ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಳ್ಳಿಯಿಂದ ದಿಲ್ಲಿವರೆಗೂ, ಅಷ್ಟದಿಕ್ಕುಗಳಲ್ಲೂ ತ್ರಿವರ್ಣ ಪತಾಕೆ ಹಾರಿಸಲಾಯ್ತು. ಮಕ್ಕಳಿಂದ (Children) ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸ್ವಾತಂತ್ರ್ಯ ಹಬ್ಬದಲ್ಲಿ (Independence Day) ಭಾಗಿಯಾಗಿದ್ದಾರೆ. ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ (Lal Chowk), ಬೆಂಗಳೂರಿನ ಚಾಮರಾಜಪೇಟೆಯ ಮೈದಾನದಲ್ಲಿ ಅತ್ಯಂತ ಉತ್ಸಾಹದಿಂದ ತ್ರಿವರ್ಣ ಧ್ವಜ (Flag) ಹಾರಿಸಲಾಗಿದೆ. ಕೆಲವು ಕಡೆ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗಿದೆ. ಇನ್ನು ಆಜಾದಿ ಕಾ ಅಮೃತ ಮಹೋತ್ಸವದಂದೇ ಮಗು ಜನಿಸಿದ್ದು ಹೆತ್ತವರು (Parents) ಸಂಭ್ರಮಿಸಿದ್ದಾರೆ. ಮತ್ತೊಂದೆಡೆ ಅಳಿಲು ಒಂದು ದೇಶದ ಬಾವುಟ ಹಿಡಿದಿದ್ದು, ಫೋಟೋ ವೈರಲ್ (Viral) ಆಗಿದೆ.
ಇಂದು ಭಾರತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಇದೇ ಸಂಭ್ರಮದಲ್ಲಿರೋವಾಗ ಹಾವೇರಿಯಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಧ್ವಜಾರೋಹಣದ ಸ್ಥಳಕ್ಕೆ ಮಗುವನ್ನು ಎತ್ತಿಕೊಂಡು ಹೋಗಿ ಹೆತ್ತವರು ಸಂಭ್ರಮ ಪಟ್ಟಿದ್ದಾರೆ.
ಧ್ವಜಾರೋಹಣದ ವೇಳೆ ಗಂಡುಮಗುವಿಗೆ ಜನ್ಮ
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫರ್ಜಾನಾ ಕುದರಿ ಎಂಬುವವರಿಗೆ ಗಂಡು ಮಗು ಜನಿಸಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಧ್ವಜಾರೋಹಣ ಮಾಡುವ ವೇಳೆ ಮಗು ಜನಿಸಿದೆ. ಆಗ ಆಸ್ಪತ್ರೆ ಸಿಬ್ಬಂದಿ ನವಜಾತ ಶಿಶುವನ್ನು ಧ್ವಜಸ್ತಂಭದೆದರು ತಂದು ಪ್ರದರ್ಶಿಸಿ ಸಂತಸ ಹಂಚಿಕೊಂಡರು.
ಮಗುವಿಗೆ ತ್ರಿವರ್ಣ ಶಾಲು ಹಾಕಿ ಪೋಷಕರ ಸಂಭ್ರಮ
ಮುಂಜಾನೆ ಧ್ವಜಾರೋಹಣ ವೇಳೆ ಮಗು ಜನಿಸಿದ್ದು ನವಜಾತ ಶಿಶುವಿಗೆ ತ್ರಿವರ್ಣ ಧ್ವಜದ ಶಾಲು ಹಾಕಿ ಸಂಭ್ರಮಿಸಿದರು. ಹೆರಿಗೆ ಮಾಡಿಸಿದ ಡಾ.ಅಭಿನಂದನ್ ಸಾಹುಕಾರ್ ಹಾಗೂ ಸಿಬ್ಬಂದಿಗೆ ಕುಟುಂಬಸ್ಥರು ಅಭಿನಂಧನೆ ಸಲ್ಲಿಸಿದ್ದಾರೆ.
ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ
ಧ್ವಜಾರೋಹಣ ವೇಳೆ ಮಗು ಜನಿಸಿದ್ದರಿಂದ ಆಸ್ಪತ್ರೆಯಲ್ಲಿ ಸಂಭ್ರಮ ಹೆಚ್ಚಾಗಿತ್ತು. ಬಳಿಕ ಆಸ್ಪತ್ರೆ ಸಿಬ್ಬಂದಿ ಜೊತೆ ಪೋಷಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇನ್ನು ಸ್ವಾತಂತ್ರ್ಯ ದಿನದಂದೇ ಜನಿಸಿದ್ದರಿಂದ ಪೋಷಕರು ವಿಶೇಷ ಹೆಸರಿಡಲು ನಿರ್ಧರಿಸಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ.
ರಾಷ್ಟ್ರಧ್ವಜ ಹಿಡಿದ ಅಳಿಲು!
ಶಿವಮೊಗ್ಗದಲ್ಲಿ ಅಳಿಲು ಒಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ. ಮುದ್ದಾದ ಅಳಿಲೊಂದು ತ್ರಿವರ್ಣ ಧ್ವಜ ಹಿಡಿದು ಅಮೃತ ಮಹೋತ್ಸವ ಆಚರಿಸಿದೆ. ಟೇಬಲ್ ಮೇಲಿಟ್ಟಿದ್ದ ಧ್ವಜ ಎತ್ತಿ ಹಿಡಿದು ಆಶ್ಚರ್ಯ ಮೂಡಿಸಿದೆ. ಈ ಫೋಟೋ ವೈರಲ್ ಆಗಿದೆ.
ಶಿವಮೊಗ್ಗದ ಭದ್ರಾವತಿಯ ಭೂತನಗುಡಿಯ 5ನೇ ಕ್ರಾಸ್ನಲ್ಲಿರುವ ಅಶೋಕ್ ಜಿ. ಶೇಟ್ ಎಂಬುವವರ ಮನೆಯ ಅಳಿಲು ರಾಷ್ಟ್ರಪ್ರೇಮ ಮೆರೆದಿದೆ. 5 ತಿಂಗಳಿಂದ ಸಾಕಿರುವ ಅಳಿಲಿನ ರಾಷ್ಟ್ರಪ್ರೇಮ ಕಂಡು ಅಕ್ಕಪಕ್ಕದ ಮನೆಯವರು ಆಶ್ಚರ್ಯ ಚಕಿತರಾಗಿದ್ದಾರೆ. ಈಗ ಅಳಿಲು ನೋಡಲು ಬರ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆಯಂತೆ.
ತರಕಾರಿಯಲ್ಲಿ ಮೂಡಿದ ರಾಷ್ಟ್ರಧ್ವಜ!
ಕೆ.ಆರ್.ಪುರದಲ್ಲಿ ತರಕಾರಿಯಲ್ಲೇ ಬೃಹತ್ ರಾಷ್ಟ್ರಧ್ವಜ ರಚಿಸಲಾಗಿತ್ತು. ಪ್ರಮುಖ ಆಹಾರ ಮತ್ತು ಕೃಷಿ ತಂತ್ರಜ್ಞಾನ ಸಂಸ್ಥೆಯಾದ ವೇ ಕೂಲ್ ಫುಡ್ ವತಿಯಿಂದ ಕನ್ನಮಂಗಲ ವಿತರಣಾ ಕೇಂದ್ರದ ಬಳಿ ಆಹಾರ ಧ್ವಜ ರಚಿಸಲಾಗಿದೆ. ಮೂಲಂಗಿ, ಬೀನ್ಸ್, ಕ್ಯಾರೆಟ್ ಬಳಸಿ ಈ ತರಕಾರಿ ಧ್ವಜ ತಯಾರಿಸಲಾಗಿದೆ. 20 ಟನ್ ತರಕಾರಿ ಇದಕ್ಕಾಗಿ ಬಳಸಲಾಗಿದೆ.
ಧ್ವಜಾರೋಹಣ ಮಾಡಿ ಮದುವೆಯಾದ ದಂಪತಿ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಹಿನ್ನಲೆ ಬೆಂಗಳೂರಿನ ಕೆಂಗೇರಿಯಲ್ಲಿ ನವದಂಪತಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದ್ದಾರೆ. ಪ್ರೀತಾ ಹಾಗೂ ರಾಘವೇಂದ್ರ ಅನ್ನುವವರೇ ಧ್ವಜಾರೋಹಣ ಮಾಡಿ ಸಪ್ತಪದಿ ತುಳಿದ ನೂತನ ದಂಪತಿ. ತಾಳಿ ಕಟ್ಟುವ ಮುನ್ನ ಪ್ರೀತಾ ಮತ್ತು ರಾಘವೇಂದ್ರ ದಂಪತಿ ಹೆತ್ತವರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ