• Home
  • »
  • News
  • »
  • state
  • »
  • Darshan vs Lankesh - ಮೈಸೂರಿನ ಹೋಟೆಲ್​ನಲ್ಲಿ ದಲಿತ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ: ಇಂದ್ರಜಿತ್ ಲಂಕೇಶ್ ಆರೋಪ

Darshan vs Lankesh - ಮೈಸೂರಿನ ಹೋಟೆಲ್​ನಲ್ಲಿ ದಲಿತ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ: ಇಂದ್ರಜಿತ್ ಲಂಕೇಶ್ ಆರೋಪ

ನಟ ದರ್ಶನ್​

ನಟ ದರ್ಶನ್​

ಮೈಸೂರಿನ ಸಂದೇಶ್ ನಾಗರಾಜ್ ಹೋಟೆಲ್ನಲ್ಲಿ ದಲಿತ ಸಮುದಾಯದ ವೇಟರ್ ಮೇಲೆ ದರ್ಶನ್ ಮತ್ತವರ ಗ್ಯಾಂಗ್​ನವರು ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದಾರೆ.

  • Share this:

    ಬೆಂಗಳೂರು(ಜುಲೈ 15): ತನ್ನ ಹೇಳಿಕೆಗಳ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಹಲವು ವಿವಾದಗಳನ್ನ ಎಬ್ಬಿಸಿರುವ ಖ್ಯಾತ ನಿರ್ದೇಶಕ ಮತ್ತು ನಟ ಇಂದ್ರಜಿತ್ ಲಂಕೇಶ್ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಲಂಕೇಶ್ ಗಂಭೀರ ಆರೋಪ ಮಾಡಿದ್ಧಾರೆ. ಮೈಸೂರಿನಲ್ಲಿರುವ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್ ಹೋಟೆಲ್​ನಲ್ಲಿ ದರ್ಶನ್ ಮತ್ತವರ ಗ್ಯಾಂಗ್​ನವರು ಹೋಟೆಲ್​ನ ವೇಟರ್​ವೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಆ ವೇಟರ್ ಒಬ್ಬ ದಲಿತ ವ್ಯಕ್ತಿಯಾಗಿದ್ದಾನೆ ಎಂದು ಇಂದ್ರಜಿತ್ ಲಂಕೇಶ್ ಆಪಾದನೆ ಮಾಡಿದ್ದಾರೆ. ದಲಿತ ವ್ಯಕ್ತಿಯ ಮೇಲೆ ಹಲ್ಲೆ ಆಗಿದ್ದರೂ ದರ್ಶನ್ ಮತ್ತವರ ಸಹಚರರ ವಿರುದ್ಧ ಮೈಸೂರು ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲವೆಂದು ಲಂಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ದಲಿತ ವೈಟರ್ ಮೇಲೆ ದರ್ಶನ್ ಹಾಗೂ ಅವರ ಗ್ಯಾಂಗ್​ನವರು ಹಲ್ಲೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಆ ದಲಿತ ಯುವಕನ ಹೆಂಡತಿ ಪೊರಕೆ ಹಿಡಿದುಕೊಂಡು ಜಗಳಕ್ಕೆ ಬಂದಿದ್ದರು. ಕೊನೆಗೆ ಇವರು ಆ ಯುವಕನಿಗೆ ಸೆಟಲ್ಮೆಂಟ್ ಮಾಡಿ ಸುಮ್ಮನಿರಿಸಿದ್ದಾರೆ ಎಂದು ಪತ್ರಕರ್ತರೂ ಆಗಿರುವ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.


    ಮೈಸೂರಿನಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಮೈಸೂರು ಜಿಲ್ಲೆಯಲ್ಲಿ ಸೆಲಬ್ರಿಟಿಗಳ ನಡವಳಿಕೆ, ಮಾತು ಮಿತಿ ಮೀರುತ್ತಿದೆ. ಸಾಕ್ಷಿಗಳಿದ್ದರೂ ಮೈಸೂರು ಪೊಲೀಸರು ಈ ಘಟನೆ ಸಂಬಂಧ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಅಲ್ಲಿಯ ಪೊಲೀಸರ ಈ ನಿಷ್ಕ್ರಿಯತೆ ಅನುಮಾನ ಮೂಡಿಸುತ್ತಿದೆ. ಮೈಸೂರಿನ ಪೊಲೀಸ್ ಠಾಣೆಗಳು ಸೆಟಲ್​ಮೆಂಟ್ ತಾಣಗಳಾಗುತ್ತಿವೆ. ಹೀಗಾಗಿ, ಮೈಸೂರು ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕು. ಭ್ರಷ್ಟ ಅಧಿಕಾರಿಗಳನ್ನ ವಜಾಗೊಳಿಸಿ ಸಮರ್ಥ ಅಧಿಕಾರಿಗಳನ್ನ ನೇಮಿಸಬೇಕು ಎಂದು ಹೇಳಿರುವ ಇಂದ್ರಜಿತ್ ಲಂಕೇಶ್ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ.


    ಇದನ್ನೂ ಓದಿ: ದರ್ಶನ್ ಸರ್​ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ ಎಂದ ಅರುಣಾ ಕುಮಾರಿ: ವಂಚನೆ ಯತ್ನ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್


    ಇದೇ ವೇಳೆ, ದರ್ಶನ್ ಹಾಗೂ ಇತರ ಕೆಲವರಿಂದ ವಂಚನೆ ಆರೋಪ ಎದುರಿಸುತ್ತಿರುವ ಅರುಣಾ ಕುಮಾರಿ ಪರ ಇಂದ್ರಜಿತ್ ಲಂಕೇಶ್ ಅನುಕಂಪ ವ್ಯಕ್ತಪಡಿಸಿದ್ದಾರೆ. ಅರುಣಾ ಕುಮಾರಿ ಅವರಿಗೆ ಅನ್ಯಾಯ ಆಗಿದೆ. ನ್ಯಾಯದ ಬಗ್ಗೆ ತನಿಖೆ ಆಗಬೇಕು. ಅರುಣಾ ಕುಮಾರಿ ಅವರ ತಲೆ ಸೀಳುತ್ತೀನಿ, ತಲೆ ಒಡೆಯುತ್ತೀನಿ ಅಂತ ಮೊದಲು ಅಂದ್ರು. ಈಗ ನಮ್ಮ ನಿರ್ಮಾಪಕರು, ನಮ್ಮವರು ಎನ್ನುತ್ತಿದ್ದಾರೆ. ಅರುಣಾ ಕುಮಾರಿ ಅವರನ್ನ ನಿಮ್ಮ ತೋಟಕ್ಕೆ ಯಾಕೆ ಕರೆಸಿಕೊಂಡ್ರಿ? 25 ಕೋಟಿ ರೂ ವಂಚನೆ ಆಗಿದೆ ಅಂತ ಹೇಳುತ್ತಿದ್ರಿ. ಈಗ ಕಾಂಪ್ರಮೈಸ್ ಆಗುತ್ತೆ ಅಂತಿದ್ದಾರೆ. ಆರ್ ಆರ್ ನಗರ ಆರ್ಚ್ ಬಳಿ ಅರುಣಾರನ್ನ ಕರೆಸಿಕೊಂಡು ಹೆದರಿಸುತ್ತಿದ್ದಾರೆ. ರೈತರ ಬ್ರ್ಯಾಂಡ್ ಅಂಬಾಡಡರ್ ಆಗಿರುವ ಇವರ ಭಾಷೆ ಬಳಕೆ ಸರಿ ಇಲ್ಲ ಎಂದು ಚಾಲೆಂಜೆಂಗ್ ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.


    ದರ್ಶನ್ ಅವರಂಥ ದೊಡ್ಡ ನಟನ ವಿರುದ್ಧ ಇಂಥ ಆರೋಪ ಮಾಡುವಷ್ಟು ಧೈರ್ಯ ಹೇಗೆ ಬಂತು ಎಂಬ ಮಾಧ್ಯಮದವರ ಪ್ರಶ್ನೆಗೆ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿ, ನಾನು ಹಲವಾರು ದೊಡ್ಡ ದೊಡ್ಡ ನಟರ ವಿಚಾರ ಮಾತನಾಡಿದ್ಧೇನೆ. ನನಗೆ ಭಯ ಇಲ್ಲ. ಪೊಲೀಸ್ ಪ್ರೊಟೆಕ್ಷನ್ ಕೂಡ ಕೇಳಿಲ್ಲ. ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಆಶಿಸಿದ್ದಾರೆ.


    ಇನ್ನು, ಇಂದ್ರಜಿತ್ ಲಂಕೇಶ್ ಮನವಿ ಪತ್ರ ಕೊಟ್ಟಿರುವುದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ಧಾರೆ. ಇಂದ್ರಜಿತ್ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಮೈಸೂರಿನ ಹಲ್ಲೆ ಘಟನೆ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ನನಗೆ ಮನವಿ ಪತ್ರ ನೀಡಿದ್ದಾರೆ. ಅದರ ಆಧಾರದ ಮೇಲೆ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನೂ ಹೇಳಿಲ್ಲ. ಯಾವುದೇ ಸಾಕ್ಷ್ಯಗಳನ್ನ ಅವರು ನಮಗೆ ನೀಡಿಲ್ಲ. ಇಂದ್ರಜಿತ್ ಏನಾದರೂ ಆರೋಪ ಮಾಡುವುದಾದರೆ ದೂರು ಕೊಟ್ಟು ಆರೋಪ ಮಾಡಲಿ. ನನಗೆ ಕೊಟ್ಟ ಮನವಿ ಮೇಲೆ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಕಮಿಷನರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.


    ವರದಿ ಕೃಪೆ: ಹರ್ಷವರ್ಧನ್

    Published by:Vijayasarthy SN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು