ಬೆಳಗಾವಿಗೆ ಹೊರಟಿದ್ದ ವೃದ್ಧ ದಂಪತಿಗೆ ರೈಲಿನಲ್ಲಿ ಕಿರುಕುಳ; 11 ವರ್ಷದ ಬಳಿಕ ಭಾರತೀಯ ರೈಲ್ವೆಗೆ 3 ಲಕ್ಷ ರೂ. ದಂಡ!

Indian Railways: ಸೋಲಾಪುರದಿಂದ ಕರ್ನಾಟಕದ ಬೆಳಗಾವಿಗೆ ಆಗಮಿಸಬೇಕಿದ್ದ ವೃದ್ಧ ದಂಪತಿಯ ದಾರಿ ತಪ್ಪಿಸಿ ಮಾರ್ಗ ಮಧ್ಯದಲ್ಲೇ ಇಳಿಸಿದ್ದಕ್ಕೆ 11 ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಈಗ ಆ ಪ್ರಕರಣ ಇತ್ಯರ್ಥವಾಗಿದ್ದು, ಕರ್ನಾಟಕ ನ್ಯಾಯಾಲಯವು ಭಾರತೀಯ ರೈಲ್ವೆಗೆ 3 ಲಕ್ಷ ರೂ ದಂಡವನ್ನು ವಿಧಿಸಿದೆ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

  • Share this:
ರೈಲು ಸಾರಿಗೆ ಅಂದರೆ ಅದು ಜನಸಾಮಾನ್ಯರಿಗೆ ವರದಾನ. ಆದರೆ ಕೆಲವೊಮ್ಮೆ ಅಧಿಕಾರಿಗಳ ತಪ್ಪಿನಿಂದ ಇಲ್ಲವೇ ಅಸಮರ್ಪಕ ನಡವಳಿಕೆಯಿಂದಾಗಿ ಪ್ರಯಾಣಿಕರು ಪೇಚಾಟಕ್ಕೆ ಸಿಲುಕಿರುವ ಸಂದರ್ಭಗಳು ವರದಿಯಾಗಿರುವುದನ್ನು ನಾವು ಗಮನಿಸಿದ್ದೇವೆ. ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸುವ ಕೆಲವು ಜನರ ನಡವಳಿಕೆಯಿಂದ ನಿಯಮ ಪಾಲಿಸುವವರು ಕೂಡ ಬಳಲುವುದು ನಡೆಯುತ್ತಲೇ ಇದೆ. ಇನ್ನು ಕೆಲವೊಮ್ಮೆ ಸರಿಯಾಗಿ ಟಿಕೆಟ್ ತೆಗೆದುಕೊಳ್ಳದಿರುವುದು ಸಹ ಸಮಸ್ಯೆಗೆ ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ಟ್ರೈನ್​ನಲ್ಲಿ ಟಿಕೆಟ್​ ತಪಾಸಣೆ ಅಂದರೆ ಅದು ಬಹು ಕಠಿಣವಾದ ನಿಯಮ. ಈ ಕಠಿಣ ನಿಯಮದಿಂದಲೇ ರೈಲ್ವೆಯ ಟಿಕೆಟ್ ಪರೀಕ್ಷಕರೊಬ್ಬರು 2019ರಲ್ಲಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 22,680 ಮಂದಿಯಿಂದ 1.51 ಕೋಟಿ ರೂ ಪಾಯಿ ವಸೂಲಿ ಮಾಡಿದ್ದಾರೆ. ಆದರೆ ಕೆಲವೊಮ್ಮೆ ಈ ಕಠಿಣ ರೂಲ್ಸ್​​ಗಳು ಮಾನವೀಯತೆಯನ್ನು ಮರೆತರೆ ನಿಯಮವನ್ನು ಪಾಲಿಸುವ ಒಳ್ಳೆಯವರಿಗೂ ಕೂಡ ಮಾರಕವಾಗುವ ಸಂಭವವಿದೆ. ಈ ಘಟನೆಯೂ ಕೂಡ ಅಂತಹ ಪ್ರಸಂಗಗಳಿಗೆ ಉದಾಹರಣೆಯಾಗಿದೆ.

ಸೋಲಾಪುರದಿಂದ ಕರ್ನಾಟಕದ ಬೆಳಗಾವಿಗೆ ಆಗಮಿಸಬೇಕಿದ್ದ ವೃದ್ಧ ದಂಪತಿಯ ದಾರಿ ತಪ್ಪಿಸಿ ಮಾರ್ಗ ಮಧ್ಯದಲ್ಲೇ ಇಳಿಸಿದ್ದಕ್ಕೆ 11 ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಈಗ ಆ ಪ್ರಕರಣ ಇತ್ಯರ್ಥವಾಗಿದ್ದು, ಕರ್ನಾಟಕ ನ್ಯಾಯಾಲಯವು ಭಾರತೀಯ ರೈಲ್ವೆಗೆ 3 ಲಕ್ಷ ರೂ ದಂಡವನ್ನು ವಿಧಿಸಿದೆ. ಈ ಮೂಲಕ ಭಾರತೀಯ ರೈಲ್ವೆ ಭಾರೀ ಮುಜುಗರಕ್ಕೆ ಒಳಗಾಗಿದೆ. ಇನ್ನು ಈ ಇಳಿ ವಯಸ್ಸಿನಲ್ಲಿ ಆ ವೃದ್ಧ ದಂಪತಿಗೆ ಕೊಂಚ ನೆಮ್ಮದಿಯನ್ನು ತಂದಿದೆ.

ಏನಿದು ಪ್ರಕರಣ?:
2010ರಲ್ಲಿ ಈ ವೃದ್ಧ ದಂಪತಿ ಸೋಲಾಪುರದಿಂದ ಬೆಳಗಾವಿಗೆ 3 ಟಯರ್‌ ಎ ಸಿ ಟಿಕೆಟ್​ ಖರೀದಿ ಮಾಡಿದ್ದರು. ದಂಪತಿಯ ಪೈಕಿ ಒಬ್ಬರು ವಿಶೇಷ ಚೇತನರಾಗಿದ್ದರು. ಈ ವೃದ್ಧ ದಂಪತಿ ತಮ್ಮ ಬರ್ತ್​​ಗೆ ನಿಗದಿಯಾಗಿದ್ದ ಕೋಟಾ ಅಡಿಯಲ್ಲಿ ಸೀಟನ್ನು ಕಾಯ್ದಿರಿಸಿದ್ದರು. ಆದರೆ ಟಿಕೆಟ್​ ಪರೀಕ್ಷಕರು ಅವರಿಗೆ ಕಾಯ್ದಿರಿಸಲಾಗಿದ್ದ ಕೆಳಗಿನ ಬರ್ತ್​ ನೀಡಲು ನಿರಾಕರಿಸಿದ್ದಾರೆ. ವೃದ್ಧ ದಂಪತಿ ಮತ್ತು ವಿಶೇಷ ಚೇತನ ಎನ್ನುವ ಸಾಮಾನ್ಯ ಕಾಳಜಿಯನ್ನು ಸಹ ಮರೆತಿದ್ದಾರೆ. ಕಂಪಾರ್ಟ್​ಮೆಂಟ್​ನಲ್ಲಿ ಆರು ಲೋವರ್​ ಬರ್ತ್​ ಸೀಟುಗಳು ಖಾಲಿ ಇದ್ದರೂ ಸಹ ಟಿಕೆಟ್​ ಪರೀಕ್ಷಕರು ಸೀಟು ಕೊಡಲು ನಿರಾಕರಣೆ ಮಾಡಿದ್ದಾರೆ. ಅಸಹಾಯಕ ವೃದ್ಧ ದಂಪತಿಗಳು ಅಂತಹ ಪರಿಸ್ಥಿಯಲ್ಲಿ ಏನು ಮಾಡಬೇಕು? ಯಾರ ನೆರವಿಗೆ ಹೋಗಬೇಕು? ಎನ್ನುವುದು ತಿಳಿಯದೇ ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: Crime News: ಮಗುವಿಗೆ ಹಾಲುಣಿಸುವುದನ್ನೂ ಮರೆತು ಹೆಂಡಕ್ಕೆ ದಾಸಿಯಾದ ತಾಯಿ!; ಹಸಿವಿನಿಂದ ಕಂದಮ್ಮ ಸಾವು

ಸರಿಯಾದ ನಿಯಮವನ್ನು ಪಾಲಿಸಿದ್ದರೂ ಸಹ ವೃದ್ಧ ದಂಪತಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸಹ ಟಿಕೆಟ್​ ಪರೀಕ್ಷಕರನ್ನು ಪರಿ ಪರಿಯಾಗಿ ಮತ್ತೆ ಮತ್ತೆ ಕೇಳಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಟಿಕೆಟ್​ ಪರೀಕ್ಷಕರ ಮನಸ್ಸು ಕರಗಲಿಲ್ಲ. ಅಧಿಕಾರದ ಗತ್ತಿನಲ್ಲಿ ಮಾನವೀಯತೆಯನ್ನು ಮರೆತಂತೆ ವರ್ತಿಸಿರುವುದು ಈ ಘಟನೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ವಯಸ್ಸಾದವರಿಗೆ ನೆರವಾಗುವುದು ಮಾನವೀಯತೆ, ಎಷ್ಟೋ ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಗಳು ವೃದ್ಧರಿಗೆ ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಆದರೆ ಇಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದು, ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಇಷ್ಟಾದ ನಂತರ ರೈಲ್ವೆ ಸಿಬ್ಬಂದಿಯೊಬ್ಬರು ಈ ವೃದ್ಧ ದಂಪತಿಯ ದಾರಿಯನ್ನು ತಪ್ಪಿಸಿದ್ದಾರೆ. ವೃದ್ಧ ದಂಪತಿ ಇಳಿಯಬೇಕಿದ್ದ ನಿಲ್ದಾಣದಿಂದ 100 ಕಿಲೋ ಮೀಟರ್​​ ದೂರದಲ್ಲಿ ತಪ್ಪು ರೈಲ್ವೆ ನಿಲ್ದಾಣದಲ್ಲಿ ಇಳಿಸಿದ್ದಾರೆ. ಈ ಘಟನೆಯಿಂದ ಏನು ಮಾಡಬೇಕೆಂದು ತೋಚದ ದಂಪತಿ ಕಂಗಾಲಾಗಿದ್ದಾರೆ. ಇನ್ನೊಂದು ಕಡೆ ಈ ವೃದ್ಧದಂಪತಿಯನ್ನು ಕರೆದುಕೊಂಡು ಹೋಗಲು ಅವರ ಮಗ ಬೀರೂರಿನ ಬಳಿ ಕಾದು ಸುಸ್ತಾಗಿದ್ದಾರೆ. ಕಡೆಗೆ ವೃದ್ಧ ದಂಪತಿ ಮತ್ತು ಮಗ ಒಂದಾಗಿದ್ದಾರೆ. ಆ ನಂತರ ಅವರ ಮಗ ಭಾರತೀಯ ರೈಲ್ವೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಮಾರು 11 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸಂತ್ರಸ್ತ ದಂಪತಿಗಳಿಗೆ ಕರ್ನಾಟಕ ನ್ಯಾಯಾಲಯ ನ್ಯಾಯವನ್ನು ಒದಗಿಸಿಕೊಟ್ಟಿದೆ. ಅಲ್ಲದೇ ಸಂತ್ರಸ್ತ ಕುಟುಂಬಕ್ಕೆ 3 ಲಕ್ಷ ರೂಪಾಯಿಯನ್ನು ದಂಡದ ರೂಪದಲ್ಲಿ ನೀಡಬೇಕು. ಜೊತೆಗೆ 2,500 ರೂಪಾಯಿ ದಾವೆ ವೆಚ್ಚವನ್ನು ಸಹ ಭಾರತೀಯ ರೈಲ್ವೆ ಸರಿದೂಗಿಸಿ ಕೊಡಬೇಕು ಎಂದು ಆದೇಶಿಸಿದೆ.
Published by:Sushma Chakre
First published: