Pasha vs Nirani - ಮುರುಗೇಶ್ ನಿರಾಣಿ ಬಳಿ 500 ಸಿಡಿ ಇವೆ: ಅಲಂ ಪಾಷಾ ಆರೋಪ

ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ ರೈತರ ಹೆಸರಿನಲ್ಲಿ ಹಲವು ಯೋಜನೆ ಹಣ ಲಪಟಾಯಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮೂಲಕ ಅಮಾಯಕ ರೈತನ್ನ ವಂಚಿಸಿದ್ಧಾರೆ ಎಂದು ಉದ್ಯಮಿ ಎ ಅಲಂ ಪಾಷಾ ಆರೋಪಿಸಿದ್ದಾರೆ.

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

 • Share this:
  ಬೆಂಗಳೂರು (ಜುಲೈ 20): ಯಡಿಯೂರಪ್ಪ ಅವರ ಸಿಎಂ ಕುರ್ಚಿ ಅಲುಗಾಡುತ್ತಿರುವಂತೆಯೇ ಸಿಎಂ ರೇಸ್​ನಲ್ಲಿ ಹೆಸರು ಕೇಳಲ್ಪಡುತ್ತಿರುವ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಎ ಅಲಂ ಪಾಷ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಕೆಲ ಸಚಿವರು ಮತ್ತು ಶಾಸಕರು ಸಿಡಿ ಭಯದಿಂದ ಕೋರ್ಟ್​ನಿಂದ ಮಾಧ್ಯಮ ಪ್ರಸಾರಕ್ಕೆ ತಡೆ ತಂದಿರುವ ವಿಚಾರವನ್ನ ಪ್ರಸ್ತಾಪಿಸಿದ ಅವರು ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿಡಿಗಳು ಇವೆ ಎಂದು ಆರೋಪಿಸಿದ್ದಾರೆ. ದಿ ಕ್ಯಾಪಿಟಲ್ ಹೋಟೆಲ್​ನಲ್ಲಿ ಇಂದು ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಲಂ ಪಾಷಾ, ಮುರುಗೇಶ್ ನಿರಾಣಿ ಬಳಿ ಇರುವ ಸಿಡಿಗಳು ಯಾರದ್ದು ಬೇಕಾದರೂ ಆಗಿರಬಹುದು. ಇವರಿಗೆ ಈಗ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕಿಬಿಟ್ಟರೆ ಈ ಸಿಡಿಗಳ ಸಂಖ್ಯೆ 50 ಲಕ್ಷ ಕೂಡ ಆಗಬಹುದು ಎಂದು ಲೇವಡಿ ಮಾಡಿದ್ಧಾರೆ.

  ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅಲಂ ಪಾಷ, ಸಿಎಂ ಯಡಿಯೂರಪ್ಪ ಮೇಲಿರುವ ಆರೋಪಗಳಿಂದಲೇ ಅವರನ್ನ ಹೈಕಮಾಂಡ್ ಕೆಳಗಿಳಿಸುತ್ತಿದೆ ಎಂದಿದ್ದಾರೆ. ಇದೇ ವೇಳೆ, ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪಾಷಾ, ಗಣಿಗಾರಿಕೆ ಸಚಿವರ ಅಕ್ರಮ ಮತ್ತು ವಂಚನೆಗಳ ವಿವರ ನೀಡಿದ್ದಾರೆ.

  ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದಲ್ಲಿ ಮುಗುರೇಶ್ ನಿರಾಣಿ ತಮ್ಮ ಪ್ರಭಾವ ಬಳಸಿ ಅಕ್ರಮ ಎಸಗಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಇವರು ಬೆಳೆ ಸಾಲ ಪಡೆಯುತ್ತಿದ್ದಾರೆ. ಈ ಹಣವನ್ನು ನಕಲಿ ಹೆಸರು, ಖಾತೆಯ ಮೂಲಕ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಬ್ಯಾಂಕ್​ನಲ್ಲಿ ಜಮೆ ಮಾಡಿದ್ದಾರೆ. ರೈತರಿಗೆ ಸಿಗುವ ಶೇ. 4ರ ಬಡ್ಡಿಯ ಕೃಷಿ ಸಾಲವನ್ನು ರೈತರ ನಕಲಿ ಆದಾರ್ ಕಾರ್ಡ್ ಬಳಸಿ ಪಡೆದಿದ್ದಾರೆ. ಈ ರೀತಿಯಾಗಿ 8 ಸಾವಿರ ಕೋಟಿ ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂದು ಅಲಂ ಪಾಷ ದೂರಿದ್ದಾರೆ.

  ಇದನ್ನೂ ಓದಿ: ಬಾನಂದೂರು, ವೀರಾಪುರ ಗ್ರಾಮಾಭಿವೃದ್ಧಿಗೆ ಕುಮಾರಸ್ವಾಮಿ ಕೊಡುಗೆ ಅಪಾರ: ನಿರ್ಮಲಾನಂದ ಸ್ವಾಮೀಜಿ

  ಉತ್ತರ ಕರ್ನಾಟಕ ಭಾಗದ ಅಮಾಯಕ ರೈತರಿಗೆ ಮುರುಗೇಶ್ ನಿರಾಣಿ ವಂಚಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮತ್ತು ರೈತರ ಹೆಸರಲ್ಲಿ ವಂಚನೆ ಆಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ನಿರಾಣಿ ಒಡೆತನದ ಮುಧೋಳದ ಸಕ್ಕರೆ ಕಾರ್ಕಾನೆ ಅಕ್ರಮವಾಗಿ ಸ್ಥಾಪನೆಯಾಗಿದೆ. ನಿರಾಣಿ ಶುಗರ್ಸ್​ನಲ್ಲಿ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿದ್ದರು. ಇದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಯಿತು ಎಂದು ಸಚಿವರಿಗೆ ಅಲಂ ಪಾಷ ಪ್ರಶ್ನೆ ಮಾಡಿದ್ಧಾರೆ.

  ಕೈಗಾರಿಕೋದ್ಯಮಿ ಆಗಿರುವ ಅಲಂ ಪಾಷ ಅವರು ಮುರುಗೇಶ್ ನಿರಾಣಿ, ಸಿಎಂ ಯಡಿಯೂರಪ್ಪ ಸೇರಿದಂತೆ ಕೆಲವು ವ್ಯಕ್ತಿಗಳ ವಿರುದ್ಧ 10 ವರ್ಷಗಳ ಹಿಂದಿನ ಡೀನೋಟಿಪಿಕೇಶನ್ ಮತ್ತು ಫೋರ್ಜರಿ ಕೇಸ್ ದಾಖಲಿಸಿದ್ದರು. ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ ಅವರು ತನ್ನ ಸಹಿಯನ್ನ ಫೋರ್ಜಿ ಮಾಡಿ 26 ಎಕರೆ ಭೂಮಿಯನ್ನ ಲಪಟಾಯಿಸಿದ್ದಾರೆ. 2010 ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್​ನಲ್ಲಿ ತನ್ನ ಯೋಜನೆಗೆ ಒಪ್ಪಿಗೆ ಸಿಕ್ಕು 26 ಎಕರೆಯಷ್ಟು ಕೆಐಎಡಿಬಿ ಜಮೀನು ಸ್ಯಾಂಕ್ಷನ್ ಆಗಿತ್ತು. ಆದರೆ, ಮುರುಗೇಶ್ ನಿರಾಣಿ ಇದನ್ನು ತಡೆಹಿಡಿದು ಸಹಿಯನ್ನ ಫೋರ್ಜರಿ ಮಾಡಿ ಆ ಭೂಮಿಯನ್ನ ಬೇರೆಯವರಿಗೆ ಮಾರಾಟ ಮಾಡಿದರು ಎಂದು ಅಲಂ ಪಾಷಾ ಆರೋಪ ಮಾಡಿ ದೂರು ದಾಖಲು ಮಾಡಿದ್ದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ಆಶಿಕ್ ಮುಲ್ಕಿ
  Published by:Vijayasarthy SN
  First published: