ಆನೇಕಲ್​​​: ಕಾಡಿನ ಮಧ್ಯೆ ಆನೆಗಳ ಕಾವಲಿನಲ್ಲಿ ಸರಳ ಮಾತೆ ಸುಧಾಮೂರ್ತಿ ವಿಹಾರ

ತಾಯಿ ಮತ್ತು ಇತರ ಆನೆಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆದಾಡುತ್ತ, ಆಟವಾಡುತ್ತ ಕಾಲ ಕಳೆಯುತ್ತಿರುವ ಪುಟ್ಟ ಸುಧಾಮೂರ್ತಿ ತಾಯಿಯೊಂದಿಗೆ ಕೆರೆಯಲ್ಲಿ ಜಲಕ್ರೀಡೆ ಸಹ ಆಡುತ್ತಾ ಉದ್ಯಾನವನದ ಸಿಬ್ಬಂದಿಯ ಕಣ್ಮನ ಸೆಳೆಯುತ್ತಿದೆ.

ಸುಧಾ ಮೂರ್ತಿ

ಸುಧಾ ಮೂರ್ತಿ

  • Share this:
ಆನೇಕಲ್(ಸೆ.04): ಕಾಡಿನ ನಡುವೆ ಅದೂ ಗಜಪಡೆ ಕಾವಲಿನಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾಳೆ. ಇದೆನಪ್ಪಾ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿಯವರು ಕೊರೋನಾ ನಡುವೆ ಯಾವಾಗ ಆನೆಗಳ ಜೊತೆ ವಿಹಾರಕ್ಕೆ ತೆರಳಿದ್ದರು ಅಂದುಕೊಂಡ್ರಾ? ಇಲ್ಲಿದೆ ನೋಡಿ ನಿಮ್ಮ ಪ್ರಶ್ನೆಗೆ ಉತ್ತರ. ಇತ್ತೀಚೆಗೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ಸುವರ್ಣ ಹೆಣ್ಣು ಮರಿಗೆ ಜನ್ಮ ನೀಡಿತ್ತು. ತಿಂಗಳ ಬಳಿಕ ಆನೆ ಮರಿಗೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿರವರ ಹೆಸರು ನಾಮಕರಣ ಮಾಡಿದ್ದು, ಇದೀಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಾಳೆ. 

ಹೇಳಿ ಕೇಳಿ ಸುಧಾಮೂರ್ತಿ ಎಂದಾಕ್ಷಣ ಎಂತಹವರಿಗೂ ಅವರ ಸಮಾಜಮುಖಿ ಕಾರ್ಯಗಳು ಒಂದು ಕ್ಷಣ ಕಣ್ಣ ಮುಂದೆ ಬಂದಂತಾಗುತ್ತದೆ. ಇನ್ನೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುಟ್ಟ ಸುಧಾಮೂರ್ತಿ ಎಂದಾಕ್ಷಣ ಕಾನನದ ನಡುವೆ ತಾಯಿ ಸುವರ್ಣ ಮತ್ತು ಗಜಪಡೆ ಜೊತೆ ಸ್ವಚ್ಛಂದವಾಗಿ ವಿಹರಿಸುತ್ತಿರುವುದು ಕಣ್ಣ ಮುಂದೆ ಕನವರಿಸುತ್ತದೆ.

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ಸುವರ್ಣ(45) ಕಳೆದ ಒಂದೂವರೆ ತಿಂಗಳ ಹಿಂದೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಅಂದಿನಿಂದ ಸೀಗೆಕಟ್ಟೆ ಆನೆ ಬಿಡಾರದಲ್ಲಿ ಮಾವುತರು ಕಾವಾಡಿಗಳು ಹಾರೈಕೆ ಮಾಡುತ್ತಿದ್ದರು. ಆದ್ರೆ ಇದೀಗ ತಾಯಿ ಸುವರ್ಣ ಮತ್ತು ಇತರೆ ಆನೆಗಳೊಂದಿಗೆ ಮರಿ ಆನೆಯನ್ನು ಹೊರ ಬಿಟ್ಟಿದ್ದು, ಇತರೆ ಆನೆಗಳೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿದೆ.

ತಾಯಿ ಮತ್ತು ಇತರ ಆನೆಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆದಾಡುತ್ತ, ಆಟವಾಡುತ್ತ ಕಾಲ ಕಳೆಯುತ್ತಿರುವ ಪುಟ್ಟ ಸುಧಾಮೂರ್ತಿ ತಾಯಿಯೊಂದಿಗೆ ಕೆರೆಯಲ್ಲಿ ಜಲಕ್ರೀಡೆ ಸಹ ಆಡುತ್ತಾ ಉದ್ಯಾನವನದ ಸಿಬ್ಬಂದಿಯ ಕಣ್ಮನ ಸೆಳೆಯುತ್ತಿದೆ.

ಇದನ್ನೂ ಓದಿ: Ragini Arrested: ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಾಗಿಣಿ ಬಂಧನ, ಮನೆಯಲ್ಲಿ ನೀರವ ಮೌನ!

ಇನ್ನೂ, ಆನೆ ಮರಿಗೆ ಹೆಸರಿಡಲು ಉದ್ಯಾನವನದ ಅಧಿಕಾರಿಗಳು ಆನ್​​ಲೈನ್​​ ಮೊರೆ ಹೋಗಿದ್ದರು. ಬಹುತೇಕ ಮಂದಿ ಸರಳ ವ್ಯಕ್ತಿತ್ವದ ಸುಧಾಮೂರ್ತಿರವರ ಹೆಸರು ಸೂಚಿಸಿದ್ದರು. ವನ್ಯಜೀವಿ ಸಂರಕ್ಷಣೆ ಮತ್ತು ಸಮಾಜಮುಖಿ ಕೆಲಸಗಳನ್ನು ಪರಿಗಣಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಅಂತಿಮವಾಗಿ ಸುಧಾಮೂರ್ತಿ ಹೆಸರನ್ನು ನಾಮಕರಣ ಮಾಡಿದ್ದಾರೆ. ಅಂದಹಾಗೆ ಆನೆ ಮರಿಗೆ ಸುಧಾ ಮೂರ್ತಿ ಹೆಸರು ನಾಮಕರಣ ಮಾಡಿರುವುದು ಸುಧಾಮೂರ್ತಿ ಅಭಿಮಾನಿ ಬಳಗ ಮಾತ್ರವಲ್ಲದೆ ಉದ್ಯಾನವನದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿ ಸಂತಸ ಮನೆ ಮಾಡಿದೆ.
Published by:Ganesh Nachikethu
First published: