕಟಿಸುವ ಇರಾದೆಯಲ್ಲಿದ್ದ ಸಿಎಂ ಯಡಿಯೂರಪ್ಪ ಕೊನೆ ಕ್ಷಣದಲ್ಲಿ ಹೈಕಮಾಂಡ್ ಸೂಚನೆಗೆ ಬಗ್ಗಿ ಪ್ಲಾನ್ ಕೈಬಿಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಅದರ ಚರ್ಚೆಯೂ ಆಗಲಿಲ್ಲ. ಹಾಗೆಯೇ, ಸಂಪುಟ ವಿಸ್ತರಣೆ ವಿಚಾರವೂ ಸಭೆಯಲ್ಲಿ ಸದ್ದಾಗಲಿಲ್ಲ. ಈ ಬೆಳವಣಿಗೆ ಮಧ್ಯೆ ಸಂಪುಟ ಸಭೆ ಬದಲು ಸಿ.ಟಿ. ರವಿ ಕಚೇರಿಯಲ್ಲಿ ಹಿರಿಯ ನಾಯಕರು ಸೇರಿದ್ದು ಒಂದು ಕೌತುಕವಾದರೆ, ನಗರದಲ್ಲಿ ವಲಸಿಗರು ಸೇರಿ ನಡೆಸಿದ ಸಭೆ ಬಹಳ ಕುತೂಹಲ ಮೂಡಿಸಿತು. ಅಸಮಾಧಾನಿತ ವಲಸಿಗರನ್ನು ಓಲೈಸಲು ಎಸ್.ಟಿ. ಸೋಮಶೇಖರ್ ಕರೆದಿದ್ದ ಈ ಮಿತ್ರಮಂಡಳಿ ಸಭೆ ನಿರೀಕ್ಷಿತ ಫಲ ನೀಡಲಿಲ್ಲ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ನಿಲ್ಲುವಂತೆ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಸೆಟೆದು ನಿಲ್ಲುವಂತೆ ಅಸಮಾಧಾನಿತ ವಲಸಿಗರ ಮನವೊಲಿಸಲು ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ಈ ಸಭೆ ಕರೆಯಲಾಗಿತ್ತು ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಆದರೆ, ಸಭೆಯ ಉದ್ದೇಶವೇ ಫ್ಲಾಪ್ ಆಗಿದೆ. ಸಚಿವ ಸ್ಥಾನ ಸಿಗದೇ ಭುಸುಗುಡುತ್ತಿರುವ ಎಂಟಿಬಿ ನಾಗರಾಜ್, ಆರ್ ಶಂಕರ್ ಮತ್ತು ಹೆಚ್ ವಿಶ್ವನಾಥ್ ಅವರು ಯಡಿಯೂರಪ್ಪ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರ ಮೇಲೂ ಮುನಿಸು ತೋರ್ಪಡಿಸಿದರೆನ್ನಲಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಚುನಾವಣೆ ಆರಂಭ; ಮೊದಲ ಹಂತದ ಮತನಾನ ಇಂದು; 1,427 ಅಭ್ಯರ್ಥಿಗಳು ಕಣದಲ್ಲಿ

ನಾಲ್ಕೂವರೆ ತಿಂಗಳಿಂದ ಮಂತ್ರಿ ಮಾಡುತ್ತೇವೆ ಎಂದು ಹೇಳಿಕೊಂಡೇ ಬರುತ್ತಿದ್ಧಾರೆ. ಯಡಿಯೂರಪ್ಪ ಅವರನ್ನು ಭೇಟಿ ಆದಾಗೆಲ್ಲಾ ನಾಳೆ ನಾಡಿದ್ದು ಆಗೇ ಬಿಡುತ್ತೆ ಎಂದು ಸಾಗಹಾಕುತ್ತಲೇ ಇದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದು ನಮ್ಮಿಂದಲೇ. ನಾವು ಮೂವರನ್ನು ಅವರು ಮೊದಲು ಮಂತ್ರಿ ಮಾಡಲಿ. ಆಮೇಲೆ ಬೇಕಾದರೆ ಸಿ.ಪಿ. ಯೋಗೇಶ್ವರ್ ಅವರನ್ನೋ ಅಥವಾ ಯಾರನ್ನಾದರೂ ಬೇಕಾದರೆ ಸಂಪುಟಕ್ಕೆ ಸೇರಿಸಿಕೊಳ್ಳಲಿ. ಮುಖ್ಯಮಂತ್ರಿಗಳು ನಮಗೆ ಕೊಟ್ಟ ಮಾತಿನಿಂತೆ ನಡೆದುಕೊಳ್ಳುತ್ತಿಲ್ಲ. ಇನ್ನಾದರೂ ಅವರು ನಮ್ಮನ್ನು ಕೂಡಲೇ ಮಂತ್ರಿ ಮಾಡಿ ತಮ್ಮ ಮಾತು ಉಳಿಸಿಕೊಳ್ಳಬೇಕು ಎಂದು ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್ ಮತ್ತು ಆರ್ ಶಂಕರ್ ಅವರು ಈ ಸಭೆಯಲ್ಲಿ ಬಲವಾಗಿ ಒತ್ತಾಯಿಸಿದ್ದು ತಿಳಿದುಬಂದಿದೆ.

ಸಭೆಯಲ್ಲಿದ್ದ ಇತರ ವಲಸಿಗರೂ ಕೂಡ ಈ ಮೂವರ ಒತ್ತಾಯಕ್ಕೆ ಧ್ವನಿಗೂಡಿಸಿದ್ದಾರೆ. ಬಿಜೆಪಿಯನ್ನು ನಂಬಿ ಬಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ನಮ್ಮೊಂದಿಗೆ ಬಂದಿರುವ ಎಲ್ಲರಿಗೂ ಸೂಕ್ತ ಸ್ಥಾನಮಾನ ಸಿಗಬೇಕು ಎಂಬುದು ಎಸ್.ಟಿ. ಸೋಮಶೇಖರ್ ಕರೆದಿದ್ದ ಈ ಸಭೆಯಲ್ಲಿ ಕೇಳಿ ಬಂದ ಒಮ್ಮತದ ಮಾತಾಗಿತ್ತು. ಹಾಗೆಯೇ, ಎಲ್ಲರೂ ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಒತ್ತಡ ಹಾಕಲೂ ನಿರ್ಧರಿಸಲಾಯಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಕ್ರಮ ಮರಳುಗಾರಿಕೆ ಭಾಗ 2 – ಹರಿಹರ ಗ್ರಾಮಾಂತರ ಠಾಣೆಯ ಎದುರೇ ಅಕ್ರಮ ಮರಳು ಸಾಗಾಟ

ಬೆಳಗಾವಿ ಸಾಹುಕಾರ್ ಬಗ್ಗೆಯೂ ಅಸಮಾಧಾನ:

ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಸಿಡಿದು ಬಂದ ಗುಂಪಿನ ಮುಂಚೂಣಿ ನಾಯಕರಾಗಿದ್ದ ರಮೇಶ್ ಜಾರಕಿಹೊಳಿ ಬಗ್ಗೆಯೂ ನಿನ್ನೆಯ ಮಿತ್ರಮಂಡಳಿ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅವರೊಂದಿಗೆ ಹೋದ ನಮ್ಮ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಎಲ್ಲರೂ ಒಟ್ಟಿಗೆ ಮಾತುಕತೆ ನಡೆಸಿ ಬಿಜೆಪಿಗೆ ಹೋಗಿದ್ದೇವಾದರೂ ಈಗ ಅವರು ನಮ್ಮನ್ನ ಮರೆತೇಬಿಟ್ಟಿದ್ಧಾರೆ. ನಮ್ಮ ಮೂವರನ್ನ ಬಿಟ್ಟು ಸಿ.ಪಿ. ಯೋಗೇಶ್ವರ್ ಅವರನ್ನ ಮಂತ್ರಿ ಮಾಡಿ ಎಂದು ಲಾಬಿ ನಡೆಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದು ಸಭೆಯಲ್ಲಿದ್ದವರು ಬೇಸರ ವ್ಯಕ್ತಪಡಿಸಿದ್ದಾರೆ.

ನಿಗಮ ಮಂಡಳಿ ನೇಮಕದಲ್ಲಿ ಅತೃಪ್ತಿ:

ನಿಗಮ ಮಂಡಳಿ ನೇಮಕ ವಿಚಾರದಲ್ಲೂ ಮಿತ್ರಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರೆನ್ನಲಾಗಿದೆ. ನಿಗಮ ಮಂಡಳಿಗಳ ನೇಮಕ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮ ಮಾತಿಗೆ ಚೂರೂ ಬೆಲೆ ಕೊಡುತ್ತಿಲ್ಲ. ಒಂದೂ ಮಾತು ಕೇಳುತ್ತಿಲ್ಲ. ನಮ್ಮನ್ನ ನಂಬಿಕೊಂಡು ನಮ್ಮ ಜೊತೆ ಹಲವು ಘಟಾನುಘಟಿ ನಾಯಕರೂ ಬಿಜೆಪಿಗೆ ಬಂದಿದ್ದಾರೆ. ಅವರಲ್ಲಿ ಕೆಲವರಿಗಾದರೂ ನಿಗಮ ಮಂಡಳಿಗಳಲ್ಲಿ ಅವಕಾಶ ಸಿಗಲಿಲ್ಲವೆಂದರೆ ಹೇಗೆ? ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ. ಈಗ ಅವರನ್ನು ತಾತ್ಸಾರ ಮಾಡಿದರೆ ಚುನಾವಣೆಯಲ್ಲಿ ಒಮ್ಮನಸಿನಿಂದ ಕೆಲಸ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಗಳನ್ನ ಸಭೆಯಲ್ಲಿ ಕೇಳಲಾಯಿತು. ಕೊನೆಗೆ, ಮೂವರಿಗೆ ಮಂತ್ರಿಗಿರಿ ಕೊಡಲು ಮತ್ತು ನಿಗಮ ಮಂಡಳಿಗಳಲ್ಲಿ ವಲಸಿಗರ ಬೆಂಬಲಿಗರಿಗೆ ಅವಕಾಶ ನೀಡಲು ಮುಖ್ಯಮಂತ್ರಿಗಳನ್ನ ಒತ್ತಾಯಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ವರದಿ: ಚಿದಾನಂದ ಪಟೇಲ್
Published by:Vijayasarthy SN
First published: