Exclusive Story | ಉಚಿತವಾಗಿ ಲಸಿಕೆ ಹಂಚಿಕೆ ವಿಷಯವಾಗಿ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ; ಸೋಮವಾರ ಮಹತ್ವದ ನಿರ್ಧಾರ?

ಆರಂಭದಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಉಚಿತ ಲಸಿಕೆ ನೀಡುವುದು. ನಂತರ ಎಪಿಎಲ್ ಹಾಗೂ ಇತರರಿಗೆ ಉಚಿತ ಲಸಿಕೆ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ಚರ್ಚೆ ಬಳಿಕ ಯಾರಿಗೆಲ್ಲ ಉಚಿತ ಲಸಿಕೆ ನೀಡುವುದಾಗಿ ಸರ್ಕಾರದಿಂದ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದು ನ್ಯೂಸ್ 18 ಗೆ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ಬೆಂಗಳೂರು: ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸಿಗೆ ಕೊರತೆ, ಆಕ್ಸಿಜನ್ ಕೊರತೆ ಹಾಗೂ ಲಸಿಕೆ ಕೊರತೆ ವ್ಯಾಪಕವಾಗಿ ಕಂಡುಬಂದಿದ್ದು, ಭಾರೀ ಬಿಕ್ಕಟ್ಟು ಸೃಷ್ಟಿಸಿದೆ. ಇದೀಗ ಕೋವಿಡ್ ಲಸಿಕೆ ಉಚಿತವಾಗಿ ನೀಡುವ ವಿಚಾರವಾಗಿ ರಾಜ್ಯ ಸರ್ಕಾರದ ಮೇಲೆ‌ ಒತ್ತಡ ಹೆಚ್ಚಾಗಿದೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ‌ ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡಿವೆ. ಜಾರ್ಖಂಡ್, ಗೋವಾ, ಛತ್ತೀಸ್​ಗಢ, ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಬಿಹಾರ ಹಾಗೂ ಸಿಕ್ಕಿಂನಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ಹಂಚಿಕೆ ಮಾಡುವುದಾಗಿ ಅಲ್ಲಿನ ರಾಜ್ಯ ಸರ್ಕಾರಗಳು ಘೋಷಣೆ ಮಾಡಿವೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಉಚಿತವಾಗಿ ಲಸಿಕೆ ನೀಡುವಂತೆ ರಾಜ್ಯ ಸರ್ಕಾರದ  ಮೇಲೆ ಒತ್ತಡ ಹೆಚ್ಚಾಗಿದೆ.

ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಉಚಿತ ಲಸಿಕೆ ನೀಡಿ ನೆರವಿಗೆ ಬನ್ನಿ ಎಂದು
ಸಾರ್ವಜನಿಕ ವಲಯದಿಂದ ಹಾಗೂ ಪ್ರತಿಪಕ್ಷಗಳಿಂದ ಸಿಎಂ‌ ಬಿಎಸ್​ ಯಡಿಯೂರಪ್ಪ ಅವರ  ಮೇಲೆ ನಿರಂತರ ಒತ್ತಡ ಹಾಕಲಾಗುತ್ತಿದೆ. ಕೋವಿಡ್​ನಿಂದ‌ ಜನ ನಲುಗಿ ಹೋಗಿದ್ದಾರೆ. ಬಡಜನರು ಹಣ ಕೊಟ್ಟು ಲಸಿಕೆ ಪಡೆಯಲು ಸಾಧ್ಯವಿಲ್ಲ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಸರ್ಕಾರವೇ ಮುಂದೆ ಬಂದು ಉಚಿತ ಲಸಿಕೆ ನೀಡುವಂತೆ‌ ಸಿಎಂಗೆ ಆಂತರಿಕವಾಗಿ ಸ್ವಪಕ್ಷೀಯರಿಂದಲೂ ಒತ್ತಡ ಬೀಳಲಾರಂಭಿಸಿದೆ.

ಇದನ್ನು ಓದಿ: Supreme Court CJI: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಎನ್​.ವಿ. ರಮಣ ಪ್ರಮಾಣವಚನ ಸ್ವೀಕಾರ

ಈಗಾಗಲೇ ಕೋವಿಡ್ ನಿರ್ವಹಣೆಯಲ್ಲಿ‌ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷಗಳೂ ಮುಗಿಬಿದ್ದಿವೆ. ಆಕ್ಸಿಜನ್, ರೆಮೆಡಿಸಿವಿರ್ ಇಂಜಕ್ಷನ್, ಬೆಡ್, ಐಸಿಯು, ಆ್ಯಂಬುಲೆನ್ಸ್ ಕೊರತೆ ಇವುಗಳಿಂದ ಜನ‌ ಬೇಸತ್ತಿದ್ದಾರೆ. ಸರ್ಕಾರದ ವಿರುದ್ಧ ಜನಾಭಿಪ್ರಾಯ‌ ಮೂಡುತ್ತಿದೆ. ಇಂಹಹ ಸಂದರ್ಭದಲ್ಲಿ ಲಸಿಕೆ ಆದರೂ ಉಚಿತವಾಗಿ ಕೊಡುವಂತೆ ಸಿಎಂ‌ ಬಿಎಸ್​ವೈಗೆ ಆಪ್ತರ ಸಲಹೆ ಮಾಡಿದ್ದಾರೆ.

ಸರ್ಕಾರ ಈಗಾಗಲೇ 400 ಕೋಟಿ ರೂ. ವೆಚ್ಚದಲ್ಲಿ ಲಸಿಕೆ‌ ಖರೀದಿಗೆ ಮುಂದಾಗಿದೆ. ಉಚಿತವಾಗಿ ಲಸಿಕೆ ನೀಡುವುದಾದರೆ ಕನಿಷ್ಠ 2 ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಚಿವ ಸಂಪುಟದಲ್ಲಿ ಮಹತ್ವದ ಚರ್ಚೆ ನಡೆಸಿ, ಉಚಿತ ಲಸಿಕೆ ನೀಡುವ ಬಗ್ಗೆ ಸಿಎಂ ಬಿಎಸ್​ವೈ ಅವರು ಸಚಿವರಿಂದ ಅಭಿಪ್ರಾಯ ಪಡೆಯಲಿದ್ದಾರೆ. ಆರಂಭದಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಉಚಿತ ಲಸಿಕೆ ನೀಡುವುದು. ನಂತರ ಎಪಿಎಲ್ ಹಾಗೂ ಇತರರಿಗೆ ಉಚಿತ ಲಸಿಕೆ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ಚರ್ಚೆ ಬಳಿಕ ಯಾರಿಗೆಲ್ಲ ಉಚಿತ ಲಸಿಕೆ ನೀಡುವುದಾಗಿ ಸರ್ಕಾರದಿಂದ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದು ನ್ಯೂಸ್ 18 ಗೆ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

  • ವಿಶೇಷ ವರದಿ: ಚಿದಾನಂದ ಪಟೇಲ್

Published by:HR Ramesh
First published: