• Home
  • »
  • News
  • »
  • state
  • »
  • ಮೈಸೂರಲ್ಲಿ ಪ್ರವಾಸೋದ್ಯಮ ವೃದ್ಧಿ ಜೊತೆಗೆ ಹೆಚ್ಚಾಯ್ತು ಕೊರೋನಾ ಸೋಂಕಿತರ ಸಂಖ್ಯೆ

ಮೈಸೂರಲ್ಲಿ ಪ್ರವಾಸೋದ್ಯಮ ವೃದ್ಧಿ ಜೊತೆಗೆ ಹೆಚ್ಚಾಯ್ತು ಕೊರೋನಾ ಸೋಂಕಿತರ ಸಂಖ್ಯೆ

ಮೈಸೂರು

ಮೈಸೂರು

ದಿನವೊಂದರಲ್ಲಿ 1000 ಜನರು ಪ್ರವಾಸಿಗರು ಮೃಗಾಲಯಕ್ಕೆ ಆಗಮಿಸುತ್ತಿದ್ದು, ವಾರಾಂತ್ಯದಲ್ಲಿ ಈ ಸಂಖ್ಯೆ 3000 ಆಗುತ್ತಿದೆ. ಪ್ರವಾಸಿಗರ ತಂಡದಲ್ಲಿ ಒಬ್ಬರು ಸೋಂಕಿತರಿದ್ದರೂ ಅದು ಇಡೀ ಸಮುದಾಯಕ್ಕೆ ಹಬ್ಬುತ್ತಿದೆ

  • Share this:

ಮೈಸೂರು (ಅ.6): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್​ಡೌನ್​ ನಿಯಮ ಹೇರಿದ್ದ ಸರ್ಕಾರ ಹಂತ ಹಂತವಾಗಿ ಅದರ ಸಡಿಲಿಕೆಗೆ ಮುಂದಾಗಿದೆ. ಜೀವದ ಜೊತೆಗೆ ಜೀವನವೂ ಮುಖ್ಯ. ಈ ಹಿನ್ನಲೆ ಮುನ್ನೆಚ್ಚರಿಕೆವಹಿಸಿ ಜನರು ಜೀವನ ನಿರ್ವಹಣೆಗೆ ಮುಂದಾಗಬೇಕು ಎಂದು ತಿಳಿಸಿದೆ. ಹಂತ ಹಂತವಾಗಿ ಎಲ್ಲ ನಿಷೇಧಗಳು ಸಡಿಲಿಕೆಯಾಗುತ್ತಿರುವ ಹಿನ್ನಲೆ ಕಳೆದ ಐದು ತಿಂಗಳಿನಿಂದ ಮನೆಯಲ್ಲಿಯೇ ಇದ್ದು ಬೇಸರಿಸಿಕೊಂಡಿದ್ದ ಜನರು ಅನ್​ಲಾಕ್​5 ಬಳಿಕ ಪ್ರವಾಸಿ ತಾಣದತ್ತ ದಾಂಗುಡಿ ಇಡುತ್ತಿದ್ದಾರೆ. ಅದರಲ್ಲಿಯೂ ಸಾಂಸ್ಕೃತಿಕ ನಗರಿ ಎಲ್ಲರ ಮೆಚ್ಚಿನ ತಾಣ. ಜೊತೆಗೆ ಈಗ ದಸರಾ ಸಂಭ್ರಮ ಬೇರೆ. ಇದರಿಂದಾಗಿ ಜನರು ಇಲ್ಲಿನ ಪ್ರಮುಖ ಆಕರ್ಷಕ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮವಾಗಿ ಕೊರೋನಾ ಸೋಂಕು ಕೂಡ ಏರಿಕೆಯಾಗುತ್ತಿದ್ದು, ಜಿಲ್ಲಾಡಳಿತಕ್ಕೆ ಹೊಸ ಆತಂಕಕ್ಕೆ ಕಾರಣವಾಗಿದೆ. 

ನಗರದಲ್ಲಿ ಈವರೆಗೆ ಮೂರು ಅಂಕಿಗಳಲ್ಲಿ ದಾಖಲಾಗುತ್ತಿದ್ದ ಕೊರೋನಾ ಪ್ರಕರಣಗಳು 1000 ದಾಟುತ್ತಿವೆ. ಮೂರು ದಿನಗಳಲ್ಲಿ ಹೊಸ ಸೋಂಕಿತ ಪ್ರಕರಣ ಹೆಚ್ಚಾಗುವ ಜೊತೆಗೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ.


ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣ ಪ್ರವಾಸಿಗರು ಕೂಡ ಎನ್ನಲಾಗಿದೆ. ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಕೆಆರ್​ಎಸ್​ ಈಗ ಪ್ರವೇಶ ಮುಕ್ತವಾಗಿದ್ದು, ಪ್ರವಾಸಿಗರು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಳೆದ 15ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.  ದಿನವೊಂದರಲ್ಲಿ 1000 ಜನರು ಪ್ರವಾಸಿಗರು ಮೃಗಾಲಯಕ್ಕೆ ಆಗಮಿಸುತ್ತಿದ್ದು, ವಾರಾಂತ್ಯದಲ್ಲಿ ಈ ಸಂಖ್ಯೆ 3000 ಆಗುತ್ತಿದೆ. ಪ್ರವಾಸಿಗರ ತಂಡದಲ್ಲಿ ಒಬ್ಬರು ಸೋಂಕಿತರಿದ್ದರೂ ಅದು ಇಡೀ ಸಮುದಾಯಕ್ಕೆ ಹಬ್ಬುತ್ತಿದೆ. ಇದು ಆರೋಗ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ.


ಈ ಕುರಿತು ಮಾತನಾಡಿರುವ ಡಿಎಚ್​ಒ ಡಾ. ವೆಂಕಟೇಶ್​,  ಪ್ರವಾಸಿಗರನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಇದರಿಂದ ಆರ್ಥಿಕತೆ ವೃದ್ಧಿಯಾಗುತ್ತದೆ.  ಪ್ರವಾಸಿಗರು ಕಡಿಮೆ ಆದರೆ, ಸೋಂಕಿತರ ಸಂಖ್ಯೆ ಕೂಡ ಕಡಿಮೆಯಾಗಲಿದೆ. ಪ್ರವಾಸಿ ತಾಣಗಳಿಗೆ ಜನರನ್ನು ಹಂತ ಹಂತವಾಗಿ ಬಿಡಬೇಕು. ಜನರು ಓಡಾಟ ಕಡಿಮೆ ಮಾಡಿ ಮಾಡಿದಷ್ಟು ಉತ್ತಮ. ಜನರ ಎಷ್ಟು ಓಡಾಡುತ್ತಾರೆ ಅಷ್ಟು ಕೊರೊನಾ ಪ್ರಕರಣಗಳು ಹೆಚ್ಚಾಗುತ್ತದೆ. ಯಾರು ಪಾಸಿಟಿವ್ ಅಂತ ನಮಗೆ ಗೊತ್ತಿರೋದಿಲ್ಲ. ಮಾಸ್ಕ್ ಹಾಕಬೇಕು, ಸಾಮಾಜಿಕ ಅಂತರ ಕಡ್ಡಾಯವಾಗಿದ್ದರೆ ಮಾತ್ರ ಸೋಂಕು ನಿಯಂತ್ರಣ ಮಾಡಲು ಸಾಧ್ಯ.


ಒಬ್ಬ ಪಾಸಿಟಿವ್ ಬಂದವರ ಮನೆಯಲ್ಲಿ ಕನಿಷ್ಠ 10 ಮಂದಿ ಸೋಂಕಿತರು ಸಿಗುತ್ತಾರೆ ಎಲ್ಲರು ಟೆಸ್ಟ್‌ಗೆ ಒಳಪಡಬೇಕು. ನಗರದಲ್ಲಿ ಸದ್ಯ 6500 ಟೆಸ್ಟ್‌ ಮಾಡಲು ಸೂಚನೆ ಇದೆ. ನಾವು ನಿತ್ಯ 5000 ಟೆಸ್ಟ್ ಮಾಡುತ್ತಿದ್ದೇವೆ. ಟೆಸ್ಟ್ ಮಾಡಿಸಿಕೊಂಡರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದರು.


ಇದನ್ನು ಓದಿ: ಮೈಸೂರು ಮೃಗಾಲಯದಲ್ಲಿ ಕುಟುಂಬದೊಂದಿಗೆ ಶಿವಣ್ಣ ಜಾಲಿರೌಂಡ್ಸ್


ಮೃಗಾಲಯಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದುಬರುತ್ತಿರುವ ಕುರಿತು ಮಾತನಾಡಿದ ಮೃಗಾಲಯ ನಿರ್ದೇಶಕ ಅಜಿತ್​ ಕುಲಕರ್ಣಿ, ಕೋವಿಡ್‌ ನಿಯಮ ಪಾಲಿಸಿ ಪ್ರವಾಸಿಗರ ವಿಕ್ಷಣೆಗೆ ಅವಕಾಶ ನೀಡಲಾಗಿದೆ. ಕೋವಿಡ್‌ ಬಗ್ಗೆ ಅರಿವು ಹೆಚ್ಚಾಗಿರುವುದರಿಂದ ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜನರು ತಮ್ಮ ಸುರಕ್ಷತೆ ನೋಡಿಕೊಂಡು ಮೃಗಾಲಯಕ್ಕೆ ಭೇಟಿ ನೀಡಲಿ ಇದರಿಂದ ಎಲ್ಲರಿಗೂ ಒಳ್ಳೆಯದು ಎಂದರು.


ಇನ್ನು ಇತ್ತೀಚೆಗಷ್ಟೇ ನಟ ಶಿವರಾಜ್​ ಕುಮಾರ್​ ಕೂಡ ಕುಟುಂಬ ಸಮೇತರಾಗಿ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಕಳೆದ ಆರು ತಿಂಗಳಿನಿಂದ ಬೆಂಗಳೂರು ಬಿಟ್ಟು ಎಲ್ಲೂ ಹೋಗಿರಲಿಲ್ಲ. ಇಲ್ಲಿನ ಪ್ರಾಣಿಗಳನ್ನು ನೋಡಿ ಖುಷಿಯಾಯಿತು ಎಂದಿದ್ದರು. ಇದೇ ವೇಳೆ ತಾವು ದತ್ತು ಪಡೆದ ಲಕ್ಷ್ಮೀ ಆನೆಗೆ ಊಟ ನೀಡಿ ಅದರ ಕುಶಲೋಪರಿ ವಿಚಾರಿಸಿದ್ದರು.

Published by:Seema R
First published: