ಬಳ್ಳಾರಿ ಜಿಲ್ಲೆಯ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ; ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ವರುಷ ಡಬಲ್ ಏರಿಕೆ!

ಕಳೆದೊಂದು ದಶಕದಿಂದ ಜಿಲ್ಲೆಯಲ್ಲಿ ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗುತ್ತ ಬರುತ್ತಿದೆ. ಆದರೆ, ಕಳೆದ ಮೂರು ವರುಷಕ್ಕೆ ಹೋಲಿಸಿದಲ್ಲಿ ತೀವ್ರ ಅಪೌಷ್ಟಿಕತೆ ಪ್ರಮಾಣ 2019ರಲ್ಲಿ ದ್ವಿಗುಣಗೊಂಡಿದೆ ಎನ್ನುತ್ತಿವೆ ಅಂಕಿಅಂಶಗಳು.

ಪೌಷ್ಠಿಕ ಆಹಾರ ಸೇವಿಸುತ್ತಿರುವ ಮಕ್ಕಳು.

ಪೌಷ್ಠಿಕ ಆಹಾರ ಸೇವಿಸುತ್ತಿರುವ ಮಕ್ಕಳು.

  • Share this:
ಬಳ್ಳಾರಿ; ಅಕ್ರಮ ಗಣಿಗಾರಿಕೆಗೆ ನಲುಗಿ ಹೋಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಜೀವನಕ್ರಮ ಸುಧಾರಣೆಯಾಗುತ್ತಿದೆ ಎನ್ನುಷ್ಟರಲ್ಲಿಯೇ ಮತ್ತೆ ಅಪೌಷ್ಟಿಕತೆಯ ಭೂತ ಕಾಡುತ್ತಿದೆ. ಕಳೆದೊಂದು ದಶಕದಿಂದ ಗಣನೀಯವಾಗಿ ಕಡಿಮೆಯಾಗುತ್ತಿದ್ದ ಅಪೌಷ್ಟಿಕತೆ ಪ್ರಮಾಣ ಈ ವರ್ಷ ಮತ್ತೆ ದಿಢೀರ್ ಏರಿಕೆ ಕಂಡಿದೆ. ಹೀಗಂತ ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದ ಅಂಕಿ-ಅಂಶದ ಮೇಲೆ ಕಣ್ಣುಹಾಕಿದರೆ ವಿಚಾರ ಬಹಿರಂಗವಾಗುತ್ತದೆ.

ನೋಡಲು ಸಾಕಷ್ಟು ಆರ್ಥಿಕವಾಗಿ ಸಬಲ ಹೊಂದಿದಂತೆ ಕಾಣುವ ಬಳ್ಳಾರಿ ಜಿಲ್ಲೆ ಕೆಲವೇ ಕೆಲವರ ಬಳಿ ಶ್ರೀಮಂತಿಕೆ ಹೊರತುಪಡಿಸಿದರೆ ಉಳಿದಂತೆ ಅತ್ಯಂತ ಹಿಂದುಳಿದ ಜಿಲ್ಲೆಯಿದು. ಬಡತನ, ಅನಕ್ಷರತೆ, ಅಜ್ಞಾನ, ಮಾಹಿತಿ ಕೊರತೆಯಿಂದ ಸರಿಯಾಗಿ ಪೌಷ್ಟಿಕ ಆಹಾರವನ್ನು ಸೇವಿಸದೆ ಇಲ್ಲಿಯ ಜನರು ಈಗಲೂ ಸಂಕಷ್ಟಪಡುತ್ತಿದ್ದಾರೆ. 21ನೇ ಶತಮಾನದಲ್ಲಿಯೂ ಸರಿಯಾಗಿ ತಿನ್ನಲೂ ಪೌಷ್ಠಿಕ ಆಹಾರವಿಲ್ಲದೆ ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ ಕಳೆದ ವರುಷ 1092 ಮಕ್ಕಳು ತೀವ್ರ ಅಪೌಷ್ಟಿಕೆಯಿಂದ ನರಳುತ್ತಿದ್ದಾರೆ.

ಇವರಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರವನ್ನು ನೀಡುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡುತ್ತಿದೆ. ಕಳೆದೊಂದು ದಶಕದಿಂದ ಜಿಲ್ಲೆಯಲ್ಲಿ ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗುತ್ತ ಬರುತ್ತಿದೆ. ಆದರೆ, ಕಳೆದ ಮೂರು ವರುಷಕ್ಕೆ ಹೋಲಿಸಿದಲ್ಲಿ ತೀವ್ರ ಅಪೌಷ್ಟಿಕತೆ ಪ್ರಮಾಣ 2019ರಲ್ಲಿ ದ್ವಿಗುಣಗೊಂಡಿದೆ. 2017-18ನೇ ಸಾಲಿನಲ್ಲಿ 568 ಅಂದರೆ ಶೇ.0.26ರಷ್ಟಿದ್ದರೆ, 2018-19ರಲ್ಲಿ 429 ಅಂದರೆ ಶೇ.0.20ರಷ್ಟಿದೆ. ಆದರೆ 2018-19ರಲ್ಲಿ ಇದರ ಸಂಖ್ಯೆ 1092ಕ್ಕೆ ಅಂದರೆ ಶೇ.0,46 ರಷ್ಟು ಏರಿಕೆಯಾಗಿದೆ.

ಈ ಪೈಕಿ ಗಂಡುಮಕ್ಕಳು 450 ಇದ್ದರೆ, 642 ಹೆಣ್ಣುಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಆದರೆ ಕಳೆದ ವರುಷದಿಂದ ಎತ್ತರಕ್ಕೆ ತಕ್ಕಂತೆ ತೂಕ, ವಯಸ್ಸಿಗೆ ತಕ್ಕಂತೆ ತೂಕದ ಮಾಪನವನ್ನು ಪರಿಗಣಿಸಿರುವುದರಿಂದ ಇದರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರ ಜೊತೆಗೆ ಅಂಗನವಾಡಿಗೆ ಸೇರಿದ ಮಕ್ಕಳ ಸಂಖ್ಯೆಯಲ್ಲಿಯೂ ಹೆಚ್ಚಿರುವುದರಿಂದ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್.

ಕಳೆದ ಮೂರು ವರುಷ ಸಾಧಾರಣ ಅಪೌಷ್ಟಿಕತೆ ಪ್ರಮಾಣ ಗಮನಿಸಿದರೆ, 2017-18ರಲ್ಲಿ 54,396 ಮಕ್ಕಳು ಶೇ.25.26ರಷ್ಟು, 2018-19ರಲ್ಲಿ 42,527 ಮಕ್ಕಳು ಶೇ.19.98ರಷ್ಟು ಹಾಗೂ 2019-20ರಲ್ಲಿ 48048 ಮಕ್ಕಳು ಶೇ. 20.35ರಷ್ಟು ಹೆಚ್ಚಾಗಿದೆ. ಇನ್ನು 2019-20ನೇ ವರುಷದಲ್ಲಿ ಬಳ್ಳಾರಿ ಜಿಲ್ಲಾವಾರು ಪರಿಗಣಿಸಿದರೆ ಹೊಸಪೇಟೆ ತಾಲೂಕಿನಲ್ಲಿ 168 ಅತಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇದರ ನಂತರದ ಸ್ಥಾನದಲ್ಲಿ ಹೂವಿನಹಡಗಲಿ 158, ಬಳ್ಳಾರಿ ನಗರ 154, ಸಂಡೂರು 145, ಹಗರಿಬೊಮ್ಮನಹಳ್ಳಿ 124, ಹರಪನಹಳ್ಳಿ 107, ಕೂಡ್ಲಿಗಿ 90, ಸಿರುಗುಪ್ಪ 83, ಬಳ್ಳಾರಿ ಗ್ರಾಮಾಂತರ 63 ಮಕ್ಕಳು ಅಪೌಷ್ಟಿಕತೆಯಿಂದಿದ್ದಾರೆ ಎಂದು ಅಂಕಿಅಂಶಗಳಿಂದ ಗೊತ್ತಾಗುತ್ತದೆ.

ಒಟ್ಟು ಬಳ್ಳಾರಿ ಜಿಲ್ಲೆಯಲ್ಲಿ 2784 ಅಂಗನವಾಡಿ ಕೇಂದ್ರಗಳಿದ್ದು, 2,36,056 ಮಕ್ಕಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಗರ್ಭಿಣಿ ಮಹಿಳೆಯರಿಗೆ, ಮಕ್ಕಳಿಗೆ ನಿಯಮಿತವಾಗಿ ಸರಕಾರ ನೀಡುವ ಪೌಷ್ಟಿಕಾಂಶ ನೀಡಲಾಗುತ್ತಿದೆ.ಸಮಾಧಾನದ ಸಂಗತಿಯೆಂದರೆ ಶಿಶುಮರಣ ಪ್ರಮಾಣದಲ್ಲಿ ಬಳ್ಳಾರಿ ಜಿಲ್ಲೆ ವರುಷದಿಂದ ವರುಷಕ್ಕೆ ಕಡಿಮೆಯಾಗುತ್ತಿದೆ. 2017-18ರಲ್ಲಿ 305 ಶಿಶುಮರಣವಾಗಿದೆ. ಕ್ರಮವಾಗಿ 2018-19ರಲ್ಲಿ 259 ಇದ್ದರೆ, 2019-20ರಲ್ಲಿ 187 ಶಿಶುಮರಣ ಸಂಖ್ಯೆಯಲ್ಲಿ ತಗ್ಗಿದೆ.

ಕಳೆದ ವರ್ಷ ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ತಾಲೂಕು ಸೇರಿಕೊಂಡಿರುವುದು ಅಂಕಿ-ಅಂಶದಲ್ಲಿ ಹೆಚ್ಚಳ ಕಂಡುಬಂದಿದೆ. ಅಪೌಷ್ಟಿಕತೆ ಗುರುತಿಸಲು ಪರಿಗಣಿಸುವ ಮಾಪನದಲ್ಲಿಯೂ ಬದಲಾವಣೆಯಾಗಿದೆ. ಸಾಧಾರಣ ಹಾಗೂ ತೀವ್ರ ಅಪೌಷ್ಟಿಕತೆಯನ್ನು ಒಂದೇ ಎಂದು ಪರಿಗಣಿಸಿ ಪೌಷ್ಟಿಕ ಆಹಾರ ನೀಡಲು ಸರ್ಕಾರ ಮುಂದಾಗಿದೆ. ಆದರೂ ಅಪೌಷ್ಟಿಕತೆ ಪ್ರಮಾಣ ಬಳ್ಳಾರಿ ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಾಗಿರುವುದು ಜನಪ್ರತಿನಿಧಿಗಳು ಯೋಚಿಸಬೇಕಾದ ವಿಚಾರ.

ಇದನ್ನೂ ಓದಿ : ನಾನೊಬ್ಬ ರಾಜಕಾರಣಿ ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಆಪೇಕ್ಷೆಗಳಿವೆ; ಲಕ್ಷ್ಮಣ ಸವದಿ
First published: