• Home
  • »
  • News
  • »
  • state
  • »
  • Agriculture: ಅಕ್ಕಿಗೆ ಭಾರೀ ಡಿಮ್ಯಾಂಡ್; ಭತ್ತದ ಬೆಳೆಯತ್ತ ದಕ್ಷಿಣ ಕನ್ನಡ ರೈತರ ಚಿತ್ತ

Agriculture: ಅಕ್ಕಿಗೆ ಭಾರೀ ಡಿಮ್ಯಾಂಡ್; ಭತ್ತದ ಬೆಳೆಯತ್ತ ದಕ್ಷಿಣ ಕನ್ನಡ ರೈತರ ಚಿತ್ತ

ಭತ್ತದ ಬೆಳೆ

ಭತ್ತದ ಬೆಳೆ

ಕಳೆದ ಕೆಲ ವರ್ಷಗಳಿಂದ ಇಳಿಕೆ ಕ್ರಮದಲ್ಲಿ ಸಾಗುತ್ತಿದ್ದ ಭತ್ತ ಬೇಸಾಯ ಈ ವರ್ಷ ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ. ಪುತ್ತೂರು ತಾಲೂಕಿನಲ್ಲಿ ಕಳೆದ ವರ್ಷ 360 ಹೆಕ್ಟೇರ್ ಇದ್ದು, ಭತ್ತದ ಬೇಸಾಯ ಈ ಬಾರಿ 404 ಹೆಕ್ಟೇರ್ ಗೆ ಮುಟ್ಟಿದೆ

  • Share this:

ತೋಟಗಾರಿಕಾ (Horticulture) ಬೆಳೆಗಳಾದ ಅಡಿಕೆ ಹಾಗು ಇನ್ನಿತರ ಬೆಳೆಗಳಿಂದ ಉತ್ತಮ ಆದಾಯ ಬರುತ್ತಿರುವ ಹಿನ್ನಲೆಯಲ್ಲಿ ಆಹಾರ ಬೆಳೆಯಾದ ಭತ್ತದ ಕೃಷಿ (Agriculture) ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದೆ. ಆದರೆ ಕೊರೊನಾ ಮಹಾಮಾರಿಯ ಹೊಡೆತದ ಬಳಿಕ ಕೃಷಿಕ ಇದೀಗ ಮತ್ತೆ ಭತ್ತದ ಬೆಳೆಯತ್ತ (Paddy Crop) ಮುಖ ಮಾಡಿದ್ದಾನೆ. ಅಡಿಕೆ ಹಾಗು ರಬ್ಬರ್ ತೋಟಕ್ಕಾಗಿ ಭತ್ತದ ಬೇಸಾಯದಿಂದ ದೂರ ಸರಿದಿದ್ದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಹಲವೆಡೆ ಇದೀಗ ಮತ್ತೆ ಭತ್ತದ ಕೃಷಿಯತ್ತ ಚಿತ್ತ ನೆಟ್ಟಿದ್ದಾರೆ.


ಕಳೆದ ಕೆಲ ವರ್ಷಗಳಿಂದ ಇಳಿಕೆ ಕ್ರಮದಲ್ಲಿ ಸಾಗುತ್ತಿದ್ದ ಭತ್ತ ಬೇಸಾಯ ಈ ವರ್ಷ ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ. ಪುತ್ತೂರು ತಾಲೂಕಿನಲ್ಲಿ ಕಳೆದ ವರ್ಷ 360 ಹೆಕ್ಟೇರ್ ಇದ್ದ ಭತ್ತದ ಬೇಸಾಯ ಈ ಬಾರಿ 404 ಹೆಕ್ಟೇರ್ ಗೆ ಮುಟ್ಟಿದೆ. ಸಾಂಪ್ರದಾಯಿಕ ಭತ್ತ ಬೇಸಾಯಕ್ಕೆ ಹೆಸರುವಾಸಿಯಾಗಿದ್ದ ದಕ್ಷಿಣಕನ್ನಡದಲ್ಲಿ ಕಳೆದ ಕೆಲ ವರ್ಷಗಳಿಂದ ಭತ್ತ ಬೇಸಾಯದಿಂದ ದೂರವಾಗುತ್ತಿರುವ ರೈತವರ್ಗ ಅಡಕೆ ಬೆಳೆಯತ್ತಲೇ ತನ್ನ ದೃಷ್ಟಿ ಇಟ್ಟುಕೊಂಡಿದೆ.


ಕೃಷಿಯತ್ತ ಮುಖ ಮಾಡಿ ಯುವ ಜನತೆ


ಕಳೆದ ಎರಡು ವರ್ಷಗಳಿಂದ ಕಾಡಿದ ಕೊರೊನಾದಿಂದಾಗಿ ಹಳ್ಳಿಬಿಟ್ಟು ಪಟ್ಟಣ ಸೇರಿದ್ದ ರೈತ ಯುವಕ-ಯುವತಿಯರು ಹಳ್ಳಿಗೆ ಬಂದು ಮತ್ತೆ ಕೃಷಿ ಚಟುವಟಿಕೆಗೆ ಮುಂದಾಗಿದ್ದರು. ಇದರೊಂದಿಗೆ ಸರ್ಕಾರ ಹಮ್ಮಿಕೊಂಡಿದ್ದ ಹಡೀಲು ಭೂಮಿಯನ್ನು ಭತ್ತದ ಬೆಳೆ ಯೋಜನೆಯಡಿ ಪುತ್ತೂರು ತಾಲೂಕಿನಲ್ಲಿ ಸುಮಾರು 44 ಹೆಕ್ಟೇರ್ ಹಡೀಲು ಭೂಮಿ ಮತ್ತೆ ಭತ್ತ ಬೆಳೆಯ ತಾಣವಾಗಿ ಪರಿವರ್ತನೆಗೊಂಡಿತ್ತು.


ಇದನ್ನೂ ಓದಿ: 2nd PUC Result 2022: ದ್ವಿತೀಯ ಪಿಯುಸಿ ಫಲಿತಾಂಶ; ಹೀಗೆ ಮೆಸೇಜ್ ಬಂದರೆ ನಂಬಬೇಡಿ


ಭತ್ತ ಬೆಳೆಯುವ ವ್ಯಾಪ್ತಿ ಹೆಚ್ಚಳ


ಇದೀಗ ಬೆಳೆ ಸಮೀಕ್ಷೆ ಆಧಾರದಲ್ಲಿ ಭತ್ತ ಬೆಳೆಯುವ ಚಟುವಟಿಕೆಯ ವ್ಯಾಪ್ತಿ ಹೆಚ್ಚಾಗಿರುವುದು ಕಂಡು ಬಂದಿದೆ. ಹಾಗಾಗಿ ಕೃಷಿ ಇಲಾಖೆ 404 ಹೆಕ್ಷೇರ್​ ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಿದೆ. ಕಳೆದ 5 ವರ್ಷಗಳ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ. ಈ ಏರಿಕೆ ಗಣನೀಯ ಎನಿಸಿಕೊಳ್ಳದಿದ್ದರೂ ಸ್ವಲ್ಪ ಮಟ್ಟಿನ ಏರಿಕೆ ಕಂಡಿರುವುದು ರೈತ ವರ್ಗ ಬೇಸಾಯದತ್ತ ಮತ್ತೆ ದೃಷ್ಟಿ ಹರಿಸಿದೆ ಎಂಬುವುದನ್ನು ಸಾಬೀತು ಮಾಡಿದೆ. ಪುತ್ತೂರು-ಕಡಬ ಸೇರಿದಂತೆ ಕಳೆದ ವರ್ಷಕ್ಕಿಂತ ಸುಮಾರು 34 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೇಸಾಯ ಈ ಬಾರಿ ಹೆಚ್ಚಾಗಲಿದೆ.


ಕಳೆದ 5 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಭತ್ತ ಬೆಳೆಯುವ ಪ್ರದೇಶದ ಒಟ್ಟುಗುರಿ 5 ಸಾವಿರ ಹೆಕ್ಟೇರ್ ಇತ್ತು. ವರ್ಷದಿಂದ ವರ್ಷಕ್ಕೆ ಭತ್ತದ ಬೇಸಾಯ ಕ್ಷೀಣಿಸುತ್ತಲೇ ಹೋಗುತ್ತಿತ್ತು. ಇದಕ್ಕೆ ಕಾರಣಗಳು ಹಲವಾರು. ಅಕ್ಕಿಗೆ ಬೆಲೆ ಕಡಿಮೆ, ಬೇಸಾಯಕ್ಕೆ ಕೂಲಿಕಾರರ ಸಮಸ್ಯೆ, ಉತ್ಪಾದನೆ ಕಡಿಮೆ ಶ್ರಮ ಜಾಸ್ತಿ, ಅಡಕೆ ಬೆಳೆಯಿಂದ ಬರುವ ಲಾಭ, ಕೃಷಿಯಂತ್ರ ಬಳಕೆ ಅಸಾಧ್ಯವಾಗಿರುವುದು ಇಂತಹ ಕಾರಣಗಳಿಂದ ಭತ್ತ ಬೇಸಾಯ ರೈತವರ್ಗಕ್ಕೆ ಅಪ್ಯಾಯಮಾನವಾಗಲಿಲ್ಲ.


ರೈತರಿಗೆ ಸಮರ್ಪಕ ಸಹಾಯಧನ ಇಲ್ಲ


ಭತ್ತ ಬೆಳೆಯುವ ರೈತರಿಗೆ ಸಮರ್ಪಕವಾದ ಸರ್ಕಾರದ ಸಹಾಯಧನವೂ ಇಲ್ಲ. ಕೆಲವೊಂದು ಯೋಜನೆಗಳು ಇದ್ದರೂ ಹಳ್ಳಿಯ ರೈತರಿಗೆ ಅದು ತಲುಪುವಲ್ಲಿ ವೈಫಲ್ಯ. ಹೀಗಾಗಿ ಭತ್ತದ ಬೆಳೆಯ ಗದ್ದೆಗಳೆಲ್ಲಾ ಅಡಕೆ ತೋಟಗಳಾಗಿ ಬದಲಾಗಿವೆ. ಆದರೆ ಇದೀಗ ಮತ್ತೆ ಭತ್ತದ ಬೇಸಾಯ ಚೈತನ್ಯ ಪಡೆದುಕೊಳ್ಳುವ ಸಾಧ್ಯತೆ ಕಂಡುಬಂದಿದೆ.ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ಬೇಕಾದ ಬೀಜಗಳು ಕೃಷಿ ಇಲಾಖೆಯ ರೈತಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ರೈತವರ್ಗ ಹೆಚ್ಚಾಗಿ ಬಳಸುವ ಭತ್ತದ ಬೀಜ ಎಂ.ಒ 4 ಹಾಗೂ ಜ್ಯೋತಿ ತಳಿಗಳು ಸಹಾಯಧನದ ಆಧಾರದಲ್ಲಿ ರೈತರಿಗೆ ದೊರೆಯಲಿದೆ.


ಇದನ್ನೂ ಓದಿ: Basavaraj Bommai: ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಸಿಎಂ ಬೊಮ್ಮಾಯಿ


ಒಂದು ಎಕರೆಗೆ 25 ಕೆಜಿ ಯಂತೆ ಗರಿಷ್ಠ 5 ಎಕರೆ ವರೆಗೆ ರೈತರು ಈ ಭತ್ತದ ಬೀಜಗಳನ್ನು ಖರೀದಿ ಮಾಡಬಹುದಾಗಿದೆ. ಎಂ.ಒ 4ಗೆ ರೂ.41.50 ಹಾಗೂ ಜ್ಯೋತಿ ತಳಿಗೆ ರೂ.43 ನಿಗದಿಪಡಿಸಲಾಗಿದೆ. ಸಾಮಾನ್ಯ ರೈತರಿಗೆ ರೂ.8 ಹಾಗೂ ಪರಿಶಿಷ್ಟ ಜಾತಿ-ಪಂಗಡದ ರೈತರಿಗೆ ರೂ.12 ಸಹಾಯಧನ ನೀಡಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಅವರು ತಿಳಿಸಿದ್ದಾರೆ.

Published by:Pavana HS
First published: