Master Hirannaiah: ತುರ್ತು ಪರಿಸ್ಥಿತಿ ಟೀಕಿಸುತ್ತಿದ್ದ ಹಿರಣ್ಣಯ್ಯ ಅವರ ಸಂಭಾಷಣೆಯನ್ನು ಕೇಳುತ್ತಿದ್ದರು ಇಂದಿರಾಗಾಂಧಿ

Master Hirannaiah : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿಡಂಬನೆಯ ಮೂಲಕ ಇಂದಿರಾ ಗಾಂಧಿಯವರನ್ನು ದೂಷಿಸುತ್ತಿದ್ದ ಹಿರಣ್ಣಯ್ಯ ಅವರ ಮಾತನ್ನು ಖುದ್ದು ಇಂದಿರಾ ಅವರೇ ಹಿಂದಿಗೆ ತರ್ಜುಮೆ ಮಾಡಿಸಿ ಕೇಳುತ್ತಿದ್ದರು. ಆ ಮಟ್ಟಿಗೆ ಅವರ ನಾಟಕಗಳ ಖ್ಯಾತಿ ಪಸರಿಸಿತ್ತು.

Seema.R | news18
Updated:May 2, 2019, 5:56 PM IST
Master Hirannaiah: ತುರ್ತು ಪರಿಸ್ಥಿತಿ ಟೀಕಿಸುತ್ತಿದ್ದ ಹಿರಣ್ಣಯ್ಯ ಅವರ ಸಂಭಾಷಣೆಯನ್ನು ಕೇಳುತ್ತಿದ್ದರು ಇಂದಿರಾಗಾಂಧಿ
ಮಾಸ್ಟರ್​ ಹಿರಣ್ಣಯ್ಯ ನಾಟಕದ ದೃಶ್ಯ
  • News18
  • Last Updated: May 2, 2019, 5:56 PM IST
  • Share this:
ಸೀಮಾ .ಆರ್​

ಮಾತಿನ ಮಲ್ಲರಾಗಿದ್ದ ಮಾಸ್ಟರ್​ ಹಿರಣ್ಣಯ್ಯ ಕೇವಲ ಒಬ್ಬ ನಾಟಕಕಾರಗಿ ಉಳಿಯದೇ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿದ್ದರು. ತಮ್ಮದೇ ನೂತನ ಹಾಸ್ಯದಾಟಿಯಲ್ಲಿ ರಾಜಕೀಯವನ್ನು, ರಾಜಕಾರಣಿಗಳನ್ನು ಟೀಕೆಗೆ ಗುರಿಪಡಿಸುತ್ತಿದ್ದ ಅವರ ನಾಟಕಗಳನ್ನು ನೋಡಲು ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಆಗಮಿಸುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ಪ್ರಚಲಿತ ರಾಜಕೀಯ ಘಟನೆಗಳನ್ನು ತಮ್ಮ ನಾಟಕದಲ್ಲಿ ಬಳಸಿಕೊಳ್ಳುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ವಿಢಂಬನೆ ಮಾಡುವ ಅವರ ಕ್ರಾಂತಿಕಾರಿ ಮನಸ್ಥಿತಿ ಆ ಕಾಲದಲ್ಲಿ ಎಲ್ಲರಿಗೂ ಮಾದರಿಯಾಗಿತ್ತು ಎಂದರೂ ತಪ್ಪಾಗಲಾರದು. ತಮ್ಮ ವಿರುದ್ಧ ರಾಜಕಾರಣಿಗಳು ಎಷ್ಟೇ ಪ್ರಕರಣ ದಾಖಲಿಸಿದರೂ, ಯಾವುದಕ್ಕೂ ಜಗ್ಗದೇ ಸುಪ್ರೀಂ ಮೆಟ್ಟಿಲೇರಿ ಜಯಿಸಿದ್ದರು ಹಿರಣ್ಣಯ್ಯ.

ಹಿರಣ್ಣಯ್ಯ ನಾಟಕಕ್ಕೆ ಸಾಮಾನ್ಯ ಜನರಿಗಿಂತ ಹೆಚ್ಚು ರಾಜಕಾರಣಿಗಳೇ ಅಭಿಮಾನಿಗಳಾಗಿದ್ದರು. ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಹಾಗೂ ನಿಜಲಿಂಗಪ್ಪ, ಸೇರಿದಂತೆ ಅನೇಕರು ಅವರ ನಾಟಕ ನೋಡಲು ಆಗಮಿಸುತ್ತಿದ್ದರು.

ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ಹಿಂದು ಮುಂದೆ ನೋಡದೇ ಜೈಲಿಗೆ ಕಳುಹಿಸುತ್ತಿದ್ದಾಗ ಹಿರಣ್ಣಯ್ಯ ಮಾತ್ರ ಇಂದಿರಾ ಗಾಂಧಿ ಆಡಳಿತದ ಕುರಿತು ನೇರವಾಗಿ ಟೀಕೆ ಮಾಡುತ್ತಿದ್ದರು. ಹಿರಣ್ಣಯ್ಯ ಅವರ ಅಭಿಮಾನಿ ಬಳಗವನ್ನು ಕಂಡ ಪೊಲೀಸರು ಅವರನ್ನು ಜೈಲಿಗೆ ಅಟ್ಟುವ ಕೆಲಸಕ್ಕೆ ಮುಂದಾಗಿರಲಿಲ್ಲ ಎಂಬುದು ವಿಶೇಷ. ಒಂದೆಡೆ ಸಮುದಾಯ ರಂಗ ತಂಡದ ಎಮ್​ ಎಸ್​ ಸತ್ಯು ನಿರ್ದೇಶನದ 'ಕುರಿ' ನಾಟಕ ಸದ್ದು ಮಾಡುತ್ತಿದ್ದರೆ, ಹಿರಣ್ಣಯ್ಯ ಅವರ 'ಲಂಚಾವತಾರ' ರಾಜಕಾರಣಿಗಳನ್ನು ಅಣಕಿಸುತ್ತಿತ್ತು. ಒಂದರ್ಥದಲ್ಲಿ ಹಿರಣ್ಣಯ್ಯ ಅವರದ್ದು ಒನ್​ ಮ್ಯಾನ್​ ಶೋ. ಏಕ ವ್ಯಕ್ತಿ ಪ್ರದರ್ಶನಗಳನ್ನು ಕೂಡ ಅವರು ಸಮರ್ಥವಾಗಿ ಮಾಡಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಟಕಗಳಲ್ಲಿ ಬಹಿರಂಗವಾಗಿ ಹಿರಣ್ಣಯ್ಯ ಮಾಡುತ್ತಿದ್ದ ಟೀಕೆಗಳನ್ನು ಖುದ್ದು ಇಂದಿರಾ ಗಾಂಧಿ ಅವರೇ ಆಲಿಸುತ್ತಿದ್ದರು ಎಂದೂ ಹೇಳುತ್ತಾರೆ ಹಿರಿಯ ಕಲಾವಿದರು. ತಮ್ಮ ವಿಡಂಬನಾತ್ಮಕ ಶೈಲಿಯಲ್ಲಿ ತುರ್ತು ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಿದ್ದ ಅವರ ಚಾಕಚಕ್ಯತೆ ಕಂಡ ಇಂದಿರಾಗಾಂಧಿ, ಅವರ ಭಾಷಣವನ್ನು ಹಿಂದಿಗೆ ತರ್ಜುಮೆ ಮಾಡಿ ಕೇಳಿದ್ದರು. ಆ ಮಟ್ಟಿಗೆ ಅವರ ನಾಟಕಗಳ ಖ್ಯಾತಿ ಪಸರಿಸಿತ್ತು.

ಇದನ್ನು ಓದಿ: Master Hirannaiah: ಹಿರಣ್ಣಯ್ಯ ಬಿಟ್ಟರೂ, ಅವರನ್ನು ಕೊನೆವರೆಗೂ ಕೈ ಬಿಡದ ರಂಗಭೂಮಿ..!ಹಿರಣ್ಣಯ್ಯ ಅವರು ತಮ್ಮ ನಾಟಕದಲ್ಲಿ ರಾಜಕೀಯವನ್ನು ಎಳೆದು ತರುತ್ತಿದ್ದ ಕಾರಣ ರಾಜಕಾರಣ, ರಾಜಕಾರಣಿಗಳನ್ನು ಟೀಕಿಸುತ್ತಾ ಅವಹೇಳನ ಮಾಡುವುದಕ್ಕಿಂತ ಸಮಾಜದಲ್ಲಿ ಬದಲಾವಣೆ ಮಾಡಬೇಕು ಎಂಬ ಉತ್ಸಾಹ ಅವರ ಪ್ರತಿ ಸಂಭಾಷಣೆಯಲ್ಲಿ ಕಂಡು ಬರುತ್ತಿತ್ತು.

ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರೂ ಕೂಡ ಅವರು ಎಂದೂ ರಾಜಕೀಯ ಲಾಭ ಪಡೆಯದೇ ತಮ್ಮ ಇಳಿ ವಯಸ್ಸಿನವರೆಗೆ ತಮ್ಮ ನಾಟಕಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದವರು. ರಾಜಕಾರಣಿಗಳ ಜತೆ ಅವರಿಗೆ ಸಂಪರ್ಕವಿತ್ತೇ ವಿನಃ ಸಂಬಂಧವಿರಲಿಲ್ಲ. ಹಿರಣ್ಣಯ್ಯ ಅವರ ವ್ಯಕ್ತಿತ್ವ ಈ ತಲೆಮಾರಿನ ಯುವ ಸಮೂಹಕ್ಕೆ ಮಾರ್ಗಸೂಚಿಯಾಗಿದೆ.

(ಮಾಹಿತಿ: ನಟ ರಾಮಕೃಷ್ಣ)
First published:May 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ