ಬೆಂಗಳೂರು: 'ನಮ್ಮ ಮೆಟ್ರೋ' (Namma Metro)ಸದಾ ಗಜಿಬಿಜಿ, ಟ್ರಾಫಿಕ್ (Traffic), ಜನ ಸಾಂದ್ರತೆಯಿಂದ ತುಂಬಿ ತುಳುಕುತ್ತಿರುವ ಸಿಲಿಕಾನ್ ಸಿಟಿ (Silicon City) ಮಂದಿಯ ದೊಡ್ಡ ಅನುಕೂಲಕರ ಸಾರಿಗೆ ವ್ಯವಸ್ಥೆ. ಬೆಂಗಳೂರಿನಲ್ಲಿ (Bengaluru) ಒಂದು ಕಡೆಯಿಂದ ಇನ್ನೊಂದು ಕಡೆ ನಮ್ಮ ಸ್ವಂತ ವಾಹನದಲ್ಲಿ ಸುಮಾರು ಇಪ್ಪತ್ತು ಕಿಲೋ ಮೀಟರ್ ಹೋಗಬೇಕಂದರೆ ಈ ಟ್ರಾಫಿಕ್ ಅಲ್ಲಿ ಒಂದೆರೆಡು ತಾಸು ಬೇಕಾಗುತ್ತದೆ. ಆದ್ರೆ ಇದೇ ದೂರವನ್ನು ತಲಪಲು ಮೆಟ್ರೋದಲ್ಲಿ ಇಷ್ಟೆಲ್ಲಾ ಸಮಯ ಬೇಕಾಗಿಲ್ಲ. ಸಿಗ್ನಲ್ನಲ್ಲಿ ಕಾಯುವ, ಟ್ರಾಫಿಕ್ ರೂಲ್ಸ್ ಪಾಲಿಸುವಂತಹ ಯಾವುದೇ ಚಿಂತೆ ಇಲ್ಲದೆ ಎಸಿ ಟ್ರೈನ್ನಲ್ಲಿ ಆರಾಮವಾಗಿ ಹೋಗಬಹುದು.
ಇಷ್ಟೆಲ್ಲಾ ಅನುಕೂಲರವಾಗಿರುವ ಮೆಟ್ರೋ ವ್ಯವಸ್ಥೆಯನ್ನು ಬೆಂಗಳೂರಿನಾದ್ಯಂತ ವಿಸ್ತರಿಸಿ ಎಂಬುವುದು ನಾಗರಿಕರ ಮನವಿ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಮೆಟ್ರೋ ಸೇವೆಯನ್ನು ಪ್ರತಿ ನಗರಕ್ಕೂ ಒದಗಿಸಲು ಬಹುಕೋಟಿ ಮೊತ್ತದ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಲೇ ಇರುತ್ತದೆ. ಮೆಟ್ರೋ ಬಗ್ಗೆ ಏಕಿಷ್ಟು ಪೀಠಿಕೆ ಅಂತೀರಾ, ಮುಂದೆ ಓದಿ..
ಜಯದೇವ ಇಂಟರ್ಚೇಂಜ್: ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣ
ಮೆಟ್ರೋ ಬೆಂಗಳೂರಿಗರಿಗೆ ಪ್ರಯೋಜನ ನೀಡುವುದರ ಜೊತೆ ಒಂದು ಹಿರಿಮೆಗೂ ಪಾತ್ರವಾಗಿದೆ. ಹೌದು, ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಇಂಟರ್ಚೇಂಜ್ ಮೆಟ್ರೋ ನಿಲ್ದಾಣವು ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣವಾಗಲಿದೆ.
ಅಂದುಕೊಂಡ ಹಾಗೆಯೇ ಯೋಜನೆ ಪೂರ್ಣಗೊಂಡಿದ್ದರೆ 2022ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು, ಆದರೆ ವಿಳಂಬ ಕಾಮಗಾರಿಯಿಂದಾಗಿ ಯೋಜನೆ ಇನ್ನೂ ಸಹ ನಿರ್ಮಾಣ ಹಂತದಲ್ಲಿದೆ.
ನೆಲಮಟ್ಟದಿಂದ 29 ಮೀಟರ್ ಎತ್ತರದಲ್ಲಿರುವ ನಿಲ್ದಾಣ
ಮೆಟ್ರೋ 2 ನೇ ಹಂತದ ಯೋಜನೆಯಲ್ಲಿ ಆರ್. ವಿ. ರಸ್ತೆ -ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ -ನಾಗವಾರ ಮಾರ್ಗಗಳ (ಗುಲಾಬಿ ಮಾರ್ಗ) ಇಂಟರ್ಚೇಂಜ್ ನಿಲ್ದಾಣ ಜಯದೇವ ಆಸ್ಪತ್ರೆ ಬಳಿ ಈ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಜಯದೇವ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಲಿದೆ. ಐದನೇ ಹಂತ ನೆಲಮಟ್ಟದಿಂದ 29 ಮೀಟರ್ ಎತ್ತರದಲ್ಲಿರಲಿದೆ. ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣ ಇದು ಎನಿಸಿಕೊಳ್ಳಲಿದೆ. ಆರ್.ವಿ.ರಸ್ತೆಯಿಂದ ಬರುವ ಮೆಟ್ರೋ ಮಾರ್ಗವು ಇದೇ ಮೇಲು ರಸ್ತೆಯ ಮೂಲಕ ಹಾದು ಹೋಗಲಿದೆ.
ಇಂಟರ್ಚೇಂಜ್ ನಿಲ್ದಾಣದಲ್ಲಿ ಅಂಡರ್ಪಾಸ್, ನೆಲಮಟ್ಟದಲ್ಲಿ ಸಾಮಾನ್ಯ ವಾಹನಗಳ ಸಂಚಾರ, ಅದರ ಮೇಲೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣವಾಗಲಿದ್ದು, ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದೆ. ಗುಲಾಬಿ - ಹಳದಿ ಮಾರ್ಗದ ಮಧ್ಯದ ಸ್ಥಳದಲ್ಲಿ ಎಎಫ್ಸಿ ಗೇಟ್ಗಳು, ಟಿಕೆಟ್ ಕೌಂಟರ್ ಮತ್ತಿತರ ಕಟ್ಟಡಗಳು ತಲೆ ಎತ್ತಲಿವೆ.
21.25 ಕಿ.ಮೀ. ಉದ್ದದ ಗೊಟ್ಟಿಗೆರೆ- ನಾಗವಾರ ಮಾರ್ಗ ಹಾಗೂ 18.82 ಕಿ.ಮೀ. ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗಗಳು ಜಯದೇವ ಆಸ್ಪತ್ರೆ ಬಳಿ ಇಂಟರ್ಚೇಂಜ್ ನಿಲ್ದಾಣ ಹೊಂದಲಿವೆ.
ಬಹುಕೋಟಿಯ ಯೋಜನೆ
ರಾಜ್ಯ ಸರ್ಕಾರದ ಬಹುದೊಡ್ಡ ಯೊಜನೆ 797 ಕೋಟಿ ರೂಪಾಯಿದ್ದಾಗಿದ್ದು, ಐಟಿಡಿ ಸಿಮೆಂಟೇಶನ್ ಇಂಡಿಯಾ ಹಾಗೂ ವೆನಿಂಗ್ - ಯುಆರ್ಸಿ ಸಂಸ್ಥೆಗಳು ಕಾಮಗಾರಿ ಕೈಗೆತ್ತಿಕೊಂಡಿವೆ. ಅತ್ಯಂತ ಎತ್ತರದ ಮೆಟ್ರೋ ನಿಲ್ದಾಣವನ್ನು ನಿರ್ಮಿಸುವುದು ಸಹ ಅತ್ಯಂತ ಸವಾಲಿನ ಕೆಲಸವಾಗಿದೆ. 24 ಬೀಮ್ಗಳನ್ನು ಅಳವಡಿಸಲು 18 ತಿಂಗಳುಗಳನ್ನು ತೆಗೆದುಕೊಂಡಿದೆ ಈ ಯೋಜನೆ.
ಸದ್ಯ ಯೋಜನೆಯ ಬಜೆಟ್ ಸಹ ಮಿತಿ ಮೀರಿ ಹೋಗಿದೆ. ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಉಕ್ಕಿನ ಬೆಲೆ ದ್ವಿಗುಣಗೊಂಡಿದ್ದರಿಂದ ಹಿಡಿದು, ಇಂಧನ ಮೇಲಿನ ಬೆಲೆ ಏರಿಕೆಯೂ ಸಹ ಈ ಯೋಜನೆ ಬಜೆಟ್ ಅನ್ನು ಮೀರಿಸಿದೆ. ಭಾರತದಲ್ಲಿಯೇ ಅತಿ ಎತ್ತರದ ರೈಲ್-ಕಮ್-ರೋಡ್ ಫ್ಲೈಓವರ್ ಹೊಂದಿರುವ ಈ ನಿಲ್ದಾಣವನ್ನು ನಿರ್ಮಿಸಲು ಹೆಚ್ಚಿನ ಹಣವನ್ನು ಸರ್ಕಾರ ವಿನಿಯೋಗಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ