ಮಂಗಳೂರು ಬಾಂಬರ್ ಆದಿತ್ಯ ರಾವ್​ ಮೇಲೆ ಮತ್ತೊಂದು ಆರೋಪ; ಇಂಡಿಗೋದಿಂದ ದೂರು ದಾಖಲು

ಸೋಮವಾರ ಮಂಗಳೂರಿನಿಂದ ಹೈದರಾಬಾದ್​ಗೆ ತೆರಳುವ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಅನಾಮಧೇಯ ವ್ಯಕ್ತಿ ಬೆದರಿಕೆಯೊಡ್ಡಿದ್ದ. ವಿಷಯ ತಿಳಿಯುತ್ತಿದ್ದಂತೆ ವಿಮಾನದಲ್ಲಿದ್ದವರನ್ನೆಲ್ಲ ಕೆಳಗಿಳಿಸಿ, ಬಾಂಬ್​ಗಾಗಿ ಹುಡುಕಾಟ ನಡೆಸಲಾಗಿತ್ತು.

ಆದಿತ್ಯ ರಾವ್

ಆದಿತ್ಯ ರಾವ್

  • Share this:
ಮಂಗಳೂರು (ಜ. 23): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣದ ಆರೋಪಿ ಆದಿತ್ಯ ರಾವ್ ಬುಧವಾರ ಬೆಳಗ್ಗೆ ಪೊಲೀಸರ ಮುಂದೆ ಶರಣಾಗಿದ್ದ. ಏರ್​ಪೋರ್ಟ್​ನಲ್ಲಿ ಬಾಂಬ್ ಇಟ್ಟಿದ್ದ ಕುರಿತು ಪೊಲೀಸರು ಆದಿತ್ಯ ರಾವ್​ನನ್ನು ತನಿಖೆ ನಡೆಸುತ್ತಿರುವುದರ ಬೆನ್ನಲ್ಲೇ ಆತನ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಸೋಮವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿತ್ತು. ಆ ಬಾಂಬ್​ ಅನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಅದೇ ದಿನ ಮಧ್ಯಾಹ್ನ 2.30ಕ್ಕೆ ಇಂಡಿಗೋ ವಿಮಾನ ಸಂಸ್ಥೆಯ ಮ್ಯಾನೇಜರ್​ಗೆ ಅನಾಮಧೇಯ ಕರೆಯೊಂದು ಬಂದಿತ್ತು. ಮಂಗಳೂರಿನಿಂದ ಹೈದರಾಬಾದ್​ಗೆ ತೆರಳುವ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಅನಾಮಧೇಯ ವ್ಯಕ್ತಿ ಬೆದರಿಕೆಯೊಡ್ಡಿದ್ದ. ವಿಷಯ ತಿಳಿಯುತ್ತಿದ್ದಂತೆ ವಿಮಾನದಲ್ಲಿದ್ದವರನ್ನೆಲ್ಲ ಕೆಳಗಿಳಿಸಿ, ಬಾಂಬ್​ಗಾಗಿ ಹುಡುಕಾಟ ನಡೆಸಲಾಗಿತ್ತು. ನಂತರ ಅದೊಂದು ಹುಸಿಕರೆ ಎಂಬುದು ಗೊತ್ತಾಗಿತ್ತು.

ತಮಗೆ ಫೋನ್ ಮಾಡಿ ಬೆದರಿಕೆಯೊಡ್ಡಿದ್ದು ಇದೇ ಆದಿತ್ಯ ರಾವ್ ಎಂದು ಇಂಡಿಗೋ ಸಂಸ್ಥೆಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಆದಿತ್ಯ ರಾವ್ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಅಣ್ಣನ ಬಗ್ಗೆ ನಮಗೂ ಭಯವಿದೆ; ಮಂಗಳೂರು ಬಾಂಬರ್ ಆದಿತ್ಯ ರಾವ್ ತಮ್ಮ ಅಕ್ಷತ್ ರಾವ್ ಹೇಳಿದ್ದೇನು?

ಸೋಮವಾರ ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗಿದ್ದರಿಂದ ತಮಗೆ ಬಂದ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಇಂಡಿಗೋ ಅಧಿಕಾರಿಗಳು, ಟೇಕಾಫ್ ಆಗಲು ಸಿದ್ಧವಾಗಿದ್ದ ವಿಮಾನವನ್ನು ನಿಲ್ಲಿಸಿ, ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನ ತಪಾಸಣೆಗೆ ಬಾಂಬ್ ಸ್ಕ್ವಾಡ್ ತಂಡವನ್ನು ಕರೆಸಿದ್ದರು. ಆ ವಿಮಾನ ಮಂಗಳೂರಿನಿಂದ ಹೈದರಾಬಾದ್​ಗೆ ತೆರಳುವುದಾಗಿತ್ತು.

ಸೋಮವಾರ ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು. ಇದರಿಂದಾಗಿ ಭಾರೀ ಅಪಾಯವೊಂದು ತಪ್ಪಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ ಪ್ರಕರಣ; ಇಂದು ಶಾಸಕ ಹ್ಯಾರಿಸ್ ಡಿಸ್ಚಾರ್ಜ್​ ಸಾಧ್ಯತೆ

ಶಂಕಿತನ ಜಾಡು ಹಿಡಿದ ಪೊಲೀಸರು ಉಡುಪಿ ಮನೆಯನ್ನು ಶೋಧಿಸಿದ್ದರು. ಮನೆಯಲ್ಲಿದ್ದವರನ್ನು ವಿಚಾರಣೆ ಮಾಡಿದ್ದರು. ಪ್ರಕರಣದಲ್ಲಿ ಆದಿತ್ಯ ರಾವ್ ಕೈವಾಡದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಬುಧವಾರ ಬೆಂಗಳೂರಿಗೆ ಬಂದು ಆದಿತ್ಯ ರಾವ್ ಶರಣಾಗಿದ್ದ.  ಬೆಂಗಳೂರು ಡಿಜಿ ಕಚೇರಿಗೆ ಹೋಗಿ ನಾನೇ ಆದಿತ್ಯರಾವ್ ಅಂತ ಹೇಳಿಕೊಂಡಿದ್ದ. ಆತನನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 
First published: