ಅಮಾನುಷ ಘಟನೆ: ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು: ಯೋಧನ ವಿರುದ್ಧ ಎರಡು ಕೇಸ್ ದಾಖಲು

ಸಂಗೀತಾ ರಮೇಶ ಪವಾರ ಮೃತಪಟ್ಟ ಕಾರಣ ಕೂಡಗಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.  ಆರೋಪಿ ಯೋಧನನ್ನು ಬಂಧಿಸಲು ಕೂಡಗಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಹುಬ್ಬು ಪುನ್ನು ರಾಠೋಡ ಹಾಗೂ ಪತ್ನಿ

ಹುಬ್ಬು ಪುನ್ನು ರಾಠೋಡ ಹಾಗೂ ಪತ್ನಿ

  • Share this:
ವಿಜಯಪುರ,(ಸೆ. 18): ಇದೊಂಥರ ದುರಂತ ಕಥೆ.  ತಾಯಿ ಇಲ್ಲದೆ ಮಗು ತಬ್ಬಲಿಯಾಗಿದೆ. ತಾಯಿಯ ಕಡೆಯವರು ತಂದೆಯ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಯೋಧನಾಗಿರುವ ತಂದೆ ನಾಪತ್ತೆಯಾಗಿದ್ದಾರೆ.  ಸದ್ಯ ಏಳು ತಿಂಗಳ ಮಗು ತಾಯಿಯನ್ನು ಕಳೆದುಕೊಂಡು ತಂದೆ ಇಲ್ಲದಂತಾಗಿದೆ. ಇಂಥದ್ದೊಂದು ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಎಂಬಲ್ಲಿ. ಯೋಧನಿಂದ ಮತ್ತು ಕುಟುಂಬಸ್ಥರಿಂದ ಹಲ್ಲೆಗೊಳಗಾದ ಯುವತಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದು, ಯುವತಿಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಕೆಯ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

2019ರ ಜೂನ್ 10 ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಎಲ್. ಟಿ. 1 ಪ್ರದೇಶದ ಯುವತಿ ಸಂಗೀತಾ ರಮೇಶ ಪವಾರ ವಿಜಯಪುರ ತಾಲೂಕಿನ ಮದಭಾವಿಯ ನಿವಾಸಿ ಹುಬ್ಬು ಪುನ್ನು ರಾಠೋಡ ಎಂಬವರೊಂದಿಗೆ ಹಸೆಮಣೆ ಏರಿದ್ದರು.  ಮದುವೆಯಾಗಿ ಎರಡು ತಿಂಗಳ ನಂತರ ಯೋಧ ಹಾಗೂ ಆತನ ಕುಟುಂಬಸ್ಥರು ಯುವತಿಗೆ ಕಿರುಕುಳ ನೀಡಲಾರಂಭಿಸಿದ್ದರು. ಅಷ್ಟೇ ಅಲ್ಲದೆ ಅನುಮಾನದ ದೃಷ್ಠಿಯಿಂದ ನೋಡುತ್ತಿದ್ದ ಗಂಡನ ಮನೆಯವರು ಆಕೆಯ ಮೇಲೆ ವಿನಾಕಾರಣ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಯುವತಿ ಪೋಷಕರು ತಿಳಿಸಿದ್ದರು.

ಹೀಗೆ ಹಲ್ಲೆಗೊಳಗಾದ ಗರ್ಭಿಣಿ ಯುವತಿಯನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ 7 ತಿಂಗಳ ಮಗುವನ್ನು ಹೊರ ತೆಗೆಯದಿದ್ದರೆ ತಾಯಿಯ ಜೀವಕ್ಕೆ ಅಪಾಯ ಎಂದು ವೈದ್ಯರು ತಿಳಿಸಿದ್ದರು.  ಈ ಹಿನ್ನೆಲೆಯಲ್ಲಿ ಸಿಜೇರಿಯನ್ ಮೂಲಕ ಯುವತಿಯ ಹೆರಿಗೆ ಮಾಡಿಸಲಾಗಿತ್ತು.  ಆದರೂ, ಯೋಧನಾಗಿದ್ದ ಪತಿ ಹೆಂಡತಿ ಮತ್ತು ಮಗುವನ್ನು ನೋಡಲು ಬಂದಿರಲಿಲ್ಲ.  ಹೆರಿಗೆಯ ನಂತರ ಆರೋಗ್ಯ ಹದಗೆಟ್ಟ ಯುವತಿ ಸಂಗೀತಾ ರಮೇಶ ಪವಾರ ಚಿಕಿತ್ಸೆ ಫಲಕಾರಿಯಾಗದೆ ಸೆ. 8 ರಂದು ಮೃತಪಟ್ಟಿದ್ದರು.

ಈಗ ಯುವತಿಯ ಸಾವಿಗೆ ಆಕೆಯ ಪತಿ ಹುಬ್ಬು ಹಾಗೂ ಆತನ ಪೋಷಕರು ಕಾರಣವೆಂದು ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆ ನಡೆದ ಬಳಿಕ ಯೋಧನ ವಿರುದ್ಧ 2020ರ ಜನವರಿ 17 ರಂದು ದೂರು ದಾಖಲಾಗಿತ್ತು.  ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಯೋಧ ಹುಬ್ಬು ಪುನ್ನು ರಾಠೋಡನನ್ನು ಮರಳಿ ಸೇನೆಗೆ ಸೇರಿಸಿಕೊಂಡಿಲ್ಲ.  ಈ ಮಧ್ಯೆ ತಾಯಿ 7 ತಿಂಗಳ ಮಗು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾಳೆ.

ಇದಕ್ಕೆ ಯೋಧ ಮತ್ತು ಆತನ ತಂದೆ ತಾಯಿಯೇ ಕಾರಣವೆಂದು ಹೆತ್ತ ಮಗಳನ್ನು ಕಳೆದುಕೊಂಡ ತಂದೆ ತಾಯಿ ಆರೋಪಿಸಿದ್ದಾರೆ. ಪತ್ನಿ ಸಾವಿಗೀಡಾದರೂ ನೋಡಲು ಬಾರದ ಪತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪತ್ನಿ ಸಂಗೀತಾ ರಮೇಶ ಪವಾರ ಸಾವಿನ ಸುದ್ದಿ ತಿಳಿಯುತ್ತಲೇ ಯೋಧ ನಾಪತ್ತೆಯಾಗಿದ್ದಾನೆ.  ಈಗ ಸಂಗೀತಾ ರಮೇಶ ಪವಾರ ಮೃತಪಟ್ಟ ಕಾರಣ ಕೂಡಗಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.  ಆರೋಪಿ ಯೋಧನನ್ನು ಬಂಧಿಸಲು ಕೂಡಗಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
Published by:zahir
First published: