Covid-19: ಕೊರೋನಾ ಸೋಂಕು ಹೆಚ್ಚಳ: ಮತ್ತೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಈ ನಿಯಮ ಜಾರಿಗೆ ತರಲಾಗಿದ್ದು, ಇನ್ನು ಮುಂದೆ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್​ ಟೆಸ್ಟ್​ ಕಡ್ಡಾಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಮಾ. 12): ಕಡಿಮೆಯಾಗಿದ್ದ ಕೊರೋನಾ ಸೋಂಕು ಮತ್ತೆ ಹೆಚ್ಚಳಗೊಂಡಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ನಡುವೆ ಶಿವಮೊಗ್ಗದಲ್ಲಿ ದಕ್ಷಿಣ ಆಫ್ರಿಕಾ ವೈರಸ್ ಸೋಂಕು ಪತ್ತೆಯಾಗಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ.   ಇದರ ಜೊತೆಗೆ ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ  ಹಿನ್ನಲೆ ರಾಜ್ಯದಲ್ಲಿ ಕೂಡ ಸೋಂಕು ಹೆಚ್ಚಾಗುವ ಭೀತಿ ಸೃಷ್ಟಿಸಿದೆ. ಕಳೆದೆರಡು ತಿಂಗಳಿಂದ ಪ್ರಕರಣಗಳು ಕಡಿಮೆ ಇದ್ದ ಹಿನ್ನಲೆ ಜನರು ಸೋಂಕು ಮರೆತು ಓಡಾಟ ನಡೆಸಲು ಆರಂಭಿಸಿದ್ದರು. ಆದರೆ, ಕಳೆದೊಂದು ವಾರದಿಂದ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿ ಕಂಡಿದೆ. ರಾಜ್ಯದಲ್ಲಿ ಕೂಡ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಮತ್ತೆ ಕಠಿಣ ನಿಯಮ ಜಾರಿಗೆ ಮುಂದಾಗಿದೆ. 



    ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ರಾಜಧಾನಿಯಲ್ಲಿ ಇನ್ನೆರಡು ತಿಂಗಳು ಯಾವುದೇ ಪ್ರತಿಭಟನೆ, ಸಭೆ ಸಮಾರಂಭ ಸೇರಿದಂತೆ ಜನಜಂಗುಳಿ ಸೇರದಂತೆ ಈಗಾಗಲೇ ಅರೋಗ್ಯ ಸಚಿವರು ತಿಳಿಸಿದ್ದರು. ಅಲ್ಲದೇ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಆದೇಶ ಹೊರಡಿಸುವುದಾಗಿ ಕೂಡ ಅವರು ತಿಳಿಸಿದ್ದರು. ಇದರ ಬೆನ್ನಲ್ಲೆ ಇದೀಗ ರಾಜ್ಯ ಸರ್ಕಾರದಿಂದ ಹಳೆಯ ಆದೇಶ ಪರಿಷ್ಕರಿಸಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.



    ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಈ ನಿಯಮ ಜಾರಿಗೆ ತರಲಾಗಿದ್ದು, ಇನ್ನು ಮುಂದೆ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್​ ಟೆಸ್ಟ್​ ಕಡ್ಡಾಯವಾಗಿದೆ. ಅಲ್ಲದೇ ಬೆಂಗಳೂರಲ್ಲಿ ನಿತ್ಯ 40 ಸಾವಿರ  ಪರೀಕ್ಷೆ ಮಾಡುವ ಗುರಿ ನೀಡಲಾಗಿದ್ದು, ಜಿಲ್ಲೆಗಳಲ್ಲಿ ಸೋಂಕಿನ ಪರೀಕ್ಷೆಗೆ ಗುರಿ ನಿಗದಿಸಲಾಗಿದೆ.

    ಇದನ್ನು ಓದಿ: ಬೆಂಗಳೂರಿನಲ್ಲಿ ಸಿಡಿ ತಯಾರಿಸುವ ಗ್ಯಾಂಗ್ ಗಳಿವೆ; ಸಿನಿ ತಾರೆಯರನ್ನು ದೆಹಲಿಗೆ ಕರೆದೊಯ್ದವರು ಮಂತ್ರಿಯಾಗಿದ್ದಾರೆ: ಯತ್ನಾಳ್​ ಆರೋಪ

    ಕೊರೋನಾ ಭಯ ಮರೆತು ಮದುವೆ, ಸಮಾರಂಭ ಓಡಾಟ ನಡೆಸುತ್ತಿದ್ದ ಜನರು ಇನ್ಮುಂದೆ ಈ ರೀತಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಮದುವೆ, ಸಭೆ ಸಮಾರಂಭಗಳಿಗೆ ಹಳೆಯ ನಿಯಮ ಜಾರಿ ಆಗಿದ್ದು, ತೆರೆದ ಪ್ರದೇಶದ ಮದುವೆಯಲ್ಲಿ 500 ಜನರ ಮಿತಿ, ಹಾಲ್​ ಸಮಾರಂಭಗಳಲ್ಲಿ 200 ಜನರ ಮಿತಿ, ಹುಟ್ಟುಹಬ್ಬಕ್ಕೆ 50 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಯಲ್ಲಿ 50ಕ್ಕಿಂತ ಹೆಚ್ಚು ಜನ ಇರಬಾರದು, ರಾಜಕೀಯ ಸಮಾರಂಭಗಳಿಗೆ 500 ಜನರ ಮಿತಿ ಹೇರಲಾಗಿದೆ.

    ಬೆಂಗಳೂರು, ಬಳ್ಳಾರಿ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್, ಉಡುಪಿ, ಕಲಬುರ್ಗಿ, ತುಮಕೂರು ಜಿಲ್ಲೆಗಳಲ್ಲಿ ಸೋಂಕಿನ ಬಗ್ಗೆ ಕಟ್ಟೆಚ್ಚರವಹಿಸುವಂತೆ ಸೂಚಿಸಲಾಗಿದೆ. ದಕ್ಷಿಣ‌ ಕನ್ನಡದಲ್ಲಿ 3 ಸಾವಿರ, ಮೈಸೂರು 5 ಸಾವಿರ , ಕೊಡಗು 1 ಸಾವಿರ, ಉಡುಪಿ 2 ಸಾವಿರ, ತುಮಕೂರು 3,500, ವಿಜಯಪುರ 2 ಸಾವಿರ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ RTPCR ಪರೀಕ್ಷೆ ಹೆಚ್ಚಿಸಬೇಕು . ಸೋಂಕಿತರ ಸಂಪರ್ಕ ಪತ್ತೆ ಹಚ್ಚಬೇಕು. ಈ ಸೋಂಕಿತರ ಪತ್ತೆ ಹಚ್ಚುವ ಕಾರ್ಯ 1:20 ರಷ್ಟು ಇರುವಂತೆ ಸೂಚನೆ ನೀಡಲಾಗಿದೆ.
    Published by:Seema R
    First published: