ದಾವಣಗೆರೆ: ಒಂದೆಡೆ ರಾಜ್ಯದೆಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದರೆ ಇತ್ತ ಚುನಾವಣೆಗೆ ನಿಂತಿರುವ ಅಭ್ಯರ್ಥಿಯೊಬ್ಬರು (Independent Candidate) ಮತದಾನದ ದಿನವೇ ಕಣ್ಣೀರು ಹಾಕಿದ್ದಾರೆ. ಮಾಯಕೊಂಡ (Mayakonda) ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸವಿತಾ ಬಾಯಿ (Savitha Bai Malleshanaik) ಅವರು ಕಣ್ಣೀರು ಸುರಿಸಿದ್ದು, ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ ಎಂದು ಮತದಾರರಿಗೆ ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಬಂದಿರುವ ಪಕ್ಷೇತರ ಅಭ್ಯರ್ಥಿ ಸವಿತಾ ಬಾಯಿ, ಕಳೆದ ಮೂರೂವರೆ ವರ್ಷದಿಂದ ನಾನು ಮಾಯಕೊಂಡ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮಗಳಾಗಿ ಸೇವೆ ಮಾಡಿದ್ದೀನಿ. 15 ದಿನದ ಹಸುಗೂಸಿಗೆ ಹಾಲು ಕುಡಿಸಿಕೊಂಡು ಗಾಡಿಯಲ್ಲಿ ಮಗುವನ್ನು ಬಿಟ್ಟು ಬೀದಿ ಬೀದಿ ಸುತ್ತಿದ್ದೇನೆ. ಕಾಂಗ್ರೆಸ್ ಪಾರ್ಟಿಗೆ ದುಡಿದೆ, ಟಿಕೆಟ್ ಆಗೋಗಿತ್ತು. ಟಿಕೆಟ್ ಸಿಗುತ್ತೆ ಅಂತಾ ಫೋಟೋ ಎಲ್ಲ ಎಡಿಟ್ ಮಾಡಿಸಿದ್ದೆ. ಆದರೆ ಈಗ ಇರೋ ಕಾಂಗ್ರೆಸ್ ಅಭ್ಯರ್ಥಿ ನನ್ನ ತೇಜೋವಧೆ ಮಾಡ್ಬಿಟ್ಟ. ನನ್ ಲೈಫ್‌ನಲ್ಲಿ ತುಂಬಾ ಆಟ ಆಡಿದ್ರು ಅಂತಾ ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ: Karnataka Election Voting LIVE: ಕರ್ನಾಟಕ ವಿಧಾನಸಭಾ ಚುನಾವಣೆ- ರಾಜ್ಯದಲ್ಲಿ ಇದುವರೆಗೆ 37.25% ಮತದಾನ
'ಬರೀ ಮೋಸ ಮೋಸ ಮೋಸ'
ಮುಂದುವರಿದು ಲೈವ್‌ನಲ್ಲಿ ಮಾತನಾಡಿರುವ ಸವಿತಾ ಬಾಯಿ, ‘ಆಮೇಲೆ ನಾನು ಬಂದಿರೋದು ಸೇವೆ ಮಾಡೋಕ್ಕಲ್ವಾ, ಯಾವ ಪಾರ್ಟಿ ಆದರೇನು ಅಂದ್ಕೊಂಡಾಗ ಜೆಡಿಎಸ್‌ನವರು ಅವರಾಗೇ ಕರೆದು ಟಿಕೆಟ್ ಕೊಡ್ತೀನಿ ಬನ್ನಿ ಅಂದು 40 ನಿಮಿಷದಲ್ಲಿ ನಂಗೇ ಗೊತ್ತಿಲ್ಲದೇ ವೇದಿಕೆಗೆ ಕರೆದುಕೊಂಡು ಹೋಗಿ ಬಾವುಟ ಹಿಡಿಸಿದ್ರು. ಆಮೇಲೆ 60 ನಿಮಿಷಕ್ಕೆ ಬೇರೆಯವರಿಗೆ ಟಿಕೆಟ್ ಕೊಟ್ರು. ಎಲ್ಲಾ ಕಡೆಯಿಂದಲೂ ಬರೀ ಮೋಸ ಮೋಸ ಮಾಡಿದ್ರು. ನಾನು ಯಾರಿಗೆ ಏನು ಪಾಪ ಮಾಡಿದ್ದೀನಿ? ಬಡವರು ಅಂದ್ರೆ ಹಿಂಗೇನಾ? ರೈತನ ಮಕ್ಕಳಿಗೆ ಬೆಳೆಯೋದಕ್ಕೆ ಅವಕಾಶ ಇಲ್ವಾ? ಎಂದು ಗಳಗಳನೇ ಅತ್ತಿದ್ದಾರೆ.
ಫೋಟೋ ಎಡಿಟ್ ಮಾಡಿಸಿ ನನ್ನ ತೇಜೋವಧೆ ಮಾಡಿದ್ರು.
ಎಲ್ಲಾ ಮುಖಂಡರು ಪಾರ್ಟಿ ಕೆಲಸಗಳಿಗೆ, ಆ ಕೆಲಸ ಈ ಕೆಲಸ ಅಂತಾ ಅಷ್ಟು ಜನ ಬೇಕು ಇಷ್ಟು ಜನ ಬೇಕು ಕರೆದುಕೊಂಡು ಬಾ ಅಂತಾ ನನ್ನಿಂದ ಆರ್ಥಿಕವಾಗಿ ಎಲ್ಲಾ ಕೆಲಸ ಮಾಡಿಸಿಬಿಟ್ರು. ನನ್ನಿಂದ ಕೆಲಸ ಮಾಡಿಸಿಕೊಂಡು ಕೊನೆಗೆ ನನ್ನದೇ ಫೋಟೋ ಎಡಿಟ್ ಮಾಡಿಸಿ ನನ್ನ ತೇಜೋವಧೆ ಮಾಡಿದ್ರು. ಈಗ ಆ ಪಾರ್ಟಿಯಿಂದ ದುಡ್ಡು ಇಸ್ಕೊಂಡಿದ್ದಾರೆ, ಈ ಪಾರ್ಟಿಯಿಂದ ದುಡ್ಡು ಇಸ್ಕೊಂಡಿದ್ದಾರೆ ಅಂತಾ ಸುಮ್ಮ ಸುಮ್ಮನೆ ನನ್ನ ಬಗ್ಗೆ ರೂಮರ್ ಹಬ್ಬಿಸ್ತಾ ಇದ್ದಾರೆ. ಹಂಗಿದ್ರೆ ನಾನು ಮೂರುವರೆ ವರ್ಷದಿಂದ ಮನೆ ಮನೆಗೆ ಸುತ್ತಿ ಕೆಲಸ ಮಾಡ್ತಿದ್ನಾ? ನಾನು ಸೇವೆ ಮಾಡೋಕೆ ಬಂದಿರೋದು ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್!
ನಾನು ನಿಮ್ಮನ್ನೇ ನಂಬಿಕೊಂಡು ಬಂದಿರೋದು. ಎಲ್ಲಾ ಪಾರ್ಟಿಯವರು ನನಗೆ ಕೈ ಕೊಟ್ಟು ಬಿಟ್ರು. ದೇವರಾಣೆ ನಿಮ್ಮನ್ನು ನಂಬಿಕೊಂಡು ಬಂದಿದ್ದೀನಿ. ದಯವಿಟ್ಟು, ಒಂದು ಅವಕಾಶ ಮಾಡಿಕೊಡಿ. ಪ್ಲೀಸ್.. ನಂಗೆ ಎಷ್ಟೆಲ್ಲ ಚಿತ್ರಹಿಂಸೆ ಕೊಟ್ಟಿದ್ರು. ನಾನು ಎಲ್ಲವನ್ನು ತಡೆದುಕೊಂಡು ಬಂದಿದ್ದೀನಿ. ಯಾಕಂದ್ರೆ ನನ್ನ ಗುರಿ ಒಂದೇ ಇರೋದು. ಸೇವೆ ಮಾಡಬೇಕು. ಅದಕ್ಕೋಸ್ಕರ ಬಂದಿದ್ದೀನಿ. ದಯವಿಟ್ಟು ದಯವಿಟ್ಟು.. ಎಲ್ಲರೂ ಒಂದು ಅವಕಾಶ ಮಾಡಿಕೊಡಿ ಎಂದು ಪಕ್ಷೇತರ ಅಭ್ಯರ್ಥಿ ಸವಿತಾ ಬಾಯಿ ಅತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ