ಬಳ್ಳಾರಿಯ ವಿಮ್ಸ್ ನಲ್ಲಿ ಅಮಾನವೀಯ ಘಟನೆ; ವೀಲ್ ಚೇರ್ ನೀಡದ್ದಕ್ಕೆ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ

ಅಸ್ವಸ್ತಗೊಂಡಿದ್ದ ಮಗಳು ಶ್ರೀಂಥಾಜ್ ಳನ್ನು ಕರೆದುಕೊಂಡು ಹೋಗಲು ಸ್ಟ್ರೆಚರ್ ಅಥವಾ ವೀಲ್ ಚೇರ್ ಅನ್ನು ಸಿಬ್ಬಂದಿಗಳು ನೀಡಿಲ್ಲ. ಅದರ ಬದಲು ಮಕ್ಕಳ ವಾರ್ಡಿಗೆ ಹೋಗಿ ವೀಲ್ ಚೇರ್ ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ. ಇಲ್ಲಿರುವ ವೀಲ್ ಚೇರ್ ಕೊಡಿ ಬಂದು ವಾಪಾಸ್ ಕೊಡ್ತೇವೆ ಎಂದು ಕೇಳಿದರೂ ಅಲ್ಲಿಯ ಸಿಬ್ಬಂದಿ ನೀಡಲು ಒಪ್ಪಿಲ್ಲ.

news18-kannada
Updated:January 23, 2020, 4:01 PM IST
ಬಳ್ಳಾರಿಯ ವಿಮ್ಸ್ ನಲ್ಲಿ ಅಮಾನವೀಯ ಘಟನೆ; ವೀಲ್ ಚೇರ್ ನೀಡದ್ದಕ್ಕೆ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ
ಆಸ್ಪತ್ರೆಯಲ್ಲಿ ವೀಲ್​ ಚೇರ್​ ಇಲ್ಲದೆ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ.
  • Share this:
ಬಳ್ಳಾರಿ; ಈ ವೀಡಿಯೋ ನೋಡಿದರೆ ನೀವು ಬೇಸರಗೊಳ್ಳುತ್ತೀರಿ! ಛೀ… ಥೂ… ಎಂಥ ಪರಿಸ್ಥಿತಿ ಬಂತಪ್ಪ ಎಂದು ಮರುಗುತ್ತೀರಿ. ಪ್ರಜ್ಞೆತಪ್ಪಿ ಬಿದ್ದ ಮಗಳನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದರೆ ವೀಲ್ ಚೇರ್ ನೀಡದೆ ದಾಷ್ಟ್ಯ ಮೆರೆದಿದೆ. ವೀಲ್ ಚೇರ್ ಇದ್ದರೂ ನೀಡದ ಕಾರಣ ಎದೆಯೆತ್ತರಕ್ಕೆ ಬೆಳೆದ ತನ್ನ ಮಗಳನ್ನು ತಂದೆ ಚಿಕಿತ್ಸೆಗಾಗಿ ವಾರ್ಡಿಗೆ ಹೆಗಲ ಮೇಲೆ ಹೊತ್ತೊಯ್ಯುತ್ತಿರುವ ದೃಶ್ಯ ಎಂಥವರ ಮನವೂ ಕಲಕುತ್ತೆ. ಅಲ್ಲದೆ, ಬಳ್ಳಾರಿ ವಿಮ್ಸ್​ ಆಸ್ಪತ್ರೆ ಸಿಬ್ಬಂದಿಗಳ ಅಮಾನವೀಯತೆ ಮುಖಕ್ಕೂ ಗನ್ನಡಿ ಹಿಡಿಯುತ್ತದೆ.

ಎಂದಿನಂತೆ ನಿನ್ನೆ ಸರಕಾರಿ ಶಾಲೆಗೆ ಹೋಗಿದ್ದ ಮಗಳು ಶ್ರೀಂಥಾಜ್ ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಈ ವಿಷಯ ತಿಳಿಯುತ್ತಿದ್ಧಂತೆ ಪೋಷಕರಾದ ಮಾಬಾಷಾ ಹಾಗೂ ಫಾತೀಮಾ ಬಳ್ಳಾರಿಯ ವಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮಗಳನ್ನು ಆಂಬುಲೆನ್ಸ್ ಸಯಾಹದಿಂದ ಕರೆದುಕೊಂಡುಬಂದಿದ್ದಾರೆ. ವಿಮ್ಸ್ ನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದುಕೊಂಡು ಬಂದಾಗ ಪ್ರಾಥಮಿಕ ಚಿಕಿತ್ಸೆ ನೀಡಿ ಮಕ್ಕಳ ವಾರ್ಡಿಗೆ ಕರೆದುಕೊಂಡು ಹೋಗುವಂತೆ ಅಲ್ಲಿಯ ವೈದ್ಯರು ಆಸ್ಪತ್ರೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಆದರೆ ಅಸ್ವಸ್ತಗೊಂಡಿದ್ದ ಮಗಳು ಶ್ರೀಂಥಾಜ್ ಳನ್ನು ಕರೆದುಕೊಂಡು ಹೋಗಲು ಸ್ಟ್ರೆಚರ್ ಅಥವಾ ವೀಲ್ ಚೇರ್ ಅನ್ನು ಸಿಬ್ಬಂದಿಗಳು ನೀಡಿಲ್ಲ. ಅದರ ಬದಲು ಮಕ್ಕಳ ವಾರ್ಡಿಗೆ ಹೋಗಿ ವೀಲ್ ಚೇರ್ ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ. ಇಲ್ಲಿರುವ ವೀಲ್ ಚೇರ್ ಕೊಡಿ ಬಂದು ವಾಪಾಸ್ ಕೊಡ್ತೇವೆ ಎಂದು ಕೇಳಿದರೂ ಅಲ್ಲಿಯ ಸಿಬ್ಬಂದಿ ನೀಡಲು ಒಪ್ಪಿಲ್ಲ.

ಇದರಿಂದ ಮನನೊಂದ ತಂದೆ ಹುಷಾರಿಲ್ಲದೆ ಮಲಗಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಲು ವಿಮ್ಸ್ ತುರ್ತು ಚಿಕಿತ್ಸಾ ಘಟಕದಿಂದ ಮಕ್ಕಳ ವಾರ್ಡಿಗೆ ತನ್ನ ಎದೆ ಎತ್ತರಕ್ಕೆ ಬೆಳೆದ ಮಗಳನ್ನು ಹೆಗಲ ಮೇಲೆಯೇ ಎತ್ತಿಕೊಂಡು ತೆರಳಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಮೊಬೈಲ್ ನಲ್ಲಿ ವೀಡಿಯೋ ಮಾಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ನಿವಾಸಿ ಮಾಬಾಷಾ ಕೂಲಿ ಕಾರ್ಮಿಕ. ಅದೆಷ್ಟೋ ಬಡತನವಿದ್ದರೂ ಮಗಳು ಶ್ರೀಂಥಾಜ್ ಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಕಳೆದೆರಡು ತಿಂಗಳಿನಿಂದ ಆಗಾಗ ಹುಷಾರಿಲ್ಲದಂತಾಗುತ್ತಿದ್ದ ಮಗಳನ್ನು ವೈದ್ಯರಿಗೆ ತೋರಿಸಿದಾದ ಆಕೆಗೆ ಹೃದಯ ಸಂಬಂಧಿ ತೊಂದರೆ ಇದೆ ಎಂಬುದು ಗೊತ್ತಾಗಿದೆ. ನಿನ್ನೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಾಗಿ ಶಾಲೆಯಲ್ಲಿಯೇ ಶ್ರೀಂಥಾಜ್ ಪ್ರಜ್ಞೆತಪ್ಪಿ ಬಿದ್ದಿದ್ದಾರೆ.

ಇದರಿಂದ ಭಯಭೀತರಾದ ತಂದೆ ಮಾಬಾಷಾ ಮಗಳನ್ನು ವಿಮ್ಸ್ ಗೆ ಕರೆದುಕೊಂಡು ಬಂದರೆ ವೀಲ್ ಚೇರ್ ನೀಡಿದ ಆಸ್ಪತ್ರೆ ಸಿಬ್ಬಂದಿ ದಾಷ್ಟ್ಯ ಮೆರೆದಿದ್ದಾರೆ. ಈ ಕುರಿತ ವರದಿ ಇದೀಗ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ವಿಮ್ಸ್ ಆಡಳಿತ ಮಂಡಳಿ ಮಕ್ಕಳ ವಾರ್ಡಿನಲ್ಲಿದ್ದ ಶ್ರೀಂಥಾಜ್ ಆರೋಗ್ಯ ವಿಚಾರಣೆ ಮಾಡಿದ್ದಾರೆ. ವಿಮ್ಸ್ ಆಸ್ಪತ್ರೆಯಲ್ಲಿ ಇಂಥ ಘಟನೆಯಾಗಬಾರದಿತ್ತು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ವಿಮ್ಸ್ ಅಧೀಕ್ಷಕ ಡಾ ಮರಿರಾಜ್ ಹೂಗಾರ್ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದಲ್ಲಿ ಈ ಕುರಿತ ವರದಿ ಪ್ರಸಾರವಾದ ನಂತರ ವಿಮ್ಸ್ ಆಡಳಿತ ಮಂಡಳಿ ಎಚ್ಚೆತ್ತು ಶ್ರೀಂಥಾಜ್ ಆರೋಗ್ಯ ವಿಚಾರಣೆಗೆ ಮುಂದಾಗಿದೆ. ಆದರೆ, ಇಲ್ಲಿ ಪ್ರತಿನಿತ್ಯ ಇಂತಹ ನೂರಾರು ಘಟನೆಗಳು ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂಬುದು ಸ್ಥಳೀಯರ ಆರೋಪ.ವೈದ್ಯಕೀಯ ಸಚಿವರಾದ ಶ್ರೀರಾಮುಲು ಅವರ ತವರು ಜಿಲ್ಲೆಯಾದ ಬಳ್ಳಾರಿಯ ವಿಮ್ಸ್​ನಲ್ಲಿ ನಡೆಯುವ ಇಂತಹ ಎಲ್ಲಾ ಅಮಾನವೀಯ ಘಟನೆಗಳನ್ನು ಪ್ರತಿನಿತ್ಯ ವರದಿ ಮಾಡುವುದು ಮಾಧ್ಯಮಗಳಿಂದಲೂ ದುಸ್ಸಾಧ್ಯವೇ ಸರಿ. ಹೀಗಾಗಿ ಸಚಿವರು ಕೂಡಲೇ ಈ ಕುರಿತು ಗಮನವಹಿಸಬೇಕಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ವಿಮ್ಸ್​ಗೆ ಬರುವ ಬಡವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡುವಲ್ಲಿ ಶ್ರಮಿಸಬೇಕಿದೆ.

ಇದನ್ನೂ ಓದಿ : ಗೆಲುವನ್ನ ಸಹಿಸದವ್ರಿಗೆ ಅಸೂಯೆ ಇರುತ್ತೆ ಆದರೆ, ಅದು ಮುಗಿಸುವ ಹಂತಕ್ಕೆ ಹೋಗ್ಬಾರ್ದು; ಎನ್.ಎ. ಹ್ಯಾರಿಸ್ 
First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ