ರಾಮನಗರ: ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರನ್ನು ಸ್ಮರಿಸಿಕೊಳ್ಳಬೇಕು. ಕಷ್ಟಕ್ಕೆ ಆಗದವರನ್ನು ದೂರು ಇಡಬೇಕು ಅಂತಾರೆ ದೊಡ್ಡವರು. ಆದರೆ ಕನಕಪುರದಲ್ಲಿ (Kanakapura) ಎಲ್ಲಾ ಉಲ್ಟಾ ಆಯ್ತು. ಕೊಡುಗೆ ಕೊಟ್ಟವರನ್ನ ಮರೆತರು, ಆದರೆ ರಾಜಕೀಯ ವೈರಿಗಳು ಒಂದಾಗಿದ್ದರು. ಅರೇ ಇದೇನು ಹೇಳ್ತಿದ್ದೀವಿ ಅಂತ ಪ್ರಶ್ನೆ ಮಾಡ್ತಿದ್ದೀರಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ. ನಿನ್ನೆ ಕನಕಪುರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ (Mother And Children Hospital) ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಆರೋಗ್ಯ ಸಚಿವ ಸುಧಾಕರ್ (Dr K Sudhakar) ಆಸ್ಪತ್ರೆ ಉದ್ಘಾಟಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar), ಸಂಸದ ಡಿ.ಕೆ ಸುರೇಶ್ (DK Suresh), ಸಚಿವ ಸುಧಾಕರ್ ಅವರನ್ನು ಭವ್ಯವಾಗಿ ಸ್ವಾಗತಿಸಿ ಹೂವು ಕೊಟ್ಟು ಅವರ ಕೈಯಲ್ಲೇ ಟೇಫ್ ಕಟ್ ಮಾಡಿಸಿದ್ದರು. ಆದರೆ ಕನಕಪುರ ತಾಯಿ ಮಕ್ಕಳ ಆಸ್ಪತ್ರೆಗೆ ಹೆಚ್ಚು ಹಣಕೊಟ್ಟಿದ್ದ ಇನ್ಫೋಸಿಸ್ ಸಂಸ್ಥೆಯವರನ್ನೇ (Infosys) ಮರೆತು ಬಿಟ್ಟಿದ್ದರು.
ಆಸ್ಪತ್ರೆಯ ಉದ್ಘಾಟನೆಯ ಆಹ್ವಾನ ಪತ್ರಿಕೆಯಲ್ಲೂ ಸುಧಾ ಮೂರ್ತಿಯವರ ಹೆಸರು ಹಾಕಿರಲಿಲ್ಲ. ಸುಧಾ ಮೂರ್ತಿ ಅವರನ್ನೂ ಆಹ್ವಾನಿಸರಿಲಿಲ್ಲವಂತೆ. ನಾಮಕಾವಸ್ಥೆಗೆ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ನಿರ್ಮಿಸಿರುವ ಆಸ್ಪತ್ರೆ ಅಂತ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದಷ್ಟೇ ಸಾಧನೆ ಅಂತ ಬಿಂಬಿಸಿಕೊಂಡಿದ್ದಾರೆ.
ಇದನ್ನೂ ಓದಿ: DK Shivakumar: ವೇದಿಕೆ ಮೇಲೆ ಕಿಚಾಯಿಸಿದರೂ ಡಿಕೆ ಬ್ರದರ್ಸ್ನ ಹಾಡಿಹೊಗಳಿದ ಸಚಿವ ಸುಧಾಕರ್!
ಬಿಜೆಪಿ ಸರ್ಕಾರದಲ್ಲಿ ಪ್ರಚಾರ ಪಡೆಯುವವರಿಗೆ ಕಡಿಮೆ ಏನಿಲ್ಲ. ಮೊನ್ನೆ ಮೊನ್ನೆ ಪದ್ಮನಾಭನಗರ ರಸ್ತೆಗೆ ಖ್ಯಾತ ನಟ ಪುನೀತ್ ರಾಜ್ಕುಮಾರ್ ಹೆಸರಿಟ್ಟಿದ್ದರು. ಆದರೆ ಕಾರ್ಯಕ್ರಮದ ಬ್ಯಾನರ್ಗಳಲ್ಲಿ ಅಪ್ಪು ಫೋಟೋವನ್ನೇ ಹಾಕದೆ ಬಿಜೆಪಿಯ ನಾಯಕರ ಫೋಟೋಗಳು ಮಾತ್ರ ರಾರಾಜಿಸುತ್ತಿದ್ದವು. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
ಬೆಂಗಳೂರಿನ ಇಸ್ರೋ ಲೇಔಟ್ನಲ್ಲಿ ಜ್ಞಾನಪೀಠ ಪುರಸ್ಕೃತ ದ.ರಾ ಬೇಂದ್ರೆಯವರ ಹೆಸರಲ್ಲಿ ಉದ್ಯಾನವನ ನಿರ್ಮಿಸಿದ್ದರು. ಆದರೆ ಸಚಿವ ಅಶೋಕ್ ಫೋಟೋ ರಾರಾಜಿಸುತ್ತಿತ್ತು. ಆದರೆ ದ.ರಾ. ಬೇಂದ್ರೆ ಅವರ ಫೋಟೋ ಎಲ್ಲೂ ಕಾಣಿಸಲಿಲ್ಲ. ಅಷ್ಟೇ ಯಾಕೆ ಪದ್ಮನಾಭನಗರ ಪಾರ್ಕ್ಗೆ ಜನರಲ್ ಬಿಪಿನ್ ರಾವತ್ ಅವರ ಹೆಸರಿಟ್ಟಿದ್ದರು. ಅವರ ಫೋಟೋ ಹಾಕದೆ ಅಶೋಕ್ ಫೋಟೋ ಹಾಕಿಕೊಂಡಿದ್ದರು. ಈಗ ಇನ್ಫೋಸಿಸ್ ಸಂಸ್ಥೆ ಹಣ ಕೊಟ್ಟು ಆಸ್ಪತ್ರೆ ಕಟ್ಟಿಸಿದ್ದರೆ ಅವರನ್ನೇ ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇನ್ನು, ಈ ಬಗ್ಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದ ಡಿಕೆ ಸುರೇಶ್, ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಮಾನ-ಮರ್ಯಾದೆ ಇದೆಯಾ? ಆಸ್ಪತ್ರೆ ಕೊಡುಗೆ ನೀಡಿದ ಸುದಾಮೂರ್ತಿಯವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.
ಇತ್ತ ಡಿಕೆ ಶಿವಕುಮಾರ್ ಕೂಡ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವೇದಿಕೆಯಲ್ಲೇ ಎಚ್ಚರಿಕೆ ನೀಡಿದರು. ನನಗೆ ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಪಂಚಾಯಿತಿ ಯಾರೂ ಅಂತ ಸಹ ಗೊತ್ತಿಲ್ಲ. ಆದರೆ ಅವರು ಆಡಿದ ಹಾಗೆ ಬಿಡಲು ಆಗೋದಿಲ್ಲ. ಅವರನ್ನ ವಾಚ್ ಮಾಡುತ್ತಿದ್ದೇವೆ. ಅವರ ಕೆಲಸಕ್ಕೆ ನಾವು ಅಡ್ಡಿ ಮಾಡಲ್ಲ. ಅವರು ತಮ್ಮ ಕೆಲಸವನ್ನು ಕರೆಕ್ಟಾಗಿ ಮಾಡಬೇಕು. ಏನಾದರೂ ವ್ಯತ್ಯಾಸ ಆದರೆ ಅದು ನಮ್ಮ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿದರು.
ಒಟ್ಟಾರೆ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಲೆಂದು ಇನ್ಫೋಸಿಸ್ ಸುಧಾ ಮೂರ್ತಿಯವರ ಈ ಕೊಡುಗೆಯನ್ನು ರಾಜ್ಯ ಸರ್ಕಾರ ನೆನೆಯಬೇಕಿತ್ತು. ರಾಮನಗರ ಜಿಲ್ಲಾಡಳಿತ ಸಹ ಎಡವಿದೆಯೋ, ಅಧಿಕಾರದ ದರ್ಪವೋ ತಿಳಿಯುತ್ತಿಲ್ಲ. ಸಹಾಯ ಮಾಡಿದವರನ್ನೇ ಮರೆತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ