ಸಿಎಂ ತವರು ಜಿಲ್ಲೆಯಲ್ಲಿ ಹೆಚ್ಚಾಗಿದೆ ಸಣ್ಣ ಲೇವಾದೇವಿದಾರರ ಕಾಟ; ಸಾಲ ವಸೂಲಾತಿಗೆ ಕಿರುಕುಳ ಆರೋಪ

ಮೈಕ್ರೋ ಫೈನಾನ್ಸ್ ನವರು, ಯಾವುದೇ ದಾಖಲೆ ಇಲ್ಲದೇ, ಕೇವಲ ಆಧಾರ್ ಕಾರ್ಡ್ ಇಟ್ಟುಕೊಂಡು, ಮಹಿಳೆಯರಿಗೆ ಸಾಲ ನೀಡುತ್ತಿದ್ದಾರೆ. ಕೊಟ್ಟ ಸಾಲಕ್ಕೆ ಇದೀಗ ಶೇ. 20 ರಷ್ಟು ಬಡ್ಡಿ ವಿಧಿಸಿ, ಸಾಲ ವಸೂಲಾತಿಗಾಗಿ ದಂಡು ಕಟ್ಟಿಕೊಂಡು ಬಂದು ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ

news18-kannada
Updated:December 13, 2019, 12:11 PM IST
ಸಿಎಂ ತವರು ಜಿಲ್ಲೆಯಲ್ಲಿ ಹೆಚ್ಚಾಗಿದೆ ಸಣ್ಣ ಲೇವಾದೇವಿದಾರರ ಕಾಟ; ಸಾಲ ವಸೂಲಾತಿಗೆ ಕಿರುಕುಳ ಆರೋಪ
ಸಾಂದರ್ಭಿಕ ಚಿತ್ರ
  • Share this:
ಶಿವಮೊಗ್ಗ(ಡಿ.12): ಮಲೆನಾಡಿನ ಮಹಿಳೆಯರಿಗೆ ಇದೀಗ ಮೈಕ್ರೋ  ಫೈನಾನ್ಸ್ ನವರ ಕಾಟ ಹೆಚ್ಚಾಗಿದೆ. ಮೈಕ್ರೋ  ಫೈನಾನ್ಸ್ ನ ಪ್ರತಿನಿಧಿಗಳು ಸೀದಾ ಮನೆಗೆ ನುಗ್ಗಿ, ನೀಡಿದ್ದ ಸಾಲ ವಸೂಲಾತಿಗೆ ಕಿರುಕುಳ ನೀಡುತ್ತಿದ್ದಾರೆ. ಶೇ 20 ರಷ್ಟು ಬಡ್ಡಿ ವಿಧಿಸಿ, ಮಸೂಲಿಗೆ ಮುಂದಾಗಿದ್ದಾರೆ ಎಂಬ ಆರೋಪ  ಕೇಳಿ ಬಂದಿದೆ. ಸಾಲ ನೀಡಿದ್ದ ಫೈನಾನ್ಸ್ ಗಳ ವಿರುದ್ಧವೇ  ಸಾಲ ಪಡೆದಿದ್ದ ಮಹಿಳೆಯರು ತಿರುಗಿ ಬಿದ್ದಿದ್ದಾರೆ. 

ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ರಿಪ್ಪನಪೇಟೆ, ಸಾಗರ ಸೇರಿದಂತೆ, ಹಲವಾರು ಹಳ್ಳಿಗಳಲ್ಲಿ, ಇದೀಗ ಈ ಸಣ್ಣ ಲೇವಾದೇವಿದಾರರ ಕಾಟ ಹೆಚ್ಚಾಗಿದೆ. ಸರ್ಕಾರಿ ಬ್ಯಾಂಕುಗಳಲ್ಲಿ, ಎಲ್ಲಾ ರೀತಿಯ ದಾಖಲೆಗಳನ್ನು ನೀಡಿದ್ರು ಸಾಲ ಸಿಗೋದು ಅನುಮಾನ ಆದರೆ, ಈ ಮೈಕ್ರೋ ಫೈನಾನ್ಸ್ ನವರು, ಯಾವುದೇ ದಾಖಲೆ ಇಲ್ಲದೇ, ಕೇವಲ ಆಧಾರ್ ಕಾರ್ಡ್ ಇಟ್ಟುಕೊಂಡು, ಮಹಿಳೆಯರಿಗೆ ಸಾಲ ನೀಡುತ್ತಿದ್ದಾರೆ. ಕೊಟ್ಟ ಸಾಲಕ್ಕೆ ಇದೀಗ ಶೇ. 20 ರಷ್ಟು ಬಡ್ಡಿ ವಿಧಿಸಿ, ಸಾಲ ವಸೂಲಾತಿಗಾಗಿ ದಂಡು ಕಟ್ಟಿಕೊಂಡು ಬಂದು ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ತಾವು ಉದ್ಯೋಗ ಸೃಷ್ಟಿ ಮಾಡುತ್ತೇವೆ. ಮಹಿಳೆಯರಿಗೆ ತರಬೇತಿ ನೀಡುತ್ತೇವೆ, ಅವರು ಸ್ವಯಂ ಉದ್ಯೋಗ ಪಡೆದ ನಂತರ ಹಣ ವಸೂಲಾತಿ ಮಾಡುತ್ತೇವೆ. ಬಡತನ ನಿವಾರಣೆ ಮಾಡಲು ನಾವು ಬಂದಿದ್ದೇವೆ ಎಂದು ಸುಳ್ಳು ಹೇಳಿ ಮುಗ್ದ ಮಹಿಳೆಯರನ್ನು ವಂಚಿಸುತ್ತಿದ್ದು, ಯಾರು ಕೂಡ ಇವರನ್ನು ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ಅಷ್ಟಕ್ಕೂ ಈ ಸಣ್ಣ ಲೇವಾದೇವಿದಾರರು, ಉದ್ಯೊಗ ತರಬೇತಿ ನೀಡುವ ಹೆಸರಿನಲ್ಲಿ ಸರ್ಕಾರದ ಹಣ ಕೂಡ ಪಡೆದು ಯಾವ ತರಬೇತಿಯನ್ನು ನೀಡುವುದಿಲ್ಲ. ಅಲ್ಲದೇ ಬ್ಯಾಂಕ್, ನಬಾರ್ಡ್ ಮುಂತಾದವುಗಳಿಂದ ಕಡಿಮೆ ಬಡ್ಡಿ ಸಾಲ ಪಡೆದು ಮಹಿಳೆಯರಿಗೆ ಸಾಲ ಕೊಡುವಾಗ ಹೆಚ್ಚು ಬಡ್ಡಿ ವಿಧಿಸುತ್ತವೆ ಎಂದು ಈ ಮಹಿಳೆಯರು ಆರೋಪಿಸುತ್ತಿದ್ದಾರೆ. ಮಲೆನಾಡಿನಲ್ಲಿ ಈ ಮೈಕ್ರೋ ಫೈನಾನ್ಸ್ ನ ಪ್ರತಿನಿಧಿಗಳು, ಹಗಲು ದರೋಡೆಗೆ ಇಳಿದಿವೆ ಎಂದು ಆರೋಪಿಸಿದ್ದಾರೆ. ಕೈ ಸಾಲ ಕೊಟ್ಟವರಂತೆ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ : ಮಂತ್ರಿಯಾಗಲಿ ಬಿಡಲಿ, ಎಂಟು ಬಾರಿ ಶಾಸಕನಾಗಿರುವ ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ; ಉಮೇಶ್ ಕತ್ತಿ

ಬ್ಯಾಂಕ್ ಗಳು ಈಗ ಬಡ  ಮಹಿಳೆಯರಿಗೆ ಸಾಲ ಕೊಡುವುದನ್ನೇ ನಿಲ್ಲಿಸಿದ್ದು, ಸಾಲ ಬೇಕು ಎಂದರೆ ಐಟಿ ರಿಟರ್ನ್, ಅದು, ಇದು ಎಂದು ದಾಖಲೆಗಳನ್ನು ಕೇಳುತ್ತಾರೆ. ಆದರೆ, ಅನಿವಾರ್ಯವಾಗಿ ನಮ್ಮ ಬಡ ಹೆಣ್ಣು ಮಕ್ಕಳು ಇಂತಹ ಫೈನಾನ್ಸ್  ಹೆಣೆದ ಜಾಲಕ್ಕೆ ಬಿದ್ದಿದ್ದು, ಸಾಲದ ಶೂಲಕ್ಕೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಅಂಶಗಳನ್ನು ಮನಗಂಡು,  ರಾಜ್ಯ ಸರ್ಕಾರ ಮತ್ತು ಸಿ.ಎಂ.  ಯಡಿಯೂರಪ್ಪ  ಈ ಕೂಡಲೇ, ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿ, ಮಲೆನಾಡಿನ ಮಹಿಳೆಯರಿಗೆ ಸಾಲದಿಂದ ಮುಕ್ತಿ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಮೈಕ್ರೋ ಫೈನಾನ್ಸ್ ಗಳ ಲೇವಾದೇವಿ ವ್ಯವಹಾರವನ್ನು ಸಂಪೂರ್ಣವಾಗಿ ತನಿಖೆ ಮಾಡಿ ಸಾಲ ಪಡೆದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಮೈಕ್ರೋ ಫೈನಾನ್ಸ್ ಗಳು ಸಾರ್ವಜನಿಕರು ಪಡೆದ ಸಾಲಕ್ಕೆ ಹೆಚ್ಚಿನ ಬಡ್ಡಿ ವಸೂಲಿ ಮಾಡಿದ್ದರೆ ಅದಕ್ಕೆ ಕ್ರಮ ಕೈಗೊಳ್ಳಬೇಕಿದೆ.

 
First published: December 12, 2019, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading